ಪಾರ್ಟ್ ಟೈಂ ಜಾಬ್ ಹೆಸರಿನಲ್ಲಿ ಬೆಂಗಳೂರಿನ ಮಹಿಳೆಗೆ 60 ಲಕ್ಷ ರೂ ವಂಚನೆ!
ಇತ್ತೀಚಿನ ದಿನಗಳಲ್ಲಿ ಉದ್ಯೋಗಾವಕಾಶದ ನೀಡುವ ನೆಪದಲ್ಲಿ ವಂಚನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಆನ್‌ಲೈನ್ ಸೈಟ್‌ಗಳಲ್ಲಿ ಪಾರ್ಟ್ ಟೈಂ ಜಾಬ್ ನೀಡುವುದಾಗಿ ಹೇಳಿ ಜನರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳು ದಾಖಲಾಗುತ್ತಿವೆ. ಇದೀಗ ಬೆಂಗಳೂರಿನ ಮಹಿಳೆಯೊಬ್ಬರಿಗೆ ಪಾರ್ಟ್ ಟೈಂ ಜಾಬ್ ನೀಡುವುದಾಗಿ ಹೇಳಿ 60 ಲಕ್ಷ ರೂ ವಂಚಿಸಿರುವ ಘಟನೆ ನಡೆದಿದೆ.
ಹೌದು, ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ ಪಾರ್ಟ್ ಟೈಂ ಜಾಬ್ ಹೆಸರಿನಲ್ಲಿ ವಂಚಿಸಲಾಗಿದೆ. ವಂಚಕರು ಈ ಪ್ರಕರಣದಲ್ಲಿ ಬರೋಬ್ಬರಿ 60 ಲಕ್ಷ ರೂ.ಗಳನ್ನು ವಂಚಿಸಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ ಮಹಿಳೆಯು 27 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಬೆಂಗಳೂರಿನ ಸರ್ಜಾಪುರದಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಸೆಪ್ಟೆಂಬರ್ 11-19 ರ ನಡುವೆ ಮಹಿಳೆಗೆ ವಂಚನೆ ನಡೆದಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಮಹಿಳೆಗೆ ಹೇಗೆ ವಂಚನೆ ಮಾಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪಾರ್ಟ್ ಟೈಂ ಜಾಬ್ ಹೆಸರಿನಲ್ಲಿ ಅಪರಿಚಿತ ಲಿಂಕ್‌ಗಳನ್ನು ಕಳುಹಿಸಿ ಹಣವನ್ನು ಎಗರಿಸುತ್ತಿರುವ ಘಟನೆಗೆಳು ಪ್ರತಿನಿತ್ಯ ನಡೆಯುತ್ತಿವೆ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತ ಯುವಜನತೆಯೆ ಮೋಸ ಹೋಗುತ್ತಿರುವುದು ಅಘಾತಕಾರಿ ಸಂಗತಿಯಾಗಿದೆ. ಬೆಂಗಳೂರಿನ ಘಟನೆ ಕೂಡ ಇದಕ್ಕೆ ಹೊರತಾಗಿಲ್ಲ. ಬೆಂಗಳೂರಿನ ಮಹಿಳೆ ಮೂಲತಃ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಪಾರ್ಟ್ ಟೈಂ ಜಾಬ್ ಪಡೆಯುವ ಭರದಲ್ಲಿ 60 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ.
ಇಲ್ಲಿ ಮಹಿಳೆಗೆ ಪಾರ್ಟ್ ಟೈಂ ಜಾಬ್ ಬಗ್ಗೆ ತಿಳಿಸುವ ಒಂದು ಲಿಂಕ್ ಇರುವ ಟೆಕ್ಸ್ಟ್ ಮೆಸೇಜ್ ಬಂದಿರುತ್ತದೆ. ಆ ಸಂದೇಶದ ಮೇಲೆ ಕ್ಲಿಕ್ ಮಾಡಿದಾಗ ಮಹಿಳೆಯನ್ನು ಒಂದು ಟೆಲಿಗ್ರಾಮ್ ಗ್ರೂಪ್‌ಗೆ ಕರೆದೊಯ್ಯಲಾಗಿದೆ. ಇದರಲ್ಲಿ ಹೋಟೆಲ್‌ಗಳ ಬಗ್ಗೆ ರಿವ್ಯೂ ಮಾಡಿದರೆ ನಿಮಗೆ ಹಣ ನೀಡಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ ಇದಕ್ಕಾಗಿ 100ರೂ. ಹಣವನ್ನು ಕೂಡ ಮಹಿಳೆಗೆ ನೀಡಿದ್ದಾರೆ. ಹೀಗೆ ಆರಂಭದಲ್ಲಿ ಹಲವು ಹೋಟೆಲ್‌ಗಳ ಬಗ್ಗೆ ರಿವ್ಯೂ ಮಾಡಿದ ಮಹಿಳೆಗೆ ವಂಚಕರು ಹಣವನ್ನು ನೀಡುತ್ತಾ ಬಂದಿದ್ದಾರೆ.
ನಂತರದ ದಿನಗಳಲ್ಲಿ ನೀವು ಹೆಚ್ಚಿನ ಹಣ ಗಳಿಸಬೇಕಾದರೆ ನೀವು ಕೂಡ ಹಣ ಹೂಡಿಕೆ ಮಾಡಿರಿ ಎಂದು ಹೇಳಿದ್ದಾರೆ. ಅಲ್ಲದೆ ಇದರಿಂದ ನಿಮಗೆ ಹೆಚ್ಚಿನ ಹಣವನ್ನು ಗಳಿಸುವುದಕ್ಕೆ ಅವಕಾಶವಿದೆ ಎಂದೆಲ್ಲಾ ಮಾಹಿತಿ ನೀಡಿದ್ದಾರೆ. ಇದನ್ನು ನಂಬಿದ ಮಹಿಳೆಯು ಆಕೆಯ ಮತ್ತು ಅವರ ಅತ್ತೆಯ ಖಾತೆಯಿಂದ ಹಣವನ್ನು ವರ್ಗಾಯಿಸಿಕೊಂಡು ಒಟ್ಟು 60 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದಾಳೆ. ಆದರೆ ಆಕೆಗೆ ಯಾವುದೇ ರೀತಿಯ ಕೆಲಸವಾಗಲಿ, ಹಣ ಹೂಡಿಕೆ ಮಾಡಿರುವುದಕ್ಕೆ ಲಾಭವಾಗಲಿ ಬಂದಿಲ್ಲ. ಆವಾಗ ಮಹಿಳೆಗೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ.
ಇನ್ನು ಇತ್ತೀಚಿಗೆ ಮುಂಬೈನಲ್ಲಿ ವ್ಯಕ್ತಿಯೊಬ್ಬ ಫಾರ್ಟ್ ಟೈಂ ಜಾಬ್‌ಗಾಗಿ ಸರ್ಚ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಫೇಸ್‌ಬುಕ್‌ನಲ್ಲಿ ಅಮೆಜಾನ್‌ನಲ್ಲಿ ಉದ್ಯೋಗವಿದೆ ಎಂಬ ಜಾಹಿರಾತು ನೋಡಿ ಕ್ಲಿಕ್ ಮಾಡಿದ್ದಾರೆ. ಆದರೆ ಮುಂದೆ ನಡೆದಿತ್ತು ಮಾತ್ರ ಬರೀ ಮೋಸ.ಮುಂಬೈನಲ್ಲಿ ಅಂಧೇರಿ ಮೂಲದ ಸಂಸ್ಥೆಯಲ್ಲಿ ಕೆಲಸಮಾಡುತ್ತಿರುವ 33 ವರ್ಷದ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಅಮೆಜಾನ್‌ನಲ್ಲಿ ಉದ್ಯೋಗವೆಂಬ ಜಾಹಿರಾತನ್ನು ಕ್ಲಿಕ್ ಮಾಡಿದ್ದಾನೆ.
ನಂತರ ಹಂತಹಂತವಾಗಿ ಸಂತ್ರಸ್ತನ ವಿಶ್ವಾಸಗಳಿಸಿದ ವಂಚಕಿ ಕೆಲವೇ ದಿನಗಳಲ್ಲಿ 2.4 ಲಕ್ಷ ಖರ್ಚು ಮಾಡಿ ಒಟ್ಟು 5.13 ಲಕ್ಷ ಗಳಿಸಿ ಎಂಬ ಸಂದೇಶ ಕಳುಹಿಸಿದ್ದಾಳೆ. ಇದನ್ನು ನಂಬಿದ ಸಂತ್ರಸ್ತ ತನ್ನ ಇ-ವಾಲೆಟ್‌ಗೆ 2.4ಲಕ್ಷ ರೂ ಜಮಾ ಮಾಡಿದ್ದಾನೆ. ಆಗ ಆತನ ಇವಾಲೆಟ್ ಖಾತೆಯಲ್ಲಿ 5.13ಲಕ್ಷ ರೂ ಜಮಾ ಆಗಿದೆ ಎಂಬ ಸಂದೇಶ ಬಂದಿದೆ. ಕೂಡಲೇ ಸಂತ್ರಸ್ತ ಅದನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಪ್ರಯತ್ನಿಸಿದ್ದಾನೆ. ಆದರೆ ಇ-ವಾಲೆಟ್‌ನಿಂದ ಹಣ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿಲ್ಲ. ಈ ಮೂಲಕ ಹಣವನ್ನು ಕಳೆದುಕೊಂಡು ಮೋಸ ಹೋಗಿದ್ದಾರೆ.


Click it and Unblock the Notifications








