ಫ್ಲಿಪ್‌ಕಾರ್ಟ್‌ನಲ್ಲಿ ದಿನಸಿ ಮಾರಾಟ ಆರಂಭ!..ಶುರುವಾಯಿತು ಇ-ಕಾಮರ್ಸ್ ಕಂಪೆನಿಗಳ ಭರಾಟೆ!!
ಆನ್‌ಲೈನ್ ಪ್ರಪಂಚದಲ್ಲಿ ಏನೆಲ್ಲಾ ಮಾರಾಟವಾಗಬಹುದು ಎಂಬುದು ಎಲ್ಲರ ಊಹೆಗೂ ಮೀರಿ ಬೆಳೆಯುತ್ತಿದೆ. ಇಲ್ಲಿಯವರೆಗೂ ಎಲೆಕ್ಟ್ರಾನಿಕ್, ಬಟ್ಟೆ, ಪುಸ್ತಕಗಳನ್ನು ಮೊಬೈಲ್ ಅಪ್ಲಿಕೇಷನ್ ಕ್ಲಿಕ್ ಮಾಡುವ ಮೂಲಕ ಮನೆಯಲ್ಲೇ ಕುಳಿತು ಪಡೆಯಲು ಅವಕಾಶ ಕಲ್ಪಿಸಿದ್ದ ಆನ್‌ಲೈನ್ ಪ್ರಪಂಚ ಈಗ ದಿನಸಿ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತರುವಂತೆ ಮಾಡುತ್ತಿದೆ.
ವಾಲ್‌ಮಾರ್ಟ್ ತೆಕ್ಕೆಗೆ ಬಿದ್ದಿರುವ ಫ್ಲಿಪ್‌ಕಾರ್ಟ್ ಇಂದಿನಿಂದ ಆನ್‌ಲೈನಿನಲ್ಲಿ ದಿನಸಿ ಸಾಮಗ್ರಿಗಳನ್ನು ಮಾರಾಟ ಮಾಡಲು ಶುರುಮಾಡಿರುವುದರಿಂದ ಆನ್‌ಲೈನ್ ದಿನಸಿ ಮಾರಾಟದ ವಿಷಯಯ ಮುನ್ನಲೆಗೆ ಬಂದಿದೆ. ದಿನಸಿ ಸಾಮಗ್ರಿಗಳು ಕೂಡಾ ಮನೆಬಾಗಿಲಿಗೆ ಬಂದು ಬೀಳುವಂತೆ ಏಕೆ ಮಾಡಬಾರದು ಎನ್ನುವ ಆಲೋಚನೆಯೂ ಈಗ ಕಾರ್ಯರೂಪಕ್ಕೆ ಬಂದಾಗಿದೆ.

ಹಲವು ಇ-ಕಾಮರ್ಸ್ ಕಂಪೆನಿಗಳು ಆನ್‌ಲೈನ್ ದಿನಸಿ ಮಾರುಕಟ್ಟೆಯಲ್ಲಿ ಅಗ್ನಿಪರೀಕ್ಷೆಗೆ ಇಳಿದಿವೆ. ಬಿಗ್ ಬ್ಯಾಸ್ಕೆಟ್ (Bigbasket) ಮತ್ತು ಝಾಪ್‌ನೌ (ZopNow) ಗಳಂತಹ ಪ್ರಮುಖ ಕಂಪೆನಿಗಳು ಆನ್‌ಲೈನ್ ದಿನಸಿ ಮಾರಾಟ ಸೇವೆಯನ್ನು ದೇಶದಾದ್ಯಂತ ವಿಸ್ತರಿಸಲು ಉತ್ಸುಕವಾಗಿವೆ. ಇದಕ್ಕೆ ಫ್ಲಿಪ್‌ಕಾರ್ಟ್ ಸೇರ್ಪಡೆ ಹೊಸ ಆಯಾಮವನ್ನು ನೀಡಲಿದೆ ಎನ್ನಲಾಗಿದೆ.

ದಿನಸಿ ಖರೀದಿ ಇನ್ನು ಕಷ್ಟವಲ್ಲ!
ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು ಹಾಗೂ 4ಜಿ ವೇಗದ ಇಂಟರ್‌ನೆಟ್ ಸಂಪರ್ಕ ಈಗ ಸರ್ವವ್ಯಾಪಿಯಾಗುತ್ತಿರುವುದರಿಂದ, ಮನೆಯಿಂದ ಇನ್ನು ಮುಂದೆ ದಿನಸಿಗಾಗಿ ಪ್ರಯಾಸದಿಂದ ಕಿರಾಣಿ ಅಂಗಡಿಗೆ ಹೋಗಬೇಕಿಲ್ಲ. ಅದೇ ರೀತಿ ನೀವು ವಾರಾಂತ್ಯದ ಸಮಯವನ್ನು ದಿನಸಿ ಖರೀದಿಸಲೂ ವ್ಯಯಿಸದೇ ಸುಲಭವಾಗಿ ಒಂದು ಮೊಬೈಲ್ ಕ್ಲಿಕ್‌ನಲ್ಲಿ ದಿನಸಿ ಖರೀದಿಸಬಹುದು.

ದಿನಸಿ ವ್ಯಾಪಾರಕ್ಕೆ ಶುಕ್ರದೆಸೆ!!
ಆನ್‌ಲೈನ್‌ನಲ್ಲಿ ದಿನಸಿ ವ್ಯಾಪಾರಕ್ಕೆ ಶುಕ್ರದೆಸೆ ಶುರುವಾಗಿದೆ. ಇ-ದಿನಸಿ ಕಂಪೆನಿಗಳು ನಿಧಾನವಾಗಿ ಮಾರುಕಟ್ಟೆಯಲ್ಲಿ ತಳವೂರುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. 2017ರ ವೇಳೆಗೆ ಭಾರತದಲ್ಲಿ ಚಿಲ್ಲರೆ ಮಾರುಕಟ್ಟೆಯ ವಹಿವಾಟಿನ ಗಾತ್ರ ₹ 43 ಲಕ್ಷ ಕೋಟಿಯಷ್ಟು ಆಗಲಿದೆ. ಆನ್‌ಲೈನ್ ದಿನಸಿ ವ್ಯಾಪಾರ ಪ್ರತಿವರ್ಷ ಶೇ 25-30 ರಷ್ಟು ಪ್ರಗತಿ ಕಾಣಲಿದೆ.

ದಿನಸಿ ವಸ್ತುಗಳಿಗೆ ಭಾರೀ ಡಿಸ್ಕೌಂಟ್ಸ್!!
ಬಿಗ್ ಬ್ಯಾಸ್ಕೆಟ್ (Bigbasket) ಮತ್ತು ಝಾಪ್‌ನೌ (ZopNow) ಪ್ರಮುಖವಾದುವು. ಗ್ರೋಫರ್ಸ್ (Grofers) ಪೆಪ್ಪರ್‌ಟ್ಯಾಪ್ (PepperTap) ಒಳಗೊಂಡಂತೆ ಬಹುತೇಕ ಎಲ್ಲಾ ಆನ್‌ಲೈನ್ ದಿನಸಿ ವ್ಯಾಪಾರಗಾರರು ದಿನಸಿ ವಸ್ತುಗಳ ಮೇಲೆ ಭಾರೀ ಡಿಸ್ಕೌಂಟ್ಸ್ ನೀಡುತ್ತಿದ್ದಾರೆ. ಹೊರಗಡೆ ಖರೀದಿಸುವುದಕ್ಕಿಂತಲೂ 10% ಕಡಿಮೆ ಬೆಲೆಗೆ ದಿನಸಿ ವಸ್ತುಗಳು ಆನ್‌ಲೈನ್‌ನಲ್ಲಿ ಸಿಗಲಿವೆ.

ಫ್ಲಿಪ್‌ಕಾರ್ಟ್!!
ಆನ್‌ಲೈನಿನಲ್ಲಿ ದಿನಸಿ ಮಾರಾಟವನ್ನು ಫ್ಲಿಪ್‌ಕಾರ್ಟ್ ಇಂದಿನಿಂದ ಶುರುಮಾಡಿದೆ. ಸೂಪರ್ ಮಾರ್ಟ್ ಬ್ರ್ಯಾಂಡ್ ಅಡಿಯಲ್ಲಿ ನೀವು ಫ್ಲಿಪ್‌ಕಾರ್ಟ್‌ನಿಂದ ದಿನಸಿ ವಸ್ತುಗಳನ್ನು ಈಗ ಬುಕ್ ಮಾಡಬಹುದಾಗಿದೆ. ಪ್ರತಿ ವಸ್ತುಗಳ ಮೇಲೂ ಎಂಆರ್‌ಪಿ ದರದ ಮೇಲೆ ಫ್ಲಿಪ್‌ಕಾರ್ಟ್ ಡಿಸ್ಕೌಂಟ್ಸ್ ಅನ್ನು ನೀಡಿ ಗಮನಸೆಳೆದಿದೆ.

‘ಎಕ್ಸ್‌ಪ್ರೆಸ್ ಡೆಲಿವರಿ’!!
ಆನ್‌ಲೈನಿನಲ್ಲಿ ವಸ್ತುಗಳನ್ನು ಬುಕ್ ಮಾಡಿದರೆ ಅದು ನಮ್ಮನ್ನು ತಲುಪಲು ಮೊದಲು ದಿನಗಳು ಬೇಕಾಗುತ್ತಿದ್ದವು. ಆದರೆ, ಇನ್ನು ನಿಮಗೆ ಕೆಲವೇ ಗಂಟೆಗಳಲ್ಲಿ ವಸ್ತುಗಳನ್ನು ಮನೆಗೆ ತಲುಪಿಸುವ ‘ಎಕ್ಸ್‌ಪ್ರೆಸ್ ಡೆಲಿವರಿ' ಆಯ್ಕೆ ಬಂದಿದೆ. ಬಹುತೇಕ ಎಲ್ಲಾ ಆನ್‌ಲೈನ್ ಮಾರಾಟಗಾರರು ‘ಎಕ್ಸ್‌ಪ್ರೆಸ್ ಡೆಲಿವರಿ' ಸೇವೆಯನ್ನು ನೀಡಲು ತಯಾರಾಗುತ್ತಿದ್ದಾರೆ.


ಬಿಗ್‌ಬ್ಯಾಸ್ಕೆಟ್
ಫ್ಯಾಬ್ ಮಾರ್ಟ್‌ನ ಸ್ಥಾಪಕರು 2011 ರಲ್ಲಿ ಬೆಂಗಳೂರಿನಲ್ಲಿ ಬಿಗ್‌ಬ್ಯಾಸ್ಕೆಟ್ ಎಂಬ ಆನ್‌ಲೈನ್ ದಿನಸಿ ಶಾಪಿಂಗ್ ಸೇವೆ ಆರಂಭಿಸಿದ್ದಾರೆ. ಬಿಗ್‌ಬ್ಯಾಸ್ಕೆಟ್ ‘ಫ್ರೆಶೊ' ಹೆಸರಿನ ಬ್ರ್ಯಾಂಡ್‌ನಡಿ ತನ್ನದೇ ಆದ ದಿನಸಿ ಸಾಮಗ್ರಿಗಳನ್ನು ಗ್ರಾಹಕರಿಗೆ ನೀಡುತ್ತಿದೆ.ಮಾಂಸ, ಕಾಫಿ, ಬ್ರೆಡ್, ಪಾನಿಪುರಿ ಅಲ್ಲದೆ ಚೊಕ್ಕಾಗಿ ಹೆಚ್ಚಿಟ್ಟ ಶುದ್ಧ ತರಕಾರಿ ಕೂಡ ಈ ಬ್ರ್ಯಾಂಡ್‌ನಡಿ ಲಭ್ಯವಿದೆ.

ಝಾಪ್ ನೌ
2012 ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಝಾಪ್‌ನೌ ಇ-ದಿನಸಿ ಕಂಪೆನಿ ಈಗ ದೇಶದ ಹಲವೆಡೆ ವಿಸ್ತರಣೆಯಾಗಿದೆ. ಗ್ರಾಹಕರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ವಸ್ತುಗಳನ್ನು ಸೂಪರ್‌ಮಾರ್ಕೆಟ್‌ಗಳಿಂದ ಕೊಂಡುಕೊಂಡು ಅವರವರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಅಕ್ಕಿ, ತರಕಾರಿ, ಹಾಲು, ಬೆಣ್ಣೆ, ಅಣಬೆ, ಹೂಕೋಸು ಒಳಗೊಂಡಂತೆ ಒಟ್ಟು 3 ಸಾವಿರ ವಸ್ತುಗಳು ಇಲ್ಲಿ ಲಭ್ಯವಿದೆ.

ಪೆಪ್ಪರ್ ಟ್ಯಾಪ್, ಗ್ರೋಫರ್ಸ್
ಪೆಪ್ಪರ್‌ಟ್ಯಾಪ ಕಂಪೆನಿ 2014ರ ಡಿಸೆಂಬರ್‌ನಲ್ಲಿ ಆರಂಭವಾಯಿತು. ಈ ಕಂಪೆನಿ ಎರಡು ಗಂಟೆಗಳ ಒಳಗಾಗಿ ಗ್ರಾಹಕರ ಮನೆ ಬಾಗಿಲಿಗೆ ದಿನಸಿ ವಸ್ತುಗಳನ್ನು ತಲುಪಿಸುತ್ತಿದೆ. ‘ಸ್ಥಳೀಯ 220 ಸ್ಟೋರ್‌ಗಳ ಜತೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಗ್ರಾಹಕರು ಆನ್‌ಲೈನ್‌ನಲ್ಲಿ ಬೇಡಿಕೆಯಿಟ್ಟ ತಕ್ಷಣ ನಾವು ಹತ್ತಿರದ ಸ್ಟೋರ್‌ಗೆ ತೆರಳಿ ಆ ಸಾಮಗ್ರಿ ಖರೀದಿಸಿ ಮನೆ ಬಾಗಿಲಿಗೆ ತಲುಪಿಸುತ್ತೇವೆ' ಎಂದು ಪೆಪ್ಪರ್‌ಟ್ಯಾಪ್ ಸಿಇಒ ನವನೀತ್ ಸಿಂಗ್ ವಿವರಿಸುತ್ತಾರೆ.


Click it and Unblock the Notifications








