ಜನವರಿ 1ರಿಂದ ದೇಶಾದ್ಯಂತ 'ಭಾರತ್ ಟ್ಯಾಕ್ಸಿ' ಆರಂಭ: ಓಲಾ, ಉಬರ್ ಕಥೆ ಕ್ಲೋಸ್?!
ಭಾರತದಲ್ಲಿ ಅಪ್ಲಿಕೇಶನ್ ಆಧಾರಿತ ಕ್ಯಾಬ್, ಟ್ಯಾಕ್ಸಿ ಸೇವೆ ಸೇರಿದಂತೆ ರೈಡ್-ಹೈಲಿಂಗ್ ಕ್ಷೇತ್ರವು ಖಾಸಗಿ ಕಂಪನಿಗಳ ಆಧಿಪತ್ಯವನ್ನು ಹೊಂದಿದೆ. ಇದನ್ನು ಕೊನೆಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯದ ನೇತೃತ್ವದಲ್ಲಿ ರೂಪುಗೊಂಡಿರುವ ಹೊಸ ಭಾರತ್ ಟ್ಯಾಕ್ಸಿ' (Bharat Taxi) ಆ್ಯಪ್ 2026ರ ಜನವರಿ 1ರಿಂದ ದೇಶಾದ್ಯಂತ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ. ಈ ಸರ್ಕಾರಿ ಬೆಂಬಲಿತ ಮೊಬೈಲಿಟಿ ವೇದಿಕೆಯು ಚಾಲಕರ ಆದಾಯ ಭದ್ರತೆ ಮತ್ತು ಪಾರದರ್ಶಕ ವ್ಯವಸ್ಥೆ ಎಂಬ ಎರಡು ಪ್ರಮುಖ ಅಂಶಗಳನ್ನು ಕೇಂದ್ರೀಕರಿಸಿಕೊಂಡಿದೆ.
ಹೌದು, ಇತ್ತೀಚೆಗೆ ಸಂಸತ್ತಿನಲ್ಲಿ ಮಾತನಾಡಿದ್ದ ಸಹಕಾರ ಸಚಿವ ಅಮಿತ್ ಶಾ, ಭಾರತ್ ಟ್ಯಾಕ್ಸಿ ಆ್ಯಪ್‌ನ ಉದ್ದೇಶ ಖಾಸಗಿ ರೈಡ್-ಹೈಲಿಂಗ್ ಕಂಪನಿಗಳ ಮೇಲಿನ ಚಾಲಕರ ಅವಲಂಬನೆಯನ್ನು ಕಡಿಮೆ ಮಾಡುವುದು ಎಂದು ಸ್ಪಷ್ಟಪಡಿಸಿದ್ದರು. ಖಾಸಗಿ ವೇದಿಕೆಗಳಲ್ಲಿ ಚಾಲಕರು ಎದುರಿಸುತ್ತಿರುವ ಹೆಚ್ಚುವರಿ ಕಮಿಷನ್, ನಿಯಂತ್ರಣದ ಕೊರತೆ ಮತ್ತು ಆದಾಯದ ಅಸ್ಥಿರತೆ ಮೊದಲಾದ ಸಮಸ್ಯೆಗಳಿಗೆ ಸಹಕಾರ ಮಾದರಿಯೇ ದೀರ್ಘಕಾಲೀನ ಪರಿಹಾರ ಎಂದು ಹೇಳಿದ್ದರು. ಇದೀಗ ಸರ್ಕಾರಿ ನಿಯಂತ್ರದ ಹೊಸ ಭಾರತ್ ಟ್ಯಾಕ್ಸಿ ಆ್ಯಪ್ ಸೇವೆ ಆರಂಭವಾಗುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತ್ ಟ್ಯಾಕ್ಸಿ ಯಾರು ನಡೆಸುತ್ತಾರೆ?
ಭಾರತ್ ಟ್ಯಾಕ್ಸಿಆ್ಯಪ್ ಅನ್ನು ಸಹಕಾರ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ (Sahakar Taxi Cooperative Limited) ನಿರ್ವಹಿಸುತ್ತದೆ. ಎನ್‌ಸಿಡಿಸಿ, ಇಫ್ಕೋ, ಅಮೂಲ್, ಕೃಷಿಭಕೋ, ನಾಫೆಡ್, ನಬಾರ್ಡ್, ಎನ್‌ಡಿಡಿಬಿ ಮತ್ತು ಎನ್‌ಸಿಇಎಲ್ ಸೇರಿದಂತೆ ದೇಶದ ಪ್ರಮುಖ ಎಂಟು ಸಹಕಾರ ಮತ್ತು ಹಣಕಾಸು ಸಂಸ್ಥೆಗಳು ಇದರ ಪ್ರಚಾರಕರಾಗಿವೆ. ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯ ಮುಖ್ಯ ಪ್ರೋತ್ಸಾಹಕನಾಗಿ ಕಾರ್ಯನಿರ್ವಹಿಸುತ್ತಿದೆ. ಚಾಲಕರೇ ಮಾಲೀಕರಾಗಿರುವ ರಾಷ್ಟ್ರೀಯ ಮಟ್ಟದ ಮೊಬೈಲಿಟಿ ಸಹಕಾರ ಸಂಸ್ಥೆಯಾಗಿ ಇದನ್ನು ಪರಿಚಯಿಸಲಾಗುತ್ತಿದೆ.
ಯಾವುದೇ ಕಮಿಷನ್ ಇಲ್ಲ!
ಖಾಸಗಿ ರೈಡ್-ಹೈಲಿಂಗ್ ಆ್ಯಪ್‌ಗಳು ಸಾಮಾನ್ಯವಾಗಿ ಪ್ರತಿ ಪ್ರಯಾಣದ ಮೇಲೆ 20ರಿಂದ 30 ಶೇಕಡಾವರೆಗೆ ಕಮಿಷನ್ ವಸೂಲಿ ಮಾಡುತ್ತವೆ. ಭಾರತ್ ಟ್ಯಾಕ್ಸಿಯಲ್ಲಿ ಯಾವುದೇ ಕಮಿಷನ್ ಇಲ್ಲ ಎಂಬುದು ಇದರ ದೊಡ್ಡ ಆಕರ್ಷಣೆ. ಇದರ ಮೂಲಕ ಚಾಲಕರು ಶೇ.100 ರಷ್ಟು ಪ್ರಯಾಣದ ಹಣವನ್ನು ಸ್ವತಃ ಪಡೆಯಬಹುದು. ಈ ಭಾರತ್ ಟ್ಯಾಕ್ಸಿ ಆ್ಯಪ್‌ನ ಪ್ರಮುಖ ವೈಶಿಷ್ಟ್ಯಗಳು ಎಂದರೆ ಪಾರದರ್ಶಕ ದರ ವ್ಯವಸ್ಥೆ ಮತ್ತು ಸರ್ಜ್ ಪ್ರೈಸಿಂಗ್ ಇಲ್ಲದ ಪ್ರಯಾಣ. ಲೈವ್ ಲೊಕೇಶನ್ ಟ್ರ್ಯಾಕಿಂಗ್, ಚಾಲಕರ ಪರಿಶೀಲನೆ, ಪ್ರಯಾಣದ ವಿವರಗಳನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳುವ ಸೌಲಭ್ಯ, 24/7 ಗ್ರಾಹಕ ಬೆಂಬಲ ಮತ್ತು ತಂತ್ರಜ್ಞಾನ ಆಧಾರಿತ ಸಹಾಯ ವ್ಯವಸ್ಥೆ ಇದರಲ್ಲಿ ಸೇರಿವೆ. ದೆಹಲಿ ಪೊಲೀಸ್ ಸಹಯೋಗದಲ್ಲಿ ರೂಪುಗೊಂಡ ಸುಧಾರಿತ ಸುರಕ್ಷತಾ ಚಟುವಟಿಕೆಗಳು ಪ್ರಯಾಣಿಕರ ಭದ್ರತೆಯನ್ನು ಹೆಚ್ಚಿಸುತ್ತವೆ.

ಎರಡು ಪ್ರತ್ಯೇಕ ಆ್ಯಪ್‌ಗಳು!
ಭಾರತ್ ಟ್ಯಾಕ್ಸಿ ಆ್ಯಪ್‌ನ ಸಾಫ್ಟ್ ಲಾಂಚ್ ಈಗಾಗಲೇ ದೆಹಲಿ ಮತ್ತು ಗುಜರಾತ್‌ನಲ್ಲಿ ನಡೆದಿದೆ. ಪ್ರಯಾಣಿಕರಿಗಾಗಿ Bharat Taxi ಮತ್ತು ಚಾಲಕರಿಗಾಗಿ Bharat Taxi Driver ಎಂಬ ಎರಡು ಪ್ರತ್ಯೇಕ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಿವೆ. 2026ರ ಜನವರಿ 1ರಿಂದ ಈ ಸೇವೆ ದೇಶಾದ್ಯಂತ ವಿಸ್ತರಿಸಲಾಗುತ್ತದೆ. ಸೇವೆಗಳ ವಿಚಾರದಲ್ಲಿ, ಈ ವೇದಿಕೆ ಎರಡು ಚಕ್ರ ವಾಹನ, ಆಟೋ ರಿಕ್ಷಾ, ಟ್ಯಾಕ್ಸಿ ಮತ್ತು ನಾಲ್ಕು ಚಕ್ರ ವಾಹನಗಳಂತಹ ವಿವಿಧ ಪ್ರಯಾಣ ಆಯ್ಕೆಗಳನ್ನು ಒದಗಿಸುತ್ತದೆ. ನಗರಗಳ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲೂ ಸೇವೆ ವಿಸ್ತರಿಸುವ ಉದ್ದೇಶ ಹೊಂದಿರುವುದರಿಂದ, ಇದು ಸ್ಥಳೀಯ ಉದ್ಯೋಗ ಮತ್ತು ಸಂಪರ್ಕ ವ್ಯವಸ್ಥೆಗೆ ಹೊಸ ಚೈತನ್ಯ ನೀಡುವ ನಿರೀಕ್ಷೆಯಿದೆ.
ಚಾಲಕರು ಕೇವಲ ಸೇವೆ ಒದಗಿಸುವವರಲ್ಲ!
ಪ್ರಸ್ತುತ ದೆಹಲಿ ಮತ್ತು ಸೌರಾಷ್ಟ್ರ ಪ್ರದೇಶಗಳಲ್ಲಿ 51,000ಕ್ಕೂ ಹೆಚ್ಚು ಚಾಲಕರು ಈಗಾಗಲೇ ಸದಸ್ಯರಾಗಿದ್ದಾರೆ. ಈ ಸಹಕಾರ ಮಾದರಿಯಲ್ಲಿ ಚಾಲಕರು ಕೇವಲ ಸೇವೆ ಒದಗಿಸುವವರಲ್ಲ, ಸಂಸ್ಥೆಯ ಪಾಲುದಾರರಾಗಿರುವುದು ಪ್ರಮುಖ ವೈಶಿಷ್ಟ್ಯವಾಗಿದೆ. ಆಡಳಿತ ಮಂಡಳಿಯಲ್ಲಿ ಪ್ರತಿನಿಧಿತ್ವ, ವಾರ್ಷಿಕ ಲಾಭಾಂಶ ಮತ್ತು ಸಹಕಾರ ಸಂಸ್ಥೆಯ ಲಾಭದಲ್ಲಿ ಪಾಲು ಪಡೆಯುವ ಅವಕಾಶವೂ ಚಾಲಕರಿಗೆ ಲಭ್ಯವಿದೆ. ಚಾಲಕರಿಗಾಗಿ ವಿಮಾ ಸೌಲಭ್ಯ, ತಮ್ಮ ವಾಹನಗಳಲ್ಲಿ ಜಾಹೀರಾತು ಪ್ರದರ್ಶಿಸುವ ಅವಕಾಶ ಮತ್ತು ಹೆಚ್ಚುವರಿ ಆದಾಯ ಮಾರ್ಗಗಳೂ ಈ ವೇದಿಕೆಯಲ್ಲಿ ಒದಗಿಸಲಾಗುತ್ತಿವೆ. ಇದರಿಂದ ಭಾರತ್ ಟ್ಯಾಕ್ಸಿ ಕೇವಲ ಒಂದು ರೈಡ್-ಹೈಲಿಂಗ್ ಆ್ಯಪ್ ಅಲ್ಲದೆ, ಚಾಲಕರ ಆರ್ಥಿಕ ಸಬಲೀಕರಣದ ವೇದಿಕೆಯಾಗುತ್ತಿದೆ.
ಓಲಾ, ಉಬರ್ ಮತ್ತು ರ್ಯಾಪಿಡೊಗೆ ಸೆಡ್ಡು!
ಪ್ರಸ್ತುತ ಭಾರತದಲ್ಲಿ ಓಲಾ, ಉಬರ್ ಮತ್ತು ರ್ಯಾಪಿಡೊದಂತಹ ಪ್ರಮುಖ ಖಾಸಗಿ ರೈಡ್-ಹೈಲಿಂಗ್ ಆ್ಯಪ್‌ಗಳು ಉತ್ತುಂಗದಲ್ಲಿವೆ. ಇವುಗಳು ಚಾಲಕರ ಆದಾಯ ಭದ್ರತೆ ಮತ್ತು ಪಾರದರ್ಶಕ ವ್ಯವಸ್ಥೆ ಹೊಂದಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು.ಕೆಲವು ಖಾಸಗಿ ವೇದಿಕೆಗಳಲ್ಲಿ ಚಾಲಕರು ಎದುರಿಸುತ್ತಿರುವ ಹೆಚ್ಚುವರಿ ಕಮಿಷನ್, ನಿಯಂತ್ರಣದ ಕೊರತೆ ಮತ್ತು ಆದಾಯದ ಅಸ್ಥಿರತೆಯು ಕಳವಳಕಾರಿಯಾಗಿತ್ತು. ಇದಕ್ಕಾಗಿ ಖಾಸಗಿ ರೈಡ್-ಹೈಲಿಂಗ್ ಕಂಪನಿಗಳ ಮೇಲಿನ ಚಾಲಕರ ಅವಲಂಬನೆಯನ್ನು ಕಡಿಮೆ ಮಾಡಲು ಭಾರತ್ ಟ್ಯಾಕ್ಸಿ ಆ್ಯಪ್ ಆಪ್ ಬರುತ್ತಿದೆ. ಇದು ಪಾರದರ್ಶಕವಾಗಿರುವುದರಿಂದ ಗ್ರಾಹಕರು ಕೂಡ ಉತ್ತಮ ಬೆಲೆಗಳಲ್ಲಿ ಸೇವೆಯನ್ನು ಪಡೆಯುವ ನಿರೀಕ್ಷೆ ಇದೆ.


Click it and Unblock the Notifications








