Gemini AI ನಲ್ಲಿ ಕ್ರಾಂತಿಕಾರಿ ಇಮೇಜ್ ಎಡಿಟಿಂಗ್ ವೈಶಿಷ್ಟ್ಯ ಪರಿಚಯ!
ಗೂಗಲ್‌ನ ಡೀಪ್‌ಮೈಂಡ್ ವಿಭಾಗವು ಹೊಸ ಕ್ರಾಂತಿಕಾರಿ ಇಮೇಜ್ ಎಡಿಟಿಂಗ್ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ಇದನ್ನು ಗೂಗಲ್‌ನ ಜೆಮಿನಿ ಅಪ್ಲಿಕೇಶನ್‌ಗೆ ಸಂಯೋಜಿಸಲಾಗಿದ್ದು, ಈ ನವೀನ ತಂತ್ರಜ್ಞಾನವು ಬಳಕೆದಾರರಿಗೆ ಚಿತ್ರಗಳನ್ನು ಸುಲಭವಾಗಿ ಮತ್ತು ಹೆಚ್ಚು ಸುಧಾರಿತ ರೀತಿಯಲ್ಲಿ ಎಡಿಟ್ ಮಾಡಲು ಮತ್ತು ಮಾರ್ಪಡಿಸಲು ಅವಕಾಶ ನೀಡುತ್ತದೆ. ಕೇವಲ ಒಂದು ಪ್ರಾಂಪ್ಟ್ ನೀಡುವ ಮೂಲಕ, ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಚಿತ್ರಗಳನ್ನು ರಚಿಸಬಹುದು ಅಥವಾ ಅಸ್ತಿತ್ವದಲ್ಲಿರುವ ಚಿತ್ರಗಳನ್ನು ಎಡಿಟ್ ಮಾಡಬಹುದು. ಹಾಗಾದರೆ, ಏನಿದು ಹೊಸ ಫೀಚರ್ ಎಂಬುದನ್ನು ನೋಡೋಣ ಬನ್ನಿ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ನಿಂದ ರಚಿಸಲ್ಪಟ್ಟ ಚಿತ್ರಗಳಲ್ಲಿ ದೀರ್ಘಕಾಲದಿಂದ ಇರುವ ಒಂದು ಪ್ರಮುಖ ಸವಾಲು ಎಂದರೆ ನಿಖರ ಎಡಿಟಿಂಗ್. ಈ ಸವಾಲನ್ನು ಪರಿಹರಿಸುವ ನಿಟ್ಟಿನಲ್ಲಿ ಹೊಸ AI ಪರಿಕರವನ್ನು ಗೂಗಲ್‌ನ ಜೆಮಿನಿ ಅಪ್ಲಿಕೇಶನ್‌ಗೆ ಸಂಯೋಜಿಸಲಾಗಿದೆ. ಎಡಿಟಿಂಗ್ ಸಮಯದಲ್ಲಿ ಜನರನ್ನು, ಸಾಕುಪ್ರಾಣಿಗಳನ್ನು, ಮತ್ತು ಪರಿಚಿತ ವಸ್ತುಗಳನ್ನು ಸ್ಥಿರವಾಗಿ ಮತ್ತು ನಿಖರವಾಗಿ ಪ್ರತಿನಿಧಿಸುವುದು ಈ ಹೊಸ ಮಾದರಿಯ ಮುಖ್ಯ ಉದ್ದೇಶ. ಈ ಹೊಸ ವೈಶಿಷ್ಟ್ಯವು ಜೆಮಿನಿಯ ಇಮೇಜ್ ಎಡಿಟಿಂಗ್ ಸಾಮರ್ಥ್ಯಗಳಿಗೆ ಮತ್ತಷ್ಟು ಸೇರ್ಪಡೆಯಾಗಿದೆ ಎಂದು ಗೂಗಲ್‌ನ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿದುಬಂದಿದೆ.
ಫೋಟೋಗಳಲ್ಲಿ ನಿಖರತೆ ಮತ್ತು ಸ್ಥಿರತೆ
ಈ ಹೊಸ ಸುಧಾರಿತ ಇಮೇಜ್ ಎಡಿಟಿಂಗ್ ಮಾದರಿಯು ಫೋಟೋಗಳಿಗೆ ಬದಲಾವಣೆಗಳನ್ನು ಮಾಡುವಾಗ ಮೂಲ ವಿಷಯದ ಹೋಲಿಕೆಯನ್ನು ಕಾಯ್ದುಕೊಳ್ಳುವ ಗುರಿಯನ್ನು ಹೊಂದಿದೆ. ಹಿಂದೆ, AI ಆಧಾರಿತ ಇಮೇಜ್ ಎಡಿಟಿಂಗ್ ಪರಿಕರಗಳಲ್ಲಿ ಕೂದಲು, ಬಟ್ಟೆಗಳು, ಅಭಿವ್ಯಕ್ತಿಗಳು ಮುಂತಾದ ಅಂಶಗಳನ್ನು ಬದಲಾಯಿಸುವಾಗ ಮೂಲದೊಂದಿಗೆ ಸಾಮ್ಯತೆ ಕಾಪಾಡಿಕೊಳ್ಳುವುದು ಕಷ್ಟಕರವಾಗಿತ್ತು. ಈ ಹೊಸ ಮಾದಯು ಎಡಿಟ್ ಮಾಡಿದ ಚಿತ್ರಗಳು ಕೂಡಾ ಮೂಲ ಚಿತ್ರದಂತೆಯೇ ಕಾಣುವಂತೆ ಖಚಿತಪಡಿಸುತ್ತದೆ. ಈ ವೈಶಿಷ್ಟ್ಯವನ್ನು ಬಳಸಲು, ಬಳಕೆದಾರರು ಜೆಮಿನಿಗೆ ಪ್ರಾಂಪ್ಟ್ ಮತ್ತು ಚಿತ್ರವನ್ನು ಒದಗಿಸಬೇಕಾಗುತ್ತದೆ.
ಈ ಹೊಸ ಮಾದರಿ ಕೇವಲ ಸರಳ ಎಡಿಟಿಂಗ್‌ಗೆ ಸೀಮಿತವಾಗಿಲ್ಲ. ಇದು ಹಲವಾರು ಹೊಸ ವೈಶಿಷ್ಟ್ಯಗಳನ್ನು ಸಹ ಬೆಂಬಲಿಸುತ್ತದೆ. ಬಳಕೆದಾರರು ಬಹು ಫೋಟೋಗಳನ್ನು ಒಂದೇ ಚಿತ್ರಕ್ಕೆ ಸಂಯೋಜಿಸಲು ಅಥವಾ ಮಿಶ್ರಣ ಮಾಡಲು ಸಹ ಸಾಧ್ಯವಿದೆ. ಉದಾಹರಣೆಗೆ, ನಿಮ್ಮ ಭಾವಚಿತ್ರವನ್ನು ನಿಮ್ಮ ಸಾಕುಪ್ರಾಣಿಯ ಫೋಟೋದೊಂದಿಗೆ ಸಂಯೋಜಿಸಿ ಒಂದು ಹೊಸ ಚಿತ್ರವನ್ನು ರಚಿಸಬಹುದು. ಈ ತಂತ್ರಜ್ಞಾನದ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ, "ಮಲ್ಟಿ-ಟರ್ನ್" ಎಡಿಟಿಂಗ್ ಅನ್ನು ಬೆಂಬಲಿಸುತ್ತದೆ. ಇದು ಬಳಕೆದಾರರಿಗೆ ಒಂದೇ ಚಿತ್ರದ ವಿವಿಧ ಅಂಶಗಳನ್ನು ಪುನರಾವರ್ತಿತವಾಗಿ ಮಾರ್ಪಡಿಸಲು ಅವಕಾಶ ನೀಡುತ್ತದೆ.

ಉದಾಹರಣೆಗೆ, ಒಂದು ಮನೆಯ ಚಿತ್ರ ಇದೆ ಎಂದಾದತೆ, ನೀವು ಮೊದಲು ಗೋಡೆಗಳಿಗೆ ಬಣ್ಣ ಹಾಕಬಹುದು. ನಂತರ ಪೀಠೋಪಕರಣಗಳು ಮತ್ತು ವರ್ಣಚಿತ್ರಗಳನ್ನು ಸೇರಿಸಬಹುದು. ಈ ಎಲ್ಲ ಬದಲಾವಣೆಗಳನ್ನು ಮಾಡಿದರೂ, ಹಿಂದಿನ ಎಡಿಟಿಂಗ್‌ಗಳು ಹಾಗೆಯೇ ಉಳಿಯುತ್ತವೆ ಎಂದು ಹೇಳಲಾಗಿದೆ.ಈ ಮಾದರಿ ಬಳಕೆದಾರರಿಗೆ ವಸ್ತುಗಳಾದ್ಯಂತ ದೃಶ್ಯ ಶೈಲಿಗಳನ್ನು ವರ್ಗಾಯಿಸಲು ಅವಕಾಶ ನೀಡುತ್ತದೆ. ಒಂದು ಚಿತ್ರದಿಂದ ಮತ್ತೊಂದು ಚಿತ್ರದ ಶೈಲಿಯನ್ನು ಎರವಲು ಪಡೆಯಬಹುದು ಸಾಧ್ಯಾವಾಗುತ್ತದೆ. ಈ ವೈಶಿಷ್ಟ್ಯಗಳು ಇಮೇಜ್ ಎಡಿಟಿಂಗ್ ಜಗತ್ತಿನಲ್ಲಿ ಒಂದು ಹೊಸ ಆಯಾಮವನ್ನು ತರುತ್ತವೆ.
ವಾಟರ್‌ಮಾರ್ಕ್
ಗೂಗಲ್ ಪಾರದರ್ಶಕತೆ ಕಾಯ್ದುಕೊಳ್ಳಲು ಒಂದು ಹೆಜ್ಜೆ ಇಟ್ಟಿದೆ. ಜೆಮಿನಿ ಅಪ್ಲಿಕೇಶನ್ ಮೂಲಕ ಎಡಿಟ್ ಮಾಡಿದ ಅಥವಾ ರಚಿಸಿದ ಎಲ್ಲಾ ಚಿತ್ರಗಳು ಒಂದು ಗೋಚರ ವಾಟರ್‌ಮಾರ್ಕ್ ಅನ್ನು ಹೊಂದಿರುತ್ತವೆ. ಇದು ಅವು AI-ರಚಿತವೆಂದು ಸೂಚಿಸುತ್ತದೆ. ಇದರೊಂದಿಗೆ, ಅದೃಶ್ಯ ಸಿಂಥಿಡ್ ಡಿಜಿಟಲ್ ವಾಟರ್‌ಮಾರ್ಕ್ ಅನ್ನು ಸಹ ಚಿತ್ರಗಳಿಗೆ ಸೇರಿಸಲಾಗುವುದು. ಈ ಕ್ರಮವು AI-ರಚಿತ ವಿಷಯವನ್ನು ಸುಲಭವಾಗಿ ಗುರುತಿಸಲು ಸಹಾಯ ಮಾಡುತ್ತದೆ.
ಈ ಹೊಸ ಮಾದರಿಯು ಗೂಗಲ್‌ನ AI ತಂತ್ರಜ್ಞಾನದಲ್ಲಿ ಮತ್ತೊಂದು ದೊಡ್ಡ ಹೆಜ್ಜೆಯಾಗಿದೆ. ಇದು ಬಳಕೆದಾರರಿಗೆ ಹೆಚ್ಚು ಶಕ್ತಿಶಾಲಿ ಮತ್ತು ಸುಲಭವಾಗಿ ಬಳಸಬಹುದಾದ ಇಮೇಜ್ ಎಡಿಟಿಂಗ್ ಅನುಭವವನ್ನು ನೀಡುತ್ತದೆ. ಇದು AI-ರಚಿತ ಚಿತ್ರಗಳ ಜಗತ್ತಿನಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








