Cyber Fraud: ಹೆಚ್ಚು ಸಂಬಳದ ಆಸೆಗೆ ಸಿಲುಕಿ 17.27 ಲಕ್ಷ ಕಳೆದುಕೊಂಡ ಬಿಎಂಸಿ ವೈದ್ಯರು!
ಈ ಸ್ವಾರ್ಥ ಪ್ರಪಂಚದಲ್ಲಿ ಮುಗ್ದರಿಗೆ ಕಾಲವಿಲ್ಲ! ಆಧುನಿಕತೆ ಹೆಚ್ಚಾದಂತೆ ತಂತ್ರಜ್ಞಾನ ಆಧಾರಿತ ಅಪರಾಧ, ವಂಚನೆ ಪ್ರಕರಣಗಳ ಸಂಖ್ಯೆಗಳು ಹೆಚ್ಚಾಗುತ್ತಿವೆ. ಸೈಬರ್ ವಂಚನೆಗೆ (Cyber Fraud) ಸಿಲುಕಿ ಬಿಎಂಸಿ ವೈದ್ಯರು (BMC doctor) ಬರೋಬ್ಬರಿ 17.27 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಆನ್‌ಲೈನ್ ಕಳ್ಳರ (Cyber Criminals) ಬಲೆಗೆ ಬೀಳುವವರ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ. ಇದಕ್ಕೆ ಈ ಪ್ರಕರಣವೇ ಹಿಡಿದ ಕೈಗನ್ನಡಿ.
ಹೌದು, ಆನ್‌ಲೈನ್ ಟ್ರೇಡಿಂಗ್ ಹಗರಣಗಳು ಹೆಚ್ಚುತ್ತಿರುವ ಆತಂಕಕಾರಿಯಾಗಿದೆ. ಕಳೆದ ಕೆಲವು ದಿನಗಳಲ್ಲಿ ಹತ್ತಾರು ಅಮಾಯಕರು ಕೋಟ್ಯಂತರ ರೂಪಾಯಿ ವಂಚನೆಗೆ ಒಳಗಾಗಿದ್ದಾರೆ. ಹಣ ಡಬಲ್ ಮಾಡುವುದಾಗಿ ನಂಬಿಸಿ ವಂಚಕರು ಅಮಾಯಕರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ. ಇದೀಗ ಅಂತಹದ್ದೇ ಒಂದು ಘಟನೆ ಮುಂಬೈನಲ್ಲಿ ನಡೆದಿದೆ. ಏನಿದು ವಂಚನೆ ಪ್ರಕರಣ? ವೈದ್ಯರು ಸೈಬರ್ ಕಳ್ಳರ ಬಲೆಗೆ ಬಿದ್ದಿದ್ದಾದರೂ ಹೇಗೆ? ಅನ್ನೋದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.

ಮುಂಬೈನಲ್ಲಿ ನೆಲೆಸಿರುವ 40 ವರ್ಷದ ವೈದ್ಯರೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದಿದ್ದಾರೆ. ಬರೋಬ್ಬರಿ 17.27 ಲಕ್ಷ ರೂ. ಕಳೆದುಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ವೈದ್ಯರಿಗೆ ಟೆಲಿಗ್ರಾಮ್ ಆ್ಯಪ್‌ನಲ್ಲಿ ಅಪರಿಚಿತ ವ್ಯಕ್ತಿ ಪರಿಚಯವಾಗಿದ್ದರು. ಪ್ರತಿನಿತ್ಯ ಕೆಲವು ಗಂಟೆಗಳನ್ನು ಮೀಸಲಿಟ್ಟರೆ ಅಧಿಕ ಲಾಭ (ಹೆಚ್ಚುವರಿ ಸಂಬಳ) ಗಳಿಸಬಹುದು ಎಂದು ದೂರುದಾರಿಗೆ ತಿಳಿಸಲಾಗಿತ್ತು. ಇದನ್ನು ನಂಬಿದ ವೈದ್ಯರು ಹಣ ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆ ಮೆಸೇಜ್ ಟೆಲಿಗ್ರಾಮ್ ಆ್ಯಪ್‌ನಿಂದ ಬಂದಿತ್ತು!
ವಂಚನೆಗೊಳಗಾದ ಬಿಎಂಸಿ ವೈದ್ಯರು, ಟೆಲಿಗ್ರಾಮ್ ಆ್ಯಪ್‌ನಲ್ಲಿ ಅಕೌಂಟ್ ಹೊಂದಿದ್ದರು. ಎರಡು ತಿಂಗಳ ಹಿಂದೆ ಸಹಾರಾ ಕಲ್ಯಾಣಿ ಎಂಬ ಹೆಸರಿನ ಮಹಿಳೆಯಿಂದ ಟೆಲಿಗ್ರಾಮ್ ಆ್ಯಪ್‌ನಲ್ಲಿ ಸಂದೇಶವನ್ನು ಬಂದಿತ್ತು. ವೈದ್ಯರು ಎಂಬುವುದನ್ನು ಅರಿತಿದ್ದ ಆ ಮಹಿಳೆ ಬಲೆ ಬೀಸಲು ಸಂಚು ರೂಪಿಸಿದ್ದಳು. ಅದರಂತೆ, ಪ್ರತಿನಿತ್ಯ ಕೆಲವು ಗಂಟೆಗಳನ್ನು ಮೀಸಲಿಡುವ ಮೂಲಕ ಹೆಚ್ಚುವರಿ ಸಂಬಳವನ್ನು ಗಳಿಸಬಹುದು ಎಂದು ವಂಚನೆಗೊಳಗಾದ ವೈದ್ಯರಿಗೆ ತಿಳಿಸಿದ್ದಾಳೆ. ಅಲ್ಲದೇ, ಏರ್‌ಬಿಎನ್‌ಬಿ ಕಂಪನಿಗೆ ಸೇರಿದ ಆಸ್ತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದ್ದಾಳೆ.
11,000 ರೂ.ಗೆ 983 ರೂ. ಕಮಿಷನ್
ಇಷ್ಟಕ್ಕೆ ಸುಮ್ಮನಾಗದ ಆಕೆಯು, ಕಮಿಷನ್ ಪಡೆಯಲಾಗುವುದು ಎಂದು ತಿಳಿಸಿದ್ದಾಳೆ. ಇದನ್ನು ನಂಬಿ ಆರಂಭದಲ್ಲಿ ವೈದ್ಯರು 11,000 ರೂಪಾಯಿ ಪಾವತಿಸಿದ್ದಾರೆ. ನಂತರ ಅವಳು ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿ ಮತ್ತು ಆಸ್ತಿಯನ್ನು ಪರಿಶೀಲಿಸಿದ್ದಾಳೆ. ಅದಕ್ಕಾಗಿ ಆಕೆ 983 ರೂಪಾಯಿ ಕಮಿಷನ್ ಪಡೆದುಕೊಂಡಿದ್ದಾಳೆ. ನಂತರ, ವೈದ್ಯರಿಗೆ 11,000 ರೂ. ಪಾವತಿಸಲು ಸೂಚಿಸಿದ್ದಾಳೆ. ಮತ್ತೆ ಲಾಗ್ ಇನ್ ಮಾಡಬಹುದು ಮತ್ತು ಆಸ್ತಿಯನ್ನು ಪರಿಶೀಲಿಸಿದ್ದಾಳೆ. ಬಳಿಕ ವೈದ್ಯರನ್ನು ಟೆಲಿಗ್ರಾಮ್ ಗ್ರೂಪ್‌ಗೆ ಸೇರಿಸಿದ್ದಾಳೆ.
ಹಂತ ಹಂತವಾಗಿ 17.27 ಲಕ್ಷ ರೂ. ದೋಖಾ
ಗ್ರೂಪ್‌ನಲ್ಲಿದ್ದ ಮಹಿಳಾ ಸದಸ್ಯರುಗಳು ನಾವು ಅಧಿಕ ಮೊತ್ತವನ್ನು ಗಳಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ವೈದ್ಯರಿಗೆ ಕಷ್ಟಪಟ್ಟು ಕೆಲಸ ಮಾಡುವಂತೆ ಪ್ರೋತ್ಸಾಹಿಸಿದ್ದಾರೆ. ಬಳಿಕ ಹಂತ ಹಂತವಾಗಿ 17.27 ಲಕ್ಷ ಪಾವತಿಸುವವರೆಗೂ ಪ್ರಕ್ರಿಯೆ ಮುಂದುವರೆದಿದೆ. ಬಳಿಕ ನಡೆದಿದ್ದೆಲ್ಲಾ ಮಹಾ ಮೋಸ. ಇನ್ಮುಂದೆ ನೀವು ದೈನಂದಿನ ಪಾವತಿಗಳನ್ನು ಮಾಡಬೇಕು. ಇಲ್ಲವಾದರೆ, ನಿಮ್ಮ ಖಾತೆಯಲ್ಲಿ ಸಂಗ್ರಹವಾದ 37.48 ಲಕ್ಷ ರೂ. ಹಣ ಮತ್ತು ಆ್ಯಪ್‌ನಲ್ಲಿ ಸಂಗ್ರಹಿಸಿದ ಸಂಪೂರ್ಣ ಹಣವನ್ನು ಕಳೆದುಕೊಳ್ಳುತ್ತೀರಿ ಎಂದು ಬೆದರಿಕೆ ಹಾಕಿದ್ದಾಳೆ.
ಶೇ.30 ರಷ್ಟು ಕಮಿಷನ್ ನೀಡುವಂತೆ ಬೇಡಿಕೆ
ಇದರಿಂದ ಭಯಗೊಂಡ ವೈದ್ಯರು ಹಣವನ್ನು ಹಿಂಪಡೆಯಲು ಪ್ರಯತ್ನಿಸಿದ್ದಾರೆ. ಆಗ ಹಣವನ್ನು ಹಿಂಪಡೆಯಲು ಶೇ.30 ರಷ್ಟು ಕಮಿಷನ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾಳೆ. ಆಗಲೇ ವೈದ್ಯರಿಗೆ ತಾನು ವಂಚನೆಗೆ ಒಳಗಾಗಿದ್ದೇನೆ ಎಂದು ಅರಿವಾಗಿದೆ. ಕೂಡಲೇ ವೈದ್ಯರು ವಂಚನೆಗೊಳಗಾಗಿರುವುದನ್ನು ಅರಿತು ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾರೆ. ಅಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ.


Click it and Unblock the Notifications








