ಕೇವಲ 1 ರೂ.ಗೆ 30 ದಿನ ಅನಿಯಮಿತ ಕರೆ, ಪ್ರತಿದಿನವೂ 2GB ಡೇಟಾ, 100 SMS!
ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಖಾಸಾಗಿ ಟೆಲಿಕಾಂ ಕಂಪೆನಿಗಳ ಅಬ್ಬರ ಹೆಚ್ಚಿದೆ. ಆದರೆ, ಇವುಗಳಿಗೆ ಪೂಪೋಟಿ ನೀಡುವ ಸಲುವಾಗಿ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇನ್ನಿಲ್ಲದಂತಹ ಪ್ರಯತ್ನಗಳನ್ನು ಮಾಡುತ್ತಿದೆ. ಇದರ ಫಲವಾಗಿ ದೇಶದ ಜನರು ಇದೀಗ ಕೇವಲ 1 ರೂಪಾಯಿಗೆ ಬಿಎಸ್‌ಎನ್‌ಎಲ್‌ನಿಂದ ಅದ್ಭುತ ಕೊಡುಗೆಯೊಂದನ್ನು ಪಡೆಯಬಹುದು. ದೀಪಾವಳಿ ಹಬ್ಬದ ವಿಶೇಷವಾಗಿ ಬಿಎಸ್‌ಎನ್‌ಎಲ್ ಸಂಸ್ಥೆಯು ಕೇವಲ 1 ರೂಪಾಯಿಗೆ ವಿಶೇಷ "ದೀಪಾವಳಿ ಬೊನಾನ್ಜಾ" ಅನ್ನು ಘೋಷಿಸಿದೆ.
'ಪ್ರಕಾಶಮಾನವಾದ ದೀಪಗಳು, ಉತ್ತಮ ಸಂಪರ್ಕಗಳು' ಎಂಬ ಧ್ಯೇಯವಾಕ್ಯದೊಂದಿಗೆ ಬಿಎಸ್‌ಎನ್‌ಎಲ್, ಹೊಸ ಬಳಕೆದಾರರಿಗೆ ಕೇವಲ 1 ರೂಪಾಯಿಗೆ ಪ್ರತಿದಿನ 2GB ಡೇಟಾ, ಅನಿಯಮಿತ ಕರೆಗಳು (ಯಾವುದೇ ನೆಟ್‌ವರ್ಕ್‌ಗೆ) ಮತ್ತು ಪ್ರತಿದಿನ 100 SMS ಪ್ರಯೋಜನಗಳನ್ನು ಒದಗಿಸಲು ಮುಂದಾಗಿದೆ. ಹೊಸ ಗ್ರಾಹಕರು ಕೇವಲ ಒಂದು ರೂಪಾಯಿ ಪಾವತಿಸಿ ಉಚಿತ SIM ಕಾರ್ಡ್ ಅನ್ನು ಪಡೆಯಬಹುದು. ಈ ಪ್ರಯೋಜನವು 30 ದಿನಗಳ ವ್ಯಾಲಿಡಿಟಿಯೊಂದಿಗೆ ಬರಲಿದ್ದು, ಕೇವಲ 1 ರೂಪಾಯಿಗೆ ಬರೋಬ್ಬರಿ ಒಂದು ತಿಂಗಳ ಟೆಲಿಕಾಂ ಸೇವೆಯನ್ನು ನೀಡಲಿದೆ.
ಭಾರತದ ಪ್ರಮುಖ ಟೆಲಿಕಾಂ ಕಂಪೆನಿಗಳ ಪೈಕಿ ಬಿಎಸ್‌ಎನ್‌ಎಲ್‌ನ ಈ 1 ರೂಪಾಯಿಯ ಕೊಡುಗೆಯು ಅತ್ಯಂತ ಕೈಗೆಟಕುವ ದರದ ಫೆಸ್ಟಿವ್ ಡೀಲ್‌ಗಳಲ್ಲಿ ಒಂದಾಗಿದೆ. ಹೊಸ ಬಳಕೆದಾರರನ್ನು ಆಕರ್ಷಿಸಲು ಮತ್ತು 4G ನೆಟ್‌ವರ್ಕ್ ಅನುಭವ ನೀಡಲು ಈ ಯೋಜನೆ ಸಹಕಾರಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಹಾಗಾಗಿ, ಉತ್ತಮ ಡೇಟಾ ಮತ್ತು ಕರೆ ಸೌಲಭ್ಯಗಳೊಂದಿಗೆ ಈ ದೀಪಾವಳಿಯನ್ನು ಸಂಭ್ರಮಿಸಲು ಬಯಸುವ ಹೊಸ ಮೊಬೈಲ್ ಬಳಕೆದಾರರು ಈ ವಿಶೇಷ ಬೊನಾನ್ಜಾ ಕೊಡುಗೆಯ ಲಾಭವನ್ನು ಪಡೆದುಕೊಳ್ಳಬಹುದು.
ಬಿಎಸ್‌ಎನ್‌ಎಲ್ ಒದಗಿಸುತ್ತಿರುವ 1 ರೂಪಾಯಿಯ ಯೋಜನೆ ಉತ್ತಮವೇ?
ಬಿಎಸ್‌ಎನ್‌ಎಲ್ ಘೋಷಿಸಿರುವ ಈ ₹1 'ದೀಪಾವಳಿ ಬೊನಾನ್ಜಾ' ಕೊಡುಗೆಯು ಹೊಸ ಬಳಕೆದಾರರಿಗೆ ಖಂಡಿತವಾಗಿಯೂ ಅತ್ಯಂತ ಯೋಗ್ಯವಾಗಿದೆ. ಕೇವಲ ಒಂದು ರೂಪಾಯಿ ಪಾವತಿಸಿ 30 ದಿನಗಳ ಕಾಲ ಪ್ರತಿದಿನ 2GB ಡೇಟಾ, ಅನ್ಲಿಮಿಟೆಡ್ ಕರೆಗಳು ಮತ್ತು ಉಚಿತ ಸಿಮ್ ಪಡೆಯುವ ಅವಕಾಶ ಬೇರೆ ಯಾವುದೇ ಖಾಸಗಿ ಟೆಲಿಕಾಂ ಕಂಪನಿಗಳಿಂದ ಸಿಗುವುದಿಲ್ಲ. ಇದು ಹೊಸ ಗ್ರಾಹಕರು ಯಾವುದೇ ದೊಡ್ಡ ಬಂಡವಾಳವಿಲ್ಲದೆ ಬಿಎಸ್‌ಎನ್‌ಎಲ್‌ನ ನೆಟ್‌ವರ್ಕ್ ಸಾಮರ್ಥ್ಯ ಮತ್ತು ಗುಣಮಟ್ಟವನ್ನು ಒಂದು ತಿಂಗಳವರೆಗೆ ಪರೀಕ್ಷಿಸಲು ಇರುವ ಉತ್ತಮ ಮಾರ್ಗವಾಗಿದೆ.
ಆದರೆ, ಬಿಎಸ್‌ಎನ್‌ಎಲ್ ಇಂತಹ ಆಕರ್ಷಕ ಬೆಲೆಯ ಯೋಜನೆಗಳನ್ನು ನೀಡುತ್ತಿದ್ದರೂ, ಗ್ರಾಹಕರು ಈ ಕಂಪನಿಯತ್ತ ಆಸಕ್ತಿ ತೋರಿಸದಿರಲು ಮುಖ್ಯವಾಗಿ ನೆಟ್‌ವರ್ಕ್‌ನ ಗುಣಮಟ್ಟ ಮತ್ತು ಆಧುನೀಕರಣದ ಕೊರತೆಯೇ ಕಾರಣ ಎನ್ನಬಹುದು. ಇದಕ್ಕೆ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು.

1. 4G ನೆಟ್‌ವರ್ಕ್ ಕೊರತೆ ಮತ್ತು ವಿಳಂಬ: ದೇಶದ ಬಹುತೇಕ ಭಾಗಗಳಲ್ಲಿ ಜಿಯೋ ಮತ್ತು ಏರ್‌ಟೆಲ್ ಈಗಾಗಲೇ ಸ್ಥಿರವಾದ 4G ಮತ್ತು 5G ಸೇವೆಗಳನ್ನು ಸ್ಥಾಪಿಸಿವೆ. ಆದರೆ, ಬಿಎಸ್‌ಎನ್‌ಎಲ್ ತನ್ನ 4G ರೋಲ್‌ಔಟ್ ಅನ್ನು ಬಹಳ ವಿಳಂಬವಾಗಿ ಆರಂಭಿಸಿದೆ. ಇದರ ಪರಿಣಾಮವಾಗಿ, ಅನೇಕ ಪ್ರದೇಶಗಳಲ್ಲಿ ನೆಟ್‌ವರ್ಕ್ ಕವರೇಜ್ ಅಥವಾ ಇಂಟರ್ನೆಟ್ ವೇಗವು ಖಾಸಗಿ ಟೆಲಿಕಾಂಗಳಿಗೆ ಹೋಲಿಸಿದರೆ ತೀರಾ ಕಡಿಮೆ ಇದೆ. ಉತ್ತಮ ಡೇಟಾ ವೇಗ ಬಯಸುವ ಗ್ರಾಹಕರಿಗೆ ಇದು ಪ್ರಮುಖ ಹಿನ್ನಡೆಯಾಗಿದೆ.
2. ಕಳಪೆ ಸೇವೆ ಮತ್ತು ಆಧುನೀಕರಣದ ಕೊರತೆ: ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆಯ ಜೊತೆಗೆ, ಗ್ರಾಹಕರು ಸಾಮಾನ್ಯವಾಗಿ ಕಳಪೆ ಗ್ರಾಹಕ ಸೇವೆ ಮತ್ತು ದೂರುಗಳ ಪರಿಹಾರದಲ್ಲಿ ವಿಳಂಬವನ್ನು ಎದುರಿಸುತ್ತಾರೆ. ಅಲ್ಲದೆ, ತಂತ್ರಜ್ಞಾನ ನವೀಕರಣದಲ್ಲಿ ಬಿಎಸ್‌ಎನ್‌ಎಲ್ ಹಿಂದೆ ಬಿದ್ದಿರುವುದರಿಂದ, ಅದು ಗ್ರಾಹಕರು ನಿರೀಕ್ಷಿಸುವ ಆಧುನಿಕ ಮೊಬೈಲ್ ಸೇವೆಗಳನ್ನು ಒದಗಿಸಲು ವಿಫಲವಾಗಿದೆ.
ಬಿಎಸ್‌ಎನ್‌ಎಲ್‌ನ ಈ ಕೊಡುಗೆಯ ತಂತ್ರಗಾರಿಕೆಯು ಅದರ ಇತ್ತೀಚಿನ ದೇಶೀಯ 4G ನೆಟ್‌ವರ್ಕ್ ವಿಸ್ತರಣೆಯ ಒಂದು ಭಾಗವಾಗಿರಬಹುದು. ಮುಂದಿನ ದಿನಗಳಲ್ಲಿ, 4G ಟವರ್‌ಗಳ ಅಳವಡಿಕೆ ಹೆಚ್ಚಾಗಿ, ನೆಟ್‌ವರ್ಕ್ ಕವರೇಜ್ ಮತ್ತು ಇಂಟರ್ನೆಟ್ ವೇಗವು ಸ್ಥಿರಗೊಂಡರೆ, ಬಿಎಸ್‌ಎನ್‌ಎಲ್ ಖಂಡಿತವಾಗಿಯೂ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಗಣನೀಯವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ ಸರ್ಕಾರ ಮತ್ತು ಸಂಸ್ಥೆಯು ದೂರ ದೃಷ್ಟಿಯನ್ನು ಹೊಂದಿರಬೇಕು. ಏನಂತಿರಾ? ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








