ಕೇವಲ 1 ರೂ.ಗೆ 60GB ಡೇಟಾ, ಕರೆ, ದಿನಕ್ಕೆ 100 SMS !..ಜಿಯೋ, ಏರ್‌ಟೆಲ್ ಶೇಕ್!
ಕೇವಲ ಒಂದು ರೂಪಾಯಿಗೆ ಒಂದು ತಿಂಗಳ ಅನಿಯಮಿತ ಕರೆ, 100 SMS ಮತ್ತು ದೈನಂದಿಕ ಡೇಟಾವನ್ನು ನೀಡಿದರೆ ಹೇಗಿರುತ್ತದೆ?. ಹೌದು. ನೀವು ಕೇಳಿದ್ದು ನಿಜ.! ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಹೊಸ ಗ್ರಾಹಕರಿಗಾಗಿ 'ಆಜಾದಿ ಕಾ ಪ್ಲಾನ್' ಎಂಬ ಅತ್ಯಾಕರ್ಷಕ ಯೋಜನೆಯನ್ನು ಪರಿಚಯಿಸಿದೆ. ಕೇವಲ ₹1ಕ್ಕೆ ಲಭ್ಯವಿರುವ ಈ ಪ್ರಿಪೇಯ್ಡ್ ಯೋಜನೆಯ ಮೂಲಕ ಜಿಯೋ, ಏರ್‌ಟೆಲ್‌ನಂತಹ ಖಾಸಗಿ ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧಿಸಲು BSNL ಮುಂದಾಗಿದೆ.
ಆಗಷ್ಟ್ ತಿಂಗಳಿನಲ್ಲಿ ಹೊಸ ಗ್ರಾಹಕರನ್ನು ಸೆಳೆಯುವ ಸಲುವಾಗಿ BSNL ಇಂತಹದೊಂದು ಆಫರ್ ಅನ್ನು ತಂದಿದ್ದು, ಈ ವಿಶೇಷ ಯೋಜನೆಯಲ್ಲಿ ಹೊಸ ಗ್ರಾಹಕರು ₹1 ಪಾವತಿಸಿ ಉಚಿತ ಸಿಮ್ ಪಡೆಯಬಹುದು. ಈ ಸಿಮ್ ಕಾರ್ಡ್ ಜೊತೆಗೆ ಅನಿಯಮಿತ ಧ್ವನಿ ಕರೆಗಳು, ಪ್ರತಿದಿನ 100 SMS, ಮತ್ತು ಒಟ್ಟು 60GB ಡೇಟಾವನ್ನು ಪಡೆಯಬಹುದು (ಪ್ರತಿದಿನ 2GB ಡೇಟಾ). ಈ ಎಲ್ಲಾ ಸೌಲಭ್ಯಗಳು 30 ದಿನಗಳ ಮಾನ್ಯತೆಯನ್ನು ಹೊಂದಿರುತ್ತವೆ. ಈ ಮೂಲಕ, ಕಡಿಮೆ ಬೆಲೆಯಲ್ಲಿ ಹೊಸ ಬಳಕೆದಾರರನ್ನು ಆಕರ್ಷಿಸಿ, BSNL ತನ್ನ ಗ್ರಾಹಕರ ನೆಲೆಯನ್ನು ವಿಸ್ತರಿಸಲು ಮುಂದಾಗಿದೆ.
ಈ ಆಫರ್ ಆಗಸ್ಟ್ 1, 2025 ರಿಂದ ಆಗಸ್ಟ್ 31, 2025ರವರೆಗೆ ಲಭ್ಯವಿದೆ. ಈ ಯೋಜನೆಯನ್ನು ಪಡೆಯಲು, ಹೊಸ ಗ್ರಾಹಕರು ತಮ್ಮ ಹತ್ತಿರದ BSNL ಗ್ರಾಹಕ ಸೇವಾ ಕೇಂದ್ರ (CSC) ಅಥವಾ ಯಾವುದೇ ಅಧಿಕೃತ ಚಿಲ್ಲರೆ ವ್ಯಾಪಾರಿಗೆ ಭೇಟಿ ನೀಡಬೇಕು. ಈ ಮೂಲಕ, ₹1ಕ್ಕೆ ಸಂಪೂರ್ಣ ತಿಂಗಳು BSNL ಸೇವೆಯನ್ನು ಅನುಭವಿಸಬಹುದು ಎಂದು BSNL ತಿಳಿಸಿದೆ. ಈ ₹1ರ ಆಜಾದಿ ಕಾ ಪ್ಲಾನ್ ಮೂಲಕ, BSNL ದೇಶದಾದ್ಯಂತ ಹೊಸ ಚಂದಾದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗುವ ನಿರೀಕ್ಷೆಯನ್ನು ಹೊಂದಿದೆ.

ವಾಟ್ಸಪ್ ಮೂಲಕ ಬ್ರಾಡ್‌ಬ್ಯಾಂಡ್ ಅಪ್‌ಗ್ರೇಡ್
ಇದೇ ಸಮಯದಲ್ಲಿ, BSNL ತನ್ನ ಅಸ್ತಿತ್ವದಲ್ಲಿರುವ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಒಂದು ಹೊಸ ಸೌಲಭ್ಯವನ್ನು ಪರಿಚಯಿಸಿದೆ. BSNL FTTH (ಫೈಬರ್ ಬ್ರಾಡ್‌ಬ್ಯಾಂಡ್) ಅಥವಾ ಲ್ಯಾಂಡ್‌ಲೈನ್ ಗ್ರಾಹಕರು ಈಗ ತಮ್ಮ ಯೋಜನೆಗಳನ್ನು ಅಪ್‌ಗ್ರೇಡ್ ಮಾಡಲು WhatsApp ಅನ್ನು ಬಳಸಬಹುದು. ಈ ಸೇವೆಯನ್ನು ಬಳಸಲು, ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 1800-4444 ಸಂಖ್ಯೆಗೆ WhatsApp ಸಂದೇಶವನ್ನು ಕಳುಹಿಸಬೇಕು. ಈ ಸುಲಭ ಪ್ರಕ್ರಿಯೆ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆ.
BSNL'ಕ್ವಾಂಟಮ್-5G' ಸೇವೆ ಕೂಡ ಪ್ರಾರಂಭವಾಗಿದೆ.
BSNL ಇತ್ತೀಚೆಗಷ್ಟೇ ತನ್ನ ಹೊಸ 5G ಬ್ರಾಡ್‌ಬ್ಯಾಂಡ್ ಸೇವೆ 'ಕ್ವಾಂಟಮ್-5G' (Quantum-5G) ಅನ್ನು ಭಾರತದಲ್ಲಿ ಪ್ರಾರಂಭಿಸಿದೆ. ಈ ಹೊಸದಾಗಿ ಪರಿಚಯಿಸಲಾದ ಕ್ವಾಂಟಮ್-5G FWA (Fixed Wireless Access) ವೈರ್‌ಲೆಸ್ 5G ಸೇವೆಗಳು ವೈರ್ಡ್ ಸಂಪರ್ಕಗಳ ಅಗತ್ಯವಿಲ್ಲದೆ ಹೆಚ್ಚಿನ ವೇಗದ ಇಂಟರ್ನೆಟ್ ಒದಗಿಸುವ ಗುರಿಯನ್ನು ಹೊಂದಿವೆ. ಪ್ರಸ್ತುತ ಆಯ್ದ ನಗರಗಳಲ್ಲಿ ಲಭ್ಯವಿರುವ ಈ ಸೇವೆಯನ್ನು ಎಂಟರ್‌ಪ್ರೈಸ್ ಮತ್ತು ಹೋಮ್ ಬ್ರಾಡ್‌ಬ್ಯಾಂಡ್ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ.
BSNL ಕ್ವಾಂಟಮ್-5G FWA ಯೋಜನಗಳ ಬೆಲೆ ಮತ್ತು ಸೌಲಭ್ಯಗಳು
BSNL ತನ್ನ ಕ್ವಾಂಟಮ್-5G FWA ಸೇವೆಗಳಿಗಾಗಿ ಸದ್ಯಕ್ಕೆ ಎರಡು ಯೋಜನೆಗಳನ್ನು ಪರಿಚಯಿಸಿದೆ. ಮೂಲ ಯೋಜನೆಯು ತಿಂಗಳಿಗೆ ₹999 ಕ್ಕೆ ಲಭ್ಯವಿದ್ದು, 100 Mbps ವೇಗವನ್ನು ನೀಡುತ್ತದೆ. ಹೆಚ್ಚಿನ ಇಂಟರ್ನೆಟ್ ವೇಗವನ್ನು ಬಯಸುವ ಬಳಕೆದಾರರಿಗಾಗಿ, ತಿಂಗಳಿಗೆ ₹1,499 ಯೋಜನೆಯೂ ಇದೆ, ಇದು 300 Mbps ವೇಗವನ್ನು ಒದಗಿಸುತ್ತದೆ.
ಈ ಎರಡೂ ಯೋಜನೆಗಳು ಡೇಟಾ ಬಳಕೆಗೆ ಸಂಬಂಧಿಸಿದಂತೆ ವಾಣಿಜ್ಯ FUP (Fair Usage Policy) ಮಿತಿಯನ್ನು ಹೊಂದಿರಬಹುದು, ಆದರೆ ಇದರ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಇನ್ನೂ ಪ್ರಕಟಿಸಲಾಗಿಲ್ಲ. ಗಮನಿಸಬೇಕಾದ ಅಂಶವೆಂದರೆ, BSNL ನ Q-5G FWA ಸೇವೆಗಳು ಧ್ವನಿ ಕರೆಗಳನ್ನು ಬೆಂಬಲಿಸುವುದಿಲ್ಲ. ಭವಿಷ್ಯದಲ್ಲಿ BSNL ಹೆಚ್ಚಿನ ಸುಂಕದ ಯೋಜನೆಗಳನ್ನು ಪರಿಚಯಿಸುವ ಸಾಧ್ಯತೆಯಿದೆ.


Click it and Unblock the Notifications








