ಲೀಟರ್ ನೀರಿಗೆ 300KM ಓಡುತ್ತೇ ಈ ಕಾರು..! ಭಾರತೀಯ ವಿದ್ಯಾರ್ಥಿಗಳ ಸಾಧನೆ..!
ದಿನೇ ದಿನೇ ತೈಲದರ ಹೆಚ್ಚುತ್ತಿರುವಾಗ ಜನರಿಗೆ ಪೆಟ್ರೋಲ್‌ನ ಪರ್ಯಾಯ ಬೇಕಾಗಿದೆ. ಅದಕ್ಕಾಗಿಯೇ ಹೊಸ ಮಾದರಿಯ ವಾಹನ ಮಾದರಿಗಳನ್ನು ಕಂಡು ಹಿಡಿಯಲು ವಿಶ್ವವೇ ಸಂಶೋಧನೆಯಲ್ಲಿ ಮುಳುಗಿದೆ. ಪೆಟ್ರೋಲ್ ನವೀಕರಿಸಲಾಗದ ಇಂಧನವಾಗಿರುವುದರಿಂದ ಯಾವಾಗ ಮುಗಿದರೂ ಅಚ್ಚರಿ ಪಡಬೇಕಿಲ್ಲ. ಆದ್ದರಿಂದ ಭವಿಷ್ಯದ ಇಂಧನ ಹುಡುಕುವಲ್ಲಿ ಹೆಚ್ಚಿನ ಪ್ರಮಾಣದ ಸಂಶೋಧನೆಗಳು ನಡೆಯುತ್ತಿವೆ.

ಹೌದು, ಈಗ ಅದೇ ಮಾದರಿಯಲ್ಲಿ IIT ರೂರ್ಕಿಯ ವಿದ್ಯಾರ್ಥಿ ಸಮೂಹ ಅಂತಹದ್ದೇ ಒಂದು ಸಾಧನೆಯೊಂದನ್ನು ಮಾಡಿದ್ದು, ಲಾಗ್ 9 ಮಟೇರಿಯಲ್ ಎಂಬ ಸ್ಟಾರ್ಟ್‌ಅಪ್ ಮೂಲಕ ಹೊಸ ವಾಹನವನ್ನು ಪರಿಚಯಿಸಲು ಮುಂದಾಗಿದೆ. ಕೇವಲ ನೀರು ಮತ್ತು ಅಲ್ಯೂಮಿನಿಯಂ ತಟ್ಟೆಗಳಿಂದ ಓಡುವಂತಹ ಕಾರೊಂದನ್ನು ಅಭಿವೃದ್ಧಿಪಡಿಸಿದ್ದು, ಇದು ಜಾಗತಿಕವಾಗಿ ಸಾಕಷ್ಟು ಸುದ್ದಿ ಮಾಡಿದೆ. ವೈಜ್ಞಾನಿಕ ಜಗತ್ತಿನಲ್ಲಿ ಹೊಸ ಭಾಷ್ಯ ಬರೆಯಲು ಈ ಸ್ಟಾರ್ಟ್‌ಅಪ್ ತಯಾರಾಗಿದೆ. ಭವಿಷ್ಯದಲ್ಲಿ ನೀರಿನಿಂದ ವಾಹನಗಳನ್ನು ಓಡಿಸಬಹುದು ಎಂಬುದು ಅಕ್ಷರಶಃ ಸತ್ಯವಾಗುವ ಕಾಲ ದೂರವಿಲ್ಲ.

ಲೀಟರ್ ನೀರಿಗೆ 300 ಕಿ.ಮೀ. ಮೈಲೇಜ್
ಐಐಟಿ ರೂರ್ಕಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಕಾರು ಒಂದು ಲೀಟರ್ ನೀರಿಗೆ ಬರೋಬ್ಬರಿ 300 ಕಿ.ಮೀ. ದೂರವನ್ನು ಕ್ರಮಿಸುತ್ತದೆಯಂತೆ. ಡಿಸೇಲ್, ಪೆಟ್ರೋಲ್ ದರ ಹೆಚ್ಚುತ್ತಿರುವ ಸಮಯದಲ್ಲಿ ಲೀಟರ್ ನೀರಿಗೆ 300 ಕಿ.ಮೀ ಎಂದರೆ ಅದು ದೊಡ್ಡ ಸಾಧನೆಯೇ ಆಗಿದ್ದು, ವಾಹನ ಮಾರುಕಟ್ಟೆಯ ಇತಿಹಾಸವನ್ನು ಬದಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸಾವಿರ ಕಿ.ಮೀಗೆ ಪ್ಲೇಟ್ ಬದಲಾಯಿಸಬೇಕು
ಹೊಸ ಮಾದರಿಯ ವಾಹನದಲ್ಲಿ ನಾವು ಪ್ರತಿ 1,000 ಕಿ.ಮೀಗೆ ಅಲ್ಯುಮಿನಿಯಂ ಪ್ಲೇಟ್‌ಗಳನ್ನು ಬದಲಾವಣೆ ಮಾಡಬೇಕಾಗಿದೆ. ಒಂದು ಸಲ ಅಲ್ಯುಮಿನಿಯಂ ಪ್ಲೇಟ್‌ಗಳನ್ನು ಬದಲಿಸಿದರೆ 1000 ಕಿ.ಮೀವರೆಗೂ ಮತ್ತೇನು ತೊಂದರೆಯಿಲ್ಲ. ಅಲ್ಯುಮಿನಿಯಂ ಪ್ಲೇಟ್ ಬದಲಿಸಲು ಕೂಡ ಕೇವಲ 15 ನಿಮಿಷಗಳು ಸಾಕಂತೆ. ಆದರೆ, ಅಲ್ಯುಮಿನಿಯಂ ಪ್ಲೇಟ್‌ಗಳಿಗೆ ಸದ್ಯ 5000 ರೂ. ವೆಚ್ಚವಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾದಂತೆ ಪ್ಲೇಟ್‌ಗಳ ದರವು ಕಡಿಮೆಯಾಗುತ್ತದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಕಾರಿನ ಮೂಲ ಮಾದರಿ ಸಿದ್ಧ
ಲಾಗ್ 9 ಮಟೇರಿಯಲ್ಸ್ ಸಂಸ್ಥಾಪಕ ಮತ್ತು ಸಿಇಒ ಅಕ್ಷಯ್ ಸಿಂಘಾಲ್ ಹೇಳುವಂತೆ ಕೆಲವು ವಾಹನ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಹಾಗೂ ಕಾರಿನ ಮೂಲ ಮಾದರಿಯನ್ನು ಸಿದ್ಧಪಡಿಸಲಾಗಿದ್ದು, ಕಂಪನಿಗಳ ಪ್ರತಿಕ್ರಿಯೆಗೆ ಕಾಯುತ್ತಿದ್ದಾರಂತೆ.

ಹೇಗಿದೆ ತಂತ್ರಜ್ಞಾನ..?
ನೀರನ್ನು ಇಂಧನವಾಗಿ ಬಳಸಿಕೊಳ್ಳುವ ಪ್ರಕ್ರಿಯೆ ಸರಳ ವಿದ್ಯುತ್ ಇಂಧನ ಕೋಶ ತಂತ್ರಜ್ಞಾನ ಆಧರಿಸಿದ್ದು, ವಿದ್ಯುತ್ ಉತ್ಪಾದನೆಗೆ ಎಲೆಕ್ಟ್ರೋಕೆಮಿಕಲ್ ಪ್ರತಿಕ್ರಿಯೆಯನ್ನು ಬಳಸುತ್ತದೆ. ಗ್ರಾಫೇನ್ ರಾಡ್‌ನ್ನು ಅಲ್ಯುಮಿನಿಯಂ ಪ್ಲೇಟ್‌ಗಳೊಂದಿಗೆ ಅಳವಡಿಸಲಾಗಿದ್ದು, ಅಯಾನುಗಳನ್ನು ಸಕಾರಾತ್ಮಕ ಮತ್ತು ನಕಾರಾತ್ಮಕ ನೋಡ್‌ಗಳಿಗೆ ಸಾಗಿಸಲು ನೀರು ಸಹಾಯ ಮಾಡುತ್ತದೆ. ಇಲ್ಲಿ ಉತ್ಪಾದನೆಯಾದ ಶಕ್ತಿಯನ್ನು ಕಾರ್‌ನ್ನು ಚಲಿಸಲು ಬಳಸಲು ಎಲೆಕ್ಟ್ರಾನಿಕ್ ಮೋಟಾರ್ ಬಳಸಲಾಗುತ್ತಿದೆ.
ಉದ್ಯಮಿಗಳಿಂದ ಪ್ರಶಂಸೆ
ನೀರನ್ನು ಇಂಧನವಾಗಿ ಬಳಸಿಕೊಳ್ಳುವ ಹೊಸ ಮಾದರಿಯ ಕಾರಿನ ಅಭಿವೃದ್ಧಿಯನ್ನು ಹಲವು ಉದ್ಯಮಿಗಳು ಶ್ಲಾಘಿಸಿದ್ದಾರೆ. ಬಯೋಕಾನ್ ಸಂಸ್ಥಾಪಕರಾದ ಕಿರಣ್ ಮಜುಂದಾರ್ ಷಾ ಟ್ವೀಟ್ ಮಾಡುವ ಮೂಲಕ ಅಭಿನಂದಿಸಿದ್ದು, ಆ ಟ್ವೀಟ್‌ನಲ್ಲಿ ಐಐಟಿ ರೂರ್ಕಿಯ ಸಂಶೋಧಕರು ನೀರು ಮತ್ತು ಅಲ್ಯೂಮಿನಿಯಂನಲ್ಲಿ ಚಲಿಸುವ ಪರಿಸರ ಸ್ನೇಹಿ ವಿದ್ಯುತ್ ಕಾರ್ ಮಾದರಿಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಎಲೆಕ್ಟ್ರಿಕ್ ವಾಹನ ಕನಸಿಗೆ ಹೊಸ ರೆಕ್ಕೆ
ಭಾರತದಲ್ಲಿ ತೈಲ ಆಮದು ಕಡಿಮೆ ಮಾಡಲು ಸರ್ಕಾರ ಎಲೆಕ್ಟ್ರಿಕ್ ವಾಹನಗಳು ಮತ್ತು ಪರ್ಯಾಯ ಇಂಧನ ಮೂಲ ಬಳಸುವ ವಾಹನಗಳ ಕಡೆ ಮುಖ ಮಾಡಿದೆ. ಈ ರೀತಿಯ ನಾವೀನ್ಯತೆ ಭಾರತವು ತನ್ನ ಎಲೆಕ್ಟ್ರಿಕ್ ವಾಹನಗಳ ಕನಸನ್ನು ಶೀಘ್ರವಾಗಿ ಸಾಧಿಸಲು ಸಹಾಯ ಮಾಡುತ್ತದೆ. ಸದ್ಯ ಎಲೆಕ್ಟ್ರಿಕ್ ವಾಹನಗಳು ಜಾಗತಿಕವಾಗಿ ಮಾರಾಟವಾಗುತ್ತಿದ್ದರು, ಅವು ಸಾಮಾನ್ಯರ ಕೈಗೆಟುಕದ ಬೆಲೆಯಲ್ಲಿರುವುದು ಸಮಸ್ಯೆಯಾಗಿದೆ.


Click it and Unblock the Notifications








