ಚಂದ್ರಯಾನ-2: ಸೆ.7 ರಂದು ಚಂದ್ರನನ್ನು ಸ್ಪರ್ಷಿಸುವ ರೋಚಕ ಕಾರ್ಯ ಹೇಗಿರಲಿದೆ?
ಸೋಮವಾರ ಮಧ್ಯಾಹ್ನ 1.15ಕ್ಕೆ ನಡೆದಿದ್ದ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಆರ್ಬಿಟರ್ನಿಂದ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಬೇರ್ಪಟ್ಟಿ ಚಂದ್ರಯಾನ-2 ಯೋಜನೆ ಇದೀಗ ಮಹತ್ವದ ಮತ್ತೊಂದು ಘಟ್ಟದಲ್ಲಿ ಯಶಸ್ವಿಯಾಗಿದೆ. ಇತಿಹಾಸವನ್ನು ಸೃಷ್ಟಿಸುವಲ್ಲಿ ಹೆಜ್ಜೆಹಾಕುತ್ತಿರುವ ದೇಶದ ಹಮ್ಮೆಯ ಮಹತ್ವಾಕಾಂಕ್ಷಿ ಚಂದ್ರಯಾನ-2 ಉಪಗ್ರಹವು ಮಂಗಳವಾರ ಚಂದ್ರನ ಕಕ್ಷೆಯಿಂದ ಹೊರಬರುವ ಮೊದಲ ಚಟುವಟಿಕೆಯನ್ನು ವಿಕ್ರಂ ಲ್ಯಾಂಡರ್ ಮುಗಿಸಿದೆ ಎಂದು ಇಸ್ರೊ ಅಧಿಕಾರಿಗಳು ತಿಳಿಸಿದ್ದಾರೆ.

ಹೌದು, ಚಂದ್ರನಿಗೆ ಸಮೀಪವಾಗುವತ್ತ ನಡೆಸಬೇಕಾದ ಎರಡು ಕಕ್ಷೆಯಿಂದ ಹೊರಬರುವ ಚಟುವಟಿಕೆ ಪೈಕಿ ಮೊದಲನೆಯದು ಮಂಗಳವಾರ ಬೆಳಗ್ಗೆ 8.50ಕ್ಕೆ ನಡೆದಿದೆ. ವಿಕ್ರಂ ಲ್ಯಾಂಡರ್ನಲ್ಲಿರುವ ನೋದನ ವ್ಯವಸ್ಥೆಯನ್ನು 4 ಸೆಕೆಂಡ್ ಚಾಲನೆಯಲ್ಲಿಡುವ ಮೂಲಕ ಚಂದ್ರನ ಸುತ್ತ ಅಂಡಾಕಾರದ 104 ಕಿ.ಮಿ 128ಕಿ.ಮೀ ತಾತ್ಕಾಲಿಕ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆಯಾಗಿದೆ. ಆರ್ಬಿಟರ್ನಿಂದ ಬೇರ್ಪಟ್ಟ ವಿಕ್ರಂ ಲ್ಯಾಂಡರ್ ಇದೀಗ ಚಂದ್ರನತ್ತ ತೆರಳಲು ಒಂದೊಂದೇ ಹಂತವನ್ನು ಮುಕ್ತಾಯಗೊಳಿಸುತ್ತಿದೆ.

ಸೆ.7ಕ್ಕೆ ಚಂದ್ರನ ಮೇಲೆ ಇಳಿಯುವಾಗ ಲ್ಯಾಂಡರ್ ನೋದನ ವ್ಯವಸ್ಥೆಯ ಮುಖ್ಯವಾಗುತ್ತದೆ. ಅಂತಹ ಸಣ್ಣ ಅಂಶ ಮಂಗಳವಾರ ನಿರೀಕ್ಷೆಯಂತೆಯೇ ಕೆಲಸ ಮಾಡಿರುವ ಕಾರಣ, ಇಡೀ ವ್ಯವಸ್ಥೆ ಸೂಕ್ತವಾಗಿ ಕಾರ್ಯನಿರ್ವಹಿಸಲಿದೆ ಎಂಬ ಭರವಸೆ ಲಭಿಸಿದಂತಾಗಿದೆ. ಬುಧವಾರ ಬೆಳಗ್ಗೆಯೂ ಒಮ್ಮೆ ನೋದನ ವ್ಯವಸ್ಥೆ ಕೆಲಸ ಮಾಡಬೇಕಿದ್ದು, ಅದೂ ಯಶಸ್ವಿಯಾದರೆ ಈ ಭರವಸೆ ಮತ್ತಷ್ಟು ಗಟ್ಟಿಗೊಳ್ಳಲಿದೆ. ಹಾಗಾದರೆ, ಇನ್ನು ಮೂರು ದಿನಗಳಲ್ಲಿ ಚಂದ್ರನನ್ನು ಸ್ಪರ್ಷಿಸುವ ರೋಚಕ ಕಾರ್ಯ ಹೇಗಿರಲಿದೆ ನೋಡೋಣ ಬನ್ನಿ.

ಚಂದ್ರನಿಗೆ ಮುತ್ತಿಡಲು ಹೊರಟಿರುವ ವಿಕ್ರಂ ಲ್ಯಾಂಡರ್ ಮೇಲೆ ಬೆಂಗಳೂರು ಹೊರವಲಯದ ಬ್ಯಾಲಾಳುವಿನಲ್ಲಿರುವ ಆಂಟೆನಾ ಕಣ್ಣಿಟ್ಟಿದೆ. ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೊ ಟರಲಿಮೆಟ್ರಿ ಆವರಣದಲ್ಲಿರುವ ಮಿಷನ್ ಆಪರೇಷನ್ ಕಾಂಪ್ಲೆಕ್ಸ್ನಲ್ಲಿ ಆರ್ಬಿಟರ್ ಹಾಗೂ ಲ್ಯಾಂಡರ್ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ. ಆರ್ಬಿಟರ್ ಹಾಗೂ ಲ್ಯಾಂಡರ್‌ಗಳು ಸಾಮಾನ್ಯ ಸ್ಥಿತಿಯಲ್ಲಿ ಕೆಲಸ ಮಾಡುತ್ತಿವೆ ಎಂದು ಇಸ್ರೊ ತಿಳಿಸಿದೆ.

ಚಂದ್ರನ ಕಕ್ಷೆಯಿಂದ ಹೊರಬರುವ ಅಂತಿಮ ಹಂತದ ಚಟುವಟಿಕೆ ಬುಧವಾರ ಬೆಳಗ್ಗೆ 3.30- 4.30 ರ ವೇಳೆಯಲ್ಲಿ ನಡೆಯಲಿದೆ. ವಿಕ್ರಂ ಲ್ಯಾಂಡರ್ನಲ್ಲಿರುವ ನೋದಕ ವ್ಯವಸ್ಥೆಯನ್ನು ಕೆಲವು ಸೆಕೆಂಡ್ ಚಾಲನೆಯಲ್ಲಿಡುವ ಮೂಲಕ ಅಂತಿಮ ಕಕ್ಷೆಯಾದ 36 ಕಿ.ಮೀಗಳಿಂದ 10 ಕಿ.ಮೀ. ಕಕ್ಷೆಗೆ ಸೇರ್ಪಡೆ ಮಾಡುವ ಗುರಿ ಹೊಂದಲಾಗಿದೆ. ಈ ಕಕ್ಷೆಯಲ್ಲೆ ವಿಕ್ರಂ ಲ್ಯಾಂಡರ್ ಉಳಿಯಲಿದ್ದು, ಸೆ.7ರ ಬೆಳಗಿನ ಜಾವ ಚಂದ್ರನ ಮೇಲೆ ಇಳಿಯಲಿದೆ.

ವಿಕ್ರಂ 10.30 ನಿಮಿಷಗಳಲ್ಲಿ ಚಂದ್ರನಿಂದ 7.4 ಕಿಮೀ ದೂರಕ್ಕೆ ತಲುಪುತ್ತದೆ. ಈ ಸಂದರ್ಭದಲ್ಲಿ ಇದರ ವೇಗ ಗಂಟೆಗೆ 526 ಕಿಮೀ ಇರಲಿದೆ. ಮುಂದಿನ 38 ಸೆಕೆಂಡುಗಳ ಅವಧಿಯಲ್ಲಿ ಚಂದ್ರನಿಂದ 5 ಕಿಮೀ ದೂರಕ್ಕೆ ತಲುಪಲಿದ್ದು, ವೇಗ ಗಂಟೆಗೆ 331.2 ಕಿಮೀಗೆ ಇಳಿಯಲಿದೆ. ನಂತರದ 89 ಸೆಕೆಂಡುಗಳಲ್ಲಿ ಚಂದ್ರನ ಮೇಲ್ಮೈಯಿಂದ 400 ಮೀ. ದೂರವನ್ನು ತಲುಪಲಿದ್ದು, ವೇಗ ಮತ್ತಷ್ಟು ನಿಧಾನವಾಗುತ್ತದೆ. ಇಲ್ಲಿ ಚಂದ್ರನ ಮೇಲ್ಮೈನ ಡೇಟಾ ಸಂಗ್ರಹಿಸಲಿದೆ.

ಚಂದ್ರನ ಮೇಲೆ 400 ಮೀಟರ್ ಎತ್ತರದಲ್ಲಿ ಡೇಟಾ ಸಂಗ್ರಹಕ್ಕಾಗಿ 12 ಸೆಕೆಂಡುಗಳ ಕಾಲ ಸುಳಿದಾಡಲಿದೆ. ನಂತರದ 66 ಸೆಕೆಂಡುಗಳಲ್ಲಿ ಚಂದ್ರನ ಮೇಲ್ಮೈನಿಂದ 100 ಮೀಟರ್ ದೂರಕ್ಕೆ ತಲುಪಲಿದೆ. ಇಲ್ಲಿ 25 ಸೆಕೆಂಡುಗಳ ಕಾಲ ಇರಲಿರುವ ವಿಕ್ರಂ ಲ್ಯಾಂಡಿಂಗ್ಗೆ ಅಲ್ಲಿ ಸೂಕ್ತ ಅವಕಾಶವಿದೆಯೇ ಅಥವಾ ಬೇರೆ ಸ್ಥಳವನ್ನು ಹುಡುಕಬೇಕೆ ಎನ್ನುವುದನ್ನು ನಿರ್ಧರಿಸಲಿದೆ. ನಂತರ 10 ಮೀಟರ್ ಎತ್ತರದಿಂದ ಮೇಲ್ಮೈನ್ನು ತಲುಪಲು 13 ಸೆಕೆಂಡುಗಳ ಸಮಯ ತೆಗೆದುಕೊಳ್ಳಲಿದೆ.

ವಿಕ್ರಂ ಚಂದ್ರನ ಮೇಲೆ ಇಳಿದ ನಂತರ ವಿಕ್ರಂನ ಸೆನ್ಸರ್ಗಳು ಇಂಜಿನ್ನ್ನು ಸ್ತಬ್ದಗೊಳ್ಳಲು ಮಾಹಿತಿ ರವಾನಿಸಲಿದೆ.ಲ್ಯಾಂಡಿಂಗ್ ಆಗಿ 15 ನಿಮಿಷಗಳ ನಂತರ ವಿಕ್ರಂ ಮೊದಲ ಫೋಟೋವನ್ನು ಕಳುಹಿಸಿಕೊಡಲಿದೆ. ಲ್ಯಾಂಡಿಂಗ್ನ ನಾಲ್ಕು ಗಂಟೆಗಳ ನಂತರ ರೋವರ್ ಪ್ರಜ್ಞಾನ್ ವಿಕ್ರಂನಿಂದ ಹೊರಬಂದು ಹೆಚ್ಚಿನ ಅಧ್ಯಯನದಲ್ಲಿ ತೊಡಗಿಕೊಳ್ಳಲಿದೆ. ವಿಜ್ಞಾನಿಗಳ ಮತ್ತು ದೇಶದ ಜನತೆಯ ಕೋರಿಕೆಯಂತೆ ಚಂದ್ರಯಾನ 2 ಯೋಜನೆ ಯಶಸ್ವಿಯಾದರೆ ಇಡೀ ವಿಶ್ವವೇ ಭಾರತದತ್ತ ಹುಬ್ಬೇರಿಸಿ ನೋಡಲಿದೆ.


Click it and Unblock the Notifications








