ಚಂದ್ರಯಾನ- 3ರ ಲ್ಯಾಂಡಿಂಗ್ ಸಮಯ ಬಹಿರಂಗಪಡಿಸಿದ ಇಸ್ರೋ; ಲ್ಯಾಂಡಿಂಗ್ ಪ್ರಕ್ರಿಯೆ ವೀಕ್ಷಿಸುವುದು ಹೇಗೆ?
ಚಂದ್ರಯಾನ- 3 ಯಶಸ್ಸಿಗೆ ಇನ್ನೇನು ಕೆಲವೇ ಹೆಜ್ಜೆಗಳಷ್ಟೇ ಬಾಕಿಯಿದೆ. ಚಂದಮಾಮನ ದಕ್ಷಿಣ ಧ್ರುವ ಭಾಗದಲ್ಲಿ ಇಳಿಯುವ ಇಸ್ರೋ ಕನಸು ನನಸಾಗುವ ಸಮಯ ಬಂದಿದೆ. ಇದೀಗ ಚಂದ್ರಯಾನ- 3ರ ವಿಕ್ರಮ್ ಲ್ಯಾಂಡರ್ ಚಂದಿರನ ಅಂಗಳದಲ್ಲಿ ಇಳಿಯುವ ಪ್ರಕ್ರಿಯೆ ಸಮಯ ವಿವರವನ್ನು ಇಸ್ರೋ ಪ್ರಕಟಿಸಿದೆ. ಈ ಮೂಲಕ ಭಾರತೀಯರೆಲ್ಲರೂ ಕೌತುಕದಿಂದ ಕಾಯುವಂತೆ ಮಾಡಿದೆ.
ಹೌದು, ಚಂದ್ರಯಾನ- 3 ರ ನೌಕೆ ಇದೀಗ ಚಂದ್ರಿನ ಸಮೀಪದಲ್ಲಿದೆ. ಚಂದ್ರನ ಅಂಗಳಕ್ಕೆ ಇಳಿಯುವುದಕ್ಕೆ ಕೇವಲ 25 ಕಿಲೋ ಮೀಟರ್ ದೂರದಲ್ಲಿದೆ ಎಂದು ಇಸ್ರೋ ಹೇಳಿದೆ. ಈ ಮೂಲಕ ಚಂದ್ರಯಾನ- 3 ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸವನ್ನು ಇಸ್ರೋ ವ್ಯಕ್ತಪಡಿಸಿದೆ. ಅದರಂತೆ ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಇಳಿಯುವ ಪ್ರಕ್ರಿಯೆಯು ಆಗಸ್ಟ್ 23 ರಂದು ನಡೆಯಲಿದೆ ಎಂದು ಇಸ್ರೋ ಹೇಳಿದೆ. ಹಾಗಾದ್ರೆ ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಇಳಿಯುವ ಪ್ರಕ್ರಿಯೆ ಹೇಗೆ ನಡೆಯಲಿದೆ? ಸದ್ಯ ಚಂದ್ರಯಾನ- 3ರ ಹೊಸ ಅಪ್ಡೇಟ್ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಚಂದ್ರಯಾನ- 3ರ ವಿಕ್ರಮ್ ಲ್ಯಾಂಡರ್ ಇದೇ ಆಗಸ್ಟ್ 23ರಂದು ಚಂದ್ರನ ಅಂಗಳದಲ್ಲಿ ಇಳಿಯಲಿದೆ ಎಂದು ಇಸ್ರೋ ಹೇಳಿದೆ. ಈಗಾಗಲೇ ವಿಕ್ರಮ್ ಲ್ಯಾಂಡರ್‌ನ ಬಿಡುಗಡೆಯ ಎರಡನೇ ಹಾಗೂ ಕೊನೆಯ ವೇಗ ತಗ್ಗಿಸುವ ಹಂತವು ಯಶಸ್ವಿಯಾಗಿದ್ದು, ವಿಕ್ರಮ್ ಲ್ಯಾಂಡರ್ 25 X 134 ಕಿಮೀ ಮೇಲ್ಮೈಯಲ್ಲಿನ ಕಕ್ಷೆಗೆ ತರಲಾಗಿದೆ. ಇದು ಇಸ್ರೋ ಚಂದ್ರನ ಮೇಲಿನ ಸಾಫ್ಟ್ ಲ್ಯಾಂಡಿಂಗ್ ಮಾಡಲು ಉದ್ದೇಶಿಸಿರುವ ಜಾಗಕ್ಕೆ ಹತ್ತಿರದಲ್ಲಿದೆ ಎನ್ನಲಾಗಿದೆ.
ಸದ್ಯ ಚಂದಮಾಮನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ ಹತ್ತಿರವಿದ್ದು, ಈ ಭಾರಿಯ ತನ್ನ ಪ್ರಯತ್ನ ಸಫಲವಾಗಲಿದೆ ಎಂದು ಇಸ್ರೋ ವಿಶ್ವಾಸ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ ಚಂದ್ರಯಾನ-2ರಲ್ಲಿ ಉಂಟಾಗಿದ್ದ ವೈಫಲ್ಯವನ್ನು ಸರಿಪಡಿಸಿಕೊಂಡು ವಿಕ್ರಮ್ ಲ್ಯಾಂಡರ್ ಅನ್ನು ಇಳಿಸುವ ದೊಡ್ಡ ಸವಾಲು ಇಸ್ರೋ ಮುಂದಿದೆ. ಅದರಂತೆ ಚಂದ್ರಯಾನ- 3 ಆಗಸ್ಟ್ 23 ರಂದು ಸಂಜೆ 6:04 ರ ವೇಳೆಗೆ ಚಂದ್ರನ ಮೇಲೆ ಇಳಿಯಲಿದೆ ಎಂದು ಹೇಳಲಾಗಿದೆ. ಈ ವಿಚಾರವನ್ನು ಇಸ್ರೋ ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದೆ.
ಚಂದ್ರಯಾನ- 3ರ ನೌಕೆ ಲ್ಯಾಂಡ್ ಆಗುವುದನ್ನು ವೀಕ್ಷಿಸುವುದು ಹೇಗೆ?
ಚಂದ್ರನ ಅಂಗಳದಲ್ಲಿ ಚಂದ್ರಯಾನ- 3 ತರ ನೌಕೆ ಆಗಸ್ಟ್ 23ರ ಸಂಜೆ 6:04 ಗಂಟೆಗೆ ಇಳಿಯಲಿದೆ. ಈ ಪ್ರಕ್ರಿಯೆ ಸಂಜೆ 5.45 ರಿಂದ ಶುರುವಾಗಲಿದೆ. ನೀವು ಕೂಡ ಸಂಜೆ 5:27 ರಿಂದ ಚಂದ್ರಯಾನ- 3 ಲ್ಯಾಂಡಿಂಗ್ ಪ್ರಕ್ರಿಯೆ ಲೈವ್ ಆಗಿ ನೋಡಬಹುದಾಗಿದೆ. ಇಸ್ರೋದ ಅಧಿಕೃತ ವೆಬ್‌ಸೈಟ್ https://isro.gov.in, ಇಸ್ರೋದ ಅಧಿಕೃತ ಯೂಟ್ಯೂಬ್ ಚಾನೆಲ್, ಇಸ್ರೋದ ಅಧಿಕೃತ ಫೇಸ್‌ಬುಕ್ ಚಾನೆಲ್ ಮೂಲಕ ಲೈವ್ ಆಗಿ ನೋಡಬಹುದಾಗಿದೆ.
ಚಂದ್ರಯಾನ- 3 ರ ಲ್ಯಾಂಡಿಂಗ್ ಸಂಜೆ ಸಮಯದಲ್ಲಿಯೇ ಆಗುತ್ತಿರುವುದು ಏಕೆ?
ಚಂದ್ರಯಾನ-3ರ ನೌಕೆ ಚಂದ್ರನ ಅಂಗಳದಲ್ಲಿ ಲ್ಯಾಂಡಿಂಗ್ ಆಗುವ ಸಮಯವನ್ನು ಸಂಜೆ ಸಮಯಕ್ಕೆ ನಿಗಧಿಮಾಡಿರುವುದಕ್ಕೆ ಕಾರಣವಿದೆ. ಏಕೆಂದರೆ ಲ್ಯಾಂಡರ್ ಇಳಿಯುವುದಕ್ಕೆ ಉದ್ದೇಶಿಸಿರುವ ಸ್ಥಳದಲ್ಲಿ ಸೂರ್ಯೋದಯ ಆಗುವವರೆಗೂ ಕಾಯಬೇಕಿದೆ ಎಂದು ಇಸ್ರೋ ಇದೆ. ಚಂದ್ರನ ಧ್ರುವ ಭಾಗದಲ್ಲಿ ಸೂರ್ಯೋದಯವಾಗಿದ್ದರೆ ನಮ್ಮಲ್ಲಿ ಸಂಜೆ ಆಗಿರುತ್ತದೆ ಅನ್ನೊದು ನೆನಪಿಡಬೇಕಾದ ವಿಚಾರವಾಗಿದೆ.
ಇನ್ನು ಚಂದ್ರನ ದಕ್ಷಿಣ ಧ್ರುವವನ್ನು ಭಾರತಕ್ಕೂ ಮೊದಲೇ ತಲುಪಲು ಮುಂದಾಗಿದ್ದ ರಷ್ಯಾದ ಲೂನಾ 25 ಮಿಷನ್ ವಿಫಲವಾಗಿದೆ. ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಆಗದೆ ಚಂದ್ರನ ಅಂಗಳಕ್ಕೆ ಅಪ್ಪಳಿಸಿದೆ ಎಂದು ವರದಿಯಾಗಿದೆ. ಆದರಿಂದ ಭಾರತದ ಚಂದ್ರಯಾನ-3 ಮಿಷನ್ ಯಶಸ್ವಿಯಾದರೆ ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ತಲುಪಿದ ಮೊದಲ ದೇಶ ಎಂಬ ಹಿರಿಮೆಗೆ ಭಾರತ ಪಾತ್ರವಾಗಲಿದೆ.


Click it and Unblock the Notifications








