ಇಸ್ರೋದಿಂದ ಐತಿಹಾಸಿಕ ಚಂದ್ರಯಾನ-3 ಯಶಸ್ವಿ ಉಡಾವಣೆ! ನಭಕ್ಕೆ ಹಾರಿದ ಬಾಹುಬಲಿ!
ಇಸ್ರೋದ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಯಾಗಿದ್ದು, ನಿಗದಿತ ಕಕ್ಷೆ ಸೇರುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಇಸ್ರೋ ತನ್ನ ಐತಿಹಾಸಿಕ ಯೋಜನೆಗೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ ಚಂದ್ರನ ಮೇಲೆ ಯಶಸ್ವಿಯಾಗಿ ಉಪಗ್ರಹ ನೌಕೆ ಇಳಿಸಿದ ಇತರ ಮೂರು ದೇಶಗಳ ಸಾಲಿಗೆ ಸೇರುವುದಕ್ಕೆ ಮುಂದಡಿ ಇಟ್ಟಿದೆ.
ಹೌದು, ಚಂದ್ರನ ಅಂಗಳಕ್ಕೆ ನೌಕೆಯನ್ನು ಕಳುಹಿಸುವ ಇಸ್ರೋದ ಐತಿಹಾಸಿಕ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇಂದು ಮಧ್ಯಾಹ್ನ 2.35ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಯಾಗಿದೆ. ಹಾಗಾದ್ರೆ ಚಂದ್ರಯಾನ-3 ವಿಶೇಷತೆ ಏನು? ಇದರಿಂದಾಗುವ ಪ್ರಯೋಜನಗಳೇನು? ಇದೆಲ್ಲದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಚಂದ್ರನ ಅಂಗಳದಲ್ಲಿ ತನ್ನ ನೌಕೆಯನ್ನು ಇಳಿಸುವ ಇಸ್ರೋದ ಚಂದ್ರಯಾನ-3 ಇಂದು ಉಡಾವಣೆಯಾಗಿದೆ. ಅಷ್ಟೇ ಅಲ್ಲ ನಿಗಧಿತ ಕಕ್ಷೆ ಸೇರುವ ಮೂಲಕ ಚಂದ್ರನ ಮೇಲ್ಮೈಯಲ್ಲಿ ನೌಕೆಯನ್ನು ಸುಲಭವಾಗಿ ಇಳಿಸುವ 6 ವಾರಗಳ ಮಿಷನ್ ಗೆ ಇಂದಿನಿಂದ ಅಧಿಕೃತ ಚಾಲನೆ ಸಿಕ್ಕಿದೆ. ಈ ಸಂದರ್ಭದಲ್ಲಿ ಇಸ್ರೋ ವಿಜ್ಞಾನಿಗಳೆಲ್ಲರೂ ಖುಷಿಯಿಂದ ಸಂಭ್ರಮಿಸಿದ್ದು, ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಇನ್ನು ಆಂದ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಹೊತ್ತ ಜಿಎಸ್‌ಎಲ್‌ವಿ ಮಾರ್ಕ್ 3 'ಬಾಹುಬಲಿ ರಾಕೆಟ್' ಆಗಸದತ್ತ ಹಾರಿದೆ. ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಒಳಗೊಂಡಿದ್ದು, ಅಂದಾಜು 3,900 ಕಿಲೋಗ್ರಾಂಗಳಷ್ಟು ಭಾರವನ್ನು ಹೊಂದಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

ಚಂದ್ರಯಾನ-3 ಆತ್ಮ ನಿರ್ಭರ ಭಾರತ್ ಯೋಜನೆಯನ್ನು ಸಹ ಅಳವಡಿಸಿಕೊಂಡಿದೆ. ಅದರಂತೆ ಇದು ಸಂಪೂರ್ಣ ಸ್ವದೇಶಿ ಲ್ಯಾಂಡರ್ ಮಾಡ್ಯೂಲ್ (LM), ಪ್ರೊಪಲ್ಷನ್ ಮಾಡ್ಯೂಲ್ (PM) ಮತ್ತು ರೋವರ್ ಅನ್ನು ಒಳಗೊಂಡಿದೆ. ಇದರಲ್ಲಿ ಲ್ಯಾಂಡರ್ ಚಂದ್ರನ ಮೇಲ್ಭಾಗದಲ್ಲಿ ಒಂದು ನಿರ್ಧಿಷ್ಟ ಸ್ಥಳದಲ್ಲಿ ಮೃದುವಾಗಿ ಇಳಿಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅಲ್ಲದೆ ಇದುರೋವರ್ ಅನ್ನು ನಿಯೋಜಿಸುತ್ತದೆ. ರೋವರ್ ಅದರ ಚಲನಶೀಲತೆಯ ಅವಧಿಯಲ್ಲಿ ಚಂದ್ರನ ಮೇಲ್ಮೈಯ ಸ್ಥಳದಲ್ಲಿ ರಾಸಾಯನಿಕ ವಿಶ್ಲೇಷಣೆಯನ್ನು ನಡೆಸುತ್ತದೆ.
ಇನ್ನು ಚಂದ್ರಯಾನ-3 ನೌಕೆಯಲ್ಲಿರುವ ಲ್ಯಾಂಡರ್ ಮತ್ತು ರೋವರ್ ಚಂದ್ರನ ಮೇಲ್ಮೈಯಲ್ಲಿ ಪ್ರಯೋಗಗಳನ್ನು ನಡೆಸಲು ವೈಜ್ಞಾನಿಕ ಪೇಲೋಡ್‌ಗಳನ್ನು ಹೊಂದಿವೆ. ಇದು ಲ್ಯಾಂಡರ್ ಮಾಡ್ಯೂಲ್ ಅನ್ನು ಬೇರ್ಪಡಿಸಿದ ನಂತರ ಕಾರ್ಯನಿರ್ವಹಿಸುತ್ತದೆ. ಚಂದ್ರಯಾನ-3 ಗಾಗಿ ಗುರುತಿಸಲಾದ ಲಾಂಚರ್ GSLV-Mk3 ಆಗಿದ್ದು, ಇದು ಇಂಟಿಗ್ರೇಟೆಡ್ ಮಾಡ್ಯೂಲ್ ಅನ್ನು 170 x 36500 ಕಿಮೀ ಗಾತ್ರದ ಎಲಿಪ್ಟಿಕ್ ಪಾರ್ಕಿಂಗ್ ಆರ್ಬಿಟ್ (EPO) ನಲ್ಲಿ ಇರಿಸುತ್ತದೆ.
ಸದ್ಯ ಯಶಸ್ವಿಯಾಗಿ ನಿಗಧಿತ ಕಕ್ಷೆ ಸೇರಿರುವ ಚಂದ್ರಯಾನ-3 ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಯೋಜನೆ ಯಶಸ್ವಿಯಾದಲ್ಲಿ ಚಂದ್ರನ ಮೇಲೆ ನೌಕೆ ಇಳಿಸಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಗುರುತಿಸಿಕೊಳ್ಳಲಿದೆ. ಅಷ್ಟೇ ಅಲ್ಲ ಬಾಹ್ಯಕಾಶ ಸಂಶೋದನೆಯಲ್ಲಿ ಇಸ್ರೋ ಹೊಸ ಮೈಲಿಗಲ್ಲನ್ನು ಸಾಧಿಸಲಿದೆ. ಇನ್ನು ಇದೇ ಸಂದರ್ಭದಲ್ಲಿ ಚಂದ್ರಯಾನ-3 ಯಶಸ್ವಿಯಾಗಲೆಂದು ದೇಶದ ಎಲ್ಲಾ ಭಾಗಗಳಿಂದಲೂ ಜನರು ಹಾರೈಸುತ್ತಿದ್ದಾರೆ. ಅಷ್ಟೇ ಅಲ್ಲ ಎಲ್ಲಾ ವಲಯದ ಗಣ್ಯ ವ್ಯಕ್ತಿಗಳು ಕೂಡ ಇಸ್ರೋದ ಮಹತ್ವಾಕಾಂಕ್ಷೆ ಯೋಜನೆ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ.
ಇನ್ನು ಪ್ರಧಾನಿ ಮೋದಿ ಕೂಡ ಟ್ವೀಟ್ ಮಾಡಿದ್ದು ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಚಂದ್ರಯಾನ-3 ಹೊಸ ಅಧ್ಯಾಯ ಬರೆದಿದೆ. ಇದು ಎತ್ತರಕ್ಕೆ ಏರಲಿದ್ದು, ಪ್ರತಿಯೊಬ್ಬ ಭಾರತೀಯನ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಹೆಚ್ಚಿಸುತ್ತದೆ. ಈ ಮಹತ್ವದ ಸಾಧನೆಯು ನಮ್ಮ ವಿಜ್ಞಾನಿಗಳ ಅವಿರತ ಸಮರ್ಪಣೆಗೆ ಸಾಕ್ಷಿಯಾಗಿದೆ. ಅವರ ಉತ್ಸಾಹ ಮತ್ತು ಜಾಣ್ಮೆಗೆ ನಾನು ನಮಸ್ಕರಿಸುತ್ತೇನೆ ಎಂದು ಹೇಳಿದ್ದಾರೆ


Click it and Unblock the Notifications








