Chandrayaan-3: ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳವಿನ್ನು 'ಶಿವಶಕ್ತಿ ಪಾಯಿಂಟ್'.. ಪ್ರಧಾನಿ ಮೋದಿ ಹೇಳಿದ್ದೇನು?
ಇಡೀ ದೇಶವೇ ಚಂದ್ರಯಾನ 3 ರ ಯಶಸ್ಸನ್ನು ಸಂಭ್ರಮಿಸುತ್ತಿದೆ. ಸದ್ಯ ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿನ ಇಸ್ರೋ ಕಚೇರಿಗೆ ಬೇಟಿ ನೀಡಿ ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇದೇ ಸಮಯದಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸಿದ ಸ್ಥಳವನ್ನು 'ಶಿವಶಕ್ತಿ ಪಾಯಿಂಟ್' ಎಂದು ಹೆಸರಿಸಿದ್ದಾರೆ.
ಹೌದು, ಚಂದ್ರಯಾನ 3 ಮಿಷನ್ ಯಶಸ್ಸಿಗೆ ಕಾರಣರಾದ ವಿಜ್ಞಾನಿಗಳನ್ನು ಪ್ರಧಾನಿ ಮೋದಿ ಬೇಟಿ ನೀಡಿ ಮಾತನಾಡಿದ್ದಾರೆ. ಇದಕ್ಕಾಗಿ ಇಂದು (ಶನಿವಾರ) ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿರುವ ಇಸ್ರೋ ISTRAC ಮೋದಿ ಆಗಮಿಸಿದ್ದರು. ಈ ಸಮಯದಲ್ಲಿ ಚಂದ್ರಯಾನ 3 ಲ್ಯಾಂಡಿಂಗ್ ಆದ ಸ್ಥಳದ ಬಗ್ಗೆ ಹೊಸ ನಾಮಕಾರಣ ಮಾಡಿದ್ದಾರೆ. ಹಾಗಾದ್ರೆ ಮೋದಿ ಇದೇ ಸಂದರ್ಭದಲ್ಲಿ ಮೋದಿ ಹೇಳಿದ್ದೇನು? ಇದೆಲ್ಲದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಕಾಲಿಟ್ಟ ಸ್ಥಳಕ್ಕೆ ಪ್ರಧಾನಿ ಮೋದಿ ಹೊಸ ನಾಮಕಾರಣ ಮಾಡಿದ್ದಾರೆ. "ಚಂದ್ರನ ಮೇಲೆ ಕಾಲಿಟ್ಟ ಸ್ಥಳವನ್ನು ಹೆಸರಿಸುವುದು ಸಂಪ್ರದಾಯ. ಭಾರತದ ಚಂದ್ರಯಾನ 3 ವಿಕ್ರಮ್ ಲ್ಯಾಂಡರ್ ಸ್ಪರ್ಶಿಸಿದ ಬಿಂದುವನ್ನು ಇನ್ಮುಂದೆ ಶಿವಶಕ್ತಿ ಪಾಯಿಂಟ್ ಎಂದು ಕರೆಯಲಾಗುವುದು ಎಂದು ಮೋದಿ ಹೇಳಿದ್ದಾರೆ. ಇನ್ನು 'ಶಿವಶಕ್ತಿ' ಹೆಸರಿನಲ್ಲಿರುವ 'ಶಕ್ತಿ' ಮಹಿಳಾ ವಿಜ್ಞಾನಿಗಳ ಕಠಿಣ ಪರಿಶ್ರಮ, ಸ್ಫೂರ್ತಿ ಮತ್ತು ಸಬಲೀಕರಣದಿಂದ ಬಂದಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಇದಿಷ್ಟೇ ಅಲ್ಲ ಈ ಹಿಂದೆ 2019 ರಲ್ಲಿ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಕ್ರ್ಯಾಶ್ ಆದ ಪಾಯಿಂಟ್ ಅನ್ನು 'ತಿರಂಗಾ ಪಾಯಿಂಟ್' ಎಂದು ಹೆಸರಿಸಿದ್ದಾರೆ. ಚಂದ್ರಯಾನ -3 ಮಿಷನ್ ಸಕ್ಸಸ್ ಆಗಿರುವುದರಿಂದ ಚಂದ್ರಯಾನ-2ರ ಗುರುತಿಗೂ ಕೂಡ ಹೆಸರಿಡಲಾಗಿದೆ. ಇದಲ್ಲದೆ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿ ಲ್ಯಾಂಡಿಂಗ್ ಆದ ದಿನ ಅಂದರೆ ಆಗಸ್ಟ್ 23ನ್ನು ಇನ್ಮುಂದೆ ಪ್ರತಿವರ್ಷ ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಿಸುವುದಾಗಿ ಘೋಷಣೆ ಮಾಡಿದ್ದಾರೆ.
ಈ ಮೂಲಕ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಂಭ್ರಮಿಸುವುದಕ್ಕೆ ಈ ದಿನ ಮೀಸಲಿಡುವುದಾಗಿ ಹೇಳಲಾಗಿದೆ. ಇನ್ನು ಇಸ್ರೋ ಕೇಂದ್ರಕ್ಕೆ ಬೇಟಿ ನೀಡಿದ ಪ್ರಧಾನಿ ಮೋದಿ ಅವರನ್ನು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಮತ್ತು ಇತರ ವಿಜ್ಞಾನಿಗಳು ಸ್ವಾಗತಿಸಿದ್ದು ವಿಶೇಷ. ಇನ್ನು ಈ ಸಂದರ್ಭದಲ್ಲಿ ಇಸ್ರೋ ಸಂಸ್ಥೆಯ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, "ನೀವೆಲ್ಲರೂ ಸಾಧಿಸಿರುವುದು ಈ ಯುಗದ ಅತ್ಯಂತ ಸ್ಪೂರ್ತಿದಾಯಕ ಕ್ಷಣಗಳಲ್ಲಿ ಒಂದಾಗಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಇನ್ನು ನಿಮಗೆಲ್ಲಾ ತಿಳಿದಿರುವಂತೆ ಭಾರತದ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಅಷ್ಟೇ ಅಲ್ಲ ಚಂದ್ರನಂಗಳದಲ್ಲಿ ಇಳಿದ ಕ್ಷಣದಿಂದಲೇ ಕಾರ್ಯನಿರ್ವಹಿಸುವುದನ್ನು ಪ್ರಾರಂಭಿಸಿದೆ. ಅದರಂತೆ ಈಗಾಗಲೇ ಚಂದ್ರನಂಗಳದಲ್ಲಿ ಫೋಟೋ ತೆಗೆದು ಇಸ್ರೋಗೆ ರವಾನಿಸಿದೆ. ಇದರಲ್ಲಿ ರೋವರ್ ಪ್ರಗ್ಯಾನ್ 14 ದಿನಗಳಲ್ಲಿ ಚಂದ್ರನ ಮೇಲ್ಮೈನ ದತ್ತಾಂಶಗಳನ್ನು ಸಂಗ್ರಹಿಸಲಿದೆ.
ಚಂದ್ರಯಾನ-3 ಮಿಷನ್ ಮೂರು ಉದ್ದೇಶಗಳನ್ನು ಹೊಂದಿದೆ. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಅನ್ನು ಪ್ರದರ್ಶಿಸುವ ಹಾಗೂ ಚಂದ್ರನ ಮೇಲೆ ರೋವರ್ ರೋವಿಂಗ್ ಅನ್ನು ಪ್ರದರ್ಶಿಸಲು ಮತ್ತು ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ಅಲ್ಲದೆ ಭಾರತವು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ತನ್ನ ಲ್ಯಾಂಡರ್ ಅನ್ನು ಇಳಿಸಿರುವುದರಿಂದ ಈ ಪ್ರದೇಶದಲ್ಲಿ ಹೆಪ್ಪುಗಟ್ಟಿದ ನೀರು ಮತ್ತು ಅಮೂಲ್ಯ ಖನಿಜಗಳ ಸಂಗ್ರಹ ಲಭ್ಯತೆ ಹೊಂದಿದೆ ಎಂದು ನಂಬಲಾಗಿದೆ.


Click it and Unblock the Notifications








