ಸತತ 13 ವರ್ಷಗಳಿಂದ ನಷ್ಟದಲ್ಲೇ ಇದೆ 'BSNL'!..ಈ ವರ್ಷ ಇಷ್ಟು ಕೋಟಿ ಲಾಸ್!!
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಸತತ 13 ವರ್ಷಗಳಿಂದ ನಷ್ಟದಲ್ಲೇ ದೂಡುತ್ತಿದ್ದು ಈ ವರ್ಷದಲ್ಲೇ 12,000 ಕೋಟಿ ರೂಪಾಯಿಯಷ್ಟು ನಷ್ಟವನ್ನು ಅನುಭವಿಸಿದೆ ಎಂಬ ಆಘಾತಕಾರಿ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ಸತತ 13 ವರ್ಷಗಳಿಂದ ಬಿಎಸ್ಎನ್ಎಲ್ ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆ ನಷ್ಟದ ಮೊತ್ತವನ್ನು ಪ್ರಕಟಿಸಿಲ್ಲವಾದರೂ, ಸಂಸತ್‌ನಲ್ಲಿ ಟೆಲಿಕಾಂ ಸಚಿವರು ಬಹಿರಂಗಪಡಿಸಿದ ಮಾಹಿತಿಯ ಆಧಾರದಲ್ಲಿ ನಷ್ಟದ ಮೊತ್ತ ತಿಳಿದುಬಂದಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ.
ಹೌದು, ಇದೇ ಫೆಬ್ರವರಿ ತಿಂಗಳಲ್ಲಿ ಬಿಎಸ್ಎನ್ಎಲ್ ಎದುರಿಸಿದ್ದ ವೇತನ ಸಮಸ್ಯೆಯನ್ನು ಆಧಾರವಾಗಿಟ್ಟುಕೊಂಡು ಹಲವು ರೀತಿಯ ವಿಶ್ಲೇಷಣೆಗಳನ್ನು ಮಾಡಲಾಗಿದ್ದು, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ ಎನ್ ಎಲ್ ನ 2018-19 ನೇ ಸಾಲಿನ ನಷ್ಟದ ಮೊತ್ತ 12,000 ಕೋಟಿ ರೂಪಾಯಿ ದಾಟಿರುವ ಸಾಧ್ಯತೆ ಇದೆ. ಇನ್ನು ಕೋಟಕ್ ಈಕ್ವೆಟೀಯ ವಿಶ್ಲೇಷಣೆಯ ಪ್ರಕಾರ, ಬಿಎಸ್ಎನ್ಎಲ್ ನ ಒಟ್ಟಾರೆ ನಷ್ಟದ ಮೊತ್ತ 90,000 ಕೋಟಿ ದಾಟಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಫೆಬ್ರವರಿ ತಿಂಗಳ ಬಳಿಕ ಬಿಎಸ್ಎನ್ಎಲ್ ಗೆ ಆರ್ಥಿಕ ಸಂಕಷ್ಟ ತೀವ್ರವಾಗಿ ಕಾಡಲು ಪ್ರಾರಂಭವಾಗಿದ್ದು, ನಷ್ಟದ ಪ್ರಮಾಣ ಶೇ.50 ರಷ್ಟು ಏರಿಕೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ನಷ್ಟ ಸರಿದೂಗಿಸುವುದರ ಜೊತೆಗೆ ಸಾಲ ಮರುಪಾವತಿ ಹೊಣೆಗಾರಿಕೆಯೂ ಇದೆ. ಇನ್ನು ಸರ್ಕಾರ ಹಣಕಾಸಿನ ನೆರವು ಒದಗಿಸುತ್ತಿರುವುದರಿಂದ ಏ.16 ರಂದು ಮತ್ತೊಂದು ಸಭೆ ನಡೆಯಲಿದ್ದು ಇತರ ಹೂಡಿಕೆ ಯೋಜನೆಗಳು ಮತ್ತ ಈಗಿನ ಟ್ರೆಂಡ್ ಬಗ್ಗೆಯೂ ಚರ್ಚಿಸಲಿದೆ. 'ಬಿಎಸ್ಎನ್ಎಲ್' ಉಳಿಯಲು ಈ ಹೋರಾಟಗಳು ನಡೆಯಬೇಕಿವೆ.

ಬಿಎಸ್‌ಎನ್ಎಲ್ ಉಳಿಯಲೇಬೇಕು!
ಖಾಸಗೀಕರಣದಿಂದ ಗ್ರಾಹಕರಿಗೆ ಅತ್ಯುತ್ತಮ ಸೇವೆಯೇನೋ ಸಿಗುತ್ತದೆ ಆದರೆ, ಸರ್ಕಾರಿ ಸಂಸ್ಥೆಗಳ ಅಳಿವು ಅಪಾಯಕರ. ಅದು ಖಾಸಗಿ ಸಂಸ್ಥೆಗಳ ಏಕಸ್ವಾಮ್ಯ ಹಾಗೂ ಸುಲಿಗೆಗೆ ಕಾರಣವಾಗುತ್ತದೆ. ಈ ಅಪಾಯವನ್ನು ತಪ್ಪಿಸಲು ಬಿಎಸ್‌ಎನ್‌ಎಲ್ ಮರುಜೀವ ಪಡೆಯುವುದು ಅಗತ್ಯವಾಗಿದೆ. ಇದಕ್ಕೆ ಸರ್ಕಾರದ ಹಣದ ಸಹಾಯ ಮಾತ್ರ ಮುಖ್ಯ ಎಂಬುದು ಸುಳ್ಳು.

4ಜಿ ತರಂಗಾಂತರ ಬೇಕಿದೆ!
ಇಂದು ಖಾಸಗಿ ಕಂಪನಿಗಳು ಊಹಾತೀತ ವೇಗ ಹಾಗೂ ಗುಣಮಟ್ಟದ ಸೇವೆಯನ್ನು ನೀಡುತ್ತಿದ್ದರೆ, ಬಿಎಸ್‌ಎನ್‌ಎಲ್ ಮಾತ್ರ ತಾನಿನ್ನೂ ಪೇಪರ್ ಜಮಾನದಲ್ಲೇ ನಿಂತಿದೆ. ಇದಕ್ಕೆ ಸರ್ಕಾರ ಕೂಡ ಕಾರಣವಾಗಿದ್ದು, 4ಜಿ ತರಂಗಾಂತರವನ್ನು ಬಿಎಸ್‌ಎನ್‌ಎಲ್‌ಗೆ ತರದೇ ಹಿಂದೆಬೀಳಿಸಿದೆ. ಹಾಗಾಗಿ, ಕೂಡಲೇ ಬಿಎಸ್‌ಎನ್‌ಎಲ್‌ಗೆ 4ಜಿ ತರಂಗಾಂತರ ನೀಡಬೇಕು.

ಆಡಳಿತಯಂತ್ರದಲ್ಲಿ ಬೇಕು ಗಟ್ಟಿತನ!
ಖಾಸಗಿ ಕಂಪನಿಗಳು ಟೆಲಿಕಾಂನಲ್ಲಿ ಗಟ್ಟಿಯಾಗಿ ಹೂಡಿವೆ. ಕಡಿಮೆ ಶುಲ್ಕ, ಉಚಿತ ಸಿಮ್, ಶೀಘ್ರ ಸೇವೆ, ನಂಬರ್ ಸುಲಭ ಪೋರ್ಟಬಿಲಿಟಿ, ದರಗಳಲ್ಲಿ ಸ್ಪರ್ಧಾತ್ಮಕತೆ ಇತ್ಯಾದಿಗಳ ಮೂಲಕ ಗ್ರಾಹಕರ ಮನಸ್ಸನ್ನು ಗೆದ್ದಿವೆ. ಆದರೆ, ಇತರೆ ಸರ್ಕಾರಿ ಸಂಸ್ಥೆಗಳಂತೆಯೇ ಬಿಎಸ್‌ಎನ್‌ಎಲ್ ಆಡಳಿತ ಯಂತ್ರವನ್ನು ಗಟ್ಟಿಗೊಳಿಕೊಳ್ಳದೇ ಸ್ಪರ್ಧೆ ನೀಡುವಲ್ಲಿ ವಿಫಲವಾಗುತ್ತಿದೆ.

ಸಿಬ್ಬಂದಿಗೆ ಕೌಶಲ್ಯಾಭಿವೃದ್ಧಿ ಬೇಕು
ಟೆಲಿಕಾಂನಂಥ ಸ್ಪರ್ಧಾತ್ಮಕ ವಲಯದಲ್ಲಿ ಸೇವೆ ಸಲ್ಲಿಸಲು ಅಗತ್ಯವಾದ ವಿನಯಶೀಲತೆ, ಗ್ರಾಹಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವ ಚುರುಕುತನ ಬಿಎಸ್‌ಎನ್ಎಲ್ ನೌಕರರಿಗೆ ಇಲ್ಲ ಎಂಬ ಅಪವಾದವಿದೆ. ಕಾಲಕಾಲಕ್ಕೆ ತನ್ನ ಸಿಬ್ಬಂದಿಗೆ ಕೌಶಲ್ಯಾಭಿವೃದ್ಧಿ ನೀಡದೇ ಬಿಎಸ್‌ಎನ್‌ಎಲ್ ಹಿಂದೆ ಬಿದ್ದಿದೆ. ಗ್ರಾಹಕರಿಗೆ ಸೇವೆ ಸಲ್ಲಿಸುವಲ್ಲಿ ಸಿಬ್ಬಂದಿ ಕೌಶಲ್ಯಾಭಿವೃದ್ಧಿ ಪಾತ್ರ ಹೆಚ್ಚು.

ವೃತ್ತಿಪರತೆ ಇಲ್ಲದೆ ಹೋದರೆ?
ಬಿಎಸ್‌ಎನ್‌ಎಲ್‌ಭಾರತದಲ್ಲಿ ಇಂದಿಗೂ ಬಲಿಷ್ಠವಾದ ಜಾಲವನ್ನು ಹೊಂದಿದೆ. ಆದರೆ ಸಿಬ್ಬಂದಿಗಳಿಗೆ ಸರಕಾರಿ ನೌಕರಿ ಎಂಬ ಮನೋಭಾವನೆ ಬದಲಿಸಿಕೊಳ್ಳುವ ಮತ್ತು ವೃತ್ತಿಪರತೆ ಪ್ರದರ್ಶಿಸುವ ಅಗತ್ಯ ಹಿಂದೆಂದಿಗಿಂತ ಈಗ ಹೆಚ್ಚಿದೆ. ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿಪರತೆ ಇಲ್ಲದೆ ಹೋದರೆ, ಸರಕಾರ ಎಷ್ಟು ಕೋಟಿ ನಿಧಿ ಒದಗಿಸಿದರೂ ಸಂಸ್ಥೆ ಉಳಿಯಲಾರದು.

ನೆರವಿನ ಅಗ್ತತ್ಯತೆ ಇಲ್ಲ
ಒಂದು ವೇಳೆ ಬಿಎಸ್‌ಎನ್‌ಎಲ್ ಕೂಡ ಖಾಸಾಗಿ ಕಂಪೆನಿಗಳಂತೆ ಕಾರ್ಯನಿರ್ವಹಿಸಿದರೆ ಸರ್ಕಾರದ ನೆರವಿನ ಅಗ್ತತ್ಯತೆ ಇಲ್ಲ. ಇಂಥಹ ಸರ್ಕಾರಿ ನಿಯಮಿತ ಸಂಸ್ಥೆಗಳು ಉಳಿಯಬೇಕಾದ್ದು ಸರಕಾರಿ ನೆರವಿನಿಂದಲ್ಲ. ಅವು ತಮ್ಮ ಕಾಲ ಮೇಲೆ ತಾವೇ ನಿಲ್ಲುವುದು ಅಗತ್ಯವಾಗಿದೆ. ಇಲ್ಲವಾದಲ್ಲಿ ನಷ್ಟದಲ್ಲೇ ದೂಡುವ ಸರ್ಕಾರಿ ಸಂಸ್ಥೆಯನ್ನು ಉಳಿಸಲು ಸರ್ಕಾರಕ್ಕೂ ಸಾಧ್ಯವಿಲ್ಲ.


Click it and Unblock the Notifications








