ಜಿಯೋದಿಂದ ವಾಟ್ಸ್‌ಆಪ್‌ಗೆ ಲಾಭ ಆಗಿದಿಯಾ..? ಏನೇಳುತ್ತೆ ನೀಲ್ಸನ್ ವರದಿ..?
ಭಾರತದಲ್ಲಿ ಜಿಯೋ ಬಂದ ನಂತರ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಅದರಂತೆ ಮಾತನಾಡುವ ಪ್ರಮಾಣ ಕಡಿಮೆಯಾಗಿದ್ದು, ಡೇಟಾ ಬಳಕೆ ಹೆಚ್ಚಾಗಿದೆಯಂತೆ. ಈ ಪ್ರಮಾಣ ಯಾವುದೇ ಆದಾಯ ಮತ್ತು ವಯಸ್ಸಿನ ವರ್ಗಗಳಲ್ಲಿಯೂ ಯಾವುದೇ ವ್ಯತ್ಯಾಸವಿಲ್ಲ. ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾಗಿರುವ ನೀಲ್ಸನ್ ಸಮೀಕ್ಷೆಯೊಂದನ್ನು ಹ್ಯಾಂಡ್‌ಸೆಟ್ ಗ್ರಾಹಕರ ಮೇಲೆ ಮಾಡಿ ವರದಿಯನ್ನು ಬಿಡುಗಡೆಗೊಳಿಸಿದೆ.

ನೀಲ್ಸನ್ ಬಿಡುಗಡೆ ಮಾಡಿರುವ ವರದಿಯಲ್ಲಿ ಮಹತ್ತರ ಅಂಶಗಳು ಹೊರಬಂದಿವೆ. ಕಳೆದ 15 ರಿಂದ 18 ತಿಂಗಳಿನ ಅವಧಿಯಲ್ಲಿ ಡೇಟಾ ಬಳಕೆಯ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆಯಂತೆ. ಅದಲ್ಲದೇ ಮೊದಲು ತಿಂಗಳಿಗೆ 4GB ಡೇಟಾ ಬಳಸುತ್ತಿದ್ದ ನಾವೆಲ್ಲಾ, ಇಂದು 1GBಗೂ ಹೆಚ್ಚು ಡೇಟಾವನ್ನು ಬಳಸುತ್ತಿದ್ದೇವೆ ಎಂದು ನೀಲ್ಸನ್ ವರದಿ ಹೇಳಿದೆ. ಆಗಿದ್ದರೆ, ಭಾರತದ ಪ್ರಖ್ಯಾತ ಮಾರುಕಟ್ಟೆ ಸಂಶೋಧನಾ ಸಂಸ್ಥೆ ನೀಲ್ಸನ್ ಬಿಡುಗಡೆ ಮಾಡಿರುವ ವರದಿಯಲ್ಲಿ ಮತ್ತೇನೆನಿದೆ ಎಂಬುದನ್ನು ಮುಂದೆ ನೋಡಿ.

ಜಿಯೋ ಎಂಟ್ರಿ ಡೇಟಾ ಹಸಿವೆಗೆ ಕಾರಣವಾ..?
ಡೇಟಾ ಬಳಕೆಯ ಪ್ರಮಾಣ ಗಣನೀಯವಾಗಿ ಏರಿಕೆಯಾಗಿರುವುದನ್ನು ಪ್ರಸ್ತಾಪಿಸಿದೆಯಾದರೂ, ಇದಕ್ಕೆಲ್ಲಾ ಕಾರಣ ಜಿಯೋ ಎಂದು ಎಲ್ಲೂ ಹೇಳಿಲ್ಲ. ಇದು ಆಕಸ್ಮಿಕ ಬೆಳವಣಿಗೆಯಾಗಿರಬಹುದು ಎಂದಿರುವ ನೀಲ್ಸನ್ ಜಿಯೋ ಬಂದಿದ್ದರಿಂದ ಬೇರೆ ಟೆಲಿಕಾಂ ಕಂಪನಿಗಳು ಕರೆ ಮತ್ತು ಡೇಟಾ ದರದಲ್ಲಿ ಬಹಳಷ್ಟು ಕಡಿತವನ್ನು ಮಾಡಿದವು ಎಂದಿದೆ.

ಅಗ್ಗದ ದರದಲ್ಲಿ ಡೇಟಾ
ಪ್ರಸ್ತುತ ಎಲ್ಲಾ ಟೆಲಿಕಾಂ ಆಪರೇಟರ್‌ಗಳು ತಮ್ಮ ಗ್ರಾಹಕರಿಗೆ ಅತಿ ಕಡಿಮೆ ದರದಲ್ಲಿ ವಾಯ್ಸ್ ಮತ್ತು ಡೇಟಾ ಪ್ಯಾಕ್‌ಗಳನ್ನು ಬಳಕೆಗೆ ನೀಡುತ್ತಿವೆ. ಈಗ ದಿನಕ್ಕೆ 1GB ಡೇಟಾ ಸ್ಟ್ಯಾಂಡರ್ಡ್ ಆಗಿದ್ದು, ಬಳಕೆದಾರರು 1GBಗೂ ಹೆಚ್ಚಿನ ಡೇಟಾವನ್ನು ಪ್ರತಿನಿತ್ಯ ಬಳಸುವುದು ಕಂಡು ಬಂದಿದೆ.

ಅರ್ಧಕ್ಕಿಂತ ಹೆಚ್ಚು ಸಮಯ ಈ ಆಪ್‌ಗಳಿಗೆ ಮೀಸಲು
ನೀಲ್ಸನ್ ವರದಿ ಇನ್ನೊಂದು ಮಹತ್ವದ ಅಂಶವನ್ನು ಬಹಿರಂಗಪಡಿಸಿದ್ದು, ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಶೇ.50ಕ್ಕಿಂತ ಹೆಚ್ಚು ಸಮಯವನ್ನು ಚಾಟ್, ವಿಡಿಯೋ ಸ್ಟ್ರೀಮಿಂಗ್, ಬ್ರೌಸರ್‌ಗಳು, ಸಾಮಾಜಿಕ ಜಾಲತಾಣ ಮತ್ತು ಇಮೇಜ್ ಆಪ್‌ಗಳನ್ನು ಬಳಸುವುದಕ್ಕೆ ಮೀಸಲಿಡುತ್ತಾರೆ ಎಂದು ನೀಲ್ಸನ್ ವರದಿ ಹೇಳಿದೆ.

ಸಾಮಾಜಿಕ ಜಾಲತಾಣಕ್ಕಿಂತ ಇಮೇಜ್ ಆಪ್‌ಗಳ ಹೆಚ್ಚು ಬಳಕೆ
ಇಮೇಜ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಪ್ರಿಮಿಯಂ ಹ್ಯಾಂಡ್‌ಸೆಟ್ ಬಳಕೆದಾರರು ಮುಂದಿದ್ದು, ಇಮೇಜ್ ಆಪ್‌ಗಳನ್ನು ದಿನಕ್ಕೆ ಕನಿಷ್ಟ 4 ಬಾರಿ ಬಳಸಿದರೆ, ಸೋಶಿಯಲ್ ನೆಟ್‌ವರ್ಕಿಂಗ್ ಆಪ್‌ಗಳನ್ನು ದಿನಕ್ಕೆ ಕನಿಷ್ಟ 2 ಬಾರಿ ಬಳಸುತ್ತಾರೆಂದು ನೀಲ್ಸನ್ ಹೇಳಿದೆ.

ವಾಟ್ಸ್‌ಆಪ್ ಬೇಕೆ ಬೇಕಂತೆ
ನೀಲ್ಸನ್ ವರದಿಯಲ್ಲಿ ವಾಟ್ಸ್‌ಆಪ್ ಮೆಸೇಂಜರ್ ಆಪ್ ಅತಿ ಹೆಚ್ಚು ಎಂಗೆಜ್‌ಮೆಂಟ್ ಹೊಂದಿದ ಆಪ್ ಆಗಿ ಹೊರಹೊಮ್ಮಿದೆ. ವಾಟ್ಸ್‌ಆಪ್‌ನ್ನು ಎಲ್ಲಾ ವರ್ಗದ ಬಳಕೆದಾರರು ಬಳಸುತ್ತಿರುವುದು ವಿಶೇಷ. ಅಂದರೆ ನೀಲ್ಸನ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಆರಂಭಿಕ, ಮಧ್ಯಮ ಹಾಗೂ ಪ್ರೀಮಿಯಂ ಬಳಕೆದಾರರೆಂದು ವಿಂಗಡಿಸಿದ್ದು, ಮೂರು ವರ್ಗದ ಬಳಕೆದಾರರು ವಾಟ್ಸ್‌ಆಪ್‌ನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.

ಲೈಟ್ ಆಪ್‌ಗಳ ಬಳಕೆ ಹೆಚ್ಚು
ವಾಟ್ಸ್‌ಆಪ್‌ಗೆ ಹೋಲಿಸಿದರೆ ಫೇಸ್‌ಬುಕ್ ಲೈಟ್ ಮತ್ತು ಯುಸಿ ಬ್ರೌಸರ್‌ಗಳ ಬಳಕೆ ಕಡಿಮೆಯೇ ಆಗಿದ್ದರು, ಜನ ಸ್ಮಾರ್ಟ್‌ಫೋನ್ ಡೇಟಾವನ್ನು ಕಡಿಮೆ ಬಳಸುವ ಆಪ್‌ಗಳ ಬಳಕೆಯಲ್ಲಿ ಹೆಚ್ಚು ಆಸಕ್ತರಾಗಿದ್ದಾರೆ. ಇದು 15,000 ರೂ.ಗಿಂತ ಕಡಿಮೆ ದರದ ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಹೆಚ್ಚಿದ್ದು, ಯುಸಿ ಬ್ರೌಸರ್, ಫೇಸ್‌ಬುಕ್ ಲೈಟ್, ಯೂಟ್ಯೂಬ್‌ನಂತಹ ಆಪ್‌ಗಳನ್ನು ಪ್ರಿಮಿಯಂ ಬಳಕೆದಾರರಿಗಿಂತ ಹೆಚ್ಚು ಬಳಸುತ್ತಾರೆ.

ಪ್ರಿಮಿಯಂ ಬಳಕೆಯಲ್ಲಿ ಹೆಚ್ಚು ಡೇಟಾ ಬಳಕೆ
15,000 ರೂ. ಗಿಂತ ಹೆಚ್ಚು ದರದ ಪ್ರಿಮಿಯಂ ಸ್ಮಾರ್ಟ್‌ಫೋನ್ ಬಳಕೆದಾರರು ಫೇಸ್‌ಬುಕ್, ವಾಟ್ಸ್‌ಆಪ್, ಇನ್‌ಸ್ಟಾಗ್ರಾಂ ಮತ್ತು ಗೂಗಲ್ ಕ್ರೋಮ್‌ನಂತಹ ಹೆಚ್ಚು ಡೇಟಾ ಬಳಸುವ ಆಪ್‌ಗಳನ್ನು ಬಳಸುತ್ತಾರೆಂದು ಹೇಳಿದೆ.

ಮೂರು ವರ್ಗಗಳಲ್ಲಿ ವಿಂಗಡಣೆ
ಸಮೀಕ್ಷೆಗೆ ನೀಲ್ಸನ್ ಮೂರು ವರ್ಗಗಳಾಗಿ ಸ್ಮಾರ್ಟ್‌ಫೋನ್ ಬಳಕೆದಾರರನ್ನು ವಿಂಗಡಿಸಿತ್ತು. 5,000 ರೂ.ಗಿಂತ ಕಡಿಮೆ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಆರಂಭಿಕ ವರ್ಗವಾಗಿ, 5,000 ದಿಂದ 15,000 ರೂ. ವರೆಗಿನ ದರದ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಮಧ್ಯಮ ವರ್ಗವೆಂದು, 15,000 ದಿಂದ 25,000 ರೂ.ವರೆಗಿನ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಪ್ರೀಮಿಮಯಂ ವರ್ಗವೆಂದು ವಿಂಗಡಿಸಲಾಗಿತ್ತು.

ಸರಾಸರಿ ದರದಲ್ಲೂ ಏರಿಕೆ
ನೀಲ್ಸನ್ ಸಮೀಕ್ಷೆ ಪ್ರಮುಖವಾಗಿ ಇನ್ನೊಂದು ಅಂಶದ ಮೇಲೆ ಬೆಳಕು ಚೆಲ್ಲಿದೆ. ನಾವೇಲ್ಲಾ ಸ್ಮಾರ್ಟ್‌ಫೋನ್ ದರ ಕಡಿಮೆಯಾಗುತ್ತಿದೆ ಎಂದುಕೊಂಡಿದ್ದೇವೆ. ಆದರೆ, ಸ್ಮಾರ್ಟ್‌ಫೋನ್‌ನ ಸರಾಸರಿ ದರ ಏರಿಕೆಯಾಗುತ್ತಿದೆ. 2015ರಲ್ಲಿ 7,700 ರೂ. ಇದ್ದ ಸರಾಸರಿ ಬೆಲೆ, 2017ರಲ್ಲಿ 10,000ಕ್ಕೆ ಏರಿದೆ ಎಂದು ನೀಲ್ಸನ್ ಹೇಳಿದೆ.


Click it and Unblock the Notifications








