ಮಾನಸಿಕ ಒತ್ತಡ ನಿವಾರಣೆಗೆ ನೆಟ್‌ಫ್ಲಿಕ್ಸ್ ಗೀಳು: ನಿಮಾನ್ಸ್ ಸೇರಿದ ಅಸ್ವಸ್ಥ ಯುವಕ..!
ಟೆಲಿವಿಷನ್‌ನಿಂದ ಮನರಂಜನಾ ಮಾಧ್ಯಮವನ್ನು ಸಾಮಾಜಿಕ ಜಾಲತಾಣಗಳು ಮತ್ತು ವಿಡಿಯೋ ಸ್ಟ್ರೀಮಿಂಗ್ ತಾಣಗಳು ಕಿತ್ತುಕೊಂಡಿದ್ದು, ಗೀಳಾಗಿ ಹಂಟಿಕೊಳ್ಳುತ್ತಿದೆ. ಹೌದು, ಒತ್ತಡ ನಿವಾರಣೆಗೆಂದು ಯುವಜನ ಫೇಸ್‌ಬುಕ್, ವಾಟ್ಸ್‌ಆಪ್, ಯೂಟ್ಯೂಬ್, ನೆಟ್‌ಫ್ಲಿಕ್ಸ್ ಎಂದು ಬ್ಯುಸಿಯಾಗಿ ವ್ಯಸನವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

ಹೌದು, ಬೆಂಗಳೂರಿನ 23 ವರ್ಷದ ಯುವಕನೋರ್ವ ವಿಡಿಯೋ ಸ್ಟ್ರೀಮಿಂಗ್ ತಾಣ ನೆಟ್‌ಫ್ಲಿಕ್ಸ್‌ನಲ್ಲಿ ಮಿತಿ ಮೀರಿ ವಿಡಿಯೋಗಳನ್ನು ನೋಡಿದ್ದರಿಂದ ನಿಮಾನ್ಸ್ ಸೇರಿದ್ದು, ನೆಟ್‌ಫ್ಲಿಕ್ಸ್ ಸಂಬಂಧಿತ ವ್ಯಸನಕ್ಕೆ ಸಂಬಂಧಿತ ಮೊದಲ ರೋಗಿಯಾಗಿದ್ದಾನೆ. ತಂತ್ರಜ್ಞಾನ ಜೀವನವನ್ನು ಹೆಚ್ಚು ಆರಾಮದಾಯಕ ಹಾಗೂ ಸರಳಗೊಳಿಸಿದ್ದರೂ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತಿರುವುದು ಆತಂಕಕಾರಿ.

ಒತ್ತಡ ನಿಭಾಯಿಸಲು ಹೋಗಿ ನೆಟ್‌ಫ್ಲಿಕ್ಸ್ ಗೀಳು
ತಂದೆ-ತಾಯಿ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದರು. ಈ ಮಾನಸಿಕ ಒತ್ತಡದಿಂದ ಹೊರಬರಲು ಹಾಗೂ ಸಮಾಧಾನ ತಂದುಕೊಳ್ಳಲು ನೆಟ್‌ಫ್ಲಿಕ್ಸ್ ನೋಡಲು ಶುರು ಮಾಡಿಕೊಂಡೆ ಎಂದು ನಿಮಾನ್ಸ್ ಮೊರೆ ಹೋದ ರೋಗಿ ಹೇಳಿದ್ದಾನೆ. ಈ ಹಿಂದೆ ಈತ ತನ್ನ ಮಾನಸಿಕ ಒತ್ತಡದ ನಿಯಂತ್ರಣಕ್ಕೆ ಆನ್‌ಲೈನ್ ಗೇಮ್‌ಗಳ ಮೊರೆ ಹೋಗಿದ್ದ ಎನ್ನುವುದು ಗಮನಿಸಬೇಕಾದ ಅಂಶ.

ಸರ್ವೀಸ್ ಫಾರ್ ಹೆಲ್ತಿ ಯೂಸ್ ಆಫ್ ಟೆಕ್ನಾಲಜಿಯಲ್ಲಿ ಚಿಕಿತ್ಸೆ
ನೆಟ್‌ಫ್ಲಿಕ್ಸ್ ಗೀಳು ಹಚ್ಚಿಕೊಂಡಿರುವ ರೋಗಿ ನಿಮಾನ್ಸ್‌ನ ಸರ್ವೀಸ್ ಫಾರ್ ಹೆಲ್ತಿ ಯೂಸ್ ಆಫ್ ಟೆಕ್ನಾಲಜಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಒತ್ತಡ ಕಡಿಮೆ ಮಾಡುವ ಅನೇಕ ವ್ಯಾಯಾಮಗಳನ್ನು ವೈದ್ಯರು ಆತನಿಗೆ ಹೇಳಿಕೊಡುತ್ತಿದ್ದು, ಪ್ರಮುಖವಾಗಿ ಪ್ರತಿ ತಾಸಿಗೊಮ್ಮೆ ದೀರ್ಘ ಉಸಿರಾಟ ಮಾಡುವಂತೆ ಸೂಚಿಸಿದ್ದಾರೆ.

ಡಿಜಿಟಲ್ ಡಿಟಾಕ್ಸ್ ಚಿಕಿತ್ಸೆ
ರೋಗಿಗೆ ನಿಮಾನ್ಸ್ ವೈದ್ಯರು ವೃತ್ತಿ ಜೀವನದ ಕುರಿತು ಆತ ಹೊಂದಿದ ಆಸೆಗಳನ್ನು ಹೊರಗೆಳೆಯುತ್ತಾ ಒತ್ತಡವನ್ನು ನಿವಾರಿಸಲು ಪ್ರಯತ್ನ ಪಡುತ್ತಿದ್ದಾರೆ. ಮೊಬೈಲ್, ಕಂಪ್ಯೂಟರ್ ಮತ್ತು ಇತರ ಗ್ಯಾಡ್ಜೆಟ್‌ಗಳಿಂದ ದೂರವಿದ್ದು, ಮನುಷ್ಯರ ಜತೆ ಹೆಚ್ಚಿನ ಸಮಯ ಕಳೆಯುವಂತೆ ಸೂಚಿಸಿ ಡಿಜಿಟಲ್ ಡಿಟಾಕ್ಸ್ ಎಂಬ ಚಿಕಿತ್ಸೆಯನ್ನು ರೋಗಿ ಮೇಲೆ ಪ್ರಯೋಗ ಮಾಡಿದ್ದಾರೆ.

ವಿಶ್ವಸಂಸ್ಥೆ ಹಿಂದೆಯೇ ಹೇಳಿತ್ತು
ಮೊಬೈಲ್ ಮತ್ತು ಆನ್‌ಲೈನ್ ಗೇಮ್‌ಗಳಿಗೆ, ಸಾಮಾಜಿಕ ಜಾಲತಾಣಗಳ ಬಳಕೆಯನ್ನು ವ್ಯಸನವನ್ನಾಗಿ ಮಾಡಿಕೊಳ್ಳುವುದು ಅಸ್ವಸ್ಥತೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆಯೇ ಹೇಳಿತ್ತು. ದಿನಕ್ಕೆ ಐದರಿಂದ ಆರು ಗಂಟೆಗಳ ಕಾಲ ಲೈವ್ ಸ್ಟ್ರೀಮಿಂಗ್ ಅಥವಾ ಸಾಮಾಜಿಕ ಜಾಲತಾಣ ಅಥವಾ ಗೇಮಿಂಗ್‌ನಲ್ಲಿ ಮುಳುಗಿರಿತ್ತೀರಿ ಎಂದರೆ ನಿಮ್ಮನ್ನು ನೀವು ಅಸ್ವಸ್ಥತೆ ಕಡೆಗೆ ಎಳೆದುಕೊಳ್ಳುತ್ತಿರುತ್ತೀರಿ ಎಂದು ತಜ್ಞರು ಹೇಳುತ್ತಾರೆ.

ಒತ್ತಡದಿಂದ ಹೊರಬರಲು ಯುವಕರಿಗೆ ಮೆಚ್ಚಿನ ಆಯ್ಕೆ
ಜೀವನದ ಒತ್ತಡದಿಂದ ಹೊರಬರಲು ಯುವಕರು ಸಾಮಾಜಿಕ ಜಾಲತಾಣ, ಗೇಮಿಂಗ್ ಹಾಗೂ ಲೈವ್ ಸ್ಟ್ರೀಮ್‌ನಂತಹ ವರ್ಚುವಲ್ ಜಗತ್ತಿನಲ್ಲಿ ಹೆಚ್ಚು ಮುಂದುವರೆಯುತ್ತಾರೆ. ಇವು ಅವರಿಗೆ ಒತ್ತಡ ನಿವಾರಣೆಯ ಮೆಚ್ಚಿನ ಆಯ್ಕೆಗಳಾಗಿ ಕಾಣುತ್ತವೆ. ಆದರೆ, ಇದು ಗೀಳಾಗಿ ಪರಿಣಮಿಸುತ್ತದೆ ಎಂದು ತಜ್ಞ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ತಂತ್ರಜ್ಞಾನ ಸಂಬಂಧಿತ ಪ್ರಕರಣಗಳಲ್ಲಿ ಏರಿಕೆ
ಸಾಮಾಜಿಕ ಜಾಲತಾಣ, ಗೇಮಿಂಗ್, ಲೈವ್ ಸ್ಟ್ರೀಮಿಂಗ್‌ಗಳನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ ಎಂದು ಸರ್ವೀಸ್ ಫಾರ್ ಹೆಲ್ತಿ ಯೂಸ್ ಆಫ್ ಟೆಕ್ನಾಲಜಿ ಕ್ಲಿನಿಕ್‌ನ ಡಾ.ಮನೋಜ್ ಕುಮಾರ್ ಶರ್ಮಾ ಹೇಳಿದ್ದಾರೆ.

14 ವರ್ಷ ವಯಸ್ಸಿನವರಲ್ಲಿ ಗೇಮಿಂಗ್ ವ್ಯಸನ
ಗೇಮಿಂಗ್ ವ್ಯಸನವಾಗುತ್ತಿರುವ ಪ್ರಮಾಣ 14 ವರ್ಷ ವಯಸ್ಸಿನ ಮಕ್ಕಳಲ್ಲಿ ಹೆಚ್ಚಿದೆ. ಅದರಂತೆ ವಯಸ್ಕರು ಭಾವನಾತ್ಮಕ ಸಂತೃಪ್ತಿ ಕಂಡುಕೊಳ್ಳಲು ನೆಟ್‌ಫ್ಲಿಕ್ಸ್, ಯೂಟ್ಯೂಬ್, ಅಮೆಜಾನ್ ಪ್ರೈಮ್‌ನಂತಹ ಲೈವ್ ಸ್ಟ್ರೀಮಿಂಗ್‌ನಂತಹ ವೇದಿಕೆಗಳಿಗೆ ವ್ಯಸನಿಗಳಾಗುತ್ತಾರೆ ಎಂದು ಮನೋಜ್ ಕುಮಾರ್ ಹೇಳಿದ್ದಾರೆ.


Click it and Unblock the Notifications








