ಎಲನ್ ಮಸ್ಕ್ ಅವರಿಂದ' ಗ್ರೊಕಿಪೀಡಿಯಾ' ಬಿಡುಗಡೆ: ವಿಕಿಪೀಡಿಯಗೆ ಹೊಸ ತಲೆನೋವು?!
ಟೆಕ್‌ಜಗತ್ತಿನ ಬಿಲಿಯನೇರ್ ಹಾಗೂ X (ಹಳೆಯ Twitter) ಮಾಲೀಕ ಎಲನ್ ಮಸ್ಕ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಎಲಾನ್ ಮಸ್ಕ್ ಅವರು ಸೋಮವಾರ ಹೊಸ ಆನ್‌ಲೈನ್ ವಿಶ್ವಕೋಶ ವೇದಿಕೆ 'ಗ್ರೊಕಿಪೀಡಿಯಾ' (Grokipedia) ಅನ್ನು ಬಿಡುಗಡೆ ಮಾಡಿದ್ದಾರೆ. ಇದು ಅವರ ಕೃತಕ ಬುದ್ಧಿಮತ್ತೆ ಕಂಪನಿ xAI ಅಭಿವೃದ್ಧಿಪಡಿಸಿದ ಯೋಜನೆ ಆಗಿದ್ದು, ಪ್ರಸಿದ್ಧ ವಿಕಿಪೀಡಿಯಗೆ "ಪಕ್ಷಪಾತವಿಲ್ಲದ ಪರ್ಯಾಯ" ಎಂದು ಮಸ್ಕ್ ಘೋಷಿಸಿದ್ದಾರೆ. ಎಲನ್ ಮಸ್ಕ್ ಅವರು ಹೇಳುವಂತೆ, ಗ್ರೊಕಿಪೀಡಿಯಾ 0.1 ಆವೃತ್ತಿಯೇ ವಿಕಿಪೀಡಿಯಾಗಿಂತ 10 ಪಟ್ಟು ಚೆನ್ನಾಗಿದೆಯಂತೆ!. ಈ ಕುರಿತ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
ಗ್ರೊಕಿಪೀಡಿಯಾ ತಾಣವು ವಿಕಿಪೀಡಿಯಗೆ ಸ್ಪರ್ಧೆ ನೀಡುವ ಮಸ್ಕ್‌ನ ಯೋಜನೆಯಾಗಿದೆ. ವಿಕಿಪೀಡಿಯಾ ಪ್ರಚುರಪಡಿಸುತ್ತಿರುವ 'ಸುಳ್ಳು ಸುದ್ದಿಗಳ ಶುದ್ದೀಕರಣ'ಕ್ಕೆ ಈ ಹೊಸ ವೇದಿಕೆಯನ್ನು ಸೃಷ್ಟಿಸಲಾಗಿದೆ ಎಂದು ಎಲನ್ ಮಸ್ಕ್ ಅವರು ತಮ್ಮ'ಎಕ್ಸ್' ಖಾತೆಯಲ್ಲಿ ತಿಳಿಸಿದ್ದಾರೆ. The Washington Post ವರದಿಯ ಪ್ರಕಾರ, ಗ್ರೊಕಿಪೀಡಿಯಾ ವೇದಿಕೆಯು ರೂಪದಲ್ಲಿ ವಿಕಿಪೀಡಿಯದ ವಿನ್ಯಾಸ ಮತ್ತು ಶೈಲಿ ಅಷ್ಟೇ ಇದ್ದರೂ, ಅದರ ವಿಷಯದ ವ್ಯಾಪ್ತಿ ತುಂಬಾ ಸಣ್ಣದು ಮತ್ತು ಪಾರದರ್ಶಕತೆ ಕಡಿಮೆ ಎಂದಿದೆ. ಕೆಲವು ಲೇಖನಗಳು ಸ್ಪಷ್ಟವಾಗಿ ಬಲಪಂಥೀಯ ನೋಟವನ್ನು ತೋರಿಸುತ್ತಿವೆ ಎಂಬುದನ್ನು ಸೈಟ್ ಗುರುತಿಸಿದೆ.
Grokipedia vs Wikipedia: ಪ್ರಮುಖ ವ್ಯತ್ಯಾಸ
ಗ್ರೊಕಿಪೀಡಿಯಾದಲ್ಲಿ "Gender" (ಲಿಂಗ) ಕುರಿತ ಲೇಖನವು "ಮಾನವರು ಜೀವಶಾಸ್ತ್ರೀಯವಾಗಿ ಪುರುಷ ಅಥವಾ ಮಹಿಳೆ ಎಂದು ವಿಂಗಡಿಸಲ್ಪಟ್ಟಿದ್ದಾರೆ" ಎಂಬ ವಿವರಣೆ ನೀಡುತ್ತದೆ. ಆದರೆ ವಿಕಿಪೀಡಿಯ ಅದನ್ನು "ಲಿಂಗವು ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾನಸಿಕ ಅಂಶಗಳ ಸಂಯೋಜನೆ" ಎಂದು ವಿವರಿಸುತ್ತದೆ. ಈ ವ್ಯತ್ಯಾಸವು ಎರಡು ವೇದಿಕೆಗಳ ದೃಷ್ಟಿಕೋನಗಳ ನಡುವಿನ ಸ್ಪಷ್ಟ ಭಿನ್ನತೆಯನ್ನು ತೋರಿಸುತ್ತದೆ ಎಂಬುದನ್ನು The Washington Post ವರದಿಯು ಗುರುತಿಸಿದೆ.
ಎಲನ್ ಮಸ್ಕ್ ಕುರಿತ ಲೇಖನದಲ್ಲಿ ಮೆಚ್ಚುಗೆಯ ಅಲೆ?
ಗ್ರೊಕಿಪೀಡಿಯಾದಲ್ಲಿ ಮಸ್ಕ್ ಕುರಿತು ಪ್ರಕಟಿತ ಲೇಖನವು ಅವರ ಸಾಧನೆಗಳನ್ನು ಅತ್ಯಂತ ಪ್ರಶಂಸಾತ್ಮಕವಾಗಿ ವಿವರಿಸಿದೆ. "AI ಸುರಕ್ಷತೆ ಮತ್ತು ಸತ್ಯಾಧಾರಿತ ಅಭಿವೃದ್ಧಿ" ಕುರಿತಾಗಿ ಅವರ ದೃಷ್ಟಿಕೋನವನ್ನು ಹೈಲೈಟ್ ಮಾಡಲಾಗಿದೆ. ಆದರೆ ಕೆಲವು ಭಾಗಗಳಲ್ಲಿ ತಪ್ಪು ಮಾಹಿತಿಯೂ ಸೇರಿದೆ. ಉದಾಹರಣೆಗೆ, ವಿವೇಕ್ ರಾಮಸ್ವಾಮಿ ಅವರ ಪಾತ್ರದ ಕುರಿತು ತಪ್ಪು ಉಲ್ಲೇಖ ಪತ್ತೆಯಾಗಿದೆ ಎಂದು ಹೇಳಿದೆ. ರಾಮಸ್ವಾಮಿ ಅವರ ಪಾತ್ರದ ಬಗ್ಗೆ ವಿರುಧ್ಧವಾಗಿ ವಿವರಿಸಲು ಕೆಲವು ದಾಖಲೆಗಳನ್ನು ಉಲ್ಲೇಖಿಸಲಾಗಿದೆ. ಆದರೆ, ಅವುಗಳಲ್ಲಿ ಯಾವುದೂ ರಾಮಸ್ವಾಮಿಯನ್ನು ಉಲ್ಲೇಖಿಸಲಿಲ್ಲ ಎಂದು ವರದಿಯು ಹೇಳಿದೆ.

Grok AI ಮಾದರಿ: ಹೊಸ ತಂತ್ರಜ್ಞಾನ ಅಥವಾ ಹೊಸ ವಿವಾದ?
ಗ್ರೊಕಿಪೀಡಿಯಾದಲ್ಲಿ ವಿಷಯಗಳು xAIನ Grok ಚಾಟ್‌ಬಾಟ್ ನ ದೊಡ್ಡ ಭಾಷಾ ಮಾದರಿ (LLM) ಆಧಾರಿತವಾಗಿವೆ. ಇದರಿಂದ X ಪ್ಲಾಟ್‌ಫಾರ್ಮ್‌ನ ನವೀನ ಪೋಸ್ಟ್‌ಗಳ ಆಧಾರದ ಮೇಲೆ ವಿಷಯವನ್ನು ನವೀಕರಿಸುವ ಸಾಧ್ಯತೆ ಇದೆ. ಆದರೆ ಇದೇ ಸಂಪರ್ಕದಿಂದ ತಪ್ಪುಮಾಹಿತಿ ಹರಡುವ ಅಪಾಯವೂ ಇದೆ. ಈ ಹಿಂದಿನ ಸಂದರ್ಭಗಳಲ್ಲಿ Grok ಚಾಟ್‌ಬಾಟ್ ಕೆಲವು ವಿವಾದಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದ ಹಿನ್ನೆಲೆಯಲ್ಲಿ ಈ ಪ್ರಶ್ನೆಯು ಇದೀಗ ಇನ್ನಷ್ಟು ಪ್ರಸ್ತುತವಾಗಿದೆ.
ಒಟ್ಟಾರೆಯಾಗಿ, ಎಲನ್ ಮಸ್ಕ್ ಅವರು ಈ ವೇದಿಕೆಯನ್ನು "ಮೂಲಸತ್ಯಾಧಾರಿತ ಮಾಹಿತಿ ನೀಡುವ ವಿಶ್ವಕೋಶ" ಎಂದು ಪ್ರಚಾರ ಮಾಡುತ್ತಿದ್ದಾರೆ. ಗಮನಿಸುವುದಾದರೆ, ಎಲನ್ ಮಸ್ಕ್ ಅವರು ಕಳೆದ ಸೆಪ್ಟೆಂಬರ್ 29 ರಂದು Grokipedia ಕುರಿತು ಮೊದಲ ಘೋಷಣೆ ಮಾಡಿದರು. ಅವರು ಸಾಮಾಜಿಕ ಮಾಧ್ಯಮದಲ್ಲಿ "ವಿಕಿಪೀಡಿಯ ಪಕ್ಷಪಾತದಿಂದ ಕೂಡಿದೆ" ಎಂಬ ಟೀಕೆಗೆ ಪ್ರತಿಕ್ರಿಯೆ ನೀಡುತ್ತಾ, "ಗ್ರೊಕಿಪೀಡಿಯಾ ವಿಶ್ವದ ನಿಜವಾದ ಅರ್ಥವನ್ನು ತಿಳಿಯಲು xAIಗೆ ಅಗತ್ಯವಾದ ಮುಂದಿನ ಹೆಜ್ಜೆ" ಎಂದು ಹೇಳಿದರು. ಇದೀಗ ಗ್ರೊಕಿಪೀಡಿಯಾ ಪ್ರಾರಂಭದ ಹಂತದಲ್ಲಿದ್ದರೂ, ಇದು ವಿಕಿಪೀಡಿಯದ ಆಧಿಪತ್ಯಕ್ಕೆ ಹೊಸ ಸವಾಲು ಎತ್ತಿದೆ. ಆದರೆ ಅದರ ರಾಜಕೀಯ ನಿಲುವು, ತಾಂತ್ರಿಕ ದೋಷಗಳು ಮತ್ತು ನಿಖರತೆ ಕುರಿತು ಉದ್ಭವಿಸಿರುವ ಚರ್ಚೆಗಳು ಮುಂದಿನ ದಿನಗಳಲ್ಲಿ ಈ ವೇದಿಕೆಯ ಸಂಪೂರ್ಣ ವಿಶ್ವಾಸಾರ್ಹತೆಯನ್ನು ತೀರ್ಮಾನಿಸಲಿವೆ. ಏನಂತಿರಾ?
ನೀವು ವೇದಿಕೆಯನ್ನು ಪರಿಶೀಲಿಸಲು https://grokipedia.com/ ತಾಣಕ್ಕೆ ಭೇಟಿ ನೀಡಬಹುದು.


Click it and Unblock the Notifications








