ಲೋನ್ ಆ್ಯಪ್ ಕಿರುಕುಳಕ್ಕೆ ಬೆಂಗಳೂರಿನ ವಿದ್ಯಾರ್ಥಿ ಆತ್ಮಹತ್ಯೆ! ಕಡಿವಾಣ ಯಾವಾಗ?
ಆನ್‌ಲೈನ್‌ನಲ್ಲಿ ಸಾಲ ನೀಡುವ ಲೋನ್ ಆ್ಯಪ್‌ಗಳ ಕಿರುಕುಳಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಮೂಲಕ ಲೋನ್ ಅಪ್ಲಿಕೇಶನ್‌ಗಳ ಕಿರುಕುಳಕ್ಕೆ ಕೊನೆಯಿಲ್ಲವೆ ಎಂಬಂತಾಗಿದೆ. ಸಾಲ ನೀಡುವ ಅಪ್ಲಿಕೇಶನ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಕರ್ನಾಟಕ ಸರ್ಕಾರ ಭರವಸೆ ನೀಡಿದ ನಂತರದ ದಿನಗಳಲ್ಲಿಯೂ ಈ ರೀತಿಯ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.
ಹೌದು, ಲೋನ್ ಅಪ್ಲಿಕೇಶನ್‌ಗಳ ಕಿರುಕುಳಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿಯನ್ನು ತೇಜಸ್ ಎಂದು ಗುರುತಿಸಲಾಗಿದ್ದು, ಸ್ನೇಹಿತನಿಗೆ ಲೋನ್ ಆ್ಯಪ್‌ನಲ್ಲಿ ಸಾಲ ಕೊಡಿಸಿದ್ದ ಎನ್ನಲಾಗಿದೆ. ಆದರೆ ಸ್ನೇಹಿತ ಲೋನ್ ಇಎಂಐ ಅನ್ನು ಸರಿಯಾಗಿ ತುಂಬದ ಕಾರಣಕ್ಕೆ ಲೋನ್ ಆ್ಯಪ್‌ಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಬೇಸತ್ತ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಡೆದಿದೆ. ಅಷ್ಟಕ್ಕೂ ಲೋನ್ ಆ್ಯಪ್‌ಗಳ ಕಿರುಕುಳಕ್ಕೆ ಕಡಿವಾಣ ಸಾದ್ಯವಿಲ್ಲವೇ ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೇಗವಾಗಿ ಸಾಲ ದೊರೆಯಲಿದೆ ಅಂತಾ ಲೋನ್ ಅಪ್ಲಿಕೇಶನ್‌ಗಳಲ್ಲಿ ಸಾಲ ಪಡೆದುಕೊಳ್ಳುವ ಮುನ್ನ ಎಚ್ಚರವಿರಲಿ. ಇಲ್ಲದೆ ಹೋದರೆ ನಿಮ್ಮ ಜೀವಕ್ಕೆ ಕುತ್ತು ಬಂದರೆ ಅಚ್ಚರಿಯಿಲ್ಲ. ಏಕೆಂದ್ರೆ ಲೋನ್ ಅಪ್ಲಿಕೇಶನ್‌ಗಳ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಇಂಬು ನೀಡುವಂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಾಲ ನೀಡುವ ಅಪ್ಲಿಕೇಶನ್‌ಗಳಲ್ಲಿ ಸಾಲ ಪಡೆದುಕೊಂಡ ಕಾರಣಕ್ಕೆ ಯುವಕನೊಬ್ಬ ನೇಣಿಗೆ ಕೊರಳೊಡಿದ್ದಾನೆ.
ಸಾಲ ಪಡೆದುಕೊಂಡವರ ಸಂಪರ್ಕಗಳನ್ನು ಸಂಗ್ರಹಿಸಿಕೊಳ್ಳುವ ಲೋನ್ ಅಪ್ಲಿಕೇಶನ್‌ಗಳು ಸಂಪರ್ಕ ಸಂಖ್ಯೆಗಳಿಗೆ ಸಂದೇಶ ಕಳುಹಿಸುವ ಮೂಲಕ ಮಾನಸಿಕ ಹಿಂಸೆಯನ್ನು ನೀಡುತ್ತಿರೋದು ಜಗಜ್ಜಾಹೀರಾಗಿದೆ. ಸಾಲವನ್ನು ಮರುಪಾವತಿಸದೆ ಹೋದರೆ ನಾನಾ ರೀತಿಯಲ್ಲಿ ಕಿರುಕುಳ ನೀಡುವ ಲೋನ್ ಆ್ಯಪ್‌ಗಳ ಬಗ್ಗೆ ಯುವಜನತೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆಯಿದೆ.
ಇದೀಗ ಸಾಲ ನೀಡುವ ಅಪ್ಲಿಕೇಶನ್‌ಗಳ ಕಿರುಕುಳಕ್ಕೆ ಜಾಲಹಳ್ಳಿ ಸಮೀಪದ ಎಚ್‌ಎಂಟಿ ಲೇಔಟ್‌ನ ನಿವಾಸಿ ತೇಜಸ್ ಬಲಿಯಾಗಿದ್ದಾನೆ. ಇಲ್ಲಿ ತೇಜಸ್ ತನ್ನ ಸ್ನೇಹಿತ ಮಹೇಶ್‌ಗೆ ವರ್ಷದ ಹಿಂದೆ ಸಾಲದ ಆ್ಯಪ್‌ನಿಂದ 40 ಸಾವಿರ ರೂ. ಸಾಲವನ್ನು ಕೊಡಿಸಿದ್ದ. ಆದರೆ ಈ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ, ಲೋನ್ ಆ್ಯಪ್‌ಗಳು ಮಾನಸಿಕ ಕಿರುಕುಳ ನೀಡಲು ಶುರುಮಾಡಿವೆ. ಈ ಕಿರುಕುಳಕ್ಕೆ ಹೆದರಿದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇನ್ನು ಆತ್ಮಹತ್ಯೆಗೂ ಮುನ್ನ ತೇಜಸ್ ಡೆತ್‌ನೋಟ್ ಬರೆದಿದ್ದು, ಡೆತ್‌ನೋಟ್‌ನಲ್ಲಿ "ತಂದೆ ಮತ್ತು ತಾಯಿ ದಯವಿಟ್ಟು ನನ್ನನ್ನು ಕ್ಷಮಿಸಿ. ನನಗೆ ಈ ಸಮಸ್ಯೆಯಿಂದ ಹೊರಬರಲು ಯಾವುದೇ ಮಾರ್ಗವಿಲ್ಲ. ಸಾಲ ತೀರಿಸಲು ಸಾಧ್ಯವಾಗದೆ ಜೀವನವನ್ನೇ ಮುಗಿಸಲು ನಿರ್ಧರಿಸಿದೆ. ಧನ್ಯವಾದಗಳು, ಗುಡ್ ಬೈ ಎಂದು ಉಲ್ಲೇಖಿಸಿದ್ದಾರೆ.

ಇನ್ನು ಭಾರತದಲ್ಲಿ ಸಾಕಷ್ಟು ಲೋನ್ ಆ್ಯಪ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಬಹುತೇಕ ಲೋನ್ ಆ್ಯಪ್‌ಗಳು ಆರ್‌ಬಿಐ(RBI)ನಿಂದ ಮಾನ್ಯತೆಕೂಡ ಪಡೆದುಕೊಂಡಿಲ್ಲ ಎನ್ನಲಾಗಿದೆ. ಆದರೆ ಈ ಲೋನ್ ಆ್ಯಪ್‌ಗಳು ಕಾಂಟಾಕ್ಟ್, ವಿಡಿಯೋ ಮೋಟೋ ಕ್ಯಾಮಾರಾ ಇತ್ಯಾದಿಗಳಿಗೆ ಅನುಮತಿ ಕೇಳುತ್ತಾರೆ. ಇವುಗಳ ಮೂಲಕ ಸಾಲ ಪಡೆಯುವ ಗ್ರಾಹಕರ ವೈಯುಕ್ತಿಕ ಮಾಹಿತಿಯನ್ನು ಕದಿಯುತ್ತವೆ. ಈ ಮೂಲಕ ಸಾಲ ಮರುಪಾವತಿ ಮಾಡದೇ ಹೋದಾಗ ಅವರ ಸ್ನೇಹಿತರು, ಸಂಬಂಧಿಕರಿಗೆ ಸಂದೇಶಗಳನ್ನು ಕಳುಹಿಸುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿವೆ. ಇದರ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯಿದೆ.
ಸಣ್ಣ ಪ್ರಮಾಣದ ಸಾಲ ಅಂದರೆ 3,000ರೂ. ಅಥವಾ 5,000ರೂ. ಹಣ ನೀಡುತ್ತಾರೆ. ಆದರೆ ಸಾಲವನ್ನು ಹಿಂತಿರುಗಿಸುವಾಗ ಶೇ.30ರಿಂದ 60 ಬಡ್ಡಿ ವಿಧಿಸಿ ಸಾಲ ಚುಕ್ತಾ ಮಾಡಲು ಹೇಳುತ್ತಾರೆ. ಒಂದು ವೇಳೆ ಸಾಲ ಹಿಂದಿರುಗಿಸದೇ ಇದ್ದಲ್ಲಿ ಕ್ರೆಡಿಟ್ ರೇಟ್ ಕಡಿಮೆಯಾಗುತ್ತದೆ ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ಅಶ್ಲೀಲ ಚಿತ್ರಗಳನ್ನು ಕಾಂಟ್ಯಾಕ್ಟ್‌ಗಳಲ್ಲಿ ಇರುವವರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಾರೆ.


Click it and Unblock the Notifications








