ಫೇಸ್‌ಬುಕ್‌ಗೆ ಮುಳುವಾಗುತ್ತಿದೆ ವಾಟ್ಸ್ಆಪ್!!
ಫೇಸ್ ಬುಕ್ ಮತ್ತೊಂದು ಸಂಕಷ್ಟದಲ್ಲಿದ್ದು, ನ್ಯೂಸ್ ಗಾಗಿ ಫೇಸ್ ಬುಕ್ ಬಳಸುವವರ ಸಂಖ್ಯೆ ಭಾರೀ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ ಎಂದು ಅಧ್ಯಯನದ ವರದಿ ಹೇಳಿದ್ದು, ಸಾಮಾಜಿಕ ಜಾಲತಾಣದ ದೈತ್ಯ ಫೇಸ್ ಬುಕ್ ಗೆ ನುಂಗಲಾರದ ತುತ್ತಾಗಿದೆ. ಈಗಾಗಲೇ ಗ್ರಾಹಕರ ಮಾಹಿತಿ ಹಂಚಿಕೆ, ಸೆಟ್ಟಿಂಗ್ಸ್ ಬದಲು ಮತ್ತೀತರ ವಿವಾದಗಳಿಂದ ಜನರ ನಂಬಿಕೆ ಕಳೆದುಕೊಂಡಿದ್ದ ಫೇಸ್ ಬುಕ್ ಜನರಿಂದ ದಿನದಿಂದ ದಿನಕ್ಕೆ ದೂರವಾಗುತ್ತಿದೆ.
ಹೌದು, ಸುದ್ದಿಗಾಗಿ ಫೇಸ್ ಬುಕ್ ಬಳಸುವವರ ಸಂಖ್ಯೆ ಬಹಳಷ್ಟಿತ್ತು. ಆದರೆ, ಇದು ಬದಲಾಗುತ್ತಿದ್ದು ಬಳಕೆದಾರರು ಫೇಸ್ ಬುಕ್ ಒಡೆತನದಲ್ಲಿರುವ ವಾಟ್ಸ್ ಆಪ್ ಕಡೆ ನ್ಯೂಸ್ ಗಾಗಿ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂಬ ಅಂಶ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಇದಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುಳ್ಳು ಸುದ್ದಿ ಹರಿದಾಡುತ್ತಿದೆ ಎಂಬ ಆಘಾತಕಾರಿ ಅಂಶವನ್ನು Reuters ಇನ್ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ಜರ್ನಲಿಸಂ ನಡೆಸಿದ ಅಧ್ಯಯನ ಹೊರಹಾಕಿದೆ.


5 ಖಂಡಗಳ 37 ದೇಶಗಳಲ್ಲಿ ಅಧ್ಯಯನ
Reuters ಇನ್ಸ್ಟಿಟ್ಯೂಟ್ 5 ಖಂಡಗಳ 37 ದೇಶಗಳಲ್ಲಿ ಈ ಅಧ್ಯಯನ ಕೈಗೊಂಡಿದ್ದು, ಸುದ್ದಿಗಾಗಿ ಸಾಮಾಜಿಕ ಜಾಲತಾಣ ಬಳಸುವವರ ಸಂಖ್ಯೆ ಅಮೇರಿಕಾದಲ್ಲಿ ಕಳೆದ ವರ್ಷಕ್ಕಿಂತ ಶೇ.6ರಷ್ಟು ಕಡಿಮೆಯಾಗಿದೆ. ಅದಲ್ಲದೇ ನ್ಯೂಸ್ ಹುಡುಕುವುದು, ಪೋಸ್ಟ್ ಮತ್ತು ಶೇರ್ ಮಾಡುವುದು ಫೇಸ್ ಬುಕ್ ನಲ್ಲಿ ಕಡಿಮೆಯಾಗಿದ್ದು ಈ ಇಳಿಕೆಗೆ ಕಾರಣವಾಗಿದೆ ಎಂದು ಪ್ರಮುಖ ಅಧ್ಯಯನಕಾರ ಮತ್ತು ಬಿಬಿಸಿ ನ್ಯೂಸ್ ವೆಬ್ ಸೈಟ್ ಸಂಸ್ಥಾಪಕ ಸದಸ್ಯ ನಿಕ್ ನ್ಯೂಮ್ಯಾನ್ ಹೇಳಿದ್ದಾರೆ.

ಫೇಸ್ ಬುಕ್ ನಿಂದ ದೂರವಾಗುತ್ತಿರುವ ಜನ
ಫೇಸ್ ಬುಕ್ ಹೀಗಾಗಲೆ ಭಾರೀ ಪ್ರಮಾಣದ ಡಾಟಾ ಹಂಚಿಕೆ ವಿವಾದದಿಂದ ತನ್ನ ಇತಿಹಾಸದಲ್ಲಿಯೇ ಜನರ ನಂಬಿಕೆಯನ್ನು ಕಳೆದುಕೊಂಡಿದೆ. ಈ ವಿವಾದದಿಂದ ಬಹಳಷ್ಟು ಜನ ಬಳಕೆದಾರರು ಫೇಸ್ ಬುಕ್ ನಿಂದ ದೂರ ಸರಿಯುತ್ತಿದ್ದು, ವಾಟ್ಸ್ ಆಪ್ ಮತ್ತು ಇನ್ಸ್ಟಾಗ್ರಾಂ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇವೆರಡು ಸಹ ಫೇಸ್ ಬುಕ್ ಒಡೆತನದಲ್ಲಿರುವುದು ಫೇಸ್ ಬುಕ್ ಗೆ ಸಮಾಧಾನ ತಂದಿದೆ.

ವಾಟ್ಸ್ ಆಪ್ ಬಳಕೆ ಹೆಚ್ಚಳ
2018ರ ಡಿಜಿಟಲ್ ನ್ಯೂಸ್ ಅಧ್ಯಯನವು ತಿಳಿಸಿದಂತೆ ವಾಟ್ಸ್ ಆಪ್ ಅನ್ನು ಮಲೇಷಿಯಾ (ಶೇ.54), ಬ್ರೆಜಿಲ್ (ಶೇ.48), ಸ್ಪೇನ್ (ಶೇ.36) ಮತ್ತು ಟರ್ಕಿ (ಶೇ.30)ರಷ್ಟು ಜನ ನ್ಯೂಸ್ ಗಾಗಿ ಬಳಸುತ್ತಿದ್ದಾರೆ. ಇದರಲ್ಲಿ ಮುಖ್ಯವಾದ ಇವೆಂಟ್ ಬಗ್ಗೆ ಚರ್ಚೆ, ಸುತ್ತಮುತ್ತಲಿನ ಸುದ್ದಿ ಮತ್ತೀತರ ಅಂಶಗಳನ್ನು ಜನ ತಿಳಿಯಲು ಬಯಸಿದ್ದಾರೆ.

ಸುದ್ದಿಗಾಗಿ ಇನ್ಸ್ಟಾಗ್ರಾಂ, ಸ್ನಾಪ್ ಚಾಟ್ ಬಳಕೆ
YouGov ಸರ್ವೇ ಆಧಾರಿತ ವರದಿಯಲ್ಲಿ 74 ಸಾವಿರಕ್ಕೂ ಹೆಚ್ಚು ಆನ್ ಲೈನ್ ನ್ಯೂಸ್ ಬಳಕೆದಾರರು ಏಷ್ಯಾ ಮತ್ತು ದಕ್ಷಿಣ ಅಮೇರಿಕಾದಲ್ಲಿ ಇನ್ಸ್ಟಾಗ್ರಾಂ ಅನ್ನು ಬಳಸಿದರೆ, ಯುರೋಪ್ ಮತ್ತು ಅಮೇರಿಕಾದಲ್ಲಿ ಸ್ನಾಪ್ ಚಾಟ್ ಬಳಕೆ ಮಾಡುತ್ತಿದ್ದಾರೆ ಎಂದಿದೆ.

ಸುದ್ದಿಯಲ್ಲಿನ ನಂಬಿಕಾರ್ಹತೆ ಹೆಚ್ಚಳ
ಡಿಜಿಟಲ್ ನ್ಯೂಸ್ ವರದಿ ಮತ್ತೊಂದು ಅಂಶವನ್ನು ಬಹಿರಂಗಪಡಿಸಿದ್ದು, ನ್ಯೂಸ್ ಕುರಿತಾದ ನಂಬಿಕೆಯ ಪ್ರಮಾಣ ಕಳೆದ ವರ್ಷಕ್ಕಿಂತ ಶೇ.1ರಷ್ಟು ಹೆಚ್ಚಿದ್ದು, ಶೇ.44ಕ್ಕೆ ಏರಿದೆ. ಆದರೂ ಶೇ.23ರಷ್ಟು ಬಳಕೆದಾರರು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಬಂದ ಸುದ್ದಿಯನ್ನು ನಂಬುತ್ತೇವೆ ಎಂದಿದ್ದಾರೆ.

ನೈಜ ಮತ್ತು ಸುಳ್ಳು ಸುದ್ದಿಯ ಬಗ್ಗೆ ಕಳವಳ
2018ರ ಡಿಜಿಟಲ್ ನ್ಯೂಸ್ ವರದಿ ಬಹಿರಂಗ ಪಡಿಸಿರುವ ವರದಿಯಲ್ಲಿ ಮತ್ತೊಂದು ಅಂಶಕ್ಕೂ ಬೆಳಕು ಚೆಲ್ಲಲಾಗಿದೆ. ಅಂತರ್ಜಾಲದಲ್ಲಿ ಪ್ರಕಟವಾಗುವ ಸುದ್ದಿಯಲ್ಲಿ ನೈಜ ಮತ್ತು ಸುಳ್ಳು ಯಾವುದೆಂಬುದರ ಬಗ್ಗೆ ಬಹಳಷ್ಟು ಜನರು ಕಳವಳ ವ್ಯಕ್ತಪಡಿಸಿದ್ದಾರೆ. ಶೇ.54ರಷ್ಟು ಜನ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಈ ಪ್ರಮಾಣ ಬ್ರೆಜಿಲ್ ನಲ್ಲಿ ಶೇ.85ರಷ್ಟಿದ್ದರೆ, ನೆದರ್ ಲ್ಯಾಂಡ್ ನಲ್ಲಿ ಶೇ.30ರಷ್ಟಿದೆ.

ಫೇಕ್ ನ್ಯೂಸ್ ತೊಂದರೆಯನ್ನು ಪಬ್ಲಿಷರ್ಸ್ ನಿವಾರಿಸಬೇಕು
ವರದಿಗೆ ಪ್ರತಿಕ್ರಿಯೆ ನೀಡಿರುವ ಜನರಲ್ಲಿ ಬಹಳಷ್ಟು ಜನ ಫೇಕ್ ಮತ್ತು ನಂಬಿಕೆಗೆ ಅನರ್ಹ ಸುದ್ದಿಗಳ ತೊಂದರೆಯನ್ನು ಪಬ್ಲಿಷರ್ಸ್ ಮತ್ತು ಪ್ಲಾಟ್ ಫಾರ್ಮ್ ಅವರು ನಿವಾರಿಸಬೇಕು ಎಂದು ತಿಳಿಸಿದ್ದಾರೆ. ಇದರ ಪ್ರಮಾಣ ಯುರೋಪ್ ನಲ್ಲಿ ಶೇ.60, ಏಷ್ಯಾದಲ್ಲಿ ಶೇ.62, ಅಮೇರಿಕಾದಲ್ಲಿ ಶೇ.41 ಮತ್ತು ಬ್ರಿಟನ್ ಅಲ್ಲಿ ಶೇ.18ರಷ್ಟಿದೆ.

ಸುದ್ದಿಗಾಗಿ ವಾಯ್ಸ್ ಅಸಿಸ್ಟೆಂಟ್ ಬಳಕೆ
ಬ್ರಿಟನ್, ಜರ್ಮನಿ ಮತ್ತು ಅಮೇರಿಕಾದಲ್ಲಿ ಸುದ್ದಿ ಪಡೆಯಲು ಜನ ಅಮೇಜಾನ್ ಎಕೋ ಮತ್ತು ಗೂಗಲ್ ಹೋಮ್ ನಂತಹ ವಾಯ್ಸ್ ಆಕ್ಟಿವೇಟೆಡ್ ಡಿಜಿಟಲ್ ಅಸಿಸ್ಟೆಂಟ್ ಗಳನ್ನು ಬಳಸುವದನ್ನು ಹೆಚ್ಚು ಮಾಡಿದ್ದಾರೆ.


Click it and Unblock the Notifications








