ಹೊಸ ಮಾದರಿ ಫೇಸ್‌ಬುಕ್ ಪೇಜ್: ವ್ಯಾಪಾರಿಗಳಿಗೆ ಸಹಕಾರಿ..!
ಫೇಸ್ ಬುಕ್ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ಬಳಕೆದಾರರಿಗೂ ಸಹಾಯವಾಗುವ ಹಲವು ಆಯ್ಕೆಗಳನ್ನು ನೀಡುತ್ತಾ ಬಂದಿದೆ. ಇದೆ ಮಾದರಿಯಲ್ಲಿ ವ್ಯಾಪಾರ ವೃದ್ಧಿಗಾಗಿ ಫೇಸ್ ಬುಕ್ ಅನ್ನು ಬಳಕೆ ಮಾಡಿಕೊಳ್ಳುವವರಿಗೆ ಹೊಸದೊಂದು ಆಯ್ಕೆಯನ್ನು ನೀಡಲಿದೆ. ಅದರಲ್ಲಿಯೂ ಸಣ್ಣ ವ್ಯಾಪಾರ ಮಾಡುವವರಿಗೆ ಹೆಚ್ಚಿನ ಸ್ಮಾಲ್ ಬಿಸ್ ನೆಸ್ ಪೇಜ್ ಗಳನ್ನು ಮೊಬೈಲ್ ಮೂಲಕವೇ ರಚಿಸಿಕೊಳ್ಳಲು ಅನುವು ಮಾಡಿಕೊಡಲಿದೆ ಎನ್ನಲಾಗಿದೆ.
ಬಳಕೆದಾರರಿಗೆ ಸುಲಭವಾಗಿ ತಮ್ಮ ವ್ಯಾಪಾರದ ಬಗ್ಗೆ ಫೇಸ್ ಬುಕ್ ಮೂಲಕ ತಿಳಿಸಿಕೊಡಲು ಮೊಬೈಲ್ ಮೂಲಕವೇ ನಿರ್ವಹಿಸಬಹುದಾದ ಪೇಜ್ ಗಳನ್ನು ಓಪನ್ ಮಾಡಿಕೊಡಲಿದೆ. ಇದರಲ್ಲಿ ವ್ಯಾಪಾರ ಮಾಡುವವರಿಗೆ ಮತ್ತು ಖರೀದಿದಾರರಿಬ್ಬರಿಗೂ ಸಹಾಯವನ್ನು ಮಾಡಿಕೊಡಲಿದೆ. ಉದಾಹರಣೆಗೆ: ಓರ್ವ ಸಲೂನ್ ಇಟ್ಟಿರುವಾತ ತನ್ನ ಪೇಜ್ ಮೂಲಕವೇ ಗ್ರಾಹಕರಿಗೆ ಅಪಾಂಯಿಂಟ್ ಮೆಂಟ್ ಫಿಕ್ಸ್ ಮಾಡುವ ಮಾದರಿಯಲ್ಲಿ ಫೇಸ್ ಬುಕ್ ವಿನ್ಯಾಸವನ್ನು ಮಾಡಲಿದೆ ಎನ್ನಲಾಗಿದೆ.

ಇದಕ್ಕಾಗಿಯೇ ಪೇಜ್ ಮಾಡುವ ಸಂದರ್ಭದಲ್ಲಿ ಸಣ್ಣ ವ್ಯಾಪಾರಿಗಳಿಗೆ ದೊಡ್ಡ ಪ್ರಮಾಣದಲ್ಲಿ ಆಯ್ಕೆಗಳನ್ನು ನೀಡಲಿದೆ. ಇದರಿಂದಾಗಿ ಫೇಸ್ ಬುಕ್ ಮೂಲವೇ ತಮ್ಮ ವ್ಯಾಪಾರವನ್ನು ವೃದ್ಧಿಗೊಳಿಸಿಕೊಳ್ಳುವುದಲ್ಲದೇ, ಗ್ರಾಹಕರನ್ನು ದೊಡ್ಡ ಮಟ್ಟದಲ್ಲಿ ಸೆಳೆಯುವ ತಂತ್ರಗಾರಿಕೆಯನ್ನು ಇದರಲ್ಲಿ ತಿಳಿಸಿಕೊಡಲಿದೆ. ಖರೀದಿದಾರರು ಸಹ ತಮ್ಮ ಸುತ್ತಮುತ್ತಲಿರುವ ವ್ಯಾಪಾರಗಾರರೊಡನೆ ಫೇಸ್ ಬುಕ್ ಮೂಲಕವೇ ವ್ಯವಹರಿಸಲು ಸಹಾಯವು ಆಗಲಿದೆ.
ಇತ್ತೀಚೆಗೆ ಮೊಬೈಲ್ ಮೂಲವೇ ಫೇಸ್ ಬುಕ್ ಬಳಕೆ ಮಾಡುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಈ ಹಿನ್ನಲೆಯಲ್ಲಿ ಸಣ್ಣ ವ್ಯಾಪಾರಿಗಳು ಫೇಸ್ ಬುಕ್ ಆಪ್ ಮೂಲವೇ ಸುಲಭವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಫೇಸ್ ಬುಕ್ ಯೋಜನೆಯನ್ನು ರೂಪಿಸಿಕೊಂಡಿದೆ. ಇದರಿಂದಾಗಿ ಹಲವು ಮಂದಿಗೆ ಸಹಾಯವಾಗಲಿದೆ.
ಈಗಾಗಲೇ ಫೇಸ್ ಬುಕ್ ಮಾರ್ಕೆಟ್ ಪ್ಲೇಸ್ ಎನ್ನುವ ಆಯ್ಕಯೊಂದನ್ನು ನೀಡಿದ್ದು, ಇದರಲ್ಲಿ ಹಲವು ವಸ್ತುಗಳನ್ನು ಮಾರಾಟ ಮಾಡಲು ವೇದಿಕೆಯನ್ನು ಸೃಷ್ಠಿಸಿಕೊಟ್ಟಿದೆ. ಇದರಲ್ಲಿ ತನ್ನ ಮಧ್ಯಸ್ಥಿಕೆಯನ್ನು ವಹಿಸದೆ ಖರೀದಿಸುವವರಿಗೆ ಮತ್ತು ಮಾರುವವರಿಗೆ ನೇರಾ ನೇರಾ ಸಂಪರ್ಕವನ್ನು ಮಾಡಿಕೊಟ್ಟಿದೆ. ಇದೇ ಮಾದರಿಯಲ್ಲಿ ಹೊಸ ಮಾದರಿಯ ಪೇಜ್ ಸಹ ಕಾರ್ಯನಿರ್ವಹಿಸಲಿದೆ ಎನ್ನುವ ಮಾತು ಕೇಳಿ ಬಂದಿದೆ.
ಇದಲ್ಲದೇ ಇನ್ನು ಹಲವು ಹೊಸ ಆಯ್ಕೆಗಳನ್ನು ಫೇಸ್ ಬುಕ್ ಆಪ್ ನಲ್ಲಿ ಬಳಕೆದಾರರಿಗೆ ನೀಡುವ ಯೋಜನೆಯೊಂದು ಸಿದ್ಧವಾಗಿದ್ದು, ಫೇಸ್ ಬುಕ್ ಆಪ್ ವೊಂದು ಇದ್ದರೇ ಸಾಕು ಅದರಲ್ಲಿಯೇ ಎಲ್ಲಾ ಕಾರ್ಯಗಳು ಸಾಗಲಿದೆ ಎನ್ನುವ ಕಾಲವೂ ದೂರವಿಲ್ಲ.


Click it and Unblock the Notifications








