ರೈತರಿಂದ Jioಗೆ ಬಿಗ್ ಶಾಕ್! ಟ್ರೆಂಡ್ ಆಯ್ತು Jio ಸಿಮ್ ಬಾಯ್ಕಾಟ್ ಅಭಿಯಾನ!
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಕೃಷಿ ಕಾಯ್ದೆ ವಿರುದ್ದ ಸಿಡಿದೆದ್ದಿರುವ ರೈತ ಹೋರಾಟಗಾರರು ಇದೀಗ ಜಿಯೋ ಸಿಮ್ ಬಾಯ್ಕಾಟ್ ಮಾಡಿ ಅಭಿಯಾನ ಆರಂಬಿಸಿದ್ದಾರೆ. ಅಷ್ಟೇ ಅಲ್ಲ ಅಂಬಾನಿ ಹಾಗೂ ಅದಾನಿ ಸಂಸ್ಥೆಗಳ ಉತ್ಫನ್ನಗಳನ್ನ ಬಾಯ್ಕಾಟ್ ಮಾಡಿ ಅಭಿಯಾನಕ್ಕೆ ಸಾಕಷ್ಟು ಬೆಂಬಲ ವ್ಯಕ್ತವಾಗಿದ್ದು, ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ.

ಹೌದು, ಭಾರತ ಸರ್ಕಾರ ತಂದಿರುವ ಹೊಸ ಕೃಷಿ ಕಾಯ್ದೆ ವಿರುದ್ದ ರಾಷ್ಟ್ರವ್ಯಾಪಿ ರೈತ ಸಂಘಟನೆಗಳು ಹೋರಾಟ ನಡೆಸುತ್ತಿವೆ. ದೆಹಲಿಯ ಸಿಂಘು ಬಾರ್ಡರ್ ಬಳಿ ದೊಡ್ಡ ಮಟ್ಟದಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೇವಲ ಕಾರ್ಪೋರೇಟ್ ಸಂಸ್ಥೆಗಳ ಪರವಾಗಿ ಇದೆ. ರೈತರ ಪರವಾಗಿಲ್ಲ. ರೈತ ಪರ ಕಾಯ್ದೆಗಳನ್ನ ಜಾರಿಗೆ ತರದೆ ಕಾರ್ಪೋರೇಟ್ ಸಂಸ್ಥೆಗಳ ಹಿತ ಕಾಯುತ್ತಿದ್ದಾರೆ ಎಂದು ಆಪಾದಿಸಿರುವ ರೈತರು ಜಿಯೋ ಸಿಮ್ ಹಾಗೂ ರಿಲಾಯನ್ಸ್ ಜಿಯೋ ಸಂಸ್ಥೆಯ ಉತ್ಫನ್ನಗಳನ್ನ ಬಾಯ್ಕಾಟ್ ಮಾಡುವಂತೆ ಘೋಷಣೆ ಮಾಡಿದ್ದಾರೆ.

ಸದ್ಯ ಕೇಂದ್ರ ಸರ್ಕಾರದ ವಿರುದ್ದ ತಿರುಗಿ ಬಿದ್ದಿರುವ ರೈತರು, ಇದೀಗ ಜಿಯೋ ಸಿಮ್ ಬಾಯ್ಕಾಟ್ ಅಭಿಯಾನ ಆರಂಬಿಸಿದ್ದಾರೆ. ಇದು ಇದೀಗ ಟ್ವಿಟ್ಟರ್‌ನಲ್ಲಿ ಟ್ರೆಡಿಂಗ್ ಆಗಿದೆ. ರೈತ ಮುಖಂಡರು ಕೇಂದ್ರ ಸರ್ಕಾರ ನೀಡಿದ ಕೆಲವು ಸಮಜಾಯಿಷಿಗಳನ್ನ ಒಪ್ಪದೆ ತಿರಸ್ಕಾರ ಮಾಡಿದ್ದಾರೆ. ಅಲ್ಲದೆ ಜೈಪುರ-ದೆಹಲಿಯನ್ನು ನಿರ್ಬಂಧಿಸುವ ಮೂಲಕ ತಮ್ಮ ಆಂದೋಲನವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೆ ಅಂಬಾನಿ ಒಡೆತನದ ಸಂಸ್ಥೆಗಳು ಮತ್ತು ಸೇವೆಗಳನ್ನು ಬಹಿಷ್ಕರಿಸಲಾಗುವುದು ಹಾಗೂ ಜಿಯೋ ಸಿಮ್ ಕಾರ್ಡ್ ಅನ್ನು ಸಹ ಬಹಿಷ್ಕರಿಸುವುದಾಗಿ ಹೇಳಿದ್ದಾರೆ.

ಕಾರ್ಪೊರೇಟ್ ಸೆಕ್ಟರ್ ವಿರುದ್ಧ ಸಿಡಿದೆದ್ದಿರುವ ರೈತರು ಅಂಬಾನಿ ಒಡೆತನದ ರಿಲಯನ್ಸ್ ಜಿಯೋದಿಂದ ಬೇರೆ ನೆಟ್ವರ್ಕ್ಗೆ ಪೋರ್ಟ್ ಆಗುವ ಮೂಲಕ ಹೋರಾಟ ನಡೆಸುತ್ತಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗಾಗಲೇ ಜಿಯೋ ನೆಟ್‌ವರ್ಕ್‌ನಿಂದ ಅನ್ ಸಬ್‌ಸ್ಕ್ರೈಬ್ ಹೋರಾಟ ಶುರುವಾಗಿದೆ. ಜೊತೆಗೆ ರಿಲಾಯನ್ಸ್ ಮಾಲ್, ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಖರೀದಿಯ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ. ಇದಲ್ಲದೆ 5G ನೆಟ್‌ವರ್ಕ್ ಅನ್ನು ಬಿಎಸ್‌ಎನ್‌ಎಲ್ ಗೆ ನೀಡಿ ಜಿಯೋಗೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಬೆಂಗಳೂರಿನಲ್ಲೂ ಸಹ ವಿಧ್ಯಾರ್ಥಿಗಳು ರಿಲಾಯನ್ಸ್ ಜಿಯೋ ಸಿಮ್‌ಗಳನ್ನ ಪೋರ್ಟ್ ಮಾಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


Click it and Unblock the Notifications








