ಮೊದಲ ಬಾರಿಗೆ ಚಂದ್ರಯಾನ-2 ಉಪಗ್ರಹ ಮತ್ತು ಪ್ರಜ್ಞಾನ್ ರೋವರ್ ದರ್ಶನ!
ಮುಂದಿನ ವಾರ ಚಂದ್ರನಲ್ಲಿಗೆ ಜಿಗಿಯಲು ಸಿದ್ದವಾಗುತ್ತಿರುವ ಚಂದ್ರಯಾನ್-2 ಉಪಗ್ರಹ ಮತ್ತು ಅದು ಹೊತ್ತೊಯ್ಯಲಿರುವ ಪ್ರಜ್ಞಾನ್ ರೋವರ್ ಛಾಯಾಚಿತ್ರಗಳನ್ನು ಇಸ್ರೋ ಇದೀಗ ಬಿಡುಗಡೆ ಮಾಡಿದೆ. ಈ ಮೂಲಕ ದೇಶದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆ ಚಂದ್ರಯಾನ-2 ರೋವರ್ ಜೋಡಣೆಯ ಅಂತಿಮ ಕಾರ್ಯ ಭರದಿಂದ ಸಾಗಿದ್ದು, ವಿಶ್ವವೇ ಎದುರು ನೋಡುತ್ತಿರುವ ಉಡ್ಡಯನಕ್ಕೆ ಸಿದ್ಧಗೊಂಡಿರುವ ಚಂದ್ರಯಾನ 2 ಯೋಜನೆಯ ಚಿತ್ರಗಳು ವಿಜ್ಞಾನ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಹೌದು, ಅಂದಾಜು 1 ಸಾವಿರ ಕೋಟಿ ರೂ. ಮೊತ್ತದ ಯೋಜನೆಯ ಚಂದ್ರಯಾನ್-2 ಅಂತಿಮ ಹಂತಕ್ಕೆ ಬಂದಿದೆ. ಭಾರತದ ಅತ್ಯಂತ ಬಲಿಷ್ಠ ಉಡಾಹಕ ಎನಿಸಿಕೊಂಡಿರುವ ಜಿಎಸ್ಎಲ್ವಿ ಮಾರ್ಕ್ 3 ನೌಕೆಯು ಚಂದ್ರಯಾನ್-2 ಉಪಗ್ರಹ ಮತ್ತು ಪ್ರಜ್ಞಾನ್ ರೋವರ್ ಅನ್ನು ಹೊತ್ತೊಯ್ಯಲಿದೆ. ರೋವರ್ ಪ್ರಜ್ಞಾನ್ ಅಲ್ಲದೆ ವಿಕ್ರಂ ಎಂಬ ಹೆಸರಿನ ಲ್ಯಾಂಡರ್ ಸೇರಿ ಒಟ್ಟು 14 ವೈಜ್ಞಾನಿಕ ಪ್ರಯೋಗಗಳಿಗೆ ಅವಕಾಶ ಕಲ್ಪಿಸುವ ಸೂಟ್ ಅನ್ನು ಕೊಂಡೊಯ್ಯಲಿದೆ ಎಂದು ಈ ಮೊದಲೇ ಇಸ್ರೋ ಮಾಹಿತಿ ನೀಡಿದೆ.

ಇದರ ಒಟ್ಟಾರೆ ತೂಕ 3.8 ಟನ್ ಆಗಿದ್ದು, ರೋವರ್ ಪ್ರಜ್ಞಾನ್ 27 ಕೆ.ಜಿ. ಭಾರವಿದೆ. ಇನ್ನು ಲ್ಯಾಂಡರ್ ವಿಕ್ರಮ್ ಅನ್ನು ಆರ್ಬಿಟರ್ನ ಮೇಲ್ಭಾಗದಲ್ಲಿ ಇರಿಸಲಾಗಿದೆ. ಒಂದು ವರ್ಷದ ಅವಧಿಯಲ್ಲಿ ಚಂದ್ರಯಾನ-2 ಉಪಗ್ರಹದ ಒಳಭಾಗದಲ್ಲಿನ ಭಾರಿ ತಾಪಮಾನವನ್ನು ತಡೆದುಕೊಳ್ಳಲು ಅನುವಾಗುವಂತೆ ಚಿನ್ನದ ಫಿಲಂನಲ್ಲಿ ಇದನ್ನು ಸುತ್ತಿರಿಸಲಾಗಿದೆ. ಆರು ಗಾಲಿಗಳನ್ನು ಹೊಂದಿರುವ ಇದು ಇದುವರೆಗೂ ಯಾರೊಬ್ಬರೂ ಅನ್ವೇಷಿಸದಿರುವ ಚಂದ್ರನ ದಕ್ಷಿಣ ಧ್ರುವದಲ್ಲಿ ಅನ್ವೇಷಣೆ ಕಾರ್ಯ ನಡೆಸಲಿದೆ.

ಚಂದ್ರನ ಮೇಲ್ಮೈನ ಚಿತ್ರವನ್ನು ಸರೆಹಿಡಿಯಲಿರುವ ಆರ್ಬಿಟರ್ ಚಂದ್ರನ ಅಂಗಳದಲ್ಲಿರುವ ಖನಿಜ ಸಂಪತ್ತನ್ನು ಆಮೂಲಾಗ್ರವಾಗಿ ಪರಿಶೀಲಿಸಲಿದೆ. ಲ್ಯಾಂಡರ್ನಲ್ಲಿ ವ್ಯವಸ್ಥೆಗೊಳಿಸಲಾಗಿರುವ ರ್ಯಾಂಪ್ ಅನ್ನು ಬಳಸಿಕೊಂಡು ಚಂದ್ರನ ಅಂಗಳಕ್ಕೆ ರೋವರ್ ಇಳಿಯಲಿದೆ. ಒಟ್ಟು 1,471 ಕೆ.ಜಿ. ಭಾರವಿರುವ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಉಂಟಾಗುವ ಕಂಪನಗಳು ಮತ್ತು ಅಲ್ಲಿನ ತಾಪಮಾನ ಕುರಿತು ಅಧ್ಯಯನ ನಡೆಯಲಿದೆ. ಚಂದ್ರ ಮಣ್ಣಿನ ವಿಶ್ಲೇಷಣೆ ನಡೆಸಲು ಅನುವಾಗುವಂತೆ ಪ್ರಜ್ಞಾನ್ನಲ್ಲಿ ಕ್ಯಾಮರಾಗಳು ಮತ್ತು ಉಪಕರಣಗಳನ್ನು ವ್ಯವಸ್ಥೆ ಮಾಡಲಾಗಿದೆ.
ಇನ್ನು ಲ್ಯಾಂಡರ್ನ ಒಳಭಾಗದಲ್ಲಿ ರೋವರ್ ಪ್ರಜ್ಞಾನ್ ಅನ್ನು ಇರಿಸಲಾಗಿದ್ದು, ಇದೊಂದು ರೋಬಾಟಿಕ್ ಯೋಜನೆಯಾಗಿದ್ದು, ಇದರಲ್ಲಿ ಬಾಹ್ಯಾಕಾಶಯಾನಿಗಳು ಪ್ರಯಾಣಿಸುವುದಿಲ್ಲ. 10 ವರ್ಷಗಳ ನಂತರ ಎರಡನೇ ಬಾರಿಗೆ ಭಾರತ ಚಂದ್ರಯಾನ ಯೋಜನೆಯನ್ನು ಕೈಗೆತ್ತಿಕೊಂಡಿದೆ. 2009ರಲ್ಲಿ ಇಸ್ರೋ ಚಂದ್ರಯಾನ 1 ಯೋಜನೆ ಕೈಗೊಂಡಿತ್ತು. ಆದರೆ ರೋವರ್ ಅನ್ನು ಈ ಯೋಜನೆಯಲ್ಲಿ ಸೇರಿಸಿರಲಿಲ್ಲ. ಆರ್ಬಿಟರ್ ಮತ್ತು ಇಂಪ್ಯಾಕ್ಟರ್ ಗಳು ಚಂದ್ರಯಾನ 1ರ ಭಾಗವಾಗಿದ್ದವು. ಇಂಪ್ಯಾಕ್ಟರ್ ಚಂದ್ರನ ಮೇಲ್ಮೈನ ದಕ್ಷಿಣ ಭಾಗದಲ್ಲಿ ಪತನವಾಗಿತ್ತು.


Click it and Unblock the Notifications