ಫ್ಲಿಪ್‌ಕಾರ್ಟ್ ಬ್ಲಾಕ್ vs ಅಮೆಜಾನ್ ಪ್ರೈಮ್: ಯಾವುದು ಬೆಸ್ಟ್?..ಸಂಪೂರ್ಣ ವಿವರ!
ಭಾರತದಲ್ಲಿ ಇ-ಕಾಮರ್ಸ್ ಕ್ಷೇತ್ರವು ನಿರಂತರವಾಗಿ ಬೆಳೆಯುತ್ತಿದ್ದು, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂತಹ ಪ್ರಮುಖ ಕಂಪನಿಗಳ ನಡುವಿನ ಸ್ಪರ್ಧೆಯೂ ತೀವ್ರವಾಗಿದೆ. ಈ ಸ್ಪರ್ಧೆಯಲ್ಲಿ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಎರಡೂ ಕಂಪನಿಗಳು ವಿಶಿಷ್ಟ ಸದಸ್ಯತ್ವ ಕಾರ್ಯಕ್ರಮಗಳನ್ನು ಪರಿಚಯಿಸಿವೆ. ಇತ್ತೀಚಿಗೆ, ಅಮೆಜಾನ್ ಪ್ರೈಮ್‌ಗೆ ನೇರ ಪ್ರತಿಸ್ಪರ್ಧಿಯಾಗಿ ಫ್ಲಿಪ್‌ಕಾರ್ಟ್ ತನ್ನ ಹೊಸ 'ಬ್ಲ್ಯಾಕ್ ಸದಸ್ಯತ್ವ' ಕಾರ್ಯಕ್ರಮವನ್ನು ಘೋಷಿಸಿದೆ.
ಈ ಎರಡೂ ಚಂದಾದಾರಿಕೆ ಯೋಜನೆಗಳು ಶಾಪಿಂಗ್ ಮಾತ್ರವಲ್ಲದೆ, ಗ್ರಾಹಕರಿಗೆ ಭರಪೂರ ಮನರಂಜನೆ ಮತ್ತು ಇತರ ಸೇವೆಗಳನ್ನೂ ಒಳಗೊಂಡಿವೆ. ಹಾಗಾದರೆ, ಅಮೆಜಾನ್ ಪ್ರೈಮ್ ಮತ್ತು ಫ್ಲಿಪ್‌ಕಾರ್ಟ್ ಬ್ಲ್ಯಾಕ್ ಎರಡೂ ಚಂದಾದಾರಿಕೆಗಳು ಹೇಗಿವೆ?, ಈ ಯೋಜನೆಗಳಿಂದ ದೊರೆಯುವ ಲಾಭಗಳು ಯಾವುವು ಮತ್ತು ಯಾವ ಯೋಜನೆ ನಿಮಗೆ ಸೂಕ್ತ ಆಯ್ಕೆಯಾಗಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ಸವಿಸ್ತಾರವಾಗಿ ನೋಡೋಣ ಬನ್ನಿ.
ಫ್ಲಿಪ್‌ಕಾರ್ಟ್ ಬ್ಲ್ಯಾಕ್ ಚಂದಾದಾರಿಕೆ
ಫ್ಲಿಪ್‌ಕಾರ್ಟ್ ಬ್ಲ್ಯಾಕ್ ಸದಸ್ಯತ್ವವು ಶಾಪಿಂಗ್ ಜೊತೆಗೆ ಪ್ರಯಾಣ ಮತ್ತು ಮನರಂಜನೆಯ ಲಾಭಗಳನ್ನು ನೀಡುತ್ತದೆ. ಇದರ ವಾರ್ಷಿಕ ಶುಲ್ಕ ₹1,499. ಆದರೆ, ಪರಿಚಯಾತ್ಮಕ ಆಫರ್ ಆಗಿ ಇದನ್ನು ₹990ಕ್ಕೆ ಪಡೆಯಬಹುದು. ಈ ಸದಸ್ಯತ್ವವು ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ. ಇದರ ಪ್ರಮುಖ ಪ್ರಯೋಜನಗಳಲ್ಲಿ ಯೂಟ್ಯೂಬ್ ಪ್ರೀಮಿಯಂ ಉಚಿತವಾಗಿ ಸಿಗುವುದು ಕೂಡ ಒಂದು. ₹1,490 ಮೌಲ್ಯದ ಈ ಸೇವೆಯಿಂದ ಜಾಹೀರಾತುಗಳಿಲ್ಲದೆ ವೀಡಿಯೊಗಳನ್ನು ವೀಕ್ಷಿಸಬಹುದು, ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಬ್ಯಾಕ್‌ಗ್ರೌಂಡ್‌ನಲ್ಲಿ ಪ್ಲೇ ಮಾಡಬಹುದು. ಇದು ಯೂಟ್ಯೂಬ್ ಮ್ಯೂಸಿಕ್ ಮತ್ತು ಕಿಡ್ಸ್ ಪ್ರೀಮಿಯಂ ಅನ್ನು ಸಹ ಒಳಗೊಂಡಿದೆ.

ಇದರ ಜೊತೆಗೆ, ಬ್ಲ್ಯಾಕ್ ಸದಸ್ಯರು ಫ್ಲಿಪ್‌ಕಾರ್ಟ್‌ನ ಪ್ರಮುಖ ಸೇಲ್ ಸಮಯಗಳಲ್ಲಿ, ಅದರಲ್ಲೂ ವಿಶೇಷವಾಗಿ 'ಬಿಗ್ ಬಿಲಿಯನ್ ಡೇಸ್' ಸೇಲ್‌ನಲ್ಲಿ ಬೇರೆಯವರಿಗಿಂತ ಮೊದಲು ಡೀಲ್‌ಗಳನ್ನು ಪ್ರವೇಶಿಸಬಹುದು. ಸೂಪರ್‌ಕಾಯಿನ್‌ಗಳನ್ನು ಬಳಸಿಕೊಂಡು ಪ್ರತಿ ಆರ್ಡರ್‌ನಲ್ಲಿ ಹೆಚ್ಚುವರಿ 5% ರಿಯಾಯಿತಿ ಪಡೆಯಬಹುದು (ಗರಿಷ್ಠ ₹1,000 ವರೆಗೆ). ಮುಖ್ಯ ಸೇಲ್ ಸಮಯದಲ್ಲಿ ಬ್ಯಾಂಕ್ ಕಾರ್ಡ್‌ಗಳ ಮೇಲೆ 15% ತನಕ ಇನ್‌ಸ್ಟಂಟ್ ಡಿಸ್ಕೌಂಟ್ ಮತ್ತು ಕೇವಲ ₹1ಕ್ಕೆ ವಿಮಾನ ಟಿಕೆಟ್ ರದ್ದು ಅಥವಾ ಮರು ನಿಗದಿಪಡಿಸುವ ಸೌಲಭ್ಯವೂ ಲಭ್ಯ. ಇವೆಲ್ಲದರ ಜೊತೆಗೆ, ವೇಗವಾಗಿ ಸ್ಪಂದಿಸುವ ಪ್ರಥಮ ದರ್ಜೆ ಗ್ರಾಹಕ ಸೇವಾ ಬೆಂಬಲವೂ ಸಿಗುತ್ತದೆ.
ಅಮೆಜಾನ್ ಪ್ರೈಮ್ ಚಂದಾದಾರಿಕೆ
ಭಾರತದಲ್ಲಿ ಈಗಾಗಲೇ ಬೃಹತ್ ಬಳಕೆದಾರರ ನೆಲೆಯನ್ನು ಹೊಂದಿರುವ ಅಮೆಜಾನ್ ಪ್ರೈಮ್, ಖರೀದಿ, ಮನರಂಜನೆ ಮತ್ತು ವೇಗದ ವಿತರಣೆಗೆ ಹೆಸರುವಾಸಿಯಾಗಿದೆ. ಇದರ ವಾರ್ಷಿಕ ಸದಸ್ಯತ್ವ ಶುಲ್ಕ ₹1,499. ಇದಲ್ಲದೆ, ಬಳಕೆದಾರರಿಗೆ ಹೆಚ್ಚು ಹೊಂದಿಕೊಳ್ಳುವ ಆಯ್ಕೆಯಾಗಿ ತಿಂಗಳ ಸದಸ್ಯತ್ವ ಪ್ಲಾನ್ ಕೂಡ ಲಭ್ಯವಿದ್ದು, ಇದರ ಶುಲ್ಕ ₹299. ಪ್ರೈಮ್‌ನ ಅತಿ ದೊಡ್ಡ ಆಕರ್ಷಣೆ ಎಂದರೆ ಉಚಿತ ಮತ್ತು ವೇಗದ ವಿತರಣೆ ಸೇವೆಗಳು. ಇದು ಗ್ರಾಹಕರಿಗೆ ಒಂದು ದಿನದೊಳಗೆ ಅಥವಾ ಒಂದೇ ದಿನದಲ್ಲಿ ಉತ್ಪನ್ನಗಳನ್ನು ತಲುಪಿಸುವ ಆಯ್ಕೆಗಳನ್ನು ನೀಡುತ್ತದೆ.

ಮನರಂಜನೆಯ ವಿಷಯದಲ್ಲಿ, ಪ್ರೈಮ್ ವಿಡಿಯೋ, ಪ್ರೈಮ್ ಮ್ಯೂಸಿಕ್, ಪ್ರೈಮ್ ರೀಡಿಂಗ್ ಮತ್ತು ಪ್ರೈಮ್ ಗೇಮಿಂಗ್ ಸೇವೆಗಳನ್ನು ಒಂದೇ ಪ್ಯಾಕೇಜ್‌ನಲ್ಲಿ ನೀಡುತ್ತದೆ. ಪ್ರೈಮ್ ವಿಡಿಯೋ ಮೂಲಕ ಸಿನಿಮಾ ಮತ್ತು ವೆಬ್ ಸೀರೀಸ್‌ಗಳನ್ನು ಐದು ಡಿವೈಸ್‌ಗಳಲ್ಲಿ ನೋಡಬಹುದು. ಪ್ರೈಮ್ ಮ್ಯೂಸಿಕ್ ಜಾಹೀರಾತು ರಹಿತ ಸಂಗೀತ ಆಲಿಸುವ ಅನುಭವ ನೀಡುತ್ತದೆ. ಪ್ರೈಮ್ ರೀಡಿಂಗ್‌ನಲ್ಲಿ ಸಾವಿರಾರು ಇ-ಪುಸ್ತಕಗಳನ್ನು ಓದಬಹುದು. ಇದಲ್ಲದೆ, ಪ್ರೈಮ್ ಶಾಪಿಂಗ್‌ನಲ್ಲಿ ಸದಸ್ಯರಿಗೆ ವಿಶೇಷ ರಿಯಾಯಿತಿಗಳು ಮತ್ತು ಬ್ಯಾಂಕ್ ಕಾರ್ಡ್‌ಗಳ ಮೇಲೆ 5% ವರೆಗೆ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಸಹ ಲಭ್ಯ.
ಸರಿಯಾದ ಆಯ್ಕೆ ಯಾವುದು?
ಈ ಎರಡೂ ಚಂದಾದಾರಿಕೆ ಯೋಜನೆಗಳು ವಿಭಿನ್ನ ಆಸಕ್ತಿ ಮತ್ತು ಅಗತ್ಯಗಳನ್ನು ಹೊಂದಿರುವ ಗ್ರಾಹಕರಿಗೆ ವಿಭಿನ್ನ ಲಾಭಗಳನ್ನು ಒದಗಿಸುತ್ತವೆ. ನೀವು ಹೆಚ್ಚಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡುವವರಾಗಿದ್ದು, ಯೂಟ್ಯೂಬ್ ಪ್ರೀಮಿಯಂನಂತಹ ಸೇವೆಗಳು ನಿಮಗೆ ಮುಖ್ಯವಾಗಿದ್ದರೆ, ಫ್ಲಿಪ್‌ಕಾರ್ಟ್ ಬ್ಲ್ಯಾಕ್ ಉತ್ತಮ ಆಯ್ಕೆಯಾಗಿದೆ. ಮತ್ತೊಂದೆಡೆ, ನೀವು ನಿಯಮಿತವಾಗಿ ಅಮೆಜಾನ್‌ನಲ್ಲಿ ಶಾಪಿಂಗ್ ಮಾಡುವುದರ ಜೊತೆಗೆ, ಸಿನಿಮಾಗಳು, ಸಂಗೀತ, ಮತ್ತು ಇ-ಪುಸ್ತಕಗಳಲ್ಲಿ ಆಸಕ್ತಿ ಹೊಂದಿದ್ದರೆ, ಅಮೆಜಾನ್ ಪ್ರೈಮ್ ನಿಮಗೆ ಸೂಕ್ತ. ಪ್ರೈಮ್‌ನಲ್ಲಿ ತಿಂಗಳ ಸದಸ್ಯತ್ವದ ಆಯ್ಕೆ ಇರುವುದು ಹೆಚ್ಚಿನ ಗ್ರಾಹಕರಿಗೆ ಅನುಕೂಲಕರವಾಗಿದೆ.
ಒಟ್ಟಾರೆಯಾಗಿ, ನಿಮ್ಮ ವೈಯಕ್ತಿಕ ಶಾಪಿಂಗ್ ಮತ್ತು ಮನರಂಜನೆಯ ಅಗತ್ಯತೆಗಳನ್ನು ಪರಿಶೀಲಿಸಿ, ನಿಮಗೆ ಹೆಚ್ಚು ಉಪಯುಕ್ತವಾದ ಸದಸ್ಯತ್ವವನ್ನು ಆರಿಸುವುದು ವಿವೇಚನೆಯ ಆಯ್ಕೆಯಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








