ನೆಟ್‌ಫ್ಲಿಕ್ಸ್, ಅಮೆಜಾನ್ ಹಣಿಯಲು ಫ್ಲಿಪ್‌ಕಾರ್ಟ್‌ನಿಂದ ಹೊಸ ಅಸ್ತ್ರ..!
ವಿಡಿಯೋ ಸ್ಟ್ರೀಮಿಂಗ್ ತಾಣಗಳಾದ ನೆಟ್‌ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಂನಲ್ಲಿ ವೆಬ್ ಸರಣಿಗಳಿಗೆ ವ್ಯಾಪಕ ಯಶಸ್ಸು ದೊರೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಆನ್‌ಲೈನ್ ವಿಡಿಯೋ ಸ್ಟ್ರೀಮಿಂಗ್ ಉದ್ಯಮಕ್ಕೆ ಬರಲು ನಿರ್ಧರಿಸಿದೆ. ಇತ್ತೀಚೆಗೆ ತಾನೆ ಅಮೆಜಾನ್ ಪ್ರೈಮ್‌ನಂತೆ ಫ್ಲಿಪ್‌ಕಾರ್ಟ್ ಪ್ಲಸ್ ಆರಂಭಿಸಿದ್ದ ಫ್ಲಿಪ್‌ಕಾರ್ಟ್ ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ.

ಹೌದು, ಸೋಮವಾರ ವರದಿಯಾಗಿರುವಂತೆ ವಾಲ್‌ಮಾರ್ಟ್ ಒಡೆತನದಲ್ಲಿರುವ ಫ್ಲಿಪ್‌ಕಾರ್ಟ್ ಸ್ಟಾರ್ ಇಂಡಿಯಾದ ವಿಡಿಯೋ ಸ್ಟ್ರೀಮಿಂಗ್ ಸರ್ವಿಸ್ ಹಾಟ್‌ಸ್ಟಾರ್ ಜತೆಗೂಡಿ ವೆಬ್ ಸಿರೀಸ್‌ಗಳನ್ನು ಹಾಗೂ ವಿಡಿಯೋ ಸೇವೆಗಳನ್ನು ನೀಡಲು ಮುಂದಾಗಿದೆ. ಆದರೆ, ಹಾಟ್‌ಸ್ಟಾರ್ ಯಾವುದನ್ನು ಖಚಿತ ಪಡಿಸಿಲ್ಲ. ಇತ್ತೀಚೆಗೆ ತಾನೇ ಭಾರತದಲ್ಲಿ "Sacred Games" ಮತ್ತು "Breathe"ನಂತಹ ವೆಬ್ ಸಿರೀಸ್‌ಗಳು ಯಶಸ್ಸನ್ನು ಪಡೆಯುತ್ತಿರುವುದರಿಂದ ಫ್ಲಿಪ್‌ಕಾರ್ಟ್ ತನ್ನದೊಂದು ವಿಡಿಯೋ ಪ್ಲಾಟ್‌ಫಾರ್ಮ್‌ನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ.

ಹಾಟ್‌ಸ್ಟಾರ್ ಹೆಚ್ಚು ಜನಪ್ರಿಯ
Twenty-First Century Foxರವರ ಸ್ಟಾರ್ ಇಂಡಿಯಾ ಒಡೆತನದ ಹಾಟ್‌ಸ್ಟಾರ್ ಭಾರತದಲ್ಲಿ 2015ರಲ್ಲಿ ಪ್ರಾರಂಭವಾಯಿತು. ಪ್ರಾರಂಭವಾದ ಮೂರು ವರ್ಷದಲ್ಲಿ ಹಾಟ್‌ಸ್ಟಾರ್ ದೇಶದಲ್ಲಿ ಬಹಳ ಜನಪ್ರಿಯತೆಯನ್ನು ಗಳಿಸಿದೆ. ನೆಟ್‌ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಮ್ ವಿಡಿಯೋಗಳು ಕೂಡ ಎರಡು ವರ್ಷದ ಹಿಂದೆ ಭಾರತವನ್ನು ಪ್ರವೇಶಿಸಿದ್ದರೂ, ಹಾಟ್‌ಸ್ಟಾರ್ ಬಹಳಷ್ಟು ವೀಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

ಸ್ಟಾರ್ ನೆಟ್‌ವರ್ಕ್
ಹಾಟ್‌ಸ್ಟಾರ್ ಭಾರತದಲ್ಲಿ ದೊಡ್ಡ ಜನಸಮೂಹವನ್ನು ತಲುಪಲು ಪ್ರಮುಖ ಕಾರಣಕರ್ತ ಎಂದರೆ ಸ್ಟಾರ್ ನೆಟ್‌ವರ್ಕ್ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ತನ್ನದೇ ಆದ ಬಲಿಷ್ಟ ನೆಟ್‌ವರ್ಕ್ ಸ್ಥಾಪಿಸಿಕೊಂಡಿದೆ. ಮಾರುಕಟ್ಟೆ ತಂತ್ರಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದೆ. ಹಾಟ್‌ಸ್ಟಾರ್ ಯಶಸ್ಸನ್ನು ಗಮನದಲ್ಲಿಟ್ಟುಕೊಂಡು ವಯಾಕಾಮ್ 18 ನೆಟ್‌ವರ್ಕ್ ವೂಟ್, ಜಿ ಟೆಲಿವಿಷನ್ ನೆಟ್‌ವರ್ಕ್ OZee5 ಹಾಗೂ ಸನ್ ನೆಟ್‌ವರ್ಕ್ ತಮ್ಮದೇ ಆದ ವಿಡಿಯೋ ಪ್ಲಾಟ್‌ಫಾರ್ಮ್‌ಗಳನ್ನು ಸೃಷ್ಟಿಸಿಕೊಂಡಿವೆ.

ಉಚಿತ ಹಾಟ್‌ಸ್ಟಾರ್
ಹಾಟ್‌ಸ್ಟಾರ್‌ನಲ್ಲಿ ಪ್ರೀಮಿಯಮ್ ಕಂಟೆಂಟ್‌ಗಳಿಗಿಂತ ಉಚಿತ ಕಂಟೆಂಟ್‌ಗಳು ಹೆಚ್ಚಿವೆ. ಆದ್ದರಿಂದ ಇದು ಜನರಿಗೆ ಹತ್ತಿರವಾಗಿದೆ. ಆದರೂ, HBOನಲ್ಲಿ ಪ್ರಸಾರವಾಗು "Game of Thrones" ಹಾಗೂ IPL ಟೂರ್ನಿಗಳಂತಹ ಪ್ರೀಮಿಯಂ ಕಂಟೆಂಟ್‌ಗಳನ್ನು ವೀಕ್ಷಿಸಲು ವಾರ್ಷಿಕ ಚಂದಾದಾರರಾಗಬೇಕು. ವಾರ್ಷಿಕ ಚಂದಾದಾರಿಕೆ ಮೌಲ್ಯ 999 ರೂ. ಆಗಿದೆ. ಪ್ರೀಮಿಯಂ ಬೇಡ ಎಂದರೂ ಸ್ಟಾರ್ ನೆಟ್‌ವರ್ಕ್‌ನ ಹಲವು ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.

ಹಾಟ್‌ಸ್ಟಾರ್‌ನಿಂದ ನಕಾರ
ನೆಟ್‌ಫ್ಲಿಕ್ಸ್ ಹಾಗೂ ಅಮೇಜಾನ್ ಪ್ರೈಂ ವಿಡಿಯೋದಂತೆ ವಿಡಿಯೋ ಕಂಟೆಂಟ್ ಪ್ಲಾಟ್‌ಫಾರ್ಮ್ ಸೃಷ್ಟಿಸಲು ಫ್ಲಿಪ್‌ಕಾರ್ಟ್ ಯಾವುದೇ ಮಾತುಕತೆಯನ್ನು ಪ್ರಾರಂಭಿಸಿಲ್ಲ ಎಂದು ಹಾಟ್‌ಸ್ಟಾರ್ ಮೂಲಗಳು ತಿಳಿಸಿವೆ. ಆದರೆ, ಭಾರತದಲ್ಲಿ ಇಂಟರ್‌ನೆಟ್ ಎಕೋ ಸಿಸ್ಟಮ್‌ನ್ನು ಅಭಿವೃದ್ಧಿಪಡಿಸಲು ಪಾಲುದಾರಿಕೆಯನ್ನು ಹೊಂದಲು ಸಿದ್ಧರಿದ್ದೇವೆ ಎಂದು ಹೇಳಿರುವುದು, ಹೊಸ ವಿಡಿಯೋ ಕಂಟೆಂಟ್ ವೇದಿಕೆ ಪ್ರಾರಂಭವಾಗುವುದನ್ನು ಖಚಿತಪಡಿಸಿವೆ.

ಫ್ಲಿಪ್‌ಕಾರ್ಟ್‌ನಿಂದಲೂ ಉತ್ತರವಿಲ್ಲ
ಹೊಸ ವಿಡಿಯೋ ಕಂಟೆಂಟ್ ವೇದಿಕೆಯನ್ನು ಪ್ರಾರಂಭಿಸಲು ಫ್ಲಿಪ್‌ಕಾರ್ಟ್ ಹಾಟ್‌ಸ್ಟಾರ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವ ಕುರಿತು ವಿಚಾರಿಸಿದರೆ ಫ್ಲಿಪ್‌ಕಾರ್ಟ್ ಸದ್ಯ ಯಾವುದೇ ಉತ್ತರವನ್ನು ನೀಡದೆ ನುಣುಚಿಕೊಂಡಿದೆ. ಈ ಪ್ರಕ್ರಿಯೆಯನ್ನು ಗಮನಿಸಿದರೆ ರಹಸ್ಯವಾಗಿಯೇ ಇಂಟರ್‌ನೆಟ್ ಲೋಕಕ್ಕೆ ಸರ್‌ಪ್ರೈಸ್ ಕೊಡಲು ಎರಡು ಸಂಸ್ಥೆಗಳು ಸಿದ್ಧವಾಗಿರುವುದು ಗೋಚರವಾಗುತ್ತದೆ.

ಹೀಗಾಗಲೇ ಒಪ್ಪಂದ
ಹಾಟ್‌ಸ್ಟಾರ್ ಮತ್ತು ಫ್ಲಿಪ್‌ಕಾರ್ಟ್ ಹೀಗಾಗಲೇ ಟೈ ಅಪ್ ಆಗಿದ್ದು, ಜುಲೈನಿಂದ ಫ್ಲಿಪ್‌ಕಾರ್ಟ್ ಜಾಹೀರಾತುಗಳನ್ನು ಹಾಟ್‌ಸ್ಟಾರ್‌ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಅದಲ್ಲದೇ ಹೊಸದಾಗಿ ಪ್ರಾರಂಭವಾಗಿರುವ ಫ್ಲಿಪ್‌ಕಾರ್ಟ್ ಪ್ಲಸ್‌ನ ಇಂಟರ್‌ನೆಟ್ ಪಾಲುದಾರರಲ್ಲಿ ಹಾಟ್‌ಸ್ಟಾರ್ ಕೂಡ ಒಂದಾಗಿದೆ. ಈ ಮೂಲಕ ಅಮೆಜಾನ್ ಪ್ರೈಂಗೆ ಟಾಂಗ್ ನೀಡಲು ಫ್ಲಿಪ್‌ಕಾರ್ಟ್ ಮುಂದಾಗಿದೆ.

ಅಮೆಜಾನ್‌ಗೆ ಬಿಗ್ ಸ್ಪರ್ಧೆ
ಫ್ಲಿಪ್‌ಕಾರ್ಟ್‌ನಲ್ಲಿನ ಶೇ.77 ರಷ್ಟು ಷೇರುಗಳನ್ನು 16 ಬಿಲಿಯನ್ ಡಾಲರ್‌ಗೆ ಖರೀದಿಸಿರುವ ಯುಎಸ್‌ನ ರಿಟೇಲ್ ದಿಗ್ಗಜ ವಾಲ್‌ಮಾರ್ಟ್ ಅಮೆಜಾನ್‌ನ್ನು ಪ್ರಮುಖ ಮಾರುಕಟ್ಟೆಯಿಂದ ದೂರಕ್ಕೆ ಸರಿಸಲು ಬಹಳಷ್ಟು ಯೋಜನೆಗಳನ್ನು ಪ್ರಾರಂಭಿಸುತ್ತಿದೆ. ಫ್ಲಿಪ್‌ಕಾರ್ಟ್‌ನ ಫ್ಯಾಷನ್ ಯುನಿಟ್‌ಗಳಾದ Myntra ಮತ್ತು Jabong ಕೂಡ ಅಮೆಜಾನ್ ಹಣಿಯಲು ಸಾಕಷ್ಟು ಪ್ರಯತ್ನ ನಡೆಸುತ್ತಿವೆ.


Click it and Unblock the Notifications








