Flipkart Black: ಒಂದು ವರ್ಷ ಯೂಟ್ಯೂಬ್ ಪ್ರೀಮಿಯಂ ಉಚಿತ ಸಿಗುತ್ತಿದೆ ನೋಡಿ!
ಭಾರತದ ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಪೈಕಿ ಮುಂಚೂಣಿಯಲ್ಲಿರುವ ಫ್ಲಿಪ್‌ಕಾರ್ಟ್ (Flipkart) ತನ್ನ ಹೊಸ ಪ್ರೀಮಿಯಂ ಚಂದಾದಾರಿಕೆಯನ್ನು ಘೋಷಿಸಿದೆ. ಅಮೆಜಾನ್ ಪ್ರೈಮ್‌ನಂತಹ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸ್ಪರ್ಧಿಸುವಂತಹ ಹೊಸ ಚಂದಾದಾರಿಕೆಯ ಯೋಜನೆ ಇದಾಗಿದ್ದು, 'ಫ್ಲಿಪ್‌ಕಾರ್ಟ್ ಬ್ಲಾಕ್' (Flipkart Black) ಎಂದು ಹೆಸರಿಸಲಾಗಿದೆ. ಈ ಹೊಸ ಚಂದಾದಾರಿಕೆಯ ಯೋಜನೆಯನ್ನು ಬಳಕೆದಾರರಿಗೆ ಹೆಚ್ಚು ಆಕರ್ಷಕ ಪ್ರಯೋಜನಗಳನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದ್ದು, ಈ ಕುರಿತ ಸಂಪೂರ್ಣ ಮಾಹತಿಯನ್ನು ನೋಡೋಣ ಬನ್ನಿ.
ಫ್ಲಿಪ್‌ಕಾರ್ಟ್ ಬ್ಲಾಕ್: ಪ್ರಯೋಜನಗಳು
ಬಹುಶಃ, ನೀವು ತಿಳಿದಿರಬಹುದು. ಫ್ಲಿಪ್‌ಕಾರ್ಟ್ ಈಗಾಗಲೇ ವಿಐಪಿ ಸದಸ್ಯತ್ವವನ್ನು ನೀಡುತ್ತಿದೆ. ಈ ಹೊಸ ಬ್ಲಾಕ್ ಯೋಜನೆ ಇದನ್ನು ಮೀರಿಸುವ ಪ್ರೀಮಿಯಂ ಸೇವೆಗಳನ್ನು ನೀಡುತ್ತದೆ. ಈ ಯೋಜನೆಯ ಪ್ರಮುಖ ಪ್ರಯೋಜನಗಳೆಂದರೆ, ಫ್ಲಿಪ್‌ಕಾರ್ಟ್ ಸೇಲ್‌ಗಳಿಗೆ ಆರಂಭಿಕ ಪ್ರವೇಶ, ವಿಶೇಷ ರಿಯಾಯಿತಿ ಮತ್ತು 24x7 ಆದ್ಯತೆಯ ಗ್ರಾಹಕ ಬೆಂಬಲಗಳು ದೊರೆಯುತ್ತವೆ. ಇಷ್ಟೇ ಅಲ್ಲದೆ, ಫ್ಲಿಪ್‌ಕಾರ್ಟ್ ಮಿನಿಟ್ಸ್‌ನಲ್ಲಿನ ಪ್ರತಿ ಖರೀದಿಯ ಮೇಲೆ ₹100 ವರೆಗೆ ಶೇಕಡ 5 ಸೂಪರ್‌ಕಾಯಿನ್ಸ್ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಜೊತೆಗೆ ಯೂಟ್ಯೂಬ್ ಪ್ರೀಮಿಯಂ ವಾರ್ಷಿಕ ಚಂದಾದಾರಿಕೆಯು ಉಚಿತವಾಗಿದೆ.!
ಹೌದು, ಫ್ಲಿಪ್‌ಕಾರ್ಟ್ ಬ್ಲಾಕ್ ಚಂದಾದಾರಿಕೆಯು ಯೂಟ್ಯೂಬ್ ಪ್ರೀಮಿಯಂ ವಾರ್ಷಿಕ ಚಂದಾದಾರಿಕೆಯೊಂದಿಗೆ ಲಭ್ಯವಿದೆ. ಯೂಟ್ಯೂಬ್ ಪ್ರೀಮಿಯಂನ ವಾರ್ಷಿಕ ಚಂದಾದಾರಿಕೆ ಸಾಮಾನ್ಯವಾಗಿ ₹1,490 ಆಗಿದ್ದು, ಫ್ಲಿಪ್‌ಕಾರ್ಟ್ ಬ್ಲಾಕ್ ಯೋಜನೆಯಲ್ಲಿ ಇದು ಉಚಿತವಾಗಿ ಸಿಗುತ್ತದೆ. ಇದು ಬಳಕೆದಾರರಿಗೆ ಜಾಹೀರಾತು-ಮುಕ್ತ ಯೂಟ್ಯೂಬ್ ವೀಕ್ಷಣೆಯ ಅನುಭವವನ್ನು ಒದಗಿಸುತ್ತದೆ. ಈ ಕೊಡುಗೆ ಫ್ಲಿಪ್‌ಕಾರ್ಟ್ ಬ್ಲಾಕ್ ಚಂದಾದಾರಿಕೆಗೆ ಹೆಚ್ಚಿನ ಮೌಲ್ಯವನ್ನು ತಂದುಕೊಡುತ್ತದೆ. ಆದಾಗ್ಯೂ, ಈ ಚಂದಾದಾರಿಕೆ ಕೇವಲ ಒಂದು ಯೂಟ್ಯೂಬ್ ಖಾತೆಗೆ ಮಾತ್ರ ಸೀಮಿತವಾಗಿದ್ದು, ವರ್ಗಾವಣೆ ಮಾಡಲು ಸಾಧ್ಯವಿಲ್ಲ.
ಇದರ ಜೊತೆಗೆ ಫ್ಲಿಪ್‌ಕಾರ್ಟ್ ಬ್ಲಾಕ್ ಸದಸ್ಯರು ಫ್ಲಿಪ್‌ಕಾರ್ಟ್ ಮತ್ತು ಅದರ ತ್ವರಿತ-ವಾಣಿಜ್ಯ ವೇದಿಕೆಯಾದ ಫ್ಲಿಪ್‌ಕಾರ್ಟ್ ಮಿನಿಟ್ಸ್‌ನಲ್ಲಿನ ಪ್ರತಿ ಖರೀದಿಯ ಮೇಲೆ ₹100 ವರೆಗೆ ಶೇಕಡ 5 ಸೂಪರ್‌ಕಾಯಿನ್ಸ್ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ, ಪ್ರತಿ ತಿಂಗಳು ಗರಿಷ್ಠ 800 ಸೂಪರ್‌ಕಾಯಿನ್‌ಗಳನ್ನು ಗಳಿಸಬಹುದು. ಸೂಪರ್‌ಕಾಯಿನ್‌ಗಳು ಫ್ಲಿಪ್‌ಕಾರ್ಟ್‌ನ ವಿಶೇಷ ರಿಯಾಯಿತಿ ಕರೆನ್ಸಿಯಾಗಿದ್ದು, ಪ್ರತಿ ಸೂಪರ್‌ಕಾಯಿನ್ ಒಂದು ರೂಪಾಯಿಗೆ ಸಮನಾಗಿರುತ್ತದೆ.

ಇಷ್ಟೇ ಅಲ್ಲದೆ, ಫ್ಲಿಪ್‌ಕಾರ್ಟ್ ಬ್ಲಾಕ್ ಸದಸ್ಯರು ವಿವಿಧ ಬ್ರಾಂಡ್‌ಗಳ "ಪ್ರೀಮಿಯಂ" ಗ್ಯಾಜೆಟ್‌ಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ಪಡೆಯುತ್ತಾರೆ. ಇದಲ್ಲದೆ, ಕ್ಲಿಯರ್‌ಟ್ರಿಪ್ ಮೂಲಕ ಬುಕ್ ಮಾಡುವ ವಿಮಾನ ಟಿಕೆಟ್‌ಗಳ ರದ್ದತಿ ಮತ್ತು ಮರುಹೊಂದಿಸುವಿಕೆಯನ್ನು ಕೇವಲ ₹1 ಕ್ಕೆ ಪಡೆಯಬಹುದು. ಇದು ಪ್ರಯಾಣದ ಯೋಜನೆಗಳಲ್ಲಿ ಹೆಚ್ಚಿನ ಅನುಕೂಲ ನೀಡುತ್ತದೆ.
ಫ್ಲಿಪ್‌ಕಾರ್ಟ್ ಬ್ಲಾಕ್: ಬೆಲೆ
ಫ್ಲಿಪ್‌ಕಾರ್ಟ್ ಬ್ಲಾಕ್ ಚಂದಾದಾರಿಕೆಯು ವಾರ್ಷಿಕವಾಗಿ ₹1,499 ಕ್ಕೆ ಲಭ್ಯವಿದೆ, ಆದರೆ ಪ್ರಸ್ತುತ ಸೀಮಿತ ಅವಧಿಯ ಕೊಡುಗೆಯಾಗಿ ಇದನ್ನು ₹990 ಕ್ಕೆ ಖರೀದಿಸಬಹುದು. ಈ ಚಂದಾದಾರಿಕೆಯನ್ನು ಖರೀದಿಸಿದ ನಂತರ ರದ್ದುಗೊಳಿಸಲು ಸಾಧ್ಯವಿಲ್ಲ ಮತ್ತು ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ.
ಅಮೆಜಾನ್ ಪ್ರೈಮ್‌ನೊಂದಿಗೆ ಸ್ಪರ್ಧೆ
ಫ್ಲಿಪ್‌ಕಾರ್ಟ್ ಬ್ಲಾಕ್ ಯೋಜನೆಯನ್ನು ನೇರವಾಗಿ ಅಮೆಜಾನ್ ಪ್ರೈಮ್‌ನೊಂದಿಗೆ ಸ್ಪರ್ಧಿಸಲು ವಿನ್ಯಾಸಗೊಳಿಸಲಾಗಿದೆ. ಅಮೆಜಾನ್ ಪ್ರೈಮ್ ಸಹ ವಾರ್ಷಿಕವಾಗಿ ₹1,499 ವೆಚ್ಚವಾಗುತ್ತದೆ ಮತ್ತು ಮಾರಾಟಕ್ಕೆ ಆರಂಭಿಕ ಪ್ರವೇಶ ಮತ್ತು ಪ್ರೈಮ್ ವೀಡಿಯೊಗೆ ಪ್ರವೇಶದಂತಹ ಪ್ರಯೋಜನಗಳನ್ನು ಒದಗಿಸುತ್ತದೆ. ಆದರೆ, ಪ್ರಸ್ತುತ ಪ್ರೈಮ್ ವೀಡಿಯೊದಲ್ಲಿ ಜಾಹೀರಾತುಗಳು ಪ್ರಸಾರವಾಗುತ್ತಿರುವುದರಿಂದ, ಯೂಟ್ಯೂಬ್ ಪ್ರೀಮಿಯಂ ಅನ್ನು ಒಳಗೊಂಡಿರುವ ಫ್ಲಿಪ್‌ಕಾರ್ಟ್ ಬ್ಲಾಕ್ ಒಂದು ಉತ್ತಮ ಆಯ್ಕೆಯಾಗಿ ಕಾಣುತ್ತದೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








