ಭಾರತದಲ್ಲಿ ಪ್ರಾರಂಭವಾಯ್ತು Flipkart UPI ವ್ಯವಸ್ಥೆ: ಏನೆಲ್ಲಾ ಉಪಯೋಗಗಳು
ಜನಪ್ರಿಯ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್ ಭಾರತದಲ್ಲಿ ತನ್ನ UPI ಸೇವೆಗಳನ್ನು ಪ್ರಾರಂಭಿಸಿದೆ. ಫ್ಲಿಪ್‌ಕಾರ್ಟ್ ಹೊಸ ಪಾವತಿ ಸೇವೆಗಳಿಗಾಗಿ ಆಕ್ಸಿಸ್ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಇದರಿಂದ ಫ್ಲಿಪ್‌ಕಾರ್ಟ್ ಬಳಕೆದಾರರು ಈಗ ವ್ಯಾಪಾರಿ QR ಕೋಡ್‌ಗಳು, ವಿದ್ಯುತ್ ಬಿಲ್‌ಗಳು ಮತ್ತು ಮೊಬೈಲ್ ರೀಚಾರ್ಜ್‌ಗಳನ್ನು ಪಾವತಿಸಬಹುದಾಗಿದೆ.
ಹೌದು, Flipkart UPI ಸೇವೆಯನ್ನು ಭಾರತದಲ್ಲಿ ಪರಿಚಯಿಸಿದೆ. ಇದು ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ನಿಂದ ನೇರವಾಗಿ P2P ಹಣ ವರ್ಗಾವಣೆಯನ್ನು ನಡೆಸುವುದಕ್ಕೆ ಅವಕಾಶ ನೀಡಲಿದೆ. ಈ ಕ್ರಮವು ಡಿಜಿಟಲ್ ಪಾವತಿ ಜಾಗಕ್ಕೆ ಫ್ಲಿಪ್‌ಕಾರ್ಟ್‌ನ ಕಾರ್ಯತಂತ್ರದ ಪ್ರವೇಶವನ್ನು ಗುರುತಿಸುತ್ತದೆ. Flipkart UPI ಅನ್ನು ಬಳಸುವುದು ಹೇಗೆ? ಇದನ್ನು ಸಕ್ರಿಯಗೊಳಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Flipkart UPI ಅನ್ನು ಸಕ್ರಿಯಗೊಳಿಸುವುದು ಹೇಗೆ?
Flipkart UPI ಅನ್ನು ಅಧಿಕೃತ ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ನಲ್ಲಿ ಆ್ಯಕ್ಟಿವ್ ಮಾಡಬಹುದಾಗಿದೆ. ಇದನ್ನು ನೀವು ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಕ್ರಿಯಗೊಳಿಸಬಹುದು. ಈ ಹೊಸ ಆಯ್ಕೆಯನ್ನು Google Play Store ಮತ್ತು Apple Store ನಲ್ಲಿ ಫ್ಲಿಪ್‌ಕಾರ್ಟ್ UPI ಅನ್ನು ಅಪ್ಡೇಟ್ ಮಾಡುವ ಮೂಲಕ ಬಳಸಬಹುದಾಗಿದೆ. ಫ್ಲಿಪ್‌ಕಾರ್ಟ್ UPI ಅನ್ನು ಸಕ್ರಿಯಗೊಳಿಸುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ಫ್ಲಿಪ್‌ಕಾರ್ಟ್ ಅಪ್ಲಿಕೇಶನ್ ತೆರೆಯಿರಿ
ಹಂತ:2 'ಸ್ಕ್ಯಾನ್ & ಪೇ' ಆಯ್ಕೆಯನ್ನು ಆರಿಸಿ
ಹಂತ:3 'My UPI' ಗೆ ಹೋಗಿ
ಹಂತ:4 ಇದರಲ್ಲಿ ನಿಮ್ಮ ಖಾತೆಯನ್ನು ಹೊಂದಿರುವ ಬ್ಯಾಂಕ್ ಅನ್ನು ಆಯ್ಕೆ ಮಾಡಿ.
ಹಂತ:5 ಇದೀಗ Flipkart ನಿಮ್ಮ ಬ್ಯಾಂಕ್ ವಿವರಗಳನ್ನು SMS ಮೂಲಕ ಪರಿಶೀಲಿಸುತ್ತದೆ
ಹಂತ:6 ನಂತರ ನಿಮ್ಮ Flipkart UPI ಅನ್ನು ಸಕ್ರಿಯಗೊಳಿಸಲಾಗುತ್ತದೆ.
ಇನ್ನು ಫ್ಲಿಪ್‌ಕಾರ್ಟ್ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಮೊಬೈಲ್ ರೀಚಾರ್ಜ್ ಮತ್ತು ಬಿಲ್ ಪಾವತಿ ಆಯ್ಕೆಗಳು ಸ್ಕ್ಯಾನ್ & ಪೇ > ಮೈ UPI ಅಡಿಯಲ್ಲಿ ಲಭ್ಯವಿದೆ. ಫ್ಲಿಪ್‌ಕಾರ್ಟ್ UPI, ಕ್ರೆಡಿಟ್ ಕಾರ್ಡ್‌ಗಳು ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಬಳಕೆದಾರರು ತಮ್ಮ ಬಿಲ್‌ಗಳನ್ನು ಪಾವತಿಸಬಹುದಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಬಿಲ್ ಪಾವತಿಗಳಿಗೆ ಯಾವುದೇ ಚಾರ್ಜಿಂಗ್ ಶುಲ್ಕ ಪಾವತಿಸಬೇಕಾಗಿಲ್ಲ. ಇದಲ್ಲದೆ ಸೀಮಿತ ಸಮಯದ ಕೊಡುಗೆಯಾಗಿ 10ರೂ ವರೆಗೆ ರಿಯಾಯಿತಿಗಳನ್ನು ನೀಡುತ್ತದೆ.
Flipkart ಸಹ ಕ್ರೆಡಿಟ್ ಕಾರ್ಡ್‌ಗಳಲ್ಲಿ UPI ಗೆ ಬೆಂಬಲವನ್ನು ಸೇರಿಸಿದೆ. ವ್ಯಾಪಾರಿ ಪಾವತಿಗಳಿಗಾಗಿ ಬಳಕೆದಾರರು ತಮ್ಮ ರುಪೇ ಕ್ರೆಡಿಟ್ ಕಾರ್ಡ್ ಅನ್ನು ಫ್ಲಿಪ್‌ಕಾರ್ಟ್ UPI ನಲ್ಲಿ ಲಿಂಕ್ ಮಾಡಬಹುದು. ಇದರಿಂದ ಫ್ಲಿಪ್‌ಕಾರ್ಟ್ ಯುಪಿಐ ಮೂಲಕವೇ ನಿಮ್ಮ ಪಾವತಿಗಳನ್ನು ಮಾಡಬಹುದಾಗಿದೆ.
ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯು ಸಾಕಷ್ಟು ವಿಶಾಲವಾಗಿ ಬೆಳೆದಿದೆ. ಇದರಲ್ಲಿ ತನ್ನ ಪ್ರಾಬಲ್ಯವನ್ನು ವಿಸ್ತರಿಸಿಕೊಳ್ಳುವುದಕ್ಕೆ ಫ್ಲಿಪ್‌ಕಾರ್ಟ್ ಆಶಾವಾದಿಯಾಗಿದೆ. ಈ ಹಿಂದೆ Flipkart ಅಪ್ಲಿಕೇಶನ್ PhonePe ಜೊತೆಗೆ ಪಾಲುದಾರಿಕೆಯನ್ನು ಹೊಂದಿತ್ತು. ಆದರೆ Flipkart ಮತ್ತು PhonePe ಡಿಸೆಂಬರ್ 2022 ರಲ್ಲಿ ತಮ್ಮ ಬೇರ್ಪಡುವಿಕೆಯನ್ನು ಘೋಷಣೆ ಮಾಡಿದವು. ಇದು ಘಟಕಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಮತ್ತು ಅವುಗಳ ಬೆಳವಣಿಗೆಯ ಅವಕಾಶಗಳನ್ನು ಗರಿಷ್ಠಗೊಳಿಸಲು ಅನುವು ಮಾಡಿಕೊಡಲಿದೆ ಎಂದು ಉಲ್ಲೇಖಿಸಿದ್ದು ಗಮನಾರ್ಹವಾಗಿದೆ.
ಇನ್ನು ಫ್ಲಿಪ್‌ಕಾರ್ಟ್‌ನ ಅತಿದೊಡ್ಡ ಪ್ರತಿಸ್ಪರ್ಧಿಯಾಗಿರುವ ಅಮೆಜಾನ್ ತನ್ನ ಗ್ರಾಹಕರಿಗೆ UPI ಮತ್ತು ಬಿಲ್ ಪಾವತಿ ಸೇವೆಗಳನ್ನು ನೀಡುತ್ತಿದೆ. ಅಮೆಜಾನ್ ಪೇ ಇಲ್ಲಿಯವರೆಗೆ ಭಾರಿ ಯಶಸ್ಸನ್ನು ಕಂಡಿದೆ, ಇದೇ ಹಾದಿಯಲ್ಲಿ ಫ್ಲಿಪ್‌ಕಾರ್ಟ್ ಕೂಡ ಹೆಜ್ಜೆ ಇರಿಸಿದೆ. ಸದ್ಯ ಹಲವಾರು ಬಳಕೆದಾರರು ಪರ್ಯಾಯ UPI ಪಾವತಿ ಅಪ್ಲಿಕೇಶನ್‌ಗಳಿಗೆ ಬದಲಾಗುತ್ತಿರುವುದರಿಂದ ಫ್ಲಿಪ್‌ಕಾರ್ಟ್ ಯುಪಿಐ ಪಾವತಿ ವ್ಯವಸ್ಥೆಯು ಸಕ್ಸಸ್ ಆಗುವ ಲಕ್ಷಣಗಳು ಕಂಡುಬರುತ್ತಿದೆ.


Click it and Unblock the Notifications








