ಭಾರತದಲ್ಲಿ 1,200 ಕೋಟಿ ಹೂಡಿಕೆ ಮಾಡಿದ ಪಾಕ್ಸ್‌ಕಾನ್: ಚಿಪ್ ತಯಾರಿಕೆ ಕನಸಿಗೆ ಆನೆಬಲ!
ತೈವಾನೀಸ್ ಎಲೆಕ್ಟ್ರಾನಿಕ್ಸ್ ತಯಾರಕ ಫಾಕ್ಸ್‌ಕಾನ್ ಭಾರತದಲ್ಲಿ ಭಾರಿ ಹೂಡಿಕೆ ಮಾಡಿದೆ. ಭಾರತದಲ್ಲಿ ಚಿಪ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ ಪ್ಲಾಂಟ್ ಅನ್ನು ನಿರ್ಮಿಸುವ ಪ್ಲಾನ್ ಅನ್ನು ಘೋಷಣೆ ಮಾಡಿದೆ. ಇದಕ್ಕಾಗಿ HCL ಗ್ರೂಪ್‌ನೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದು, ಒಟ್ಟಾರೆ ಭಾರತದಲ್ಲಿ 1,200 ಕೋಟಿ ರೂ ಗಳನ್ನು ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ಹೌದು, ಪಾಕ್ಸ್‌ಕಾನ್ ಕಂಪೆನಿ ಭಾರತದಲ್ಲಿ 1,200 ಕೋಟಿ ರೂ ಹೂಡಿಕೆ ಮಾಡಿದೆ. ಇದು ಭಾರತದಲ್ಲಿಯೇ ಚಿಪ್ ತಯಾರಿಕೆ ಮಾಡಬೇಕೆನ್ನುವ ಕನಸಿಗೆ ಬಲತುಂಬಿದೆ. ಈ ಹೂಡಿಕೆಯ ಕಾರ್ಯಾಚರಣೆಯ ಅಗತ್ಯಗಳನ್ನು ಪೂರೈಸಲು ಮಾಲೀಕತ್ವದ ಭೂಮಿಯಲ್ಲಿ ಸೌಲಭ್ಯವನ್ನು ನಿರ್ಮಿಸುವುದು ಗುರಿಯಾಗಿದೆ. ಹಾಗಾದ್ರೆ ಪಾಕ್ಸ್‌ಕಾನ್‌ನ ಈ ಹೂಡಿಕೆಯಿಂದ ಏನೆಲ್ಲಾ ಉಪಯೋಗವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪಾಕ್ಸ್‌ಕಾನ್ ಕಂಪೆನಿಯು ಭಾರತದಲ್ಲಿ 1,200 ಕೋಟಿ ರೂ ಹೂಡಿಕೆ ಮಾಡುವ ಮೂಲಕ ಚಿಪ್ ತಯಾರಿಕೆಗೆ ಬಲ ತುಂಬಿದೆ. ಈ ಕ್ರಮವು ನವೆಂಬರ್ 2023 ರಲ್ಲಿ ಫಾಕ್ಸ್‌ಕಾನ್‌ನ ಹಿಂದಿನ ಘೋಷಣೆಯನ್ನು ಅನುಸರಿಸಲಿದೆ. ಇದರಲ್ಲಿ ತನ್ನ ಅಂಗಸಂಸ್ಥೆಯಾದ ಹಾನ್ ಹೈ ಟೆಕ್ನಾಲಜಿ ಇಂಡಿಯಾ ಮೆಗಾ ಡೆವಲಪ್‌ಮೆಂಟ್ ಮೂಲಕ ಭಾರತದಲ್ಲಿ ಇದೇ ರೀತಿಯ ಯೋಜನೆಗೆ $1.6 ಶತಕೋಟಿಯಷ್ಟು ವಾಗ್ದಾನವನ್ನು ಸಹ ಮಾಡಿದೆ.
ಭಾರತದಲ್ಲಿ ಸೆಮಿಕಂಡಕ್ಟರ್ ಅನ್ನು ಉತ್ಪಾದನೆ ಮಾಡುವ ಗುರಿಗೆ ಪಾಕ್ಸ್‌ಕಾನ್ ಕಂಪೆನಿ ಕೈ ಜೋಡಿಸಿತ್ತು . ದೇಶಿಯ ಕಂಪೆನಿಯಾದ ವೇದಾಂತ ಗ್ರೂಪ್‌ನೊಂದಿಗೆ ಜಂಟಿ ಉದ್ಯಮ ಘೋಷಣೆ ಮಾಡಿದ್ದ ಪಾಕ್ಸ್‌ಕಾನ್ ನಂತರದ ದಿನಗಳಲ್ಲಿ ತನ್ನ ಜಂಟಿ ಉದ್ಯಮವನ್ನು ವಿಸರ್ಜಿಸನೆ ಮಾಡಿತ್ತು. ಇದರಿಂದ ಭಾರತದ ಸೆಮಿಕಂಡಕ್ಟರ್ ಉದ್ಯಮಕ್ಕೆ ಹಿನ್ನಡೆಯಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಫಾಕ್ಸ್‌ಕಾನ್‌ನ ಈ ಹೊಸ ಪ್ರಯತ್ನಗಳಿಂದ ಭಾರತದ ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೊಸ ಆಶಯವನ್ನು ಹುಟ್ಟುಹಾಕಿದೆ.

ಸದ್ಯ ಫಾಕ್ಸ್‌ಕಾನ್ ಕಮಪೆನಿ ಭಾರತದಲ್ಲಿ ತನ್ನ ಅಸ್ತಿತ್ವವನ್ನು ವೇಗವಾಗಿ ವಿಸ್ತರಿಸುತ್ತಿದೆ. ಸೆಮಿಕಂಡಕ್ಟರ್ ಉದ್ಯಮವನ್ನು ಶೀಘ್ರದಲ್ಲೇ ಇನ್ನಷ್ಟು ಪರಿಣಾಮಕಾರಿಯಾಗಿ ವಿಸ್ತರಿಸುವ ಪ್ರಯತ್ನ ನಡೆಸುತ್ತಿದೆ. ಚಿಪ್ ಪ್ಯಾಕೇಜಿಂಗ್ ಮತ್ತು ಪರೀಕ್ಷಾ ಸೌಲಭ್ಯಕ್ಕಾಗಿ HCL ಗ್ರೂಪ್ ಜೊತೆಗೆ USD 37.2 ಮಿಲಿಯನ್ ಹೂಡಿಕೆ ಮಾಡುವ ಯೋಜನೆಯನ್ನು ಸಹ ಕೆಲ ತಿಂಗಳ ಹಿಂದೆ ಬಹಿರಂಗಪಡಿಸುವ ಮೂಲಕ ಇನ್ನಷ್ಟು ಬಲ ತುಂಬಿದೆ.
ಇನ್ನು ಕಳೆದ ವರ್ಷ ತಮಿಳುನಾಡು ಸರ್ಕಾರದೊಂದಿಗೆ ಫಾಕ್ಸ್‌ಕಾನ್ ಒಪ್ಪಂದವನ್ನೂ ಮಾಡಿಕೊಂಡಿದೆ. ಈ ಒಪ್ಪಂದವು 1600 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಹೊಸ ಎಲೆಕ್ಟ್ರಾನಿಕ್ ಘಟಕಗಳ ಸೌಲಭ್ಯವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಆದರೆ ಈ ಹೊಸ ಸೌಲಭ್ಯದಲ್ಲಿ ತಯಾರಿಸಲಾಗುವ ಉತ್ಪನ್ನಗಳ ನಿರ್ದಿಷ್ಟತೆಯನ್ನು ಇನ್ನೂ ಕೂಡ ಬಹಿರಂಗಪಡಿಸಲಾಗಿಲ್ಲ. ಆದರೆ ಚೆನ್ನೈ ಸಮೀಪದ ಕಾಂಚೀಪುರಂ ಜಿಲ್ಲೆಯಲ್ಲಿ ಈ ಸೌಲಭ್ಯವನ್ನು ಯೋಜಿಸಲಾಗಿದೆ. ಇದು ಐಫೋನ್‌ಗಳನ್ನು ಜೋಡಿಸುವ ಫಾಕ್ಸ್‌ಕಾನ್‌ನ ಅಸ್ತಿತ್ವದಲ್ಲಿರುವ ಕ್ಯಾಂಪಸ್‌ನಿಂದ ಪ್ರತ್ಯೇಕವಾಗಿದೆ.

ಈ ಹಿಂದೆ ಏನಾಗಿತ್ತು?
ಭಾರತದಲ್ಲಿ ಸೆಮಿಕಂಡಕ್ಟರ್ ಪ್ಲ್ಯಾಂಟ್ ಅನ್ನು ಪ್ರಾರಂಭಿಸುವ ಉದ್ದೇಶದಿಂದ ತೈವಾನ್‌ನ ಫಾಕ್ಸ್‌ಕಾನ್ ಕಂಪೆನಿ ಭಾರತದ ವೇದಾಂತ ಲಿಮಿಟೆಡ್‌ನೊಂದಿಗೆ 1.54 ಲಕ್ಷ ಕೋಟಿ ರೂಪಾಯಿ ಡೀಲ್ ಮಾಡಿಕೊಂಡಿತ್ತು. ಎರಡೂ ಕಂಪನಿಗಳು ಜಂಟಿಯಾಗಿ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸಬೇಕಿತ್ತು. ಆದರೆ ವೇದಾಂತದೊಂದಿಗೆ ನಾವು ಜಂಟಿ ಉದ್ಯಮದಲ್ಲಿ ಮುಂದುವರಿಯುವುದಿಲ್ಲ ಎಂದು ಫಾಕ್ಸ್‌ಕಾನ್ ಕಂಪೆನಿ ಕಳೆದ ವರ್ಷ ಒಪ್ಪಂದ ಮುರಿದುಕೊಂಡಿತ್ತು. ಆದರೆ ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಗುರಿಗಳನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ತಿಳಿಸಿತ್ತು. ಆದರೆ ಈ ಡೀಲ್ ಕ್ಯಾನ್ಸಲ್ ಆಗುವುದಕ್ಕೆ ಕಾರಣ ಏನು ಅನ್ನೊದನ್ನ ಬಹಿರಂಗಪಡಿಸಿರಲಿಲ್ಲ.
ಸೆಮಿಕಂಡಕ್ಟರ್ ಪ್ಲ್ಯಾಂಟ್ ಪ್ರಾರಂಭವಾದರೆ ಮೊಬೈಲ್‌ಗಳಿಗೆ ಬೇಕಾಗುವ ಡಿಸ್‌ಪ್ಲೆ, ಚಿಪ್‌ಸೆಟ್‌ಗಳು ಇಲ್ಲಿಯೆ ತಯಾರಾಗಲಿವೆ. ಇದರಿಂದ ಆಮದು ವೆಚ್ಚ ಕಡಿಮೆ ಆಗಲಿದ್ದು ಮೊಬೈಲ್ ವಲಯದಲ್ಲಿ ಹೊಸ ಕ್ರಾಂತಿಯಾಗಲಿದೆ ಎಂದು ನಂಬಲಾಗಿದೆ.


Click it and Unblock the Notifications








