Subscribe to Gizbot

ಜೀವನದ ದಿಕ್ಕನ್ನೇ ಬದಲಿಸಿದ ಆ ಒಂದು ಎಸ್ಎಂಎಸ್ !

Posted By: Varun
ಜೀವನದ ದಿಕ್ಕನ್ನೇ ಬದಲಿಸಿದ ಆ ಒಂದು ಎಸ್ಎಂಎಸ್ !

ಈ SSLC, ಪಿಯುಸಿ ಪರೀಕ್ಷೆಗಳ ಫಲಿತಾಂಶ ಬಂತು ಎಂದರೆ ಸಾಕು, ಫೇಲ್ ಆದವರು, ಕಡಿಮೆ ಮಾರ್ಕ್ಸ್ ಬಂದ ಹುಡುಗರು ಆತ್ಮಹತ್ಯೆಗೆ ಪ್ರಯತ್ನಿಸುವ ಸೀಸನ್ ಶುರು ಆಗ್ಬಿಡುತ್ತೆ. ಸರಿಯಾಗಿ ಓದಿಲ್ಲ, ಪರೀಕ್ಷೇಲಿ ಒಳ್ಳೆ ಮಾರ್ಕ್ಸ್ ತೆಗೆದುಕೊಂಡಿಲ್ಲ ಅಂದ್ರೆ ಸಾಕು, ಜೀವನಾನೆ ಕೊನೆ ಆಗ್ಬಿಡುತ್ತೆ ಅನ್ನೋ ಥರ ಪೋಷಕರು ವರ್ತಿಸೋದ್ರಿಂದ, ಸಾಮಾಜದಲ್ಲಿ ಬಹುತೇಕ ಜನ ಅದೇ ಥರ ಇರೋದ್ರಿಂದ ಫೇಲ್ ಆದರೆ ಕಥೆ ಮುಗೀತು ಅಂತ ಅಂದುಕೊಳ್ಳುವ ಹುಡುಗ/ಹುಡುಗಿಯರೇ ಜಾಸ್ತಿ. ಫ್ರೆಂಡ್ಸ್ ಮುಂದೆ, ಸಂಬಂಧಿಕರ ಮುಂದೆ ಈ ಫೇಲ್ ಆಗಿರೋ ಮಕ್ಕಳು ತಾವೇನೂ ಸಮಾಜಘಾತುಕ ಕೆಲಸ ಮಾಡಿರೋ ಹಾಗೆ ತಲೆ ಬೇರೆ ತಗ್ಗಿಸಬೇಕಾದ ಪರಿಸ್ಥಿತಿ ಬರೋದರಿಂದ ಅಗೋ ಅವಮಾನಕ್ಕಿಂತ ಈ ಜೀವನಾನೆ ಬೇಡಾ ಅಂತ ನಿರ್ಧಾರ ಮಾಡಿ ಆತ್ಮಹತ್ಯೆಗೆ ಶರಣಾಗುತ್ತಾರೆ.

ಆದರೆ ಎಷ್ಟೋ ಮಂದಿ ಸಾವಿನ ಬಾಗಿಲು ತಟ್ಟೇಬಿಡೋಣ ಅಂತ ಡಿಸೈಡ್ ಮಾಡಿ ಇನ್ನೇನು ಸಾಯಬೇಕು ಅನ್ನೋವಾಗ ಮನಸ್ಸು ಬದಲಾಯಿಸಿಕೊಂಡು, "ಇಲ್ಲ... ನಾನು ಸಾಯೋದಿಲ್ಲ, ಅದೇನೇ ಬಂದರೂ ಎದುರಿಸ್ತೀನಿ, ಈ ಸಮಸ್ಯೆಯೆಲ್ಲ ಕ್ಷಣಿಕ" ಅಂತ ಡಿಸೈಡ್ ಮಾಡಿ, ಮನಸ್ಸು ಬದಲಾಯಿಸಿಕೊಂಡು ಸಾರ್ಥಕ ಜೀವನ ನಡೆಸಿದ ಸಾವಿರಾರು ಮಂದಿ ಇದ್ದಾರೆ. ಅಂಥವರಲ್ಲಿ ಒಬ್ಬ, ಹಿಮಾಚಲ್ ಪ್ರದೇಶದ ಅರುಣ್ ಪಂಡಿತ್. ಎಲ್ಲರಂತೆ ಓದಿಕೊಂಡಿದ್ದ ಈತನ ಜೀವನದಲ್ಲಿ ನಮ್ಮ PUC ಮಾದರಿಯ 12th ಪರೀಕ್ಷೆಯಲ್ಲಿ ಫೇಲ್ ಆದ. ಅದಾದ ನಂತರ ಸೈನ್ಯದಲ್ಲಿ ಆಫೀಸರ್ ಹುದ್ದೆ ಸೇರಲು ಬರೆಯಬೇಕಾದ NDA (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಪರೀಕ್ಷೆಯಲ್ಲಿ 3 ಬಾರಿ ಮತ್ತೆ ನಪಾಸಾದ. ಹೀಗಾಗಿ ಮಿಲಿಟರಿ ಅಧಿಕಾರಿಯಾಗಬೇಕೆನ್ನುವ ಕನಸೂ ನನಸಾಗಲಿಲ್ಲ.

ಇಷ್ಟಕ್ಕೆ ಆತನ ಕಷ್ಟಗಳು ನಿಲ್ಲಲಿಲ್ಲ. ಡಾಕ್ಟರ್ ಗಳ ತಪ್ಪು ಗ್ರಹಿಕೆಯಿಂದಾಗಿ, ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಬೇಕಾಯಿತು. ಇಂಥಹ ಪರಿಸ್ಥಿತಿಯಲ್ಲಿ ಬರೆದ ಐಐಟಿ ಪರೀಕ್ಷೆಯಲ್ಲೂ ಫೇಲಾಗುವ ಹಾಗಾಯಿತು. ಒಂದರ ಹಿಂದೊಂದಂತೆ ಬಿದ್ದ ಏಟುಗಳು ಆ ಹುಡುಗನ ಮೃದು ಮನಸ್ಸನ್ನು ಘಾಸಿಗೊಳಿಸಿದವು . ತನ್ನ ಸ್ನೇಹಿತರಿಗೆಲ್ಲ "ಜೀವನದಲ್ಲಿ ಎಲ್ಲ ಪ್ರಯತ್ನವನ್ನೂ ಮಾಡಿದ್ದೇನೆ, ಕಷ್ಟ ಪಟ್ಟಷ್ಟೂ, ಸಂಕಷ್ಟಗಳು ಜಾಸ್ತಿಯಾಗುತ್ತಲೇ ಇವೆ, ಹಾಗಾಗಿ ನಾನು ಸಾಯಲು ತೀರ್ಮಾನಿಸಿದ್ದೇನೆ" ಎಂಬ ಮೆಸೇಜ್ ಕಳುಹಿಸಿ ಸಾಯಲು ಸಿದ್ಧವಾದ.

ಇದನ್ನು ಓದಿದ ಆತನ ಸ್ನೇಹಿತರು, ಕರೆ ಮೇಲೆ ಕರೆ ಮಾಡಿದರೂ ಆತ ಫೋನ್ ತೆಗೆಯಲ್ಲಿಲ್ಲ. ಕೊನೆಗೆ ಆತನ ಸ್ನೇಹಿತನೊಬ್ಬ ಕಳಿಸಿದ ಪ್ರೇರಣೆ ಕೊಡುವ ಆ ಮೆಸೇಜ್ ('I was crying for because I had no shoes, until I saw a man with no feet...Take this world as a challenge.. Prove your mettle!!' ) ಆತನ ಜೀವನದ ಹಾದಿಯನ್ನೇ ಬದಲಾಯಿಸಿತು.

ಆ ಮೆಸೇಜ್ ಯಾವ ರೀತಿ ಪ್ರೇರಣೆ ನೀಡಿತೆಂದರೆ, ಆತನನ್ನು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆದದ್ದಷ್ಟೇ ಅಲ್ಲದೆ, ಯಾರೂ ಕೂಡ ಎಂತಹುದೇ ಪರಿಸ್ಥಿತಿಯಲ್ಲೂ ಆತ್ಮಹತ್ಯೆ ಮಾಡಿಕೊಳ್ಳಬಾರದು, ಯಾವುದೇ ರೀತಿಯ ನೆಗೆಟಿವ್ ಅಂಶಗಳೂ, ತೊಡಕುಗಳೂ ನಮ್ಮನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಬಾರದು, ಹಾಗಾಗಿ ಎಲ್ಲರಿಗೂ ಪ್ರೇರಣೆ ನೀಡುವ, ಒಂದು ವೆಬ್ಸೈಟ್ ಶುರು ಮಾಡುವೆಂತೆಮಾಡಿತು.

ಆ ರೀತಿಯ ಉದ್ದೇಶ ಇಟ್ಟುಕೊಂಡು ಮಾಡಿದ dontgiveupworld.com ಇವತ್ತು ಅರುಣ್ ಪಂಡಿತ್ ನನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಸುಮಾರು 2 ಮಿಲಿಯನ್ ಗೂ ಹೆಚ್ಚು ಪೇಜ್ ವ್ಯೂ ಬರುತ್ತಿರುವ ಈ ವೆಬ್ಸೈಟಿನಲ್ಲಿ ಪ್ರೇರಣೆ ನೀಡುವ ಮೆಸೇಜ್ ಗಳು, ವೀಡಿಯೋಗಳು, ಕಥೆಗಳು, ಪದ್ಯಗಳು, ಹಾಡುಗಳು, ಭೇಟಿ ಕೊಡುವ ಪ್ರತಿಯೊಬ್ಬನನ್ನೂ ಉತ್ತೇಜಿಸುತ್ತವೆ. ಬದುಕಿನ ಹಿನ್ನೆಡೆಗಳನ್ನೂ ಮೆಟ್ಟಿ ನಿಂತು, ವೆಬ್ಸೈಟ್ ಪ್ರಾರಂಭಿಸಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್ ನಲ್ಲಿ MBA ಪದವಿಯನ್ನೂ ಪಡೆದಿರುವ ಅರುಣ್ ನ ಸಾಧನೆಯನ್ನು ಮೈಕ್ರೋಸಾಫ್ಟ್ ರಿಸರ್ಚ್ ತಂಡವೂ ಗುರುತಿಸಿದೆ.

ಬದುಕಿನಲ್ಲಿ ಒಬ್ಬ ಮಹಾತ್ಮರ ಒಳ್ಳೆಯ ಮಾತು, ಒಬ್ಬ ವ್ಯಕ್ತಿ, ಒಂದು ಒಳ್ಳೆ ಪುಸ್ತಕ, ಒಂದು ಒಳ್ಳೆಯ ಸಿನಿಮಾ, ಒಂದು ಅದ್ಭುತವಾದ ಭಾಷಣ, ನಮ್ಮಲ್ಲಿನ ಅಸಾಧಾರಣ ಶಕ್ತಿಯನ್ನು ಹೊರತರಬಲ್ಲದು ಎಂಬುದಕ್ಕೆ ಅರುಣ್ ಪಂಡಿತ್ ನ ಕಥೆಯೇ ಸಾಕ್ಷಿ. ಅದಕ್ಕೆ ಅಲ್ಲವೆ ಸ್ವಾಮೀ ವಿವೇಕಾನಂದರು ಹೇಳಿದ್ದು. " Each Soul is potentially Divine" ಎಂದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot