ನೀವು ಗೂಗಲ್ ಪಿಕ್ಸೆಲ್ 7a ಫೋನ್ ಖರೀದಿಸಿದ್ದರೆ ಅಥವಾ ಯೋಚಿಸಿದ್ದರೆ ಇಲ್ಲಿ ನೋಡಿ!
ನೀವು ಪಿಕ್ಸೆಲ್ 7a ಸ್ಮಾರ್ಟ್‌ಫೋನ್ ಖರೀದಿಸಿದ್ದರೆ ಮತ್ತು ನಿಮ್ಮ ಫೋನ್ ಸಾಮಾನ್ಯಕ್ಕಿಂತ ಸ್ವಲ್ಪ ದಪ್ಪವಾಗಿ ಕಾಣಿಸುತ್ತಿದೆ ಎಂದೆನಿಸಿದರೆ, ಚಿಂತಿಸಬೇಡಿ.! ಏಕೆಂದರೆ, ಗೂಗಲ್ ತನ್ನ ಇತ್ತೀಚಿನ ಕೆಲವು ಪಿಕ್ಸೆಲ್ 7a ಸಾಧನಗಳಲ್ಲಿ ಬ್ಯಾಟರಿ ಉಬ್ಬುವಿಕೆಯ ಸಮಸ್ಯೆಯಿರುವುದನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ. ಹೌದು, ಇತ್ತೀಚೆಗೆ ಪ್ರಕಟಿಸಲಾದ ಬೆಂಬಲ ಪುಟದಲ್ಲಿ, ಕೆಲವು ಪಿಕ್ಸೆಲ್ 7a ಸಾಧನಗಳು ಬ್ಯಾಟರಿ ಉಬ್ಬುವುದು, ಬ್ಯಾಟರಿ ಬೇಗನೆ ಖಾಲಿಯಾಗುವುದು ಅಥವಾ ಚಾರ್ಜಿಂಗ್ ಸಮಸ್ಯೆಗಳಂತಹ ಲಕ್ಷಣಗಳನ್ನು ತೋರಿಸಬಹುದು ಎಂದು ಗೂಗಲ್ ಹೇಳಿದೆ. ಹಾಗೂ, ಈ ಸಮಸ್ಯೆಯನ್ನು ಪರಿಹರಿಸಲು, ಗೂಗಲ್ ವಿಸ್ತೃತ ದುರಸ್ತಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಅರ್ಹ ಬಳಕೆದಾರರಿಗೆ ಉಚಿತ ಬ್ಯಾಟರಿ ಬದಲಿ ಅಥವಾ ಇತರ ಪರಿಹಾರಗಳನ್ನು ನೀಡುತ್ತಿದೆ.
ಬ್ಯಾಟರಿ ಉಬ್ಬುವಿಕೆಯು ಒಂದು ಗಂಭೀರ ಸಮಸ್ಯೆಯಾಗಿದ್ದು, ಇದು ನಿಮ್ಮ ಸಾಧನದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಸುರಕ್ಷತಾ ಅಪಾಯವನ್ನು ಸಹ ಉಂಟುಮಾಡಬಹುದು. ಗೂಗಲ್ ಪ್ರಕಾರ, ಈ ಸಮಸ್ಯೆಯು ಫೋನ್ ಉಬ್ಬಿಕೊಂಡಂತೆ ಅಥವಾ ದಪ್ಪವಾಗಿ ಕಾಣಲು ಕಾರಣವಾಗಬಹುದು. ಹಿಂಭಾಗದ ಕವರ್ ಉಬ್ಬುವುದು ಅಥವಾ ಸಡಿಲಗೊಳ್ಳುವುದು, ಬ್ಯಾಟರಿ ಬೇಗನೆ ಖಾಲಿಯಾಗುವುದು ಅಥವಾ ಚಾರ್ಜಿಂಗ್ ಆಗದಿರುವಂತಹ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಈ ಲಕ್ಷಣಗಳನ್ನು ನೀವು ಗಮನಿಸಿದರೆ, ತಕ್ಷಣವೇ ಕ್ರಮ ಕೈಗೊಳ್ಳುವುದು ಮುಖ್ಯ ಎಂದು ಹೇಳಿದೆ. ಮತ್ತು ಇದಕ್ಕಾಗಿ ವಿಸ್ತೃತ ದುರಸ್ತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ನಿಮ್ಮ ಸಾಧನವು ಈ ಕಾರ್ಯಕ್ರಮಕ್ಕೆ ಅರ್ಹವಾಗಿದೆಯೇ ಎಂಬುದು ನೀವು ವಾಸಿಸುವ ಸ್ಥಳ ಮತ್ತು ನಿಮ್ಮ ಫೋನ್‌ನ ಖಾತರಿ ಅವಧಿಯನ್ನು ಅವಲಂಬಿಸಿರುತ್ತದೆ. ನಿಮ್ಮ ಪಿಕ್ಸೆಲ್ 7a ಬ್ಯಾಟರಿ ಉಬ್ಬುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಮತ್ತು ನಿಮ್ಮ ಸಾಧನವು ಅರ್ಹತಾ ಮಾನದಂಡಗಳನ್ನು ಪೂರೈಸಿದರೆ, ನೀವು ಉಚಿತ ಬ್ಯಾಟರಿ ಬದಲಿಯನ್ನು ಪಡೆಯಬಹುದು. ಆದಾಗ್ಯೂ, ಈ ಕೊಡುಗೆಗೆ ಕೆಲವು ಷರತ್ತುಗಳು ಅನ್ವಯಿಸುತ್ತವೆ. ನೀರಿನ ಹಾನಿ, ಚೂಪಾದ ವಸ್ತುಗಳಿಂದಾದ ಹಾನಿ ಅಥವಾ ಫೋನ್ ಬಿದ್ದ ಪರಿಣಾಮವಾಗಿ ಉಂಟಾದ ಹಾನಿಯನ್ನು ಹೊಂದಿರುವ ಸಾಧನಗಳು ಈ ಉಚಿತ ದುರಸ್ತಿಗೆ ಅರ್ಹವಾಗದಿರಬಹುದು.
ಒಂದು ವೇಳೆ ನಿಮ್ಮ ಫೋನ್‌ನ ಪರದೆ ಅಥವಾ ಹಿಂಭಾಗದ ಗಾಜು ಬಿರುಕು ಬಿಟ್ಟಿದ್ದರೆ, ಗೂಗಲ್ ಆ ಭಾಗಗಳನ್ನು ದುರಸ್ತಿ ಮಾಡಲು ಪ್ರತ್ಯೇಕ ಶುಲ್ಕವನ್ನು ವಿಧಿಸಬಹುದು. ಪ್ರಸ್ತುತ, ಅಮೆರಿಕ ಭಾರತ, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಜಪಾನ್ ಮತ್ತು ಸಿಂಗಾಪುರದಂತಹ ದೇಶಗಳಲ್ಲಿನ ಅಧಿಕೃತ ವಾಕ್-ಇನ್ ದುರಸ್ತಿ ಕೇಂದ್ರಗಳಲ್ಲಿ ಬ್ಯಾಟರಿ ಬದಲಿ ಸೇವೆ ಲಭ್ಯವಿದೆ. ಇದರ ಜೊತೆಗೆ, ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಭಾರತದಲ್ಲಿ ಮೇಲ್-ಇನ್ ದುರಸ್ತಿ ಆಯ್ಕೆಗಳನ್ನು ಸಹ ಒದಗಿಸಲಾಗಿದೆ. ಇದರರ್ಥ ನೀವು ನಿಮ್ಮ ಫೋನ್ ಅನ್ನು ದುರಸ್ತಿ ಕೇಂದ್ರಕ್ಕೆ ಕೊಂಡೊಯ್ಯಬಹುದು ಅಥವಾ ಅದನ್ನು ಮೇಲ್ ಮೂಲಕ ಕಳುಹಿಸಬಹುದು.
ದುರಸ್ತಿ ಸೇವೆಗಳನ್ನು ಒದಗಿಸದ ದೇಶಗಳಲ್ಲಿ, ಗೂಗಲ್ ಪರ್ಯಾಯ ಪರಿಹಾರಗಳನ್ನು ನೀಡುತ್ತಿದೆ. ಖಾತರಿ ಅವಧಿ ಮುಗಿದಿರುವ ಬಳಕೆದಾರರಿಗೆ $200 ನಗದು ಅಥವಾ ಹೊಸ ಪಿಕ್ಸೆಲ್ ಫೋನ್ ಖರೀದಿಯ ಮೇಲೆ $300 ರಿಯಾಯಿತಿಯನ್ನು ನೀಡಲಾಗುತ್ತಿದೆ. ಖಾತರಿ ಅವಧಿ ಇನ್ನೂ ಇರುವ ಬಳಕೆದಾರರಿಗೆ $456 ನಗದನ್ನು ನೀಡಲಾಗುತ್ತಿದೆ. ಗಮನಿಸಬೇಕಾದ ಅಂಶವೆಂದರೆ, ಈ ನಗದು ಮತ್ತು ರಿಯಾಯಿತಿ ಆಯ್ಕೆಗಳು ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಭಾರತದಲ್ಲಿ ಲಭ್ಯವಿಲ್ಲ, ಏಕೆಂದರೆ ಅಲ್ಲಿ ಮೇಲ್-ಇನ್ ಮತ್ತು ವಾಕ್-ಇನ್ ದುರಸ್ತಿ ಆಯ್ಕೆಗಳು ಲಭ್ಯವಿವೆ. ಅಲ್ಲದೆ, ನೀವು ಒಮ್ಮೆ ಒಂದು ಪರಿಹಾರವನ್ನು ಆರಿಸಿಕೊಂಡರೆ, ಅದನ್ನು ನಂತರ ಬದಲಾಯಿಸಲು ಸಾಧ್ಯವಿಲ್ಲ.

ಗೂಗಲ್ ಸ್ಪಷ್ಟಪಡಿಸಿರುವಂತೆ, ಬ್ಯಾಟರಿ ಬದಲಿ ಸೇವೆಯು ನಿಮ್ಮ ಪಿಕ್ಸೆಲ್ 7a ನ ಪ್ರಮಾಣಿತ ಖಾತರಿ ಅವಧಿಯನ್ನು ವಿಸ್ತರಿಸುವುದಿಲ್ಲ. ಬ್ಯಾಟರಿ ಬದಲಾಯಿಸಿದ ನಂತರವೂ, ನಿಮ್ಮ ಫೋನ್‌ನ ಮೂಲ ಖಾತರಿ ಅವಧಿ ಯಾವಾಗ ಮುಕ್ತಾಯಗೊಳ್ಳಲು ನಿಗದಿಯಾಗಿತ್ತೋ ಅಂದೇ ಮುಕ್ತಾಯಗೊಳ್ಳುತ್ತದೆ.ಹಾಗಾಗಿ, ನಿಮ್ಮ ಪಿಕ್ಸೆಲ್ 7a ನಲ್ಲಿ ಬ್ಯಾಟರಿ ಉಬ್ಬುವಿಕೆಯ ಲಕ್ಷಣಗಳನ್ನು ನೀವು ಗಮನಿಸಿದರೆ, ತಕ್ಷಣವೇ ಗೂಗಲ್ ಬೆಂಬಲವನ್ನು ಸಂಪರ್ಕಿಸಿ ಅಥವಾ ಹತ್ತಿರದ ಅಧಿಕೃತ ದುರಸ್ತಿ ಕೇಂದ್ರಕ್ಕೆ ಭೇಟಿ ನೀಡಿ.
ನಿಮ್ಮ ಸಾಧನವು ಅರ್ಹವಾಗಿದ್ದರೆ, ನೀವು ಉಚಿತ ಬ್ಯಾಟರಿ ಬದಲಿಯನ್ನು ಪಡೆಯಬಹುದು ಅಥವಾ ನಿಮ್ಮ ಪ್ರದೇಶದಲ್ಲಿ ಲಭ್ಯವಿರುವ ಇತರ ಪರಿಹಾರಗಳ ಬಗ್ಗೆ ಮಾಹಿತಿ ಪಡೆಯಬಹುದು. ಈ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ, ಏಕೆಂದರೆ ಇದು ನಿಮ್ಮ ಫೋನ್‌ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಸುರಕ್ಷತಾ ಅಪಾಯವನ್ನು ಉಂಟುಮಾಡಬಹುದು. ಗೂಗಲ್‌ನ ಈ ವಿಸ್ತೃತ ದುರಸ್ತಿ ಕಾರ್ಯಕ್ರಮವು ಪಿಕ್ಸೆಲ್ 7a ಬಳಕೆದಾರರಿಗೆ ಒಂದು ದೊಡ್ಡ ನೆಮ್ಮದಿಯನ್ನು ನೀಡಿದೆ ಎನ್ನಬಹುದು.


Click it and Unblock the Notifications








