ಭಾರತೀಯನಿಗೆ ದೊಡ್ಡ ಹುದ್ದೆ! ಗೂಗಲ್ ಚೀಫ್ ಟೆಕ್ನಾಲಾಜಿಸ್ಟ್ ಆಗಿ ರಾಘವನ್ ನೇಮಕ; ಯಾರಿವರು?
ಟೆಕ್ ದೈತ್ಯ ಆಪಲ್ ಆಯ್ತು.. ಇದೀಗ, ಸರ್ಚ್ ಇಂಜಿನ್ ದೈತ್ಯ ಗೂಗಲ್‌ನಲ್ಲೂ (Google) ಭಾರತದ್ದೇ ಪ್ರಾಬಲ್ಯ. ಭಾರತೀಯನಿಗೆ ಒಲಿದಿದೆ ಗೂಗಲ್ ಚೀಫ್ ಟೆಕ್ನಾಲಾಜಿಸ್ಟ್ ಹುದ್ದೆ. ಹೌದು, ಪ್ರಭಾಕರ್ ರಾಘವನ್ ಅವರು ಗೂಗಲ್ ಕಂಪನಿಯ ಮುಖ್ಯ ತಂತ್ರಜ್ಞರಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ, ಗೂಗಲ್‌ನ ಹಿರಿಯ ಉಪಾಧ್ಯಕ್ಷರಾಗಿರುವ ಅವರು, ಗೂಗಲ್ ಸರ್ಚ್, ಅಸಿಸ್ಟೆಂಟ್, ಜಾಹೀರಾತುಗಳು, ವಾಣಿಜ್ಯ ಮತ್ತು ಪಾವತಿ ಉತ್ಪನ್ನಗಳ ಉಸ್ತುವಾರಿ ವಹಿಸಿದ್ದಾರೆ. ಇದೀಗ, ಗೂಗಲ್‌ನ ಮುಖ್ಯ ತಂತ್ರಜ್ಞರಾಗಲಿದ್ದಾರೆ. ಯಾರಿದು ಪ್ರಭಾಕರ್ ರಾಘವನ್? ಇಲ್ಲಿದೆ ರಾಘವನ್ ನಡೆದು ಬಂದ ದಾರಿ.
ಹೌದು, ಪ್ರಭಾಕರ್ ರಾಘವನ್ ಅವರು ಈಗ ಮುಖ್ಯ ತಂತ್ರಜ್ಞರ ಪಾತ್ರವನ್ನು ವಹಿಸಲಿದ್ದಾರೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. ಕಂಪನಿಯು, ಸರ್ಚ್ ಇಂಜಿನ್ ಮತ್ತು ಜಾಹೀರಾತು ಉತ್ಪನ್ನಗಳ ಉಸ್ತುವಾರಿ ಕಾರ್ಯನಿರ್ವಾಹಕ ಪ್ರಭಾಕರ್ ರಾಘವನ್ ಅವರಿಗೆ ಗೂಗಲ್ ಹೆಚ್ಚಿನ ಜವಾಬ್ದಾರಿ ನೀಡುತ್ತಿದೆ. ಇದೀಗ, ಗೂಗಲ್ ಎಕ್ಸಿಕ್ಯೂಟಿವ್ ನಿಕ್ ಫಾಕ್ಸ್ ಅವರ ಸ್ಥಾನಕ್ಕೆ ಪ್ರಭಾಕರ ರಾಘವನ್ ಬರಲಿದ್ದಾರೆ. ಅವರ ತಾಂತ್ರಿಕ ನಿರ್ದೇಶನ ಮತ್ತು ನಾಯಕತ್ವವು ನಮ್ಮ ತಂತ್ರಜ್ಞಾನದ ಶ್ರೇಷ್ಠತೆಯ ಸಂಸ್ಕೃತಿಯನ್ನು ಬೆಳೆಸಲು ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

12 ವರ್ಷ ಪ್ರಮುಖ ವಿಭಾಗಗಳಲ್ಲಿ ಕೆಲಸ
ಗೂಗಲ್ ಸಿಇಒ ಸುಂದರ್ ಪಿಚೈ ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದಾರೆ. ರಾಘವನ್ ಅವರು ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಎತ್ತರಕ್ಕೆ ಸಾಗುವ ಸಮಯ ಬಂದಿದೆ. 12 ವರ್ಷಗಳ ಕಾಲ ಪ್ರಮುಖ ವಿಭಾಗಗಳಲ್ಲಿ ಕೆಲಸ ನಿರ್ವಹಿಸಿದ ಪ್ರಭಾಕರ್, ತಮ್ಮ ಕಂಪ್ಯೂಟರ್ ಸೈನ್ಸ್ ಮೂಲಕ್ಕೆ ಹಿಂತಿರುಗಿದ್ದಾರೆ. ರಾಘವನ್ ಗೂಗಲ್‌ನ ಚೀಫ್ ಟೆಕ್ನಾಲಿಜಿಸ್ಟ್ ಆಗಿ ಕೆಲಸ ಮಾಡಲಿದ್ದಾರೆ. ಈ ಮೂಲಕ ಅವರು ನನ್ನೊಂದಿಗೆ ನಿಕಟವಾಗಿ ಪಾಲುದಾರರಾಗುತ್ತಾರೆ ಎಂದು ಸುಂದರ್ ಪಿಚೈ ಹೇಳಿದ್ದಾರೆ.
ಪ್ರಭಾಕರ್ ರಾಘವನ್ ಅವರು, ಇಮೇಲ್ ಸೇವೆಯ ಮೊದಲ ಎಐ (AI) ಉತ್ಪನ್ನಗಳಾದ ಸ್ಮಾರ್ಟ್ ಪ್ರತ್ಯುತ್ತರ ಮತ್ತು ಸ್ಮಾರ್ಟ್ ಕಂಪೋಸ್ ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಘವನ್ ಅವರೇ ಜಿಮೇಲ್ (Gmail) ತಂಡವನ್ನು ಮುನ್ನಡೆಸಿದ್ದರು. ಬಳಿಕ, ಇಮ್ಮರ್ಸಿವ್ ವ್ಯೂ ಮತ್ತು ವರ್ಚುವಲ್ ಟ್ರೈ ಆನ್ ಮ್ಯಾಪ್ ಮತ್ತು ಶಾಪಿಂಗ್‌ನಲ್ಲಿನ ಎಐ ಫೀಚರ್ಸ್‌ಗಳೊಂದಿಗೆ ಎಐ ಅವಲೋಕನಗಳು ಮತ್ತು ಸರ್ಕಲ್ ಟು ಸರ್ಚ್‌ನ ಬಿಡುಗಡೆಯನ್ನು ಪ್ರಭಾಕರ್ ಮೇಲ್ವಿಚಾರಣೆ ಮಾಡಿದ್ದಾರೆ.
ಪ್ರಭಾಕರ್ ನಾಯಕತ್ವದ ತಂಡಕ್ಕೆ ನಿಕ್ ಫಾಕ್ಸ್ ಸಹಾಯ
ನಿಕ್ ಫಾಕ್ಸ್ ಅವರು ಗೂಗಲ್‌ನ ಎಐ ಉತ್ಪನ್ನದ ಮಾರ್ಗಸೂಚಿಯನ್ನು ರೂಪಿಸುವಲ್ಲಿ, ಪ್ರಭಾಕರ್ ಮತ್ತು ಅವರ ನಾಯಕತ್ವದ ತಂಡದೊಂದಿಗೆ ನಿಕಟವಾಗಿ ಸಹಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗೂಗಲ್ ಎಫ್‌ಐ (Google Fi) ಮತ್ತು ಆರ್‌ಸಿಎಸ್ (RCS) ಮೆಸೇಜ್ ಕಳುಹಿಸುವ ಉತ್ಪನ್ನಗಳನ್ನು ಆರಂಭಿಸಲು ನಿಕ್ ಫಾಕ್ಸ್ ಸಹಾಯ ಮಾಡಿದ್ದಾರೆ ಎಂದು ಸುಂದರ್ ಪಿಚೈ ವಿವರಿಸಿದ್ದಾರೆ.
ಪ್ರಭಾಕರ್ ರಾಘವನ್ ಜನಿಸಿದ್ದು ಎಲ್ಲಿ?
ಗೂಗಲ್ ಚೀಫ್ ಟೆಕ್ನಾಲಾಜಿಸ್ಟ್ ಆಗಿ ನೇಮಕಗೊಂಡಿರುವ ಪ್ರಭಾಕರ್ ರಾಘವನ್ ಅವರು, ಸೆಪ್ಟಂಬರ್ 25, 1960 ರಲ್ಲಿ ಜನಿಸಿದರು. ಪ್ರಸ್ತುತ ಪ್ರಭಾಕರ್ ಅವರಿಗೆ 64 ವರ್ಷ. ಭೋಪಾಲ್, ಮದ್ರಾಸ್ ಮತ್ತು ಮ್ಯಾಂಚೆಸ್ಟರ್‌ನಲ್ಲಿ ರಾಘವನ್ ಅವರು ತಮ್ಮ ಬಾಲ್ಯವನ್ನು ಕಳೆದಿದ್ದಾರೆ. 1981 ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‌ನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಕಂಪ್ಯೂಟರ್ ವಿಜ್ಞಾನದಲ್ಲಿ ಪಿಎಚ್‌ಡಿ
ಪ್ರಭಾಕರ್ ರಾಘವನ್ ಅವರು 1982 ರಲ್ಲಿ ಸಾಂಟಾ ಬಾರ್ಬರಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಆಫ್ ಸೈನ್ಸ್ ಪಡೆದಿದ್ದಾರೆ. ನಂತರ ಅವರು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಿದರು. 1986 ರಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಪ್ರಭಾಕರ್ ಅವರು ಪಿಎಚ್‌ಡಿ ಪಡೆದಿದ್ದಾರೆ. ಇದೀಗ, ಗೂಗಲ್‌ನ ಮುಖ್ಯ ತಂತ್ರಜ್ಞರಾಗಿ ನೇಮಕಗೊಂಡಿದ್ದಾರೆ. ಆಪಲ್ ಭಾರತೀಯ ಮೂಲದ ಕೆವನ್ ಪರೇಖ್ ಅವರನ್ನು ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್‌ಒ) ನೇಮಕ ಮಾಡಿದೆ.


Click it and Unblock the Notifications








