ಗೂಗಲ್‌ನಲ್ಲಿ ರಾಜಕೀಯ ಜಾಹೀರಾತು ನೀಡುವುದು ಇನ್ನು ಸುಲಭವಲ್ಲ!
ತಪ್ಪು ಮಾಹಿತಿಗಳ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವುದನ್ನು ತಪ್ಪಿಸುವ ಉದ್ದೇಶದಿಂದ ರಾಜಕೀಯ ಜಾಹೀರಾತುಗಳ ಬಗ್ಗೆ ಗೂಗಲ್ ಸಂಸ್ಥೆಯು ಮತ್ತಷ್ಟು ಕಟ್ಟೆಚ್ಚರವಹಿಸಲು ಮುಂದಾಗಿದೆ. ಜಾಹೀರಾತುಗಳಲ್ಲಿ ತಪ್ಪು ಅಥವಾ ಸುಳ್ಳು ಮಾಹಿತಿ ನೀಡುವ ಜಾಹೀರಾತುದಾರರನ್ನು ನಿಷೇಧಿಸುವ ನಿಯಮಗಳು ಈಗಾಗಲೇ ಜಾರಿಯಲ್ಲಿವೆ. ಇದು ರಾಜಕೀಯ ವಿಷಯದ ಜಾಹಿರಾತುಗಳಿಗೂ ಸಹ ಅನ್ವಯಿಸುತ್ತದೆ. ಆದರೆ, ಈಗ ಈ ನೀತಿಯನ್ನು ಇನ್ನಷ್ಟು ಸ್ಪಷ್ಟಪಡಿಸಲಾಗುತ್ತಿದೆ ಎಂದು ಗೂಗಲ್ ತಿಳಿಸಿದೆ.

ಹೌದು, ರಾಜಕೀಯ ಜಾಹೀರಾತು ನೀತಿಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ತರುವುದಾಗಿ ಗೂಗಲ್ ತಿಳಿಸಿದ್ದು, ತಿರುಚಿದ ವಿಷಯಗಳು ಅಥವಾ ಚಿತ್ರಗಳನ್ನು ಬಳಸಿದರೆ ಯಾವ ರೀತಿ ನಿರ್ಬಂಧಿಸಲಾಗುತ್ತಿದೆ ಎನ್ನುವುದನ್ನು ಉದಾಹರಣೆಗಳ ಸಮೇತ ಗೂಗಲ್ ವಿವರಿಸಿದೆ. ರಾಜಕೀಯ ಜಾಹೀರಾತು ನೀತಿಯ ಬದಲಾವಣೆಗಳು ಬ್ರಿಟನ್‌ನಲ್ಲಿ ಇನ್ನೊಂದು ವಾರದಲ್ಲಿ ಜಾರಿಯಾಗಲಿದ್ದು, ಈ ವರ್ಷಾಂತ್ಯದಲ್ಲಿ ಐರೋಪ್ಯ ಒಕ್ಕೂಟ ರಾಷ್ಟ್ರಗಳಲ್ಲಿ ಜಾರಿಯಾಗಲಿದೆ. ಬಳಿಕ, ಉಳಿದ ರಾಷ್ಟ್ರಗಳಲ್ಲಿ ಜಾರಿಗೆ ಬರಲಿದೆ ಎಂದು ಗೂಗಲ್ ತಿಳಿಸಿದೆ.

ಪ್ರಜಾಪ್ರಭುತ್ವದಲ್ಲಿ ಚರ್ಚೆಗಳು ಮಹತ್ವದ ಪಾತ್ರವಹಿಸುತ್ತವೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಗೂಗಲ್ ವಕ್ತಾರರು ಹೇಳಿದ್ದಾರೆ. ಒಂದು ಕುರ್ಚಿಯ ಬೆಲೆ ಅಥವಾ ಮತದಾರರಿಗೆ ನೀಡುವ ಸಂದೇಶ ಇರಬಹುದು. ಯಾವುದೇ ಸಂದೇಶಗಳಲ್ಲಿ ಸುಳ್ಳು ಮಾಹಿತಿ ನೀಡುವುದು ನಮ್ಮ ನೀತಿಗೆ ವಿರುದ್ಧವಾಗಿದೆ ಎಂದು ಗೂಗಲ್ ಜಾಹೀರಾತು ವಿಭಾಗದ ಉಪಾಧ್ಯಕ್ಷ ಸ್ಕಾಟ್ ಸ್ಪೆನ್ಸರ್ ಅವರು ತಿಳಿಸಿರುವುದು ರಾಜಕೀಯ ನಾಯಕರಿಗೆ ಎಚ್ಚರಿಕೆಯಾಗಿದೆ.

ಬಳಕೆದಾರರ ವಯಸ್ಸು, ಲಿಂಗ, ಸ್ಥಳ ಮತ್ತು ಬಳಕೆದಾರರು ಭೇಟಿ ನೀಡಿದ ವೆಬ್‌ಸೈಟ್‌ಗಳ ವಿಷಯವನ್ನು ಆಧರಿಸಿ ಪ್ರಚಾರದಲ್ಲಿ ಗೂಗಲ್‌ನಲ್ಲಿ ಜಾಹೀರಾತುಗಳನ್ನು ಗುರಿಯಾಗಿಸಲು ಸಾಧ್ಯವಾಗುತ್ತದೆ. ಆದರೆ ಈಗ ಅವರು ರಾಜಕೀಯ ಸಂಬಂಧ ಅಥವಾ ಸಾರ್ವಜನಿಕ ಮತದಾನದ ದಾಖಲೆಗಳಂತಹ ಹಲವಾರು ನಿರ್ದಿಷ್ಟ ಪ್ರೇಕ್ಷಕರ ಗುಣಲಕ್ಷಣಗಳನ್ನು ಬಳಸಿಕೊಂಡು ತಮ್ಮ ಜಾಹೀರಾತುಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ. ಪ್ರಚಾರಗಳನ್ನು ಇನ್ನು ಮುಂದೆ ಮೈಕ್ರೊಟಾರ್ಗೆಟ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ.

ರಾಜಕೀಯ ಸಂಸ್ಥೆಗಳಿಗೆ ಇನ್ನು ಮುಂದೆ "ಅಫಿನಿಟಿ ಪ್ರೇಕ್ಷಕರನ್ನು" ತಲುಪಲು ಸಾಧ್ಯವಾಗುವುದಿಲ್ಲ. ಆದರೆ, ರಾಜಕೀಯ ಜಾಹೀರಾತನ್ನು ಸಂಪೂರ್ಣವಾಗಿ ನಿಷೇಧಿಸಲು ಗೂಗಲ್ ಯೋಜಿಸುವುದಿಲ್ಲ. ಆದರೂ ಸಹ ಹೊಸ ನೀತಿಯು ಅನೇಕ ರಾಜಕೀಯ ಪ್ರಚಾರ ಕಾರ್ಯಕರ್ತರಿಗೆ ಅಡ್ಡಿಯಾಗಲಿದೆ ಎಂದು ಹೇಳಲಾಗಿದೆ. ರಾಜಕೀಯದಲ್ಲಿ ತಾಂತ್ರಿಕ ಸಾಧನಗಳ ಅತ್ಯಂತ ಚತುರ ಬಳಕೆದಾರರು ಡಿಜಿಟಲ್ ಸಂಯೋಜನೆಯಲ್ಲಿ ಮುಂದಿದ್ದಾರೆ. ಅವರಿಗೆ ಈ ನೂತನ ನಿಯಾಮಾವಳಿಗಳು ಸ್ವಲ್ಪ ಕಷ್ಟವಾಗಬಹುದು ಎಂದು ಅಭಿಪ್ರಾಯಪಡಲಾಗಿದೆ.


Click it and Unblock the Notifications








