ಇನ್ಮುಂದೆ ನಿಮ್ಮ ಫೋನ್ 'ಆಟೊ ರೀಬೂಟ್' ಆದರೆ ಆಶ್ಚರ್ಯಪಡಬೇಡಿ!..ಏಕೆ ಗೊತ್ತಾ?
ಇನ್ಮುಂದೆ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಸ್ವಯಂಚಾಲಿತವಾಗಿ ರೀಬೂಟ್ ಆದರೆ ಆಶ್ಚರ್ಯಪಡಬೇಡಿ. ಏಕೆಂದರೆ, ಟೆಕ್ ದೈತ್ಯ ಸಂಸ್ಥೆ ಗೂಗಲ್ ತನ್ನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರ ಡೇಟಾ ಸುರಕ್ಷತೆಯನ್ನು ಹೆಚ್ಚಿಸಲು ಹೊಸ ಭದ್ರತಾ ವೈಶಿಷ್ಟ್ಯವೊಂದನ್ನು ಪರಿಚಯಿಸುತ್ತಿದೆ. ಈ ವೈಶಿಷ್ಟ್ಯದ ಪ್ರಕಾರ, ಒಂದು ವೇಳೆ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಸತತವಾಗಿ ಮೂರು ದಿನಗಳವರೆಗೆ ಅನ್‌ಲಾಕ್ ಮಾಡದಿದ್ದರೆ, ಅದು ಸ್ವಯಂಚಾಲಿತವಾಗಿ ಮರುಪ್ರಾರಂಭಗೊಳ್ಳುತ್ತದೆ. ಈ ಹೊಸ ವೈಶಿಷ್ಟ್ಯವು ಸ್ಮಾರ್ಟ್‌ಫೋನ್‌ನಲ್ಲಿರುವ ಸೂಕ್ಷ್ಮ ಮಾಹಿತಿಯನ್ನು ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ತಡೆಯುವ ಗುರಿಯನ್ನು ಹೊಂದಿದೆ. ಈ ಹೊಸ ವೈಶಿಷ್ಟ್ಯವು ಶೀಘ್ರದಲ್ಲೇ ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳಿಗೂ ಲಭ್ಯವಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ಬಿಡುಗಡೆಯಾದ Google Play ಸೇವೆಗಳ v25.14 ಅಪ್‌ಡೇಟ್‌ನಲ್ಲಿ ಗೂಗಲ್ ಈ ನೂತನ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯವು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ನೀವು ಸತತವಾಗಿ 72 ಗಂಟೆಗಳ ಕಾಲ ಅನ್‌ಲಾಕ್ ಮಾಡದಿದ್ದರೆ, ಅದು ತನ್ನಷ್ಟಕ್ಕೆ ತಾನೇ ಮರುಪ್ರಾರಂಭಗೊಳ್ಳುತ್ತದೆ. ನಂತರ ನೀವು ನಿಮ್ಮ ಫೋನ್ ಅನ್ನು ಪುನಃ ಬಳಸಲು ಬಯಸಿದಾಗ, ನಿಮ್ಮ ಪಾಸ್‌ಕೋಡ್ ಅನ್ನು ನಮೂದಿಸುವುದು ಕಡ್ಡಾಯವಾಗುತ್ತದೆ. ಫೋನ್ ಮರುಪ್ರಾರಂಭಗೊಂಡಾಗ, ಅದರಲ್ಲಿರುವ ಎಲ್ಲಾ ಬಳಕೆದಾರರ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗುತ್ತದೆ. ಅಲ್ಲದೆ, ನೀವು ನಿಮ್ಮ ಪಾಸ್‌ಕೋಡ್ ಅನ್ನು ನಮೂದಿಸುವವರೆಗೆ ಬಯೋಮೆಟ್ರಿಕ್ ಅನ್‌ಲಾಕಿಂಗ್ (ಉದಾಹರಣೆಗೆ ಫಿಂಗರ್‌ಪ್ರಿಂಟ್ ಅಥವಾ ಫೇಸ್ ಅನ್‌ಲಾಕ್) ಕಾರ್ಯನಿರ್ವಹಿಸುವುದಿಲ್ಲ.
ಈ ಸ್ಥಿತಿಯನ್ನು 'ಬಿಫೋರ್ ಫಸ್ಟ್ ಅನ್‌ಲಾಕ್' (BFU) ಎಂದು ಕರೆಯಲಾಗುತ್ತದೆ. ಇದು ಬಳಕೆದಾರರ ಅನುಮತಿಯಿಲ್ಲದೆ ಡೇಟಾವನ್ನು ಪ್ರವೇಶಿಸುವುದನ್ನು ತಡೆಯುತ್ತದೆ. ಒಮ್ಮೆ ನೀವು ನಿಮ್ಮ ಪಾಸ್‌ಕೋಡ್ ಅನ್ನು ಯಶಸ್ವಿಯಾಗಿ ನಮೂದಿಸಿದ ನಂತರ, ನಿಮ್ಮ ಡೇಟಾವನ್ನು ಡೀಕ್ರಿಪ್ಟ್ ಮಾಡಲಾಗುತ್ತದೆ ಮತ್ತು ಬಯೋಮೆಟ್ರಿಕ್ ಅನ್‌ಲಾಕಿಂಗ್ ಮತ್ತೆ ಸಕ್ರಿಯಗೊಳ್ಳುತ್ತದೆ. ಈ ಸ್ಥಿತಿಯನ್ನು 'ಆಫ್ಟರ್ ಫಸ್ಟ್ ಅನ್‌ಲಾಕ್' (AFU) ಎಂದು ಕರೆಯಲಾಗುತ್ತದೆ. ಈ ಹೊಸ ಭದ್ರತಾ ಕ್ರಮದ ಮೂಲಕ, ಕಳ್ಳರು ಅಥವಾ ಇತರ ಅನಧಿಕೃತ ವ್ಯಕ್ತಿಗಳು ಮೂರು ದಿನಗಳಿಗಿಂತ ಹೆಚ್ಚು ಕಾಲ ಸ್ಮಾರ್ಟ್‌ಫೋನ್ ಅನ್ನು ಅನ್‌ಲಾಕ್ ಮಾಡದೆ ಹೊಂದಿದ್ದರೆ, ಅವರು ಫೋನ್‌ನಲ್ಲಿರುವ ಡೇಟಾವನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ.

ನಿಮ್ಮ ಸ್ಮಾರ್ಟ್‌ಫೋನ್ ಪ್ರತಿ ಬಾರಿ ರೀಬೂಟ್ ಆದಾಗಲೂ BFU ಸ್ಥಿತಿಯು ಸಕ್ರಿಯಗೊಳ್ಳುವುದರಿಂದ, ಕೇವಲ ಫೋನ್ ಅನ್ನು ಮರುಪ್ರಾರಂಭಿಸುವುದರಿಂದಲೇ ಬಳಕೆದಾರರ ಮಾಹಿತಿಯನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಗೂಗಲ್‌ನ ಬದಲಾವಣೆಗಳ ಪಟ್ಟಿಯಲ್ಲಿ ಈ ಸ್ವಯಂಚಾಲಿತ ಮರುಪ್ರಾರಂಭದ ವೈಶಿಷ್ಟ್ಯವು "ಫೋನ್"ಗೆ ಲಭ್ಯವಿದೆ ಎಂದು ಉಲ್ಲೇಖಿಸಲಾಗಿದ್ದರೂ, ಇದು ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ. ಅಲ್ಲದೆ, ಗೂಗಲ್ ಈ ವೈಶಿಷ್ಟ್ಯವು ಐಚ್ಛಿಕವಾಗಿರುತ್ತದೆ ಎಂದು ತಿಳಿಸಿದೆ. ಇದರರ್ಥ ಬಳಕೆದಾರರು ತಮ್ಮ ಇಚ್ಛೆಯಂತೆ ಈ ವೈಶಿಷ್ಟ್ಯವನ್ನು ಆನ್ ಅಥವಾ ಆಫ್ ಮಾಡಿಕೊಳ್ಳಲು ಆಯ್ಕೆಯನ್ನು ಹೊಂದಿರಬಹುದು.ವಿಶೇಷವೆಂದರೆ, ಆಪಲ್ ಕಂಪನಿಯು ಇದೇ ರೀತಿಯ 'ಇನ್ಯಾಕ್ಟಿವಿಟಿ ರೀಬೂಟ್' ಎಂಬ ವೈಶಿಷ್ಟ್ಯವನ್ನು ಪರಿಚಯಿಸಿತ್ತು.
ಆಪಲ್ ಕಂಪನಿಯು iOS 18.1 ಅಪ್‌ಡೇಟ್‌ನೊಂದಿಗೆ ಇದೇ ರೀತಿಯ ಸ್ವಯಂಚಾಲಿತ ಮರುಪ್ರಾರಂಭದ ವೈಶಿಷ್ಟ್ಯವನ್ನು ಪರಿಚಯಿಸಿತ್ತು. ಆ ವೈಶಿಷ್ಟ್ಯವು , iOS 18.1 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐಫೋನ್‌ಗಳನ್ನು 72 ಗಂಟೆಗಳ ಕಾಲ ಬಳಸದೆ ಬಿಟ್ಟರೆ, ಬಳಕೆದಾರರ ಡೇಟಾವನ್ನು ರಕ್ಷಿಸಲು ಅವು ಸ್ವಯಂಚಾಲಿತವಾಗಿ ರೀಬೂಟ್ ಆಗುತ್ತವೆ. ಕಾನೂನು ಜಾರಿ ಸಂಸ್ಥೆಗಳು ವಶಪಡಿಸಿಕೊಂಡ ಸ್ಮಾರ್ಟ್‌ಫೋನ್‌ಗಳು ತಮ್ಮಷ್ಟಕ್ಕೆ ತಾವೇ ರೀಬೂಟ್ ಆದ ನಂತರ ಈ ವೈಶಿಷ್ಟ್ಯವು ಬೆಳಕಿಗೆ ಬಂದಿತು. ಒಟ್ಟಾರೆಯಾಗಿ, ಗೂಗಲ್‌ನ ಈ ಹೊಸ ಭದ್ರತಾ ವೈಶಿಷ್ಟ್ಯವು ಆಂಡ್ರಾಯ್ಡ್ ಬಳಕೆದಾರರ ಡಿಜಿಟಲ್ ಜೀವನವನ್ನು ಮತ್ತಷ್ಟು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








