ಭಾರತದಲ್ಲಿ ಗೂಗಲ್‌ನ AI ಡೇಟಾ ಹಬ್: ₹1.3 ಲಕ್ಷ ಕೋಟಿ ಹೂಡಿಕೆ!
ಟೆಕ್ ದೈತ್ಯ ಗೂಗಲ್ ಭಾರತದಲ್ಲಿ AI ಕೇಂದ್ರಿತ ಡೇಟಾ ಸೆಂಟರ್ ಅನ್ನು ಸ್ಥಾಪಿಸಲು ಬರೋಬ್ಬರಿ $15 ಬಿಲಿಯನ್ (ಸುಮಾರು 1.3 ಲಕ್ಷ ಕೋಟಿ ರೂಪಾಯಿ) ಹೂಡಿಕೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಘೋಷಿಸಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಈ ಹೂಡಿಕೆ ಹರಿದುಬರಲಿದ್ದು, ಈ ಅತ್ಯಾಧುನಿಕ ಡೇಟಾ ಸೆಂಟರ್ ಆಂಧ್ರಪ್ರದೇಶದ ಪ್ರಮುಖ ಬಂದರು ನಗರಿ ವಿಶಾಖಪಟ್ಟಣಂನಲ್ಲಿ ನಿರ್ಮಾಣವಾಗಲಿದೆ. ಈ ಮಹತ್ಕಾರ್ಯಕ್ಕೆ ದೇಶದ ಪ್ರಮುಖ ಟೆಲಿಕಾಂ ಆಪರೇಟರ್ ಆದ ಭಾರತಿ ಏರ್‌ಟೆಲ್ ಕೂಡ ಕೈಜೋಡಿಸಿದೆ.!
ಹೌದು, ವಿಶಾಖಪಟ್ಟಣಂನಲ್ಲಿ AI ಹಬ್ ಅನ್ನು ಸ್ಥಾಪಿಸಲು ಏರ್‌ಟೆಲ್ ಗೂಗಲ್‌ನೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಘೋಷಿಸಿದೆ. 2030 ರಲ್ಲಿ ಪೂರ್ಣಗೊಳ್ಳಲಿರುವ ಈ ಸಮಗ್ರ ಯೋಜನೆಯು ಸಮುದ್ರದೊಳಗಿನ (ಸಬ್‌ಸೀ) ನೆಟ್‌ವರ್ಕ್ ಮತ್ತು ಶುದ್ಧ ಇಂಧನ ಬಳಕೆಯನ್ನು ಒಳಗೊಂಡಿರುತ್ತದೆ ಎಂದು ತಿಳಿದುಬಂದಿದೆ. ಗೂಗಲ್ ಕ್ಲೌಡ್ ಸಿಇಒ ಥಾಮಸ್ ಕುರಿಯನ್ ಅವರ ಪ್ರಕಾರ, ಮೌಂಟೇನ್ ವ್ಯೂ ಮೂಲದ ಟೆಕ್ ದೈತ್ಯವಾದ ಗೂಗಲ್ ಯುಎಸ್ ಹೊರಗೆ ಜಗತ್ತಿನ ಯಾವುದೇ ಸ್ಥಳದಲ್ಲಿ ಮಾಡುತ್ತಿರುವ ಅತಿದೊಡ್ಡ ಹೂಡಿಕೆ ಇದಾಗಿದೆ.
ಭಾರತೀಯ ವ್ಯವಹಾರಗಳಿಗೆ ಗೂಗಲ್ ಕ್ಲೌಡ್ ಸೇವೆಗಳನ್ನು ತಲುಪಿಸುವ ಮೂಲಕ ತನ್ನ ಕ್ಲೈಂಟ್ ನೆಲೆಯನ್ನು ಗಣನೀಯವಾಗಿ ವಿಸ್ತರಿಸಲು ಗೂಗಲ್ ಮುಂದಾಗಿದೆ. ಇದಕ್ಕಾಗಿ ವಿಶಾಖಪಟ್ಟಣಂನಲ್ಲಿ 1GW ಉತ್ಪಾದನಾ ಸಾಮರ್ಥ್ಯದ ಡೇಟಾ ಸೆಂಟರ್ ತೆರೆಯುತ್ತಿದೆ. ಇಷ್ಟೇ ಅಲ್ಲದೆ, ಏರ್‌ಟೆಲ್ ಮತ್ತು ಗೂಗಲ್ ಜಂಟಿಯಾಗಿ ಅತ್ಯಾಧುನಿಕ (SOTA) ಕೇಬಲ್ ಲ್ಯಾಂಡಿಂಗ್ ಸ್ಟೇಷನ್ (CLS) ಅನ್ನು ಸಹ ಸ್ಥಾಪಿಸಲಿದ್ದು, ಇದು ಗೂಗಲ್‌ನ ಹೊಸ ಅಂತರರಾಷ್ಟ್ರೀಯ ಸಬ್‌ಸೀ ಕೇಬಲ್‌ಗಳಿಗೆ ಆತಿಥ್ಯ ವಹಿಸಲಿದೆ. ಇದು ಅತಿ ಹೆಚ್ಚು ಸಾಮರ್ಥ್ಯ ಮತ್ತು ಕಡಿಮೆ-ಲೇಟೆನ್ಸಿ ನೆಟ್‌ವರ್ಕ್‌ಗೆ ಕಾರಣವಾಗಲಿದೆ.

ನವದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ ರೈಲ್ವೆ, ಮಾಹಿತಿ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವೆ ಅಶ್ವಿನಿ ವೈಷ್ಣವ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಈ ಘೋಷಣೆಯು ಹೊರಬಿದ್ದಿದೆ. ಹಾಗಾದರೆ, ಗೂಗಲ್‌ನ AI ಡೇಟಾ ಸೆಂಟರ್‌ನಿಂದ ಭಾರತಕ್ಕಾಗುವ ಪ್ರಮುಖ ಪ್ರಯೋಜನಗಳು ಏನು ಎಂಬುದನ್ನು ಸಹ ನೋಡೋಣ ಬನ್ನಿ,
AI ಮತ್ತು ಡಿಜಿಟಲ್ ಕ್ರಾಂತಿಗೆ ಹೊಸ ವೇಗ
ಭಾರತದಲ್ಲಿ ಸ್ಥಾಪಿತವಾಗುತ್ತಿರುವ ಭಾರೀ AI ಡೇಟಾ ಸೆಂಟರ್‌ಗಳು ಕೇವಲ ತಾಂತ್ರಿಕ ಹಂತದ ಪ್ರಗತಿಯಲ್ಲ, ಇದು ದೇಶದ ವೈಜ್ಞಾನಿಕ ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳಿಗೆ ಹೊಸ ಬದುಕು ನೀಡುತ್ತದೆ. ದೇಶದ ಯುವ ತಂತ್ರಜ್ಞರು, ಸಂಶೋಧಕರು ಮತ್ತು ಉದ್ಯಮಿಗಳು ಈ ಕೇಂದ್ರಗಳ ಮೂಲಕ AI ಕ್ಷೇತ್ರದಲ್ಲಿ ನವೀನ ಬದಲಾವಣೆಯನ್ನು ತರಲು ಸಾಧ್ಯವಾಗುತ್ತದೆ.
ಕ್ಲೌಡ್ ಸೇವೆಗಳ ಸುಧಾರಣೆ
ಹೆಚ್ಚಿನ ಸಾಮರ್ಥ್ಯದ ಡೇಟಾ ಸೆಂಟರ್‌ಗಳು ಭಾರತೀಯ ವ್ಯವಹಾರಗಳಿಗೆ ಕಡಿಮೆ ಲೇಟೆನ್ಸಿ ಗೂಗಲ್ ಕ್ಲೌಡ್ ಸೇವೆಗಳನ್ನು ಒದಗಿಸುವುದರಿಂದ, ದೈನಂದಿನ ಉದ್ಯಮ ಚಟುವಟಿಕೆಗಳು ವೇಗವಾಗಿ ನಡೆಯುತ್ತವೆ. ಮಾತ್ರವಲ್ಲ, ಉದ್ಯಮಗಳಲ್ಲಿ ಹೆಚ್ಚು ಉತ್ಸಾಹ ಮತ್ತು ನವೀನತೆಯನ್ನು ತರಲು ಸಹಾಯ ಮಾಡುತ್ತದೆ.
ಅಂತರರಾಷ್ಟ್ರೀಯ ಸಂಪರ್ಕ ಬಲವರ್ಧನೆ
ಏರ್‌ಟೆಲ್ ಸಹಯೋಗದೊಂದಿಗೆ ಸ್ಥಾಪನೆಯಾಗುವ CLS ಮತ್ತು ಸಬ್‌ಸೀ ಕೇಬಲ್‌ಗಳು ಭಾರತದ ಜಾಗತಿಕ ಇಂಟರ್ನೆಟ್ ಸಂಪರ್ಕವನ್ನು ಸುಧಾರಿಸುತ್ತವೆ. ಓದುಗರಿಗೆ, ಉದ್ಯಮಿಗಳಿಗೆ ಮತ್ತು ಜನತೆಗೆ ಇದು ತ್ವರಿತ, ವಿಶ್ವಾಸಾರ್ಹ ಮತ್ತು ನಿರಂತರ ಸಂಪರ್ಕವನ್ನು ಖಚಿತಪಡಿಸುತ್ತದೆ. ಮತ್ತು ನಮ್ಮ ದೇಶವನ್ನು ಜಾಗತಿಕ ಡಿಜಿಟಲ್ ಜಾಲದಲ್ಲಿ ಬಲಿಷ್ಠವಾಗಿ ನೆಲೆಸಲು ಸಹಾಯ ಮಾಡುತ್ತದೆ.
ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ
$15 ಬಿಲಿಯನ್ ಹೂಡಿಕೆಯು ಆಂಧ್ರಪ್ರದೇಶ ಮತ್ತು ವಿಶಾಖಪಟ್ಟಣಂನಲ್ಲಿ ಸಾವಿರಾರು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಸ್ಥಳೀಯ ಸಮುದಾಯಗಳಿಗೆ ನೈಜ ಪ್ರಯೋಜನ ತರುತ್ತದೆ. ಈ ಬೆಳವಣಿಗೆ ಸ್ಥಳೀಯ ಆರ್ಥಿಕತೆಯನ್ನು ಸ್ಫೂರ್ತಿಪೂರಿತವಾಗಿ ಚುರುಕುಗೊಳಿಸುತ್ತದೆ.
ಭಾರತದ ಜಾಗತಿಕ ಸ್ಥಾನಮಾನ ವೃದ್ಧಿ
ಅತಿದೊಡ್ಡ AI ಡೇಟಾ ಸೆಂಟರ್ ಭಾರತಕ್ಕೆ ಜಾಗತಿಕ AI ನಕ್ಷೆಯಲ್ಲಿ ಪ್ರಮುಖ ಸ್ಥಾನವನ್ನು ನೀಡುತ್ತದೆ. ಇದು ಕೇವಲ ತಂತ್ರಜ್ಞಾನ ಸಾಧನೆಯಲ್ಲ, ಭಾರತದ ಪ್ರತಿಭೆ, ಸೃಜನಶೀಲತೆ ಮತ್ತು ಆವಿಷ್ಕಾರ ಶಕ್ತಿಯನ್ನು ವಿಶ್ವಕ್ಕೆ ತೋರಿಸುವ ಒಂದು ಅವಕಾಶವಾಗಿದೆ.
ಶುದ್ಧ ಇಂಧನ ಮತ್ತು ಸುಸ್ಥಿರತೆ
1GW ಶುದ್ಧ ಇಂಧನ ಬಳಕೆಯ ಯೋಜನೆಯೊಂದಿಗೆ, ಈ ಡೇಟಾ ಸೆಂಟರ್ ಹವಾಮಾನ ಸ್ನೇಹಿ ಟೆಕ್ ಮೂಲಸೌಕರ್ಯದ ಸಂಕೇತವಾಗುತ್ತದೆ. ಇದು ತಾಂತ್ರಿಕ ಅಭಿವೃದ್ಧಿಯ ಜೊತೆಗೆ ಪರಿಸರ ಕಾಳಜಿಯೂ ಒಳಗೊಂಡಿದೆ, ಮುಂದಿನ ತಲೆಮಾರಿಗೆ ಮಾದರಿಯಾಗುವ ಕೆಲಸವನ್ನು ಮಾಡುತ್ತದೆ.
ಈ ಮೇಲಿನ ಅಂಶಗಳು ವೈಯಕ್ತಿಕ ಮತ್ತು ರಿಚರ್ಸ್ ಮಾಡಿದ ಅಭಿಪ್ರಾಯವಾಗಿವೆ. ಒಟ್ಟಾರೆಯಾಗಿ, ಈ ಬೃಹತ್ ಯೋಜನೆಯು ಭಾರತವನ್ನು ಕೇವಲ ತಂತ್ರಜ್ಞಾನದ ಗ್ರಾಹಕನನ್ನಾಗಿ ಇರಿಸದೆ, ಜಾಗತಿಕ ಹೊಸತನ ಮತ್ತು ಆರ್ಥಿಕ ಬೆಳವಣಿಗೆಯ ಎಂಜಿನ್ ಆಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಬಹುದು. ಗೂಗಲ್ ಕಂಪೆನಿಯು ಯುಎಸ್ ಹೊರಗೆ ಜಗತ್ತಿನ ಯಾವುದೇ ಸ್ಥಳದಲ್ಲಿ ಮಾಡುತ್ತಿರುವ ಅತಿದೊಡ್ಡ ಹೂಡಿಕೆ ಇದಾಗಿರುವುದು ನಮ್ಮ ಭಾರತದ ಹೆಮ್ಮೆಯೇ ಸರಿ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು?. ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.
ಮೂಲ: gadgets360


Click it and Unblock the Notifications








