'ಡ್ರಾಗನ್ ಫ್ಲೈ' ಯೋಜನೆ ಬೇಡವೆಂದು ಗೂಗಲ್ ವಿರುದ್ದ ತಿರುಗಿಬಿದ್ದ 1400 ಉದ್ಯೋಗಿಗಳು!!
ಚೀನಾದಿಂದ ಹೊರಬಿದ್ದಿದ್ದ ಗೂಗಲ್ ಇದೀಗ ಮತ್ತೆ ಚೀನಾ ಪ್ರವೇಶಿಸಲು ಯತ್ನಿಸುತ್ತಿರುವ ವಿಷಯದಲ್ಲಿ ಗೂಗಲ್ ವಿರುದ್ದ ಕಂಪೆನಿ ಉದ್ಯೋಗಿಗಳು ಪ್ರತಿಭಟಿಸಿದ್ದಾರೆ. ಚೀನಾದಲ್ಲಿ ಗೂಗಲ್ ತರುವ ಯೋಜನೆಯನ್ನು 'ರಹಸ್ಯವಾಗಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದು ಕಂಪನಿ ನೀತಿಗೆ ವಿರುದ್ಧವಾದುದು ಎಂದು 1400 ಉದ್ಯೋಗಿಗಳು ಅಪಸ್ವರ ತೆಗೆದಿದ್ದಾರೆ.
ಚೀನಾದ ಸೆನ್ಸಾರ್‌ಶಿಪ್ ಅಡಿಯಲ್ಲಿ ರಹಸ್ಯವಾಗಿ ಸರ್ಚ್ ಎಂಜಿನ್ ಆರಂಭಿಸುತ್ತಿರುವುದು ಕಂಪನಿ ನೀತಿಗೆ ವಿರುದ್ಧವಾದುದು.ಈ ಯೋಜನೆಯಿಂದ ಕಂಪನಿಯ ಪಾರದರ್ಶಕತೆ ಹಾಗೂ ನೀತಿಗೆ ಧಕ್ಕೆಯಾಗಲಿದೆ. ಕಂಪನಿಯ ತತ್ವ ಮತ್ತು ಪಾರದರ್ಶಕತೆಯ ನೀತಿಯನ್ನು ಉನ್ನತಾಧಿಕಾರಿಗಳು ಅವಲೋಕನ ಮಾಡಬೇಕು ಎಂದು 1400 ಉದ್ಯೋಗಿಗಳು ಪತ್ರ ಬರೆದು ಒತ್ತಾಯಿಸಿದ್ದಾರೆ.

ಚೀನಾಕ್ಕೆ ಗೂಗಲ್ ಕಾಲಿಡುತ್ತಿರುವ ವಿಷಯದಲ್ಲಿ 'ಡ್ರಾಗನ್‌ಫ್ಲೈ' ಎನ್ನುವ ಅಡ್ಡ ಹೆಸರಷ್ಟೇ ಉದ್ಯೋಗಿಗಳಿಗೆ ಗೊತ್ತು. ಯೋಜನೆ ಬಗ್ಗೆ ಕಂಪನಿಯು ಯಾವುದೇ ವಿವರಗಳನ್ನು ಉದ್ಯೋಗಿಗಳಿಗೆ ನೀಡುತ್ತಿಲ್ಲ ಎಮದು ಆರೋಪಿದ್ದಾರೆ. ಇನ್ನು ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಗೂಗಲ್ ಸಿಇಒ ಸುಂದರ್ ಪಿಚ್ಬೆೃ ಅವರು ಉದ್ಯೋಗಿಗಳನ್ನು ಸಮಾಧಾನಪಡಿಸುವಂತಹ ಉತ್ತರ ನೀಡಿದ್ದಾರೆ.

ಪ್ರಾಯೋಗಿಕ ಹಂತದಲ್ಲಿದೆ!
ಚೀನಾದ ಸೆನ್ಸಾರ್‌ಶಿಪ್ ಅಡಿಯಲ್ಲಿ ರಹಸ್ಯವಾಗಿ ಚೀನಾದಲ್ಲಿ ಗೂಗಲ್ ತರುವ ಯೋಜನೆಯನ್ನು ವಿರೋಧಿಸಿ ಪ್ರತಿಭಟಿಸಿರುವ ಉದ್ಯೋಗಿಗಳಿಗೆ ಸುಂದರ್ ಪಿಚ್ಬೆೃ ಅವರು ಸಮಾಧಾನ ಪಡಿಸುವಂತಹ ಉತ್ತರ ನೀಡಿದ್ದಾರೆ. ಯೋಜನೆ ಇನ್ನೂ ಆರಂಭಿಕ ಹಾಗೂ ಪ್ರಾಯೋಗಿಕ ಹಂತದಲ್ಲಿದೆ ಎಂದು ಪಿಚ್ಬೆೃ ಹೇಳಿದರೆ, ತನ್ನ ತತ್ವಗಳ ವಿಷಯದಲ್ಲಿ ಕಂಪನಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಗೂಗಲ್ ಸಹ-ಸಂಸ್ಥಾಪಕ ಸರ್ಜಿ ಬ್ರಿನ್ ಅವರು ಭರವಸೆ ನೀಡಿದ್ದಾರೆ.

ಗೂಗಲ್ ತನ್ನ ತತ್ವವನ್ನು ಮುರಿಯುತ್ತಿದೆಯೇ?
ಸೆನ್ಸಾರ್ಶಿಪ್ ಮತ್ತು ಹ್ಯಾಕಿಂಗ್ ವಿಚಾರವಾಗಿ ಚೀನಾದಿಂದ ಬ್ಯಾನ್ ಆಗಿದ್ದ ಗೂಗಲ್ ಸಂಸ್ಥೆ ಇದೀಗ ಮತ್ತೆ ಚೀನಾಗೆ ಕಾಲಿಡಲು ಮುಂದಾಗಿರುವುದು ಆದಾಯದಿಂದ ದೃಷ್ಟಿಯಿಂದ ಮಾತ್ರ. ಇದರಿಂದ ಕಂಪನಿಯ ತತ್ವ ಮತ್ತು ಪಾರದರ್ಶಕತೆಯ ನೀತಿ ಹಾಳಾಗುತ್ತದೆ ಎಂದು ಗೂಗಲ್ ಉದ್ಯೋಗಿಗಳು ಅಭಿಪ್ರಾಯಪಟ್ಟಿದ್ದಾರೆ. ಇದು ಭವಿಷ್ಯದಲ್ಲಿ ಮಾರಕವಾಗಬಹುದು ಎಂಬ ಅಭಿಪ್ರಾಯವನ್ನು ಉದ್ಯೋಗಿಗಳು ತಿಳಿಸಿದ್ದಾರೆ.

ಚೀನಾದಲ್ಲಿ ಗೂಗಲ್‌ಗೆ ಜಾಗ ಇಲ್ಲ!
ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆ ಚೀನಾದಲ್ಲಿ ಈ ಹಿಂದೆ ಗೂಗಲ್ ಪದಾರ್ಪಣೆ ಮಾಡಿದ್ದರೂ, ನಂತರ ನಿಷೇಧಕ್ಕೀಡಾಗಿತ್ತು. 2006ರಲ್ಲಿ ಚೀನಾದಲ್ಲಿ ತನ್ನ 'ಗೂಗಲ್ ಚೀನಾ' ಸೇವೆಯನ್ನು ಆರಂಭಿಸಿದ್ದ ಗೂಗಲ್‌ನ ಎಲ್ಲಾ ಸೇವೆಗಳನ್ನು 2010ರ ವೇಳೆಗೆ ನಿಷೇಧಿಸಲಾಗಿತ್ತು. ನಿಷೇಧದ ನಂತರ ಮತ್ತೆ ಚೀನಾದಲ್ಲಿ ಗೂಗಲ್‌ಗೆ ಜಾಗ ಇಲ್ಲ ಎನ್ನುವ ಪರಿಸ್ಥಿತಿ ಕೂಡ ಎದುರಾಗಿತ್ತು.ಆದರೆ, ಈಗ ಬದಲಾದ ವಿದ್ಯಮಾನಗಳಲ್ಲಿ ಇಂಟರ್‌ನೆಟ್ ದಿಗ್ಗಜ ಗೂಗಲ್ ಚೀನಾದಲ್ಲಿ ಮತ್ತೆ ತನ್ನ ಸೇವೆಯನ್ನು ಮತ್ತೆ ಆರಂಭಿಸಲು ಸಿದ್ಧತೆ ನಡೆಸಿದೆ.

ಚೀನಾದಲ್ಲಿ ಗೂಗಲ್ ನಿಷೇಧವಾಗಿದ್ದೇಕೆ?
ಗೂಗಲ್ ಹೇಳಿಕೊಂಡಂತೆ, 2010ರಲ್ಲಿ ನಡೆದಿದ್ದ ಸೈಬರ್ ದಾಳಿಯಿಂದಾಗಿ ಇದರ ಸೋರ್ಸ್ ಕೋಡ್ ಹಾಗು ಅಲ್ಲಿನ ಮಾನವ ಹಕ್ಕುಗಳ ಆಯೋಗದವರ ಇ-ಮೇಲ್ ಸಂದೇಶಗಳು ಸೋರಿಕೆಯಾಗಿತ್ತು. ಇದಾದ ಬಳಿಕ ಗೂಗಲ್‌ನ ಗ್ರೇಟ್ ಫೈರ್ವಾಲ್ ಹ್ಯಾಕರ್ಗಳನ್ನು ಪತ್ತೆಹಚ್ಚಲು ವಿಫಲವಾಗಿತ್ತು. ಈ ಎಲ್ಲಾ ಕಾರಣದಿಂದ ಗೂಗಲ್ನ್ನು ಚೀನಾದಲ್ಲಿ ನಿಷೇಧಿಸಲಾಗಿತ್ತು.

ಚೀನಾದ ಸರಕಾರ ಕೋರಿದ ಗೂಗಲ್!
ಚೀನಾದಲ್ಲಿ 8,000ಕ್ಕೂ ಅಧಿಕ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಲಾಗಿದ್ದು, ಮುಖ್ಯವಾಹಿ ವಿದೇಶಿ ಮೂಲದ ಇಂಟರ್‌ನೆಟ್, ವೆಬ್‌ಸೈಟ್‌ಗಳಿಗೆ ಅಲ್ಲಿ ನಿರ್ಬಂಧವಿದೆ. ಅದಕ್ಕೆ ತಕ್ಕಂತೆ ಇಂಟರ್‌ನೆಟ್ ಸೆನ್ಸಾರ್‌ಶಿಪ್ ನೀತಿ ಅಲ್ಲಿದೆ. ಇದರ ಹಂತವಾಗಿ ಚೀನಾ ನಿರ್ಭಂಧಿಸಿರುವ ತಾಣಗಳನ್ನು ಬ್ಲಾಕ್ ಮಾಡಲು ಗೂಗಲ್ ಸಂಸ್ಥೆ ಚೀನಾದ ಸರಕಾರದ ಸಹಾಯ ಕೇಳಿದೆ.

ಚೀನಾ ಸರ್ಚ್ ಆಪ್ ಅಭಿವೃದ್ಧಿ!
ದಿ ಇಂಟರ್ಸೆಪ್ಟ್ ವರದಿ ಪ್ರಕಾರ, ಗೂಗಲ್ ಬೆಂಬಲಿತ ಚೀನಾದ ಸರ್ಚ್ ಆಪ್ವೊಂದು ಅಭಿವೃದ್ಧಿ ಪಡಿಸಲಾಗಿದೆ, ಚೀನಾದ ಅಧಿಕಾರಿಗಳಿಗೂ ಇದರ ಕುರಿತು ಪರೀಕ್ಷಿಸಲು ಆಪ್ ಕಾರ್ಯವೈಖರಿಯನ್ನು ತೋರಿಸಲಾಗಿದೆ.ಇದರ ಮೂಲಕ ಚೀನಾ ಸರಕಾರ ಬ್ಲಾಕ್ ಮಾಡಿರುವ ವೆಬ್‌ಸೈಟ್‌ಗಳನ್ನು ತನ್ನ ಸೈಟ್ನಲ್ಲಿ ಕಾಣಿಸದಂತೆ ತಡೆಗಟ್ಟಲಾಗುತ್ತದೆ ಎಂದು ಹೇಳಲಾಗಿದೆ.

ಗೂಗಲ್‌ಗೆ ಲಾಭವೇನು?
ವಿಶ್ವದಾದ್ಯಂತ ಮಾರುಕಟ್ಟೆಯನ್ನು ಹೊಂದಿರುವ ಗೂಗಲ್ ಚೀನಾ ದ ಮಾರುಕಟ್ಟೆಯನ್ನು ಬಿಟ್ಟುಕೊಡಲು ತಯಾರಾಗಿಲ್ಲ. ಜೊತೆಗೆ ಅಮೆಜಾನ್ ಮತ್ತು ಮೈಕ್ರೊಸಾಫ್ಟ್‌ಗೆ ಕಂಪೆನಿಗಳಿಗೆ ಪೈಪೋಟಿ ನೀಡಲು ಚೀನಾದಲ್ಲಿ ಕ್ಲೌಡ್ ಸೇವೆ ಅನುಕೂಲಕರ. ಜಾಗತಿಕ ಮಟ್ಟದಲ್ಲಿ ಕ್ಲೌಡ್ ಬಿಸಿನೆಸ್ ಮಾಡಲು ಚೀನಾ ನಿರ್ಣಾಯಕ ಮಾರುಕಟ್ಟೆಯಾಗಿದೆ.

ಚೀನಿ ಕಂಪನಿಗಳ ಜತೆ ಮಾತುಕತೆ!
ಚೀನಾದ ನೆಟ್ ದಿಗ್ಗಜ ಟೆನ್ಸೆಂಟ್ ಹೋಲ್ಡಿಂಗ್ಸ್, ಇನ್ಸ್‌ಪರ್ ಗ್ರೂಪ್‌ನಂಥಹ ಕಂಪನಿಗಳಿಗೆ ತನ್ನ ಕ್ಲೌಡ್ ಸೇವೆಯನ್ನು ನೀಡಲು ಗೂಗಲ್ ಮಾತುಕತೆ ನಡೆಸಿದೆ. ಈ ವರ್ಷದ ಆರಂಭದಲ್ಲಿಯೇ ಮಾತುಕತೆ ನಡೆದಿದ್ದು, ಮೂರು ಕಂಪನಿಗಳ ಜತೆ ಸಹಭಾಗಿತ್ವಕ್ಕೆ ಗೂಗಲ್ ಒಲವು ವ್ಯಕ್ತಪಡಿಸಿದೆ. ಗೂಗಲ್ ಚೀನಿ ಕಂಪನಿಗಳಲ್ಲಿ ಹೂಡಿಕೆಗೆ ಈಗಾಗಲೇ ತೊಡಗಿಸಿಕೊಂಡಿದೆ.


Click it and Unblock the Notifications








