ಪಾಸ್‌ಪೋರ್ಟ್ ಅಪ್ಲಿಕೇಶನ್ ಹಾಕೋಕು ಮುನ್ನ ಇರಲಿ ಎಚ್ಚರ; ಇಲ್ಲಿವೆ ನಕಲಿ ವೆಬ್‌ಸೈಟ್‌ಗಳು!
ಹೊಸ ಪಾಸ್‌ಪೋರ್ಟ್‌ಗೆ ಅಪ್ಲಿಕೇಶನ್ ಹಾಕ್ತಾ ಇದ್ದೀರಾ. ಅಪ್ಲಿಕೇಶನ್ ಹಾಕೋಕು ಮುಂಚೆ ಯಾವ ವೆಬ್‌ಸೈಟ್‌ನಲ್ಲಿ ಅಪ್ಲಿಕೇಶನ್ ಹಾಕುತ್ತಿದ್ದೀರಾ ಅನ್ನೋದನ್ನ ಒಂದ್ ಸಲ ಚೆಕ್ ಮಾಡಿಕೊಳ್ಳಿ. ಯಾಕಂದ್ರೆ ಭಾರತದ ಪಾಸ್‌ಪೋರ್ಟ್ ಅಪ್ಲಿಕೇಶನ್ ವೆಬ್‌ಸೈಟ್ ರೂಪದಲ್ಲಿ ಹಲವು ನಕಲಿ ವೆಬ್‌ಸೈಟ್‌ಗಳು ಕೂಡ ಕಾರ್ಯನಿರ್ವಹಿಸುತ್ತಿವೆ.
ಹೌದು, ಪಾಸ್‌ಪೋರ್ಟ್ ಸೇವೆ ನೀಡುವ ರೂಪದಲ್ಲಿ ಹಲವು ನಕಲಿ ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುತ್ತಿರುವ ಕಂಡು ಬಂದಿದೆ. ಅಲ್ಲದೆ ಈ ರೀತಿ ಫೇಕ್ ಸರ್ವಿಸ್ ನೀಡುತ್ತಿರುವ ಆ್ಯಪ್ ಮತ್ತು ವೆಬ್‌ಸೈಟ್‌ಗಳ ಬಗ್ಗೆ ಭಾರತ ಸರ್ಕಾರ ಬಳಕೆದಾರರಿಗೆ ಎಚ್ಚರಿಕೆಯನ್ನು ಸಹ ನೀಡಿದೆ. ಹಾಗಾದ್ರೆ ಭಾರತದಲ್ಲಿ ಪಾಸ್‌ಪೋರ್ಟ್ ಸೇವೆ ನೀಡುವುದಾಗಿ ಹೇಳಿ ಕಾರ್ಯನಿರ್ವಹಿಸುತ್ತಿರುವ ನಕಲಿ ವೆಬ್‌ಸೈಟ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪಾಸ್‌ಪೋರ್ಟ್ ಸೇವೆ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಗಳು
ಭಾರತದಲ್ಲಿ ಪಾಸ್‌ಪೋರ್ಟ್ ಸೇವೆಗಳನ್ನು ನೀಡುವುದಾಗಿ ಹೇಳಿಕೊಂಡು ಕಾರ್ಯನಿರ್ವಹಿಸುತ್ತಿರುವ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ. ಈ ನಕಲಿ ವೆಬ್‌ಸೈಟ್‌ಗಳು ಪಾಸ್‌ಪೋರ್ಟ್ ಅರ್ಜಿದಾರರಿಂದ ಡೇಟಾವನ್ನು ಸಂಗ್ರಹಿಸುತ್ತಿವೆ. ಅಲ್ಲದೆ ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ಸೇವೆ ಸಂಬಂಧ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆದರಿಂದ ನಾಗರಿಕರು ನಕಲಿ ವೆಬ್‌ಸೈಟ್‌ಗಳ ಬಳಕೆಯಿಂದ ದೂರ ಇರುವಂತೆ ಭಾರತ ಸರ್ಕಾರ ಸಲಹೆ ನೀಡಿದೆ.
ಭಾರತ ಸರ್ಕಾರ ಗುರುತಿಸಿದ ನಕಲಿ ವೆಬ್‌ಸೈಟ್‌ಗಳ ವಿವರ ಇಲ್ಲಿದೆ
www.indiapassport.org
www.online-passportindia.com
www.passportindiaportal.in
www.passport-india.in
www.passport-seva.in
www.applypassport.org
ಈ ನಕಲಿ ವೆಬ್‌ಸೈಟ್‌ಗಳಲ್ಲಿ ಕೆಲವನ್ನು ತೆರೆದಾಗ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ತೋರಿಸಲಿದೆ. ಇನ್ನು ಕೆಲವು ವೆಬ್‌ಸೈಟ್‌ಗಳು ಮತದಾರರ ಕಾರ್ಡ್ ಸೇರಿದಂತೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹಲವಾರು ಆಯ್ಕೆಗಳನ್ನು ತೆರೆಯುತ್ತದೆ. ಆದರೆ ಈ ವೆಬ್‌ಸೈಟ್‌ಗಳು ಪಾಸ್‌ಪೋರ್ಟ್ ಅರ್ಜಿದಾರರ ಸೂಕ್ಷ್ಮ ಡೇಟಾವನ್ನು ಕದಿಯುವ ಗುರಿಯನ್ನು ಹೊಂದಿರುತ್ತವೆ. ಮತ್ತೊಂದು ವೆಬ್‌ಸೈಟ್ ಬಳಕೆದಾರರಿಂದ ಹಣವನ್ನು ಕದಿಯುವ ಪ್ರಯತ್ನವನ್ನು ಸಹ ಮಾಡಲಿದೆ.
ಪಾಸ್‌ಪೋರ್ಟ್ ಸೇವೆ ಪಡೆಯಲು ಲಭ್ಯವಿರುವ ಅಧಿಕೃತ ವೆಬ್‌ಸೈಟ್ ಯಾವುದು?
ಭಾರತದಲ್ಲಿ ಪಾಸ್‌ಪೋರ್ಟ್ ಸೇವೆಗಳನ್ನು ಪಡೆಯುವುದಕ್ಕೆ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವೆಬ್‌ಸೈಟ್ www.passportindia.gov.in ಆಗಿದೆ. ಇದು ಭಾರತದಲ್ಲಿ ದೇಶಾದ್ಯಂತ ಪಾಸ್‌ಪೋರ್ಟ್ ಅರ್ಜಿದಾರರಿಗೆ ಎಲ್ಲಾ ಪಾಸ್‌ಪೋರ್ಟ್ ಸಂಬಂಧಿತ ಸೇವೆಗಳನ್ನು ನೀಡುವ ಏಕೈಕ ವೆಬ್‌ಸೈಟ್ ಆಗಿದೆ. ಇನ್ನು ದೇಶದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ದೇಶದಾದ್ಯಂತ 36 ಪಾಸ್‌ಪೋರ್ಟ್ ಕಚೇರಿಗಳನ್ನು ಹೊಂದಿದದೆ. ಹಾಗೆಯೇ ವಿದೇಶದಲ್ಲಿ 190 ಭಾರತೀಯ ಮಿಷನ್‌ಗಳು ಮತ್ತು ಅಂಚೆ ಜಾಲದ ಮೂಲಕ ಭಾರತೀಯ ನಾಗರಿಕರಿಗೆ ಪಾಸ್‌ಪೋರ್ಟ್‌ಗಳನ್ನು ವಿತರಿಸುವ ಜವಾಬ್ದಾರಿಯನ್ನು ಹೊಂದಿದೆ.

ಇನ್ನು ಪಾಸ್‌ಪೋರ್ಟ್‌ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಬಗ್ಗೆ ನೋಡುವುದಾದರೆ, ಪಾಸ್‌ಪೋರ್ಟ್‌ನಲ್ಲಿ ನಿಮ್ಮ ಅಡ್ರೆಸ್ ಚೇಂಜ್ ಮಾಡುವುದು ಇದೀಗ ತುಂಬಾ ಸುಲಭವಾಗಿದೆ. ಇದಕ್ಕಾಗಿ ನೀವು ಆನ್‌ಲೈನ್‌ನಲ್ಲಿ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಅದು ಏನು ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.
ಪಾಸ್‌ಪೋರ್ಟ್ನಲ್ಲಿ ನಿಮ್ಮ ಅಡ್ರೆಸ್ ಚೇಂಜ್ ಮಾಡುವುದು ಹೇಗೆ ಗೊತ್ತಾ?
* ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ಗೆ ಭೇಟಿ ನೀಡಿರಿ
* "ಅಸ್ತಿತ್ವದಲ್ಲಿರುವ ಬಳಕೆದಾರ" ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ತಮ್ಮ ಅಕೌಂಟ್‌ಗೆ ಲಾಗಿನ್ ಆಗಿರಿ
* ಇದೀಗ ಸ್ಕ್ರೀನ್ ಮೇಲೆ ಅಪ್ಲಿಕೇಶನ್ ಫಾರ್ಮ್ ಕಾಣಲಿದೆ
* ನಿಮಗೆ ಸಂಬಂಧಿಸಿದ ಟ್ಯಾಬ್‌ನಲ್ಲಿ ಕ್ಲಿಕ್ ಮಾಡಿರಿ
* ಮುಂದುವರಿಯಲು ಅಗತ್ಯ ವಿವರಗಳನ್ನು ಒದಗಿಸಿ
* ಇದೀಗ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಿರಿ
* ಅಪಾಯಿಂಟ್‌ಮೆಂಟ್ ನಿಗದಿಪಡಿಸಲು ಅರ್ಜಿ ಶುಲ್ಕವನ್ನು ಪಾವತಿಸಿರಿ
* ಇದೀಗ ನೀವು ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಬೇಟಿ ನೀಡಿ ನಿಮ್ಮ ಅಡ್ರೆಸ್ ಅನ್ನು ಬದಲಾಯಿಸಬಹುದು.


Click it and Unblock the Notifications








