BSNL ಪುನಶ್ಚೇತನಕ್ಕೆ ಸರ್ಕಾರದಿಂದ ಹಣಕಾಸು ನೆರವು!..ಆದರೆ ಮರುಜೀವ ಸಾಧ್ಯವಿಲ್ಲ!!
ಭಾರತದ ಟೆಲಿಕಾಂನಲ್ಲಿ ನಡೆಯುತ್ತಿರುವ ದರಸಮರಕ್ಕೆ ಸಿಲುಕಿ ನಲುಗುತ್ತಿರುವ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಸಂಸ್ಥೆಗಳಾದ ಭಾರತ್ ಸಂಚಾರ ನಿಗಮ ನಿಯಮಿತ (BSNL) ಹಾಗೂ ಮಹಾನಗರ ಟೆಲಿಫೋನ್ ನಿಗಮ ನಿಯಮಿತಗಳ (MTNL) ಪುನಶ್ಚೇತನಕ್ಕೆ ಅಗತ್ಯ ಹಣಕಾಸು ನೆರವು ನೀಡಲು ಕೇಂದ್ರ ಸರ್ಕಾರ ಮುಂದಾಗಿ (ಪ್ರಧಾನಿ ಕಚೇರಿ) ಒಪ್ಪಿಗೆ ನೀಡಿದೆ.
ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಸಂಸ್ಥೆಗಳು ಈ ಸ್ಪರ್ಧಾತ್ಮಕ ಟೆಲಿಕಾಂ ವಲಯದಲ್ಲಿ ಅಸ್ತಿತ್ವ ಉಳಿಸಿಕೊಂಡು ಲಾಭದಾಯಕವಾಗಿ ಮುನ್ನಡೆಸುವ ಸಲುವಾಗಿ ಹಣಕಾಸು ನೆರವೂ ಸೇರಿದಂತೆ ಅಗತ್ಯವಾದ ಹೆಚ್ಚು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗಿದ್ದು, ಈ ಬಗ್ಗೆ ಪ್ರಸ್ತಾವ ಸಲ್ಲಿಸಲು ದೂರಸಂಪರ್ಕ ಸಚಿವಾಲಯಕ್ಕೆ ಸೂಚಿಸಲಾಗಿದೆ ಎಂದು ತಿದುಬಂದಿದೆ.

ಬಿಎಸ್ಎನ್ಎಲ್ ಸಾಲದ ಪ್ರಮಾಣ 14 ಸಾವಿರ ಕೋಟಿ ಇದ್ದು, ದೇಶದಾದ್ಯಂತ 4ಜಿ ತರಂಗಾಂತರ ಸೇವೆ ಕಲ್ಪಿಸಲು ಸಂಸ್ಥೆಗೆ 7 ಸಾವಿರ ಕೋಟಿ ಬಂಡವಾಳ ಬೇಕಾಗಿದರುವುದರಿಂದ ಈ ಎಲ್ಲಾ ನೆರವನ್ನು ನೀಡಲು ಸರ್ಕಾರ ಮುಂದಾಗಿದೆ. ಆದರೆ, ಸರ್ಕಾರ ಏನೇ ಸೌಲಭ್ಯ ಕಲ್ಪಿಸಿದರೂ ಕೂಡ ಬಿಎಸ್‌ಎನ್‌ಎಲ್ ಮರುಜೀವ ಪಡೆಯುವ ಸಲುವಾಗಿ ಈ ಅಗತ್ಯತೆಗಳು ಇವೆ.

ಬಿಎಸ್‌ಎನ್ಎಲ್ ಉಳಿಯಲೇಬೇಕು!
ಖಾಸಗೀಕರಣದಿಂದ ಗ್ರಾಹಕರಿಗೆ ಅತ್ಯುತ್ತಮ ಸೇವೆಯೇನೋ ಸಿಗುತ್ತದೆ ಆದರೆ, ಸರ್ಕಾರಿ ಸಂಸ್ಥೆಗಳ ಅಳಿವು ಅಪಾಯಕರ. ಅದು ಖಾಸಗಿ ಸಂಸ್ಥೆಗಳ ಏಕಸ್ವಾಮ್ಯ ಹಾಗೂ ಸುಲಿಗೆಗೆ ಕಾರಣವಾಗುತ್ತದೆ. ಈ ಅಪಾಯವನ್ನು ತಪ್ಪಿಸಲು ಬಿಎಸ್‌ಎನ್‌ಎಲ್ ಮರುಜೀವ ಪಡೆಯುವುದು ಅಗತ್ಯವಾಗಿದೆ. ಇದಕ್ಕೆ ಸರ್ಕಾರದ ಹಣದ ಸಹಾಯ ಮಾತ್ರ ಮುಖ್ಯ ಎಂಬುದು ಸುಳ್ಳು.

4ಜಿ ತರಂಗಾಂತರ ಬೇಕಿದೆ!
ಇಂದು ಖಾಸಗಿ ಕಂಪನಿಗಳು ಊಹಾತೀತ ವೇಗ ಹಾಗೂ ಗುಣಮಟ್ಟದ ಸೇವೆಯನ್ನು ನೀಡುತ್ತಿದ್ದರೆ, ಬಿಎಸ್‌ಎನ್‌ಎಲ್ ಮಾತ್ರ ತಾನಿನ್ನೂ ಪೇಪರ್ ಜಮಾನದಲ್ಲೇ ನಿಂತಿದೆ. ಇದಕ್ಕೆ ಸರ್ಕಾರ ಕೂಡ ಕಾರಣವಾಗಿದ್ದು, 4ಜಿ ತರಂಗಾಂತರವನ್ನು ಬಿಎಸ್‌ಎನ್‌ಎಲ್‌ಗೆ ತರದೇ ಹಿಂದೆಬೀಳಿಸಿದೆ. ಹಾಗಾಗಿ, ಕೂಡಲೇ ಬಿಎಸ್‌ಎನ್‌ಎಲ್‌ಗೆ 4ಜಿ ತರಂಗಾಂತರ ನೀಡಬೇಕು.

ಬಿಎಸ್‌ಎನ್ಎಲ್ಗೆ ಬೇಕು ಜನಪ್ರಿಯತೆ!
ಖಸಾಗಿ ಟೆಲಿಕಾಂಗಳಿಗೆ ಇರುವ ಜನಪ್ರಿಯತೆ ಈಗ ಬಿಎಸ್‌ಎನ್ಎಲ್ಗೆ ಸಿಗುತ್ತಿಲ್ಲ. ಇದರ ಜೊತೆಗೆ ಬಿಎಸ್‌ಎನ್ಎಲ್ ಸೇವೆಗಳು ಆಕರ್ಷಕವಾಗಿಲ್ಲ. ಇದಕ್ಕಾಗಿ ಸರ್ಕಾರದ ದಿಟ್ಟ ನಾಯಕರು ಬಿಎಸ್‌ಎನ್ಎಲ್ಗೆ ಬೆನ್ನೆಲುಬಾಗಿ ನಿಲ್ಲಬೇಕು. ಬಿಎಸ್‌ಎನ್ಎಲ್ಗೆ ಸರ್ಕಾರದ ಅಡಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ನೀಡಿ ಸಂಸ್ಥೆಯ ಆಡಳಿತವನ್ನು ಚುರುಕುಗೊಳಿಸಬೇಕು.

ಆಡಳಿತಯಂತ್ರದಲ್ಲಿ ಬೇಕು ಗಟ್ಟಿತನ!
ಖಾಸಗಿ ಕಂಪನಿಗಳು ಟೆಲಿಕಾಂನಲ್ಲಿ ಗಟ್ಟಿಯಾಗಿ ಹೂಡಿವೆ. ಕಡಿಮೆ ಶುಲ್ಕ, ಉಚಿತ ಸಿಮ್, ಶೀಘ್ರ ಸೇವೆ, ನಂಬರ್ ಸುಲಭ ಪೋರ್ಟಬಿಲಿಟಿ, ದರಗಳಲ್ಲಿ ಸ್ಪರ್ಧಾತ್ಮಕತೆ ಇತ್ಯಾದಿಗಳ ಮೂಲಕ ಗ್ರಾಹಕರ ಮನಸ್ಸನ್ನು ಗೆದ್ದಿವೆ. ಆದರೆ, ಇತರೆ ಸರ್ಕಾರಿ ಸಂಸ್ಥೆಗಳಂತೆಯೇ ಬಿಎಸ್‌ಎನ್‌ಎಲ್ ಆಡಳಿತ ಯಂತ್ರವನ್ನು ಗಟ್ಟಿಗೊಳಿಕೊಳ್ಳದೇ ಸ್ಪರ್ಧೆ ನೀಡುವಲ್ಲಿ ವಿಫಲವಾಗುತ್ತಿದೆ.

ಸಿಬ್ಬಂದಿಗೆ ಕೌಶಲ್ಯಾಭಿವೃದ್ಧಿ ಬೇಕು
ಟೆಲಿಕಾಂನಂಥ ಸ್ಪರ್ಧಾತ್ಮಕ ವಲಯದಲ್ಲಿ ಸೇವೆ ಸಲ್ಲಿಸಲು ಅಗತ್ಯವಾದ ವಿನಯಶೀಲತೆ, ಗ್ರಾಹಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವ ಚುರುಕುತನ ಬಿಎಸ್‌ಎನ್ಎಲ್ ನೌಕರರಿಗೆ ಇಲ್ಲ ಎಂಬ ಅಪವಾದವಿದೆ. ಕಾಲಕಾಲಕ್ಕೆ ತನ್ನ ಸಿಬ್ಬಂದಿಗೆ ಕೌಶಲ್ಯಾಭಿವೃದ್ಧಿ ನೀಡದೇ ಬಿಎಸ್‌ಎನ್‌ಎಲ್ ಹಿಂದೆ ಬಿದ್ದಿದೆ. ಗ್ರಾಹಕರಿಗೆ ಸೇವೆ ಸಲ್ಲಿಸುವಲ್ಲಿ ಸಿಬ್ಬಂದಿ ಕೌಶಲ್ಯಾಭಿವೃದ್ಧಿ ಪಾತ್ರ ಹೆಚ್ಚು.

ವೃತ್ತಿಪರತೆ ಇಲ್ಲದೆ ಹೋದರೆ?
ಬಿಎಸ್‌ಎನ್‌ಎಲ್‌ಭಾರತದಲ್ಲಿ ಇಂದಿಗೂ ಬಲಿಷ್ಠವಾದ ಜಾಲವನ್ನು ಹೊಂದಿದೆ. ಆದರೆ ಸಿಬ್ಬಂದಿಗಳಿಗೆ ಸರಕಾರಿ ನೌಕರಿ ಎಂಬ ಮನೋಭಾವನೆ ಬದಲಿಸಿಕೊಳ್ಳುವ ಮತ್ತು ವೃತ್ತಿಪರತೆ ಪ್ರದರ್ಶಿಸುವ ಅಗತ್ಯ ಹಿಂದೆಂದಿಗಿಂತ ಈಗ ಹೆಚ್ಚಿದೆ. ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿಪರತೆ ಇಲ್ಲದೆ ಹೋದರೆ, ಸರಕಾರ ಎಷ್ಟು ಕೋಟಿ ನಿಧಿ ಒದಗಿಸಿದರೂ ಸಂಸ್ಥೆ ಉಳಿಯಲಾರದು.

ನೆರವು
ಒಂದು ವೇಳೆ ಬಿಎಸ್‌ಎನ್‌ಎಲ್ ಕೂಡ ಖಾಸಾಗಿ ಕಂಪೆನಿಗಳಂತೆ ಕಾರ್ಯನಿರ್ವಹಿಸಿದರೆ ಸರ್ಕಾರದ ನೆರವಿನ ಅಗ್ತತ್ಯತೆ ಇಲ್ಲ. ಇಂಥಹ ಸರ್ಕಾರಿ ನಿಯಮಿತ ಸಂಸ್ಥೆಗಳು ಉಳಿಯಬೇಕಾದ್ದು ಸರಕಾರಿ ನೆರವಿನಿಂದಲ್ಲ. ಅವು ತಮ್ಮ ಕಾಲ ಮೇಲೆ ತಾವೇ ನಿಲ್ಲುವುದು ಅಗತ್ಯವಾಗಿದೆ. ಇಲ್ಲವಾದಲ್ಲಿ ನಷ್ಟದಲ್ಲೇ ದೂಡುವ ಸರ್ಕಾರಿ ಸಂಸ್ಥೆಯನ್ನು ಉಳಿಸಲು ಸರ್ಕಾರಕ್ಕೂ ಸಾಧ್ಯವಿಲ್ಲ.


Click it and Unblock the Notifications