ನೀವು ಸ್ಮಾರ್ಟ್‌ಫೋನ್ ಕಳೆದುಕೊಂಡಿದ್ದೀರಾ? ಸರ್ಕಾರದಿಂದ ಬಂತು ಗುಡ್ ನ್ಯೂಸ್!
ಸ್ಮಾರ್ಟ್‌ಫೋನ್ ಕಳೆದುಹೋಗಿದೆ ಮುಂದೇನು ಮಾಡೋದು ಎಂದು ಚಿಂತಿಸುವವರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಕಳೆದುಕೊಂಡ ಸ್ಮಾರ್ಟ್‌ಫೋನ್‌ಗಳನ್ನು ಹುಡುಕಿಕೊಡುವುದಕ್ಕಾಗಿಯೇ ಹೊಸ ಸಿಸ್ಟಂ ಅನ್ನು ಜಾರಿಗೆ ತರಲು ಮುಂದಾಗಿದೆ. ಈ ಸಿಸ್ಟಂ ಅನ್ನು CEIR ಮತ್ತು ದೂರಸಂಪರ್ಕ ಇಲಾಖೆ ಅಭಿವೃದ್ಧಿಪಡಿಸಿದೆ ಎನ್ನಲಾಗಿದೆ.
ಹೌದು, ಕಳೆದುಹೋದ ಸ್ಮಾರ್ಟ್‌ಫೋನ್‌ಗಳನ್ನು ಹುಡುಕಿಕೊಡುವುದಾಗಿ CEIR ಸಿಸ್ಟಂ ಅನ್ನು ಜಾರಿಗೊಳಿಸಲು ಮುಂದಾಗಿದೆ. ಈ ವ್ಯವಸ್ಥೆಯು ಇದೇ ಮೇ 17 ರಿಂದ ಭಾರತದಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ. ಹಾಗಾದ್ರೆ ಈ ಹೊಸ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕೇಂದ್ರ ಸರ್ಕಾರ CEIR ಸಿಸ್ಟಂ ಅನ್ನು ಜಾರಿಗೆ ತಂದಿದೆ. ಸ್ಮಾರ್ಟ್‌ಫೋನ್ ಕಳೆದುಕೊಂಡವರಿಗೆ CEIR ಸಹಾಯ ಮಾಡಲಿದೆ. ನೀವು ಸ್ಮಾರ್ಟ್‌ಫೋನ್‌ಗಳನ್ನು ಕಳೆದುಕೊಂಡಾಗ, ಇಲ್ಲವೇ ಸ್ಮಾರ್ಟ್‌ಫೋನ್ ಅನ್ನು ಯಾರಾದರೂ ಕಳ್ಳತನ ಮಾಡಿದಾಗ CEIR ವೆಬ್‌ಸೈಟ್‌ನಲ್ಲಿ ನೀವು ಸ್ಮಾರ್ಟ್‌ಫೋನ್ ಕಳೆದುಕೊಂಡಿರುವುದರ ಬಗ್ಗೆ ಮಾಹಿತಿ ನಮೂದಿಸುವುದು ಹಾಗೂ ಸ್ಮಾರ್ಟ್‌ಫೋನ್‌ಗಳ ವಿವರಗಳನ್ನು ನಮೂದಿಸಬೇಕಾಗುತ್ತದೆ.
ನೀವು CEIR ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಲ್ಲಿ ಸ್ಮಾರ್ಟ್‌ಫೋನ್ ವಿವರಗಳನ್ನು ನಮೂದಿಸಿದರೆ ಕೂಡಲೇ ನಿಮ್ಮ ಫೋನ್ ಅನ್ನು ಬ್ಲಾಕ್ ಮಾಡಲಿದೆ. ಅಲ್ಲದೆ ಮೊಬೈಲ್ ಬ್ಲಾಕ್ ಆದ ಮೇಲೆ ಸರ್ಕಾರ ನಿಮ್ಮ ಫೋನ್ ಅನ್ನು ಟ್ರ್ಯಾಕ್ ಮಾಡಿ ಫೋನ್ ಹುಡುಕಲಿದೆ ಎನ್ನಲಾಗಿದೆ. CEIR ಸಿಸ್ಟಮ್ ಅನ್ನು ಮೇ 17 ರಂದು ಪ್ಯಾನ್-ಇಂಡಿಯಾ ಲೆವೆಲ್‌ನಲ್ಲಿ ಲಾಂಚ್ ಮಾಡಲು ನಿರ್ಧರಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಈ ಸಿಸ್ಟಂ ಅನ್ನು ಇದೇ ತ್ರೈಮಾಸಿಕದಲ್ಲಿ ಭಾರತದಾದ್ಯಂತ ನಿಯೋಜಿಸಲಾಗುವುದು ಎನ್ನಲಾಗಿದೆ. ಇದರಿಂದ ದುಷ್ಕರ್ಮಿಗಳು ಕದ್ದ ಮೊಬೈಲ್ ಫೋನ್‌ಗಳ IMEI ಸಂಖ್ಯೆಯನ್ನು ಬದಲಾಯಿಸುವುದನ್ನು ತಡೆಯಬಹುದಾಗಿದೆ. ಅಲ್ಲದೆ ಅಂತಹ ಮೊಬೈಲ್‌ಗಳನ್ನು ಟ್ರ್ಯಾಕ್ ಮಾಡಿ ಬ್ಲಾಕ್ ಮಾಡಲಿದೆ. ಇದರಿಂದ ಮೊಬೈಲ್ ಕದ್ದು ಸಮಾಜಘಾತುಕ ಕೆಲಸಗಳಿಗೆ ಬಳಸುವವರಿಗೆ ಬಿಗ್ ಶಾಕ್ ಎದುರಾಗಿದೆ. ಯಾಕೆಂದ್ರೆ ಈ ರೀತಿಯ ಘಟನೆಗಳು ರಾಷ್ಟ್ರೀಯ ಭದ್ರತಾ ಸಮಸ್ಯೆಯಾಗಿದೆ ಎಂದು ಹೇಳಲಾಗಿದೆ.
CEIR ಸಿಸ್ಟಂ ಎಲ್ಲಾ ಮೊಬೈಲ್ ಆಪರೇಟರ್‌ಗಳ IMEI ಡೇಟಾಬೇಸ್‌ಗೆ ಸಂಪರ್ಕಿಸುತ್ತದೆ ಎಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ. CEIR ತಮ್ಮ IMEI ಸಂಖ್ಯೆಗಳ ಆಧಾರದ ಮೇಲೆ ಕದ್ದ ಫೋನ್‌ಗಳನ್ನು ಪರಿಣಾಮಕಾರಿಯಾಗಿ ಬ್ಲಾಕ್ ಮಾಡಲಿದೆ. ಇದರಿಂದ ಕಳ್ಳರು SIM ಕಾರ್ಡ್ ಅನ್ನು ಬದಲಾಯಿಸಿದರೂ ಕೂಡ ಕದ್ದ ಮೊಬೈಲ್‌ಗಳನ್ನು ಬಳಸಲು ಸಾದ್ಯವಾಗುವುದಿಲ್ಲ.

CEIR ಸಿಸ್ಟಂ ಹೇಗೆ ಕಾರ್ಯನಿರ್ವಹಿಸಲಿದೆ!
ಈ ಸಿಸ್ಟಂನ ಸೇವೆಗಳನ್ನು ಪಡೆದುಕೊಳ್ಳಬೇಕಾದರೆ ಮೊದಲನೆಯದಾಗಿ CEIRನಲ್ಲಿ ರಿಕ್ವೆಸ್ಟ್ ಅನ್ನು ಕಳುಹಿಸಬೇಕಾಗುತ್ತದೆ. ನಂತರ ನಿಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಬೇಕು. ಇದಾದ ನಂತರ, CEIR ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಕಂಡುಬರುವ ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಇದರಲ್ಲಿ ಮೊಬೈಲ್ ಸಂಖ್ಯೆ, ಡಿವೈಸ್ ಮಾಡೆಲ್, IMEI 1 ಮತ್ತು 2 ಸಂಖ್ಯೆಗಳು ಹಾಗೂ ಮೊಬೈಲ್ ಕಳೆದುಕೊಂಡ ಸ್ಥಳದ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ.
ನಂತರ ನಿಮ್ಮ ಮೊಬೈಲ್ ಅನ್ನು ಕೂಡಲೇ ಬ್ಲಾಕ್ ಮಾಡುವ ರಿಕ್ವೆಸ್ಟ್ ಕಳುಹಿಸಬೇಕಾಗುತ್ತದೆ. ಇದರಿಂದ ನಿಮ್ಮ ಮೊಬೈಲ್ ಫೋನ್ ಅನ್ನು 24 ಗಂಟೆಗಳ ಒಳಗೆ ಬ್ಲಾಕ್ ಮಾಡಲಾಗುತ್ತದೆ. ಇದರಿಂದ ನಿಮ್ಮ ಫೋನ್ ಅನ್ನು ಭಾರತದಾದ್ಯಂತ ಯಾವುದೇ ನೆಟ್‌ವರ್ಕ್‌ನಲ್ಲಿ ಬಳಸಲಾಗುವುದಿಲ್ಲ. IMEI ಬ್ಲಾಕ್ ಮಾಡುವುದರಿಂದ ಕಳೆದುಹೋದ ಫೋನ್ ಅನ್ನು ಟ್ರ್ಯಾಕ್ ಮಾಡಲು ಪೊಲೀಸರಿಗೆ ಸುಲಭವಾಗಲಿದೆ ಅನ್ನೊದು ಸರ್ಕಾರದ ಉದ್ದೇಶವಾಗಿದೆ. ಇನ್ನು ನೀವು ನಿಮ್ಮ ದೂರನ್ನು ಸಲ್ಲಿಸಿದ ನಂತರ ಈ ವೆಬ್‌ಸೈಟ್‌ನಲ್ಲಿ ನಿಮ್ಮ ದೂರಿನ ಸ್ಟೆಟಸ್ ಅನ್ನು ಟ್ರ್ಯಾಕ್ ಮಾಡುವುದಕ್ಕೆ ಕೂಡ ಅವಕಾಶ ನೀಡಲಾಗಿದೆ.


Click it and Unblock the Notifications








