ದೇಶವಾಸಿಗಳಿಗೆ ಹೊಸ ಸೇವೆ ಪರಿಚಯಿಸಿದ ಕೇಂದ್ರ ಸರ್ಕಾರ! ಇದು ಯಾರಿಗೆ ಲಭ್ಯ!
ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗ್ತಿದೆ. ಅದರಂತೆ ಕೇಂದ್ರ ಸರ್ಕಾರ ತನ್ನ ಹಲವು ಸೇವೆಗಳನ್ನು ಡಿಜಿಟಲೀಕರಣ ಮಾಡಿದೆ. ಅಲ್ಲದೆ ಆ್ಯಪ್ ಆಧಾರಿತ ಸೇವೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪರಿಚಯಿಸುತ್ತಾ ಬಂದಿದೆ. ಮುಂದುವರೆದ ಭಾಗವಾಗಿ ಇದೀಗ ಮತ್ತೊಂದು ಹೊಸ ಆ್ಯಪ್ ಆಧಾರಿತ ಸೇವೆಯನ್ನು ಪರಿಚಯಿಸಿದೆ. ಇದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಸೇವೆಯಾಗಿದ್ದು, ಇದರಿಂದ ವಿಮಾನ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲಕರವಾಗಲಿದೆ ಎನ್ನಲಾಗಿದೆ.

ಹೌದು, ಭಾರತ ಸರ್ಕಾರ ಹೊಸದಾಗಿ ಡಿಜಿ ಯಾತ್ರಾ ಸೇವೆಯನ್ನು ಪರಿಚಯಿಸಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈ ಸೇವೆಯನ್ನು ಪ್ರಾರಂಬಿಸಿದರು. ಇದರ ಮೂಲಕ ಫೇಶಿಯಲ್ ರೆಕಗ್ನಿಷನ್ ಟೆಕ್ನಾಲಜಿ ಆಧಾರದ ಮೇಲೆ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಯಾವುದೇ ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲಿದೆ. ಹಾಗಾದ್ರೆ ಕೇಂದ್ರ ಸರ್ಕಾರದ ಹೊಸ ಡಿಜಿ ಯಾತ್ರಾ ಸೇವೆ ಯ ವಿಶೇಷತೆ ಏನು ಅನ್ನೊದನ್ನ ಈ ಲೇಖನಲದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಜಿ ಯಾತ್ರಾ ಅಪ್ಲಿಕೇಶನ್ ಬಳಕೆದಾರರಿಗೆ ಅನುಕೂಲಕರವಾಗಿದೆ. ಇದರ ಮೂಲಕ ಪ್ರಯಾಣಿಕರು ಮಾನ ನಿಲ್ದಾಣದ ಟರ್ಮಿನಲ್‌ಗಳಲ್ಲಿ ಪೇಪರ್‌ಲೆಸ್ ಮತ್ತು ಸಂಪರ್ಕರಹಿತ ರೀತಿಯಲ್ಲಿ ವಿವಿಧ ಚೆಕ್ ಪಾಯಿಂಟ್‌ಗಳ ಮೂಲಕ ಪ್ರಯಾಣಿಸಲು ಸಾಧ್ಯವಾಗುತ್ತದೆ. ಇನ್ನು ಈ ಸೇವೆಯನ್ನು ಬಳಸಬೇಕಾದರೆ ಆಧಾರ್ ಆಧಾರಿತ ದೃಢೀಕರಣ ಮತ್ತು ಸ್ವಯಂ-ಚಿತ್ರ ಸೆರೆಹಿಡಿಯುವಿಕೆಯನ್ನು ಬಳಸಿಕೊಂಡು ಡಿಜಿ ಯಾತ್ರಾ ಅಪ್ಲಿಕೇಶನ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.

ಸದ್ಯ ಹೊಸದಾಗಿ ಬಿಡುಗಡೆಯಾಗಿರುವ ಡಿಜಿ ಯಾತ್ರಾ ಸೇವೆಯು ದೇಶದ ಮೂರು ವಿಮಾನ ನಿಲ್ದಾಣಗಳಲ್ಲಿ ಲಭ್ಯವಾಗಲಿದೆ. ಇದರಲ್ಲಿ ನವದೆಹಲಿಯ ಐಜಿಐ ವಿಮಾನ ನಿಲ್ದಾಣ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಲಭ್ಯವಾಗಲಿದೆ. ಇದಲ್ಲದೆ ಮಾರ್ಚ್ 2023 ರ ವೇಳೆಗೆ, ಹೈದರಾಬಾದ್, ಕೋಲ್ಕತ್ತಾ, ಪುಣೆ ಮತ್ತು ವಿಜಯವಾಡದ ವಿಮಾನ ನಿಲ್ದಾಣಗಳಿಗೆ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಈ ಸೇವೆಯನ್ನು ದೇಶದಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ಲಭ್ಯವಾಗುವಂತೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಪ್ರಸ್ತುತ ಡಿಜಿ ಯಾತ್ರಾ ಸೇವೆಯನ್ನು ದೇಶೀಯ ವಿಮಾನ ಪ್ರಯಾಣಿಕರಿಗೆ ಮಾತ್ರ ಲಭ್ಯವಾಗಲಿದೆ. ಡಿಜಿ ಯಾತ್ರಾ ಅಪ್ಲಿಕೇಶನ್‌ನಲ್ಲಿ ನಮೂದಿಸಕೊಂಡ ದೇಶವಾಸಿಗಳಿಗೆ ಮಾತ್ರ ಇದರ ಸೇವೆ ಪಡೆಯಲು ಅನುಕೂಲಕರವಾಗಲಿದೆ. ಇನ್ನು ಈ ಸೇವೆ ಆಂಡ್ರಾಯ್ಡ್ ಮತ್ತು ಐಒಎಸ್ ಎರಡಲ್ಲೂ ಕೂಡ ಲಭ್ಯವಾಗಲಿದೆ. ವಿದೇಶಿ ಯಾತ್ರಿಕರಿಗೆ ಇದರ ಸೇವೆ ಲಭ್ಯವಾಗುವುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಡಿಜಿ ಯಾತ್ರಾ ಸೇವೆ ಆ್ಯಪ್‌ನಲ್ಲಿ ನಿಮ್ಮ ಹೆಸರನ್ನು ನೋಂದಾಯಿಸುವುದು ಹೇಗೆ?
ಹಂತ:1 ಮೊದಲಿಗೆ ಡಿಜಿಯಾತ್ರಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
ಹಂತ:2 ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸ್ಟಾರ್ಟ್ ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ:3 ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ರಿಜಿಸ್ಟರ್ ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ:4 ಇದೀಗ ನಿಮ್ಮ ಫೋನ್‌ಗೆ OTP ಬರಲಿದೆ. ನಂತರ OTP ಅನ್ನು ನಮೂದಿಸಿ.
ಹಂತ:5 ಇದಾದ ನಂತರ ಸ್ಕ್ರೀನ್ ಕೆಳಭಾಗದಲ್ಲಿರುವ ವಾಲೆಟ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:6 ಇದೀಗ ಗುರುತಿನ ಕ್ರೆಡಿಟ್ ಆಯ್ಕೆಗಳನ್ನು ಟ್ಯಾಪ್ ಮಾಡಿ.
ಹಂತ:7 ನಿಮ್ಮ ಆಧಾರ್ ಪರಿಶೀಲಿಸಿದ ಗುರುತಿನ ರುಜುವಾತುಗಳನ್ನು ಅಪ್‌ಲೋಡ್ ಮಾಡಿ.
ಹಂತ:8 ಇದೀಗ ನಿಮ್ಮ ಸೆಲ್ಫಿಯನ್ನು ಅಪ್‌ಲೋಡ್ ಮಾಡಿ.
ಹಂತ:9 ನಂತರ ನಿಯಮಗಳು ಮತ್ತು ಷರತ್ತುಗಳಿಗೆ ಸಮ್ಮತಿಸಿದರೆ ರಿಜಿಸ್ಟರ್ ಪ್ರಕ್ರಿಯೆ ಮುಗಿಯಲಿದೆ.


Click it and Unblock the Notifications








