ಪಾಕಿಸ್ತಾನದಲ್ಲಿ ಸ್ಟಾರ್‌ಲಿಂಕ್ ಇಂಟರ್‌ನೆಟ್ ಬೆಲೆ ಎಷ್ಟು ಗೊತ್ತಾ?..ನೀವು ಊಹಿಸಿಯೂ ಇರಲ್ಲ!
ಭಾರತದಲ್ಲಿ ಎಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ಇಂಟರ್‌ನೆಟ್ ಸೇವೆಯು ಶೀಘ್ರವೇ ಆರಂಭವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸ್ಟಾರ್‌ಲಿಂಕ್ ಕೂಡ ಭಾರತದಲ್ಲಿ ತನ್ನ ಸೇವೆಗಳನ್ನು ಒದಗಿಸಲು ಕೇಂದ್ರ ಸರ್ಕಾರದ ಪರವಾನಗಿಯನ್ನು ಕೇಳಿದೆ. ಈ ವೇಳೆಯಲ್ಲಿ ಪಾಕಿಸ್ತಾನದಲ್ಲಿ ಸ್ಟಾರ್‌ಲಿಂಕ್ ಸೇವೆಯ ಬೆಲೆಗಳು ಎಷ್ಟು ಎಂಬುದು ವೈರಲ್ ಆಗುತ್ತಿದೆ. ಹೌದು, ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಸ್ಟಾರ್‌ಲಿಂಕ್ ಸೇವೆಗಳನ್ನು ಆರಂಭಿಸಲಾಗಿದ್ದು, ಸ್ಟಾರ್‌ಲಿಂಕ್ ಬಳಕೆದಾರರ ವಿಭಿನ್ನ ಅಗತ್ಯಗಳನ್ನು ಪೂರೈಸಲು ಮೂರು ವಿಭಿನ್ನ ಇಂಟರ್ನೆಟ್ ಪ್ಯಾಕೇಜ್‌ಗಳನ್ನು ನೀಡಬಹುದು ಎಂದು ವರದಿಗಳು ಹೇಳಿವೆ. ಪಾಕಿಸ್ತಾನದಲ್ಲಿ ವಸತಿ, ವ್ಯಾಪಾರ ಮತ್ತು ಪ್ರೀಮಿಯಂ ಎಂಬ ಮೂರು ವಿಭಿನ್ನ ಇಂಟರ್ನೆಟ್ ಪ್ಯಾಕೇಜ್‌ಗಳನ್ನು ನೀಡಬಹುದು ಎಂದು ಅಲ್ಲಿನ ಪ್ರಮುಖ ಮಾಧ್ಯಮ ವರದಿಗಳು ತಿಳಿಸಿವೆ. ಹಾಗಾದರೆ, ಪಾಕಿಸ್ತಾನದಲ್ಲಿ ಸ್ಟಾರ್‌ಲಿಂಕ್ ಇಂಟರ್‌ನೆಟ್ ಸೇವೆಯ ಬೆಲೆಗಳು ಎಷ್ಟು? ಎಂಬುದರ ಜೊತೆಗೆ ಸ್ಟಾರ್‌ಲಿಂಕ್ ಇಂಟರ್‌ನೆಟ್ ಕುರಿತ ಇತರೆ ಎಲ್ಲಾ ಮಾಹಿತಿಗಳನ್ನು ತಿಳಿಯೋಣ ಬನ್ನಿ.
ಪಾಕಿಸ್ತಾನದಲ್ಲಿ ಸ್ಟಾರ್‌ಲಿಂಕ್ ಸೇವೆಯ ಬೆಲೆಗಳು ಎಷ್ಟು?
ಪಾಕಿಸ್ತಾನದಲ್ಲಿ ಸ್ಟಾರ್‌ಲಿಂಕ್ ಬಳಕೆದಾರರ ವಿಭಿನ್ನ ಅಗತ್ಯಗಳನ್ನು ಪೂರೈಸಲು ವಸತಿ, ಬ್ಯುಸಿನೆಸ್ ಮತ್ತು ಪ್ರೀಮಿಯಂ ಎಂಬ ಮೂರು ವಿಭಿನ್ನ ಇಂಟರ್ನೆಟ್ ಪ್ಯಾಕೇಜ್‌ಗಳನ್ನು ನೀಡಬಹುದು. ಇವುಗಳಲ್ಲಿ ವಸತಿ ಪ್ಯಾಕೇಜ್ ತಿಂಗಳಿಗೆ ಸುಮಾರು 35,000 PKR(ಭಾರತೀಯ ಬೆಲೆಯಲ್ಲಿ 10,691 ರೂ.) ಬೆಲೆಯಲ್ಲಿ ಬರಬಹುದು. ಈ ಯೋಜನೆಯನ್ನು ವೈಯಕ್ತಿಕ ಬಳಕೆದಾರರು ಮತ್ತು ಮನೆಗಳಿಗಾಗಿ ವಿನ್ಯಾಸಗೊಳಿಸಲಾಗದ್ದು, ಇದು 50 ರಿಂದ 250 Mbps ವೇಗವನ್ನು ನೀಡುವ ನಿರೀಕ್ಷೆಯಿದೆ. ಬಳಕೆದಾರರು ಸರಿಸುಮಾರ 125,000 PKR(ಭಾರತೀಯ ಬೆಲೆಯಲ್ಲಿ 38,182 ರೂ.) ವರೆಗಿನ ಅನುಸ್ಥಾಪನಾ ಶುಲ್ಕವನ್ನು ಪಾವತಿಸಬೇಕಾಗಬಹುದು ಎನ್ನಲಾಗಿದೆ. ಹಾಗೆಯೇ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಗುರಿಯಾಗಿಟ್ಟುಕೊಂಡು ನೀಡಲಾಗುವ ಬ್ಯುಸಿನೆಸ್ ಯೋಜನೆಗೆ ತಿಂಗಳಿಗೆ ಸುಮಾರು 95,000 PKR ವೆಚ್ಚವಾಗಬಹುದು. ಇದು 300 Mbps ಗಿಂತ ಹೆಚ್ಚಿನ ಇಂಟರ್ನೆಟ್ ವೇಗವನ್ನು ಒದಗಿಸುವ ನಿರೀಕ್ಷೆಯಿದೆ. ದೊಡ್ಡ ಉದ್ಯಮಗಳು ಮತ್ತು ಹೆಚ್ಚಿನ ಬೇಡಿಕೆಯ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು, ಪ್ರೀಮಿಯಂ ಪ್ಯಾಕೇಜ್ ತಿಂಗಳಿಗೆ ರೂ. 50,000 ಮೀರಬಹುದು. ಇದು 500 Mbps ಗಿಂತ ಹೆಚ್ಚಿನ ವೇಗವನ್ನು ನೀಡಬಹುದು. ಈ ಯೋಜನೆಗಳ ಅನುಸ್ಥಾಪನಾ ಶುಲ್ಕ ಸುಮಾರು 200,000 PKR ( ಭಾರತೀಯ ಬೆಲೆಯಲ್ಲಿ 61,092 ರೂ.) ಗಳಾಗಿರಬಹುದು ಎಂದು ಊಹಿಸಲಾಗಿದೆ.
ಸ್ಟಾರ್‌ಲಿಂಕ್ ಎಂದರೆ ಏನು?
ಸ್ಟಾರ್‌ಲಿಂಕ್‌ವು ವಿಶ್ವದ ಅತಿದೊಡ್ಡ ಉಪಗ್ರಹಗಳ ಗುಚ್ಛವಾಗಿದೆ, ಇದು ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆ ಒದಗಿಸಲು ಉದ್ದೇಶಿತವಾಗಿದೆ. ಸುಮಾರು 7,000 ಸಣ್ಣ ಉಪಗ್ರಹಗಳು ಭೂಮಿಯಿಂದ 550 ಕಿ.ಮೀ ದೂರದಲ್ಲಿ ಲೋ ಅರ್ಥ್ ಆರ್ಬಿಟ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಉಪಗ್ರಹಗಳ ಮೂಲಕ ವಿಶ್ವದ ಯಾವುದೇ ಭಾಗದಲ್ಲಿ ಇಂಟರ್ನೆಟ್ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ಸಾಂಪ್ರದಾಯಿಕ ಸೆಲ್ಯುಲರ್ ನೆಟ್ವರ್ಕ್ ಸೇವೆಗಾಗಿ ಮೊಬೈಲ್ ಟವರ್‌ಗಳನ್ನು ಬಳಸಬೇಕಾಗುತ್ತದೆ, ಆದರೆ ಸ್ಟಾರ್‌ಲಿಂಕ್ ವ್ಯವಸ್ಥೆಯಲ್ಲಿ ಇಂಟರ್ನೆಟ್ ನೇರವಾಗಿ ಉಪಗ್ರಹದಿಂದ ಬಳಕೆದಾರರ ಮನೆಗೆ ತಲುಪುತ್ತದೆ. ಇದಕ್ಕಾಗಿ, ಬಳಕೆದಾರರಿಗೆ ಸ್ಟಾರ್‌ಲಿಂಕ್ ರೂಟರ್ ಅಗತ್ಯವಿದೆ, ಇದು ಸಮೀಪದ ಸ್ಟಾರ್‌ಲಿಂಕ್ ಉಪಗ್ರಹಗಳೊಂದಿಗೆ ಸಂಪರ್ಕ ಸಾಧಿಸುತ್ತದೆ. ಸಾಂಪ್ರದಾಯಿಕ ಸೆಲ್ಯುಲರ್ ನೆಟ್ವರ್ಕ್‌ಗಳಿಗೆ ಹೋಲಿಸಿದರೆ, ಸ್ಟಾರ್‌ಲಿಂಕ್ ಉಪಗ್ರಹಗಳಿಂದ ನೇರವಾಗಿ ಗ್ರಾಹಕರ ಮನೆಗಳಿಗೆ ಇಂಟರ್ನೆಟ್ ಸೇವೆ ಒದಗಿಸುತ್ತದೆ.
ಹೇಗೆ ಕಾರ್ಯನಿರ್ವಹಿಸುತ್ತದೆ?
ಸ್ಟಾರ್‌ಲಿಂಕ್ ರೂಟರ್ ಉಪಕರಣವು ಬಾಹ್ಯಾಕಾಶದಲ್ಲಿರುವ ಉಪಗ್ರಹಕ್ಕೆ ಡೇಟಾವನ್ನು ಕಳುಹಿಸುತ್ತದೆ. ಈ ಉಪಗ್ರಹವು ಇಂಟರ್ನೆಟ್ ಸಂಪರ್ಕ ಹೊಂದಿರುವ ನೆಲದ ಸ್ಟೇಷನ್‌ಗಳಿಗೆ ಡೇಟಾವನ್ನು ಪ್ರಸಾರ ಮಾಡುತ್ತದೆ. ನಂತರ, ಈ ಡೇಟಾ ಪುನಃ ಉಪಗ್ರಹಕ್ಕೆ ಹಿಂತಿರುಗಿ ಬಳಕೆದಾರರ ಮೋಡೆಮ್ ಮತ್ತು ಉಪಗ್ರಹ ಡಿಶ್‌ಗೆ ತಲುಪುತ್ತದೆ. ಈ ಪ್ರಕ್ರಿಯೆಯ ಮೂಲಕ ನಿರಂತರ ಸಂಪರ್ಕವನ್ನು ಒದಗಿಸಲಾಗುತ್ತದೆ. ಈ ಕಾರ್ಯಾಚರಣೆಗೆ ಕೇಬಲ್‌ಗಳು, ಫೈಬರ್ ಅಥವಾ ಫೋನ್ ಲೈನ್‌ಗಳ ಅಗತ್ಯವಿಲ್ಲ. ಸಾಂಪ್ರದಾಯಿಕ ಇಂಟರ್ನೆಟ್ ಪೂರೈಕೆದಾರರು ಕೇಬಲ್‌ಗಳು ಅಥವಾ ಫೈಬರ್-ಆಪ್ಟಿಕ್ ಮೂಲಸೌಕರ್ಯವನ್ನು ಬಳಸುವಾಗ, ಸ್ಟಾರ್‌ಲಿಂಕ್ ಭೂಮಿಯ ಮೇಲೆ ಸುತ್ತುವ ಸಣ್ಣ ಉಪಗ್ರಹಗಳ ಜಾಲವನ್ನು ಬಳಸಿಕೊಂಡು ಬಳಕೆದಾರರಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ನೇರವಾಗಿ ಒದಗಿಸುತ್ತದೆ. ಕೇಬಲ್‌ಗಳನ್ನು ಹಾಕುವುದು ದುಬಾರಿಯಾಗಿರುವ ಗ್ರಾಮೀಣ ಅಥವಾ ತಲುಪಲು ಕಷ್ಟಕರ ಪ್ರದೇಶಗಳಲ್ಲಿ ಇದು ವಿಶೇಷವಾಗಿ ಪ್ರಯೋಜನಕಾರಿ.
5G ಗಿಂತ ಸ್ಟಾರ್‌ಲಿಂಕ್ ವೇಗವೇ?
ಸಾಮಾನ್ಯವಾಗಿ, 5G ವೇಗವು ಸ್ಟಾರ್‌ಲಿಂಕ್‌ಗಿಂತ ಹೆಚ್ಚು ಎಂದು ಹೇಳಬಹುದು, ಆದರೆ ಎರಡೂ ವೇಗದ ಸಂಪರ್ಕಗಳನ್ನು ಒದಗಿಸುತ್ತವೆ. ನಗರ ಪ್ರದೇಶಗಳಲ್ಲಿ 5G ಉತ್ತಮ ಆಯ್ಕೆಯಾದರೆ, ಗ್ರಾಮೀಣ ಪ್ರದೇಶಗಳಿಗೆ ಸ್ಟಾರ್‌ಲಿಂಕ್ ಹೆಚ್ಚು ಅನುಕೂಲಕರವಾಗಿದೆ. 5G ಡೇಟಾ 2 Gbps ವರೆಗೆ ವೇಗವನ್ನು ತಲುಪಬಹುದು, ಮತ್ತು ಸರಾಸರಿ ಡೌನ್‌ಲೋಡ್ ವೇಗ 50 Mbps ಮತ್ತು 1 Gbps ನಡುವಿರುತ್ತದೆ. ಸ್ಟಾರ್‌ಲಿಂಕ್ ಸಾಮಾನ್ಯವಾಗಿ 250 Mbps ವರೆಗೆ ವೇಗವನ್ನು ಒದಗಿಸುತ್ತದೆ, ಆದರೆ ಇದು ನೆಟ್‌ವರ್ಕ್ ಲೋಡ್ ಮತ್ತು ಹವಾಮಾನದ ಮೇಲೆ ಅವಲಂಬಿತವಾಗಿದೆ. 5G ಸಾಮಾನ್ಯವಾಗಿ ಸ್ಟಾರ್‌ಲಿಂಕ್‌ಗಿಂತ ವೇಗವಾಗಿದ್ದರೂ, ಎರಡೂ ವೇಗದ ಸಂಪರ್ಕವನ್ನು ಒದಗಿಸುತ್ತವೆ. ಉಪಗ್ರಹಗಳು ಭೂಮಿಗೆ ಹತ್ತಿರದಲ್ಲಿರುವುದರಿಂದ ಕಡಿಮೆ ಲೇಟೆನ್ಸಿಯ ಡೇಟಾ ವೇಗವಾಗಿ ಪ್ರಯಾಣಿಸುತ್ತದೆ.
ಸ್ಟಾರ್‌ಲಿಂಕ್ ಸೇವೆ ಎಲ್ಲೆಲ್ಲಿದೆ?
ಪ್ರಸ್ತುತ, ಸ್ಟಾರ್‌ಲಿಂಕ್ 100ಕ್ಕೂ ಹೆಚ್ಚು ದೇಶಗಳಲ್ಲಿ ಸೇವೆ ನೀಡುತ್ತಿದೆ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಮಲೇಷ್ಯಾ, ಇಂಡೋನೇಷ್ಯಾ, ಭೂತಾನ್ ಮತ್ತು ಶ್ರೀಲಂಕಾ ದೇಶಗಳಲ್ಲಿ ಸ್ಟಾರ್‌ಲಿಂಕ್ ಸೇವೆ ಈಗಾಗಲೇ ಲಭ್ಯವಿದ್ದು, ಯಾವುದೇ ಮೊಬೈಲ್ ಟವರ್‌ಗಳನ್ನು ಅಗತ್ಯವಿಲ್ಲದೆ ನೇರವಾಗಿ ಆಕಾಶದಿಂದ ಇಂಟರ್ನೆಟ್ ಸೇವೆ ಒದಗಿಸುತ್ತದೆ. ಭಾರತದಲ್ಲಿ ಮಾರುಕಟ್ಟೆ ಪ್ರವೇಶಿಸಲು ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿರುವ ಸ್ಟಾರ್‌ಲಿಂಕ್, ರಾಷ್ಟ್ರೀಯ ಭದ್ರತೆ ಮತ್ತು ಟೆಲಿಕಾಂ ಪೈಪೋಟಿಯ ಒತ್ತಡದ ಕಾರಣದಿಂದ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಆದರೆ, ಭಾರತದಲ್ಲಿ ಏರ್‌ಟೆಲ್ ಮತ್ತು ಜಿಯೋ ಜೊತೆ ಸಹಭಾಗಿತ್ವದಲ್ಲಿ ವಿಭಿನ್ನವಾಗಿ ಪ್ರವೇಶಿಸಲು (ಮತ್ತಷ್ಟು ಮಾಹಿತಿ ಲಭ್ಯವಾಗಬೇಕಾಗಿದೆ) ಸಿದ್ಧವಾಗಿದೆ. ಆದರೆ, ಈ ಸೇವೆ ಹೇಗಿರಲಿದೆ ಎಂಬುದು ತಿಳಿದುಬಂದಿಲ್ಲ.

ಭಾರತಕ್ಕೆ ಏಕೆ ಮುಖ್ಯ?
ಭಾರತವು ವಿಶ್ವದ ಎರಡನೇ ಅತಿದೊಡ್ಡ ಇಂಟರ್ನೆಟ್ ಮಾರುಕಟ್ಟೆಯಾಗಿದೆ, ಆದರೆ 67 ಕೋಟಿ ಜನರಿಗೆ ಇಂಟರ್ನೆಟ್ ಪ್ರವೇಶವಿಲ್ಲ (2024ರ GSMA ವರದಿ ಪ್ರಕಾರ). ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಸಾಂಪ್ರದಾಯಿಕ ನೆಟ್‌ವರ್ಕ್‌ಗಳ ಕೊರತೆಯ ಕಾರಣದಿಂದ ಡಿಜಿಟಲ್ ಅಂತರವನ್ನು ಸ್ಟಾರ್‌ಲಿಂಕ್ ಕಡಿಮೆ ಮಾಡಬಹುದು. ಇದು ರಾಷ್ಟ್ರವ್ಯಾಪಿ ಸಂಪರ್ಕವನ್ನು ಸುಲಭಗೊಳಿಸುತ್ತಿದ್ದು, ಇಂಟರ್ನೆಟ್ ಸೌಲಭ್ಯದಿಂದ ವಂಚಿತ ಪ್ರದೇಶಗಳಿಗೆ ತಲುಪಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪ್ರಸ್ತುತ, ದೇಶದ ಹಲವೆಡೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕದ ಸಮಸ್ಯೆ ಇದೆ, ಆದರೆ, ಸ್ಟಾರ್‌ಲಿಂಕ್ ಯಾವುದೇ ಮೊಬೈಲ್ ಟವರ್‌ಗಳನ್ನು ಅಗತ್ಯವಿಲ್ಲದೆ ನೇರವಾಗಿ ಆಕಾಶದಿಂದ ಇಂಟರ್ನೆಟ್ ಸೇವೆ ಒದಗಿಸುತ್ತದೆ. ಹೈಸ್ಪೀಡ್ ಇಂಟರ್ನೆಟ್ ಜೊತೆಗೆ, ದೇಶದ ಎಲ್ಲೆಡೆ ಬಳಕೆದಾರರು ಸರಿಸುಮಾರು 25-220 Mbps ಡೌನ್‌ಲೋಡ್ ಸ್ಪೀಡ್ ಪಡೆಯಬಹುದು ಎನ್ನಲಾಗಿದೆ.
ಭಾರತದಲ್ಲಿ ವಿಳಂಬ ಏಕೆ?
ಭಾರತದಲ್ಲಿ ಸ್ಟಾರ್‌ಲಿಂಕ್‌ನ ಸಂಪೂರ್ಣ ವಾಣಿಜ್ಯ ಉಡಾವಣೆಯು ಕೆಲವು ವಿಳಂಬಗಳನ್ನು ಅನುಭವಿಸಿದೆ, ಮುಖ್ಯವಾಗಿ ನಿಯಂತ್ರಣ ಸಂಬಂಧಿ ಸವಾಲುಗಳ ಕಾರಣದಿಂದ. ಕಂಪನಿಯು 2020 ರಿಂದ ಆಯ್ದ ಪ್ರದೇಶಗಳಲ್ಲಿ ಬೀಟಾ ಸೇವೆಗಳನ್ನು ಪ್ರಾರಂಭಿಸಿತ್ತು, ಆದರೆ ನಂತರ ಸರ್ಕಾರವು ಬೀಟಾ ಸೇವೆಯನ್ನು ನಿಲ್ಲಿಸಲು ನಿರ್ಧರಿಸಿತು. ವಿಶ್ವದಾದ್ಯಂತ ಉಪಗ್ರಹ ಆಧಾರಿತ ಸಂಪನ್ಮೂಲಗಳನ್ನು ಇಂಟರ್‌ನ್ಯಾಷನಲ್ ಟೆಲಿಕಾಂ ಯೂನಿಯನ್ ನಿರ್ವಹಿಸುತ್ತದೆ. ಭಾರತದಲ್ಲಿ ಉಪಗ್ರಹಗಳ ಬಳಕೆ ಮತ್ತು ಬಳಕೆದಾರರ ಲಿಂಕ್‌ಗಳನ್ನು ಸ್ಪೆಕ್ಟ್ರಮ್ ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತದೆ. ಈ ಕಾರಣದಿಂದಾಗಿ ಹರಾಜು ಪ್ರಕ್ರಿಯೆಯ ಮೂಲಕ ಪರವಾನಗಿ ಹಂಚಿಕೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಉಂಟಾಗಿವೆ. ಇದಲ್ಲದೆ, ದೇಶದಲ್ಲಿ 5G ಇಂಟರ್‌ನೆಟ್ ಒದಗಿಸಲು ಜಿಯೋ ಮತ್ತು ಏರ್‌ಟೆಲ್ ಕಂಪನಿಗಳು ಲಕ್ಷಾಂತರ ಕೋಟಿಗಳನ್ನು ಖರ್ಚು ಮಾಡಿದ್ದಾರೆ. ಸ್ಟಾರ್‌ಲಿಂಕ್ ಬರುವುದರಿಂದ ಈ ಸಂಸ್ಥೆಗಳಿಗೆ ಕಷ್ಟಗಳು ಎದುರಾಗಬಹುದು ಎಂದು ಹೇಳಲಾಗಿದೆ.
ಸ್ಟಾರ್‌ಲಿಂಕ್ ಬಂದರೆ ಜಿಯೋ ಮತ್ತು ಏರ್‌ಟೆಲ್ ಕಥೆ ಮುಗಿಯುತ್ತದೆಯೇ?
ಸ್ಟಾರ್‌ಲಿಂಕ್ ಆಗಮಿಸುವುದರಿಂದ ಜಿಯೋ ಮತ್ತು ಏರ್‌ಟೆಲ್ ಕಥೆ ಮುಗಿಯುತ್ತದೆ ಎಂದು ಹಲವಾರು ವರದಿಗಳು ಸೂಚಿಸುತ್ತವೆ. ಭಾರತದಲ್ಲಿ 5G ಇಂಟರ್‌ನೆಟ್ ಸೇವೆ ಒದಗಿಸಲು ಜಿಯೋ ಮತ್ತು ಏರ್‌ಟೆಲ್ ಕಂಪನಿಗಳು ಲಕ್ಷಾಂತರ ಕೋಟಿ ರೂಪಾಯಿಗಳನ್ನು ಹೂಡಿವೆ. ಸ್ಟಾರ್‌ಲಿಂಕ್ ಬಂದರೆ ಈ ಕಂಪನಿಗಳಿಗೆ ಸಮಸ್ಯೆಗಳು ಉಂಟಾಗಬಹುದು. ಸೆಲ್ಯುಲರ್ ನೆಟ್ವರ್ಕ್ ಸೇವೆಗಾಗಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವ ಅಗತ್ಯವಿದೆ, ಆದರೆ ಸ್ಟಾರ್‌ಲಿಂಕ್ ವ್ಯವಸ್ಥೆಯಲ್ಲಿ ಇಂಟರ್ನೆಟ್ ನೇರವಾಗಿ ಉಪಗ್ರಹದಿಂದ ಬಳಕೆದಾರರ ಮನೆಗೆ ತಲುಪುತ್ತದೆ. ಇದರಿಂದಾಗಿ ಟೆಲಿಕಾಂ ಕಂಪನಿಗಳಿಗೆ ದೊಡ್ಡ ಸವಾಲು ಎದುರಾಗಬಹುದು ಎಂದು ವರದಿಗಳು ಅಭಿಪ್ರಾಯಿಸುತ್ತವೆ. ಆದರೆ, ವಾಸ್ತವದಲ್ಲಿ ಇದು ಸುಲಭವಾಗುವುದಿಲ್ಲ, ಏಕೆಂದರೆ ಜಿಯೋ ಮತ್ತು ಏರ್‌ಟೆಲ್ ನೀಡುವ ಸಾಂಪ್ರದಾಯಿಕ ಬ್ರಾಡ್‌ಬ್ಯಾಂಡ್ ಸೇವೆಗಳ ದರವನ್ನು ಸ್ಟಾರ್‌ಲಿಂಕ್ ಹೋಲಿಸಬೇಕಾಗುತ್ತದೆ ಮತ್ತು ಪ್ರಸ್ತುತ ಸ್ಟಾರ್‌ಲಿಂಕ್ ದರವು ಹೆಚ್ಚು ಎಂದು ಹೇಳಬಹುದು.
ಸ್ಟಾರ್‌ಲಿಂಕ್‌ನ ತಾಂತ್ರಿಕ ಅಂಶಗಳು
ಸ್ಟಾರ್‌ಲಿಂಕ್ ಒಂದು ಉಪಗ್ರಹ ಆಧಾರಿತ ಇಂಟರ್ನೆಟ್ ಸೇವಾ ವ್ಯವಸ್ಥೆಯಾಗಿದೆ, ಇದು ಕಡಿಮೆ ಭೂಕಕ್ಷೆಯಲ್ಲಿ (LEO) ಕಾರ್ಯನಿರ್ವಹಿಸುವ ಉಪಗ್ರಹಗಳ ಜಾಲವನ್ನು ಬಳಸುತ್ತದೆ. ಈ ಉಪಗ್ರಹಗಳು ಭೂಮಿಯಿಂದ ಸುಮಾರು 550 ಕಿ.ಮೀ ಎತ್ತರದಲ್ಲಿ ಸುತ್ತುತ್ತವೆ. ಈ ವ್ಯವಸ್ಥೆಯು ಸಾಂಪ್ರದಾಯಿಕ ಭೂ ಆಧಾರಿತ ಇಂಟರ್ನೆಟ್ ಮೂಲಸೌಕರ್ಯಗಳಿಗೆ ಹೋಲಿಸಿದರೆ ಹಲವಾರು ಪ್ರಯೋಜನಗಳನ್ನು ಹೊಂದಿದೆ:
ವೇಗದ ಇಂಟರ್ನೆಟ್:LEO ಉಪಗ್ರಹಗಳು ಭೂಮಿಗೆ ಹತ್ತಿರದಲ್ಲಿರುವುದರಿಂದ, ಡೇಟಾ ವೇಗವಾಗಿ ಪ್ರಯಾಣಿಸುತ್ತದೆ, ಇದು ಕಡಿಮೆ ಲೇಟೆನ್ಸಿ ಮತ್ತು ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಒದಗಿಸುತ್ತದೆ.
ವ್ಯಾಪಕ ವ್ಯಾಪ್ತಿ:ಉಪಗ್ರಹಗಳು ವಿಶಾಲ ಪ್ರದೇಶವನ್ನು ಆವರಿಸುತ್ತವೆ, ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆ ಒದಗಿಸಲು ಸಾಧ್ಯವಾಗುತ್ತದೆ.
ವಿಶ್ವಾಸಾರ್ಹ ಸಂಪರ್ಕ:ಉಪಗ್ರಹಗಳು ಹವಾಮಾನ ಪರಿಸ್ಥಿತಿಗಳಿಂದ ಕಡಿಮೆ ಪರಿಣಾಮ ಬೀರುತ್ತವೆ, ಇದು ಹೆಚ್ಚು ವಿಶ್ವಾಸಾರ್ಹ ಸಂಪರ್ಕವನ್ನು ಒದಗಿಸುತ್ತದೆ.


Click it and Unblock the Notifications








