ಉಪೇಂದ್ರ & ಅವರ ಪತ್ನಿ ಫೋನ್‌ಗಳು ಹ್ಯಾಕ್ ಆಗಿದ್ದು ಹೇಗೆ?..ಇಲ್ಲಿದೆ ಪೂರ್ಣ ವಿವರ!
ಇತ್ತೀಚೆಗೆ ಕನ್ನಡದ ಖ್ಯಾತ ನಟರಾದ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕ ಉಪೇಂದ್ರ ಅವರ ಫೋನ್‌ಗಳು ಹ್ಯಾಕ್ ಆಗಿರುವ ಘಟನೆ ನಡೆದಿದೆ. ಸೈಬರ್ ಅಪರಾಧಿಗಳು ಅತ್ಯಂತ ಸುಲಭವಾಗಿ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕ ಉಪೇಂದ್ರ ಹಾಗೂ ಮನೆಯ ಮತ್ತೋರ್ವ ಸದಸ್ಯರ ಫೋನ್ ಅನ್ನು ಹ್ಯಾಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣವು ಕೇವಲ ಸೆಲೆಬ್ರಿಟಿಗಳ ವಿಷಯವಾಗಿರದೆ, ಪ್ರತಿಯೊಬ್ಬರೂ ಡಿಜಿಟಲ್ ಸುರಕ್ಷತೆಯ ಬಗ್ಗೆ ಎಷ್ಟು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ತೋರಿಸುತ್ತದೆ. ಹಾಗಾದರೆ, ಉಪೇಂದ್ರ ಕುಟುಂಬದವರ ಫೋನ್‌ಗಳು ಹ್ಯಾಕ್ ಆಗಿದ್ದು ಹೇಗೆ?, ಸೈಬರ್ ಅಪರಾಧದ ಬಗ್ಗೆ ನಾವು ಹೇಗೆ ಜಾಗರಾಗಿರಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ.
ಏನಿದು ಪ್ರಕರಣ?..ಹ್ಯಾಕ್ ಆಗಿದ್ದು ಹೇಗೆ?
ಸೈಬರ್ ಅಪರಾಧಿಗಳು ಬಳಸಿದ ತಂತ್ರ ಅತ್ಯಂತ ಸರಳ ಮತ್ತು ಅಪಾಯಕಾರಿ ಎಂದು ಹೇಳಬಹುದು. ಮೊದಲು ನಟಿ ಪ್ರಿಯಾಂಕ ಉಪೇಂದ್ರ ಅವರಿಗೆ ಆನ್‌ಲೈನ್ ಡೆಲಿವರಿ ಸಂಬಂಧಿತ ನಕಲಿ ಕರೆ ಬಂದಿದೆ. ಕರೆ ಮಾಡಿದವರು "ಪಾರ್ಸೆಲ್ ಡೆಲಿವರಿ ಮಾಡಲು ಸಮಸ್ಯೆ ಇದೆ, ಈ ಕೋಡ್ ಅನ್ನು ಡಯಲ್ ಮಾಡಿ" ಎಂದು ಹೇಳಿ, ಒಂದು ನಿರ್ದಿಷ್ಟ ಸಂಖ್ಯೆಯನ್ನು ಡಯಲ್ ಮಾಡಲು ಸೂಚಿಸಿದರು. ಅವರು ಆ ಕೋಡ್ ಅನ್ನು ಡಯಲ್ ಮಾಡಿದ ತಕ್ಷಣ, ಅವರ ಫೋನ್ ಹ್ಯಾಕ್ ಆಗಿದೆ. ( ಸರಕ್ಷತೆ ದೃಷ್ಟಿಯಿಂದ ಕೋಡ್ ಸಂಖ್ಯೆಯನ್ನು ನಮೂದಿಸಿಲ್ಲ) ಇದೇ ರೀತಿ ಉಪೇಂದ್ರ ಅವರ ಫೋನ್ ಕೂಡ ಹ್ಯಾಕ್ ಆಗಿದೆ ಎಂದು ಹೇಳಲಾಗಿದೆ.
ಇದಾದ ನಂತರ, ಸೈಬರ್ ಕ್ರಿಮಿನಲ್‌ಗಳು ಉಪೇಂದ್ರ ದಂಪತಿಗಳ ಮೊಬೈಲ್ ಸಂಪರ್ಕ ಪಟ್ಟಿಯಲ್ಲಿದ್ದ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ "ತುರ್ತು ಹಣದ ಅವಶ್ಯಕತೆ ಇದೆ" ಎಂದು ಸಂದೇಶ ಕಳುಹಿಸಲು ಶುರುಮಾಡಿದ್ದಾರೆ. ಈ ಸಂದೇಶದಲ್ಲಿ, ಉಪೇಂದ್ರ ಮತ್ತು ಅವರ ಕುಟುಂಬದ ಹೆಸರು ಮತ್ತು ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು, ₹22,000 ರಿಂದ ₹55,000 ವರೆಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಉಪೇಂದ್ರ ಮತ್ತು ಪ್ರಿಯಾಂಕ ಅವರ ಹೆಸರಿನ ಮೇಲೆ ನಂಬಿಕೆ ಇಟ್ಟು, ಕೆಲವು ವ್ಯಕ್ತಿಗಳು ಎರಡು ಲಕ್ಷಕ್ಕೂ ಹೆಚ್ಚು ಹಣವನ್ನು ವರ್ಗಾಯಿಸಿದ್ದಾರೆ ಎಂದು ಸಹ ಹೇಳಲಾಗಿದೆ.
ಹ್ಯಾಕ್ ಆಗಿರಲು ನಿಖರ ಕಾರಣ ಏನು?
ಈ ಘಟನೆ ಬೆಳಕಿಗೆ ಬಂದ ನಂತರ, ಉಪೇಂದ್ರ ಮತ್ತು ಪ್ರಿಯಾಂಕ ಅವರು ತಕ್ಷಣವೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಮತ್ತು ತನಿಖೆಯು ಪ್ರಗತಿಯಲ್ಲಿದೆ. ಇದಕ್ಕೂ ಮೊದಲೇ ಇದೊಂದು ಕಾಲ್ ಫಾರ್ವರ್ಡಿಂಗ್ (Call Forwarding) ತಂತ್ರ ದ ವಂಚನೆ ಎಂದು ಹೇಳಲಾಗುತ್ತಿದೆ.ಒಂದು ನಿರ್ದಿಷ್ಟ ಕೋಡ್ ಅನ್ನು ಡಯಲ್ ಮಾಡಿದಾಗ, ಬಳಕೆದಾರರ ಮೊಬೈಲ್ ಸಂಖ್ಯೆಗೆ ಬರುವ ಕರೆಗಳು ಮತ್ತು ಪ್ರಮುಖ OTP (One-Time Password) ಸಂದೇಶಗಳು ನೇರವಾಗಿ ಹ್ಯಾಕರ್‌ಗಳ ಸಂಖ್ಯೆಗೆ ವರ್ಗಾವಣೆಯಾಗುವ ಮೂಲಕ ವಂಚನೆ ನಡೆಸಲಾಗಿದೆ ಎಂದು ಸೈಬರ್ ಪೊಲೀಸರು ಊಹಿಸಿದ್ದಾರೆ.

ಮೊಬೈಲ್‌ನಲ್ಲಿ ಒಂದು ನಿರ್ದಿಷ್ಟ ಕೋಡ್ ಅನ್ನು ಡಯಲ್ ಮಾಡಿದಾಗ ಅದು ನೇರವಾಗಿ ಮೊಬೈಲ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು. ಪ್ರಿಯಾಂಕಾ ಸೈಬರ್ ವಂಚಕರು ಕಳುಹಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿ, ನಂತರ ಕೋಡ್ ಅನ್ನು ನಮೂದಿಸಿದರು, ಅದು ಅವರ ಫೋನ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು ಎಂದು ಹೆಸರು ಹೇಳಲು ಇಚ್ಚಿಸದ ಪೊಲೀಸ್ ಅಧಿಕಾರಿಯೊಬ್ಬರು ನಮಗೆ ತಿಳಿಸಿದ್ದಾರೆ. ಅವರು ಹಂಚಿಕೊಂಡ ವಿವರಗಳ ಪ್ರಕಾರ, ಆ ವ್ಯಕ್ತಿ ಹಿಂದಿಯಲ್ಲಿ ಮಾತನಾಡುತ್ತಿದ್ದನು ಮತ್ತು ಪ್ರಿಯಾಂಕ ಅವರ ಸಂಪರ್ಕದಲ್ಲಿದ ನಾಲ್ವರು ಜನರು ವಂಚಕರಿಗೆ ಹಣವನ್ನು ವರ್ಗಾಯಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಪ್ರಕರಣವು ಸಾರ್ವಜನಿಕರಲ್ಲಿ ದೊಡ್ಡ ಮಟ್ಟದ ಜಾಗೃತಿ ಮೂಡಿಸಿದೆ. ಈ ರೀತಿಯ ವಂಚನೆಗಳನ್ನು ತಪ್ಪಿಸಲು, ಪ್ರತಿಯೊಬ್ಬರೂ ಈ ಕೆಳಗಿನ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
- ಅಪರಿಚಿತ ವ್ಯಕ್ತಿಗಳ ಕರೆ ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ.
- ಅಪರಿಚಿತರು ಕಳುಹಿಸುವ ಯಾವುದೇ ಕೋಡ್ ಅನ್ನು ಡಯಲ್ ಮಾಡಬೇಡಿ ಅಥವಾ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
- ನಿಮ್ಮ OTP, ಬ್ಯಾಂಕ್ ವಿವರಗಳು, ಅಥವಾ UPI ಪಿನ್‌ನಂತಹ ಸೂಕ್ಷ್ಮ ಮಾಹಿತಿಯನ್ನು ಯಾರಿಗೂ ನೀಡಬೇಡಿ.
- ಹಣ ಕೇಳುವ ಸಂದೇಶ ಬಂದಾಗ, ಆ ವ್ಯಕ್ತಿಗೆ ನೇರವಾಗಿ ಕರೆ ಮಾಡಿ ದೃಢಪಡಿಸಿಕೊಳ್ಳಿ.
- ನಿಮ್ಮ ಪ್ರಮುಖ ಆನ್‌ಲೈನ್ ಖಾತೆಗಳಾದ ವಾಟ್ಸ್‌ಆ್ಯಪ್, ಜಿಮೇಲ್, ಮತ್ತು ಬ್ಯಾಂಕಿಂಗ್ ಅಪ್ಲಿಕೇಶನ್‌ಗಳಿಗೆ Two-Factor Authentication (2FA) ಸಕ್ರಿಯಗೊಳಿಸಿ.
ಉಪೇಂದ್ರ ಕುಟುಂಬದ ಈ ಕಹಿ ಅನುಭವವು ಡಿಜಿಟಲ್ ಯುಗದಲ್ಲಿ ನಮ್ಮ ಅಜಾಗರೂಕತೆ ಹ್ಯಾಕರ್‌ಗಳಿಗೆ ದೊಡ್ಡ ದಾರಿಯಾಗುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ. ಡಿಜಿಟಲ್ ಜಗತ್ತಿನಲ್ಲಿ ನಮ್ಮ ವೈಯಕ್ತಿಕ ಸುರಕ್ಷತೆ ಕೇವಲ ಪಾಸ್‌ವರ್ಡ್‌ಗಳನ್ನು ಅವಲಂಬಿಸಿಲ್ಲ, ಬದಲಾಗಿ ನಮ್ಮ ಎಚ್ಚರಿಕೆ ಮತ್ತು ಜಾಗೃತಿಯ ಮೇಲೆ ನಿಂತಿದೆ. ಆದ್ದರಿಂದ, ಪ್ರತಿಯೊಬ್ಬರೂ ಸೈಬರ್ ಸುರಕ್ಷತೆಯ ಬಗ್ಗೆ ಹೆಚ್ಚು ತಿಳಿದುಕೊಂಡು ಇಂತಹ ವಂಚನೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಡಿಜಿಟಲ್ ಜಾಗೃತಿ ಇಲ್ಲದೆ, ನಮ್ಮ ಸ್ಮಾರ್ಟ್‌ಫೋನ್‌ಗಳು ಮತ್ತು ಆನ್‌ಲೈನ್ ಖಾತೆಗಳು ಸುಲಭವಾಗಿ ಅಪರಾಧಿಗಳ ಕೈಗೆ ಸಿಲುಕಬಹುದು.


Click it and Unblock the Notifications








