ಸಾಫ್ಟ್‌ವೇರ್ ಬ್ರದರ್ಸ್‌ಗೆ 2.45 ಕೋಟಿ ರೂ. ಪಂಗನಾಮ! : ಹೇಗೆ ಅಂತ ತಿಳಿದ್ರೆ ಶಾಕ್ ಆಗ್ತೀರಾ
ದೇಶದಲ್ಲಿ ಡಿಜಿಟಲ್ ವಹಿವಾಟು (Digital Transaction) ಹೆಚ್ಚಾದಂತೆ, ಸೈಬರ್ ಕಳ್ಳರು (Cyber Criminals) ಸಹ ಚುರುಕಾಗಿ ಮುಗ್ದರಿಗೆ ಪಂಗನಾಮ ಹಾಕುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪುಣೆ(Pune)ಯಲ್ಲಿ ಇಬ್ಬರು ಸಾಫ್ಟ್‌ವೇರ್ ಸಹೋದರರು (Software Brothers) ಬರೋಬ್ಬರಿ 2.45 ಕೋಟಿ ರೂಪಾಯಿ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.
ಹೌದು, ಆನ್‌ಲೈನ್ ಟ್ರೇಡಿಂಗ್ ಹಗರಣಗಳು ಹೆಚ್ಚುತ್ತಿರುವ ಆತಂಕಕಾರಿಯಾಗಿದೆ. ಕಳೆದ ಕೆಲವು ವಾರಗಳಲ್ಲಿ, ಹತ್ತಾರು ಅಮಾಯಕರು ಕೋಟ್ಯಂತರ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಅದರಂತೆಯೇ, ವಾಟ್ಸಪ್ ಗ್ರೂಪ್‌ನಲ್ಲಿ ಆರಂಭವಾದ ಆನ್‌ಲೈನ್ ಟ್ರೇಡಿಂಗ್ ಹಗರಣದಿಂದ ಇಬ್ಬರು ಸಾಫ್ಟ್‌ವೇರ್ ಸಹೋದರರು 2.45 ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.

ಪುಣೆಯ ಚಾರ್ಹೋಲಿ ಬುದ್ರುಕ್‌ನ 53 ವರ್ಷದ ನಿವಾಸಿ ಹಾಗೂ ಆತನ ಸಹೋದರನೇ ವಂಚನೆಗೊಳಗಾದ ಅಮಾಯಕರು. ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲ ವಂಚನೆಗೊಳಗಾದವರು ದೂರು ದಾಖಲಿಸಿದ್ದಾರೆ. ಸೈಬರ್ ವಂಚಕರು ದೂರುದಾರರನ್ನು ವಾಟ್ಸಪ್ ಗ್ರೂಪ್‌ಗೆ ಸೇರಿಸಿದ್ದಾರೆ. ಅಲ್ಲದೇ, ಆನ್‌ಲೈನ್ ಷೇರು ವ್ಯಾಪಾರದ ಮೂಲಕ ದೊಡ್ಡ ಲಾಭ ಗಳಿಸಬಹುದು ಎಂದು ಪುಸಲಾಯಿಸಿದ್ದಾರೆ. ಬಳಿಕ ನಯವಾಗಿ ಹಣ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಂಚನೆ ನಡೆದಿದ್ದು ಹೇಗೆ?
ಈ ವಂಚನೆ ನಡೆದಿರುವುದೇ ರೋಚಕ. ಸಾಮಾನ್ಯವಾಗಿ ಅನೇಕ ವಂಚನೆಗಳು ಪ್ರಕರಣಗಳು, ಮೆಸೇಜಿಂಗ್ ಆಪ್‌ಗಳ ಮೂಲಕ ಪ್ರಾರಂಭವಾಗುತ್ತವೆ. ಅದರಂತೆ ದೂರದಾರರನ್ನು ಮೊದಲು ವಾಟ್ಸಪ್ ಗ್ರೂಪ್‌ಗೆ ಸೇರಿಸಲಾಯಿತು. ಬಳಿಕ, ಆನ್‌ಲೈನ್ ಷೇರು ವ್ಯಾಪಾರದಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ಭರವಸೆ ನೀಡಲಾಗಿದೆ. ಸೇಬರ್ ವಂಚಕನ ಸೂಚನೆಯಂತೆ ಸಂತ್ರಸ್ತನು, ಷೇರ್ ಟ್ರೇಡಿಂಗ್ ಅಕೌಂಟ್ ಕ್ರಿಯೇಟ್ ಮಾಡಿದ್ದಾರೆ. ತನ್ನ ಸಹೋದರನನ್ನೂ ವಾಟ್ಸಪ್ ಗ್ರೂಪ್‌ಗೆ ಸೇರಿಸಿದ್ದಾರೆ. ಬಳಿಕ, ಗ್ರೂಪ್‌ನಲ್ಲ ಬಂದ ಟಿಪ್ಸ್ ಆಧಾರದ ಮೇಲೆ ಷೇರುಗಳನ್ನು ಖರೀದಿಸಲು ಆರಂಭಿಸಿದ್ದಾರೆ.
ಇಬ್ಬರೂ ಸಾಫ್ಟ್‌ವೇರ್ ಎಂಜಿನಿಯರ್
ಈ ಕುರಿತು ದಿಘಿಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಧಮಾಲ್ ಅವರು ಮಾಹಿತಿ ನೀಡಿದ್ದಾರೆ. ನಮಗೆ ದೂರು ನೀಡಿರುವ ಸಹೋದರರಲ್ಲಿ ಒಬ್ಬರು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ಯಾರವಾಡದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸಹೋದರ ಕೂಡ ಸಾಫ್ಟ್‌ವೇರ್ ಎಂಜಿನಿಯರ್. ವಂಚಕನು ಟೆಕ್ಕಿಯ ಮೊಬೈಲ್ ನಂಬರ್ ಅನ್ನು ಮೆಸೇಜಿಂಗ್ ಅಪ್ಲಿಕೇಶನ್‌ನ ಗ್ರೂಪ್‌ಗೆ ಸೇರಿಸಿದ್ದಾನೆ. ಅಲ್ಲಿ ವಂಚಕರು, ಷೇರುಗಳನ್ನು ಖರೀದಿಸುವ ಮೂಲಕ ಗಳಿಸಬಹುದಾದ ಲಾಭದ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮೊದಲು 1.68 ಕೋಟಿ ರೂ. ವರ್ಗಾವಣೆ
ಇದು ಕೇವಲ ಒಂದು ಸ್ಕ್ರೀನ್ ಸಾಫ್ಟ್‌ವೇರ್ ಹಾಗೂ ಇದನ್ನು ವಂಚಕರು ಆನ್‌ಲೈನ್ ಕುಶಲತೆಯಿಂದ ನಿರ್ವಹಿಸಿದ್ದಾರೆ. ಪ್ರಾರಂಭದಲ್ಲಿ ಷೇರುಗಳನ್ನು ಖರೀದಿಸಲು ಸ್ಕ್ರೀನ್ ಸಾಫ್ಟ್‌ವೇರ್ ಅನ್ನು ಬಳಸುತ್ತಿದ್ದರು. ಈ ಸ್ಕ್ರೀನ್ ಸಾಫ್ಟ್‌ವೇರ್ ಅವರಿಗೆ ಉತ್ತಮ ಲಾಭವನ್ನು ತೋರಿಸಿದೆ. ಬಳಿಕ, ಅವರು ಹೆಚ್ಚಿನ ಲಾಭ ಗಳಿಸಲು ಹೆಚ್ಚು ಮೌಲ್ಯದ ಷೇರುಗಳನ್ನು ಹೂಡಿಕೆ ಮಾಡಲು ಕೇಳಿದ್ದಾರೆ. ಅಲ್ಲದೇ, ಮೂರು ಬ್ಯಾಂಕ್ ಖಾತೆಗಳನ್ನು ನೀಡಿದ್ದಾರೆ. ವಂಚಕನಿಗೆ 1.68 ಕೋಟಿ ರೂ. ಹಣವನ್ನು ವರ್ಗಾಯಿಸಿದ್ದಾರೆ.
ಒಟ್ಟು 2.45 ಕೋಟಿ ರೂ. ಪಂಗನಾಮ!
ಬಳಿಕ, ದೂರುದಾರ 1,67,80,000, ರೂ.ಗಳನ್ನು ವರ್ಗಾಯಿಸಿದ್ದಾರೆ. ಅವರ ಸಹೋದರ 77,50,000 ರೂ.ಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ನಾವು ಕೊಟ್ಟ ಹಣವನ್ನು ಷೇರು ಮಾರುಕಟ್ಟೆಗೆ ಹೂಡಿಕೆ ಮಾಡಲಾಗುತ್ತಿದೆ ಎಂದು ನಂಬಿದ್ದಾರೆ. ಬಳಿಕ, ನೀವು ಷೇರು ಟ್ರೇಡಿಂಗ್ ವ್ಯವಹಾರದಲ್ಲಿ 8 ಕೋಟಿ ರೂಪಾಯಿ ಗಳಿಸಿದ್ದೀರಿ ಎಂದು ನಂಬಿಸಿದ್ದಾರೆ. ಬಳಿಕ, ಸೆಬಿ (SEBI) ಮತ್ತು ಇತರ ಏಜೆನ್ಸಿಗಳು ತನ್ನ ಅಕೌಂಟ್ ಲಾಕ್ ಮಾಡಿರುವುದರಿಂದ ಹೂಡಿಕೆ ಮಾಡಲು ಸಾಧ್ಯವಿಲ್ಲ ಎಂದು ವಂಚಕ ಹೇಳಿದ್ದಾನೆ.
ಆಗ ದೂರುದಾರ ತಾವು ಕೊಟ್ಟ ಹಣವನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ. ಆಗಲೇ ತಾವು ವಂಚನೆಗೆ ಒಳಗಾಗಿದ್ದೇವೆ ಎಂಬುದು ಬೆಳಕಿಗೆ ಬಂದಿದೆ. ಎಂದು ಪೊಲೀಸರು ಹೇಳಿದ್ದಾರೆ. ಬಳಿಕ, ವಂಚನೆಗೊಳಗಾದ ಸಾಫ್ಟ್‌ವೇರ್ ಎಂಜಿನಿಯರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.


Click it and Unblock the Notifications








