Independence Day 2024: 'ಫ್ರೀಡಂ ಇಂಡಿಯಾ'ದ ಬಹು ದೊಡ್ಡ ತಂತ್ರಜ್ಞಾನ ಸಾಧನೆಗಳಿವು..!
Independence Day 2024: ಆಗಸ್ಟ್ 15 ಭಾರತದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ಹೌದು, ಬ್ರಿಟೀಷರ ದಾಸ್ಯದ ಸಂಕೋಲೆಯಿಂದ ಭಾರತ ಮಾತೆ ಬಂಧ ಮುಕ್ತವಾದ ದಿನ. ಈ ದಿನವನ್ನು ಪ್ರತಿವರ್ಷವೂ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದೀಗ, ಭಾರತವು ಈ ಆಗಸ್ಟ್ 15 ರಂದು 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತದೆ. ಈ ರಾಷ್ಟ್ರೀಯ ಹಬ್ಬವನ್ನು ದೇಶದ ಮೂಲೆ ಮೂಲೆಯಲ್ಲಿ ಆಚರಿಸಲಾಗುತ್ತದೆ. ಇದಲ್ಲದೆ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು, ಧೀಮಂತ ನಾಯಕರನ್ನು ಮತ್ತು ಸೈನಿಕರನ್ನು ಈ ದಿನದಂದು ಸ್ಮರಿಸಲಾಗುತ್ತದೆ.
ಭಾರತವು ಸ್ವತಂತ್ರವಾಗಿ 78 ವರ್ಷಗಳು ಕಳೆದಿವೆ. ಬ್ರಿಟಿಷರ ಗುಲಾಮಗಿರಿಯಿಂದ ಹೊರಬಂದ ಭಾರತ ಪ್ರತಿಯೊಂದು ಕ್ಷೇತ್ರದಲ್ಲಿ ಸಾಕಷ್ಟು ದೊಡ್ಡ ಸವಾಲುಗಳನ್ನು ಎದುರಿಸಿದೆ. ರಾಷ್ಟ್ರೀಯ ನೇತಾರರ ದೂರದೃಷ್ಟಿಯಿಂದಾಗಿ ಸಾಮಾಜಿಕ, ಆರ್ಥಿಕ ರಂಗಗಳಲ್ಲಿ ಪ್ರಗತಿ ಸಾಧಿಸುವ ಜೊತೆಗೆ ತಂತ್ರಜ್ಞಾನ ಕ್ಷೇತ್ರದಲ್ಲೂ ಭಾರತ ಹೊಸ ಸಾಧನೆ ಮಾಡಿದೆ. ನೀವು, ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವತಂತ್ರ ಭಾರತದ ಪ್ರಮುಖ 20 ಸಾಧನೆಗಳ ಬಗ್ಗೆ ತಿಳಿಯಲೇಬೇಕು. ಅವು ಹೀಗಿವೆ..!

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT)
1951 ರಲ್ಲಿ ಪಶ್ಚಿಮ ಬಂಗಾಳದ ಖರಗ್ ಪುರದಲ್ಲಿ ಮೊದಲ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಸ್ಥಾಪನೆ ಮಾಡಲಾಯಿತು. ಈ ಮೂಲಕ ತಂತ್ರಜ್ಞಾನ ಪ್ರಗತಿಗೆ (ಶಿಕ್ಷಣ ಪ್ರಗತಿ) ಅಡಿಗಲ್ಲು ಹಾಕಲಾಯಿತು.
ಭಾಭಾ ಪರಮಾಣು ಸಂಶೋಧನಾ ಕೇಂದ್ರ
1954 ರಲ್ಲಿ ಟ್ರಾಂಬೆಯಲ್ಲಿ ಅಣುಶಕ್ತಿ ಸಂಶೋಧನೆಗೆ ಅಧ್ಯಯನ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಇದಕ್ಕೆ 1967ರಲ್ಲಿ ಭಾಭಾ ಪರಮಾಣು ಸಂಶೋಧನಾ ಕೇಂದ್ರ (Bhabha Atomic Research Centre) ಎಂದು ನಾಮಕರಣ ಮಾಡಲಾಯಿತು.
DRDOಗೆ ಚಾಲನೆ, ಸೇನಾ ಶಕ್ತಿಗೆ ಬಲ
1958 ರಲ್ಲಿ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಝೇಶನ್ (DRDO) ಗೆ ಚಾಲನೆ ನೀಡಲಾಯಿತು. ಈ ಮೂಲಕ ಸೇನಾ ಶಕ್ತಿಗೆ ಬಲ ತುಂಬುವ ಕಾರ್ಯ ಮಾಡಲಾಯಿತು.
ಭಾರತಕ್ಕೆ ಟಿವಿ ಭಾಗ್ಯ
ರೇಡಿಯೋಗೆ ಸೀಮಿತವಾಗಿದ್ದ ಭಾರತಕ್ಕೆ 1959 ರಲ್ಲಿ ಟಿವಿ (TV) ಭಾಗ್ಯ ಬಂದಿತು. ಈ ಮೂಲಕ ದೇಶದಲ್ಲಿ ನಿಯಮಿತ ಅವಧಿಯ ಟಿವಿ ಕಾರ್ಯಕ್ರಮ ಆರಂಭವಾಯಿತು.
ಪ್ರಥಮ ಡಿಜಿಟಲ್ ಕಂಪ್ಯೂಟರ್ ನಿರ್ಮಾಣ
1959 ರಲ್ಲಿ TIFR ಆಟೋಮ್ಯಾಟಿಕ್ ಕಂಪ್ಯೂಟರ್ ನಿರ್ಮಿಸಲಾಯಿತು. ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯಿಂದ ದೇಶದ ಪ್ರಥಮ ಡಿಜಿಟಲ್ ಕಂಪ್ಯೂಟರ್ ನಿರ್ಮಾಣ ಮಾಡಲಾಯಿತು.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಹುಟ್ಟು
1968 ರಲ್ಲಿ ಭಾರತದ ಮೊದಲ ಟೆಕ್ ಕಂಪನಿ ಕಂಪನಿಯಾಗಿ 'ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್' ಜನ್ಮ ತಾಳಿತು. ಈ ಕಂಪನಿಯ ಮೊದಲ ಸೇವೆ ಪಂಚ್ ಕಾರ್ಡ್ ಆಗಿದೆ.
ಇಸ್ರೋ (ISRO) ಸ್ಥಾಪನೆ
ಬಾಹ್ಯಾಕಾಶ ವಿಜ್ಞಾನ ಅಧ್ಯಯನ ಮತ್ತು ತಂತ್ರಜ್ಞಾನ ಅಭಿವೃದ್ಧಿಗಾಗಿ 1969 ರಲ್ಲಿ ಇಸ್ರೋ ಸ್ಥಾಪನೆ ಮಾಡಲಾಯಿತು. ಪ್ರಸ್ತುತ ಇಡೀ ದೇಶವೆ ಇಸ್ರೋ ಮತ್ತು ಚಂದ್ರಯಾನದ ಬಗ್ಗೆ ಹೆಮ್ಮೆಪಡುತ್ತಿದೆ.
ಇಲೆಕ್ಟ್ರಾನಿಕ್ಸ್ ಇಲಾಖೆ ಪ್ರಾರಂಭ
1970 ರಲ್ಲಿ ಕಂಪ್ಯೂಟಿಂಗ್ ಮತ್ತು ಇಲೆಕ್ಟ್ರಾನಿಕ್ ಬಳಕೆಗೆ ಒತ್ತು ನೀಡಲು ಪ್ರತ್ಯೇಕವಾಗಿ ಇಲೆಕ್ಟ್ರಾನಿಕ್ಸ್ ಇಲಾಖೆ ಆರಂಭ ಮಾಡಲಾಯಿತು.
ಮೊದಲ ಅಣು ಬಾಂಬ್ ಪರೀಕ್ಷೆ
1974 ರಲ್ಲಿ ರಾಜಸ್ಥಾನದ ಪೋಕ್ರಾನಿನಲ್ಲಿ ಮೊದಲ ಅಣು ಬಾಂಬ್ ಪರೀಕ್ಷೆ ನಡೆಸಲಾಯಿತು. ಈ ಮೂಲಕ ವಿಶ್ವದ ಮುಂದೆ ಭಾರತದ ಶಕ್ತಿ ಪ್ರದರ್ಶನ ಮಾಡಲಾಯಿತು.
ಮೈಕ್ರೋ ಕಂಪ್ಯೂಟರ್ ನೀತಿ ಪ್ರಕಟ
ಮೊದಲ ಬಾರಿಗೆ 1978 ರಲ್ಲಿ ಮೈಕ್ರೋ ಕಂಪ್ಯೂಟರ್ ನೀತಿ ಪ್ರಕಟವಾಯಿತು. ಬಳಿಕ ವಿಪ್ರೋ, ಹೆಚ್‌ಸಿಎಲ್ ನಂತಹ ದೈತ್ಯ ಕಂಪನಿಗಳು ಕಾರ್ಯಾರಂಭ ಪ್ರಾರಂಭಿಸಿದವು.
ಸಾಫ್ಟ್‌ವೇರ್ ದೈತ್ಯ ಇನ್ಫೋಸಿಸ್ 1981ರಲ್ಲಿ ಸ್ಥಾಪನೆ
ಇನ್ಫೋಸಿಸ್ ರಾಜ್ಯದ (ಕರ್ನಾಟಕ) ಹೆಮ್ಮೆ ಮತ್ತು ಜಾಗತಿಕ ಸಾಫ್ಟ್‌ವೇರ್ ದೈತ್ಯ ಎನಿಸಿಕೊಂಡಿದೆ. ಇನ್ಫೋಸಿಸ್ 1981ರಲ್ಲಿ ಸ್ಥಾಪನೆಯಾಯಿತು.
ಇಂಡಿಯನ್ ನ್ಯಾಷನಲ್ ಸ್ಯಾಟಲೈಟ್ ಸಿಸ್ಟಮ್
1983 ರಲ್ಲಿ ಇಂಡಿಯನ್ ನ್ಯಾಷನಲ್ ಸ್ಯಾಟಲೈಟ್ ಸಿಸ್ಟಮ್‌ಗೆ ಚಾಲನೆ. ಇದು ಬಾಹ್ಯಾಕಾಶದ ಮಹಾತ್ವಾಕಾಂಕ್ಷಿ ಯೋಜನೆ ಆಗಿದೆ.
ಬಾಹ್ಯಾಕಾಶಕ್ಕೆ ಪಯಣ ಶುರು
ಏಪ್ರಿಲ್ 2, 1984 ರಲ್ಲಿ ಬಾಹ್ಯಾಕಾಶಕ್ಕೆ ಭಾರತೀಯನ ಮೊದಲ ಹಾರಾಟ ಪ್ರಾರಂಭವಾಯಿತು. ಗಗನಯಾತ್ರಿ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ಪಯಣ ಮಾಡಿದರು.
ರೈಲ್ವೆ ಸೀಟು ರಿಸರ್ವೇಶನ್ ವ್ಯವಸ್ಥೆ
1986 ರಲ್ಲಿ ರೈಲ್ವೆ ಸೀಟು ರಿಸರ್ವೇಶನ್ ವ್ಯವಸ್ಥೆ ಆರಂಭವಾಯಿತು. ಈ ಮೂಲಕ ಭಾರತದಲ್ಲಿ ಮೊದಲ ಬಾರಿಗೆ ರೈಲ್ವೆ ಸೀಟು ರಿಸರ್ವೇಶನ್ ವ್ಯವಸ್ಥೆಯ ಕಂಪ್ಯೂಟರೀಕರಣ ಶುರುವಾಯಿತು.
10 ವರ್ಷ ಕಂಪ್ಯೂಟರ್ಸ್ ಆಮದು ಸುಂಕ ಕಡಿತ
1991 ರಲ್ಲಿ 10 ವರ್ಷ ತೆರಿಗೆ ವಿನಾಯಿತಿ ಘೋಷಿಸಲಾಯಿತು. ಸಾಫ್ಟ್‌ವೇರ್ ರಫ್ತು ಮಾಡಲು ಬಳಸುವ ಕಂಪ್ಯೂಟರ್ಸ್ ಮೇಲೆ ಆಮದು ಸುಂಕ ಕಡಿತಗೊಳಿಸಲಾಯಿತು. ಆ ಮೂಲಕ 10 ವರ್ಷ ತೆರಿಗೆ ಇಲ್ಲ ಎಂಬ ನಿರ್ಧಾರ ಪ್ರಕಟಿಸಲಾಯಿತು.
ಸೂಪರ್ ಕಂಪ್ಯೂಟರ್ ಲೋಕಾರ್ಪಣೆ
1991 ರಲ್ಲಿ ಸೂಪರ್ ಕಂಪ್ಯೂಟರ್ ಲೋಕಾರ್ಪಣೆಯಾಯಿತು. ಈ ಮೂಲಕ ಭಾರತದ ಮೊದಲ ಸ್ವದೇಶಿ ನಿರ್ಮಿತ ಸೂಪರ್ ಕಂಪ್ಯೂಟರ್ PARAM 8000 ಅನ್ನು ಅನಾವರಣಗೊಳಿಸಲಾಯಿತು.
ಮೊದಲ ಮೊಬೈಲ್ ಕರೆ
1995 ರಲ್ಲಿ ಮೊಬೈಲ್ ಸೇವೆಗೆ ಚಾಲನೆ ನೀಡಲಾಯಿತು. ಅಂದಿನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಜ್ಯೋತಿ ಬಸು ಅವರು ಟೆಲಿಕಾಂ ಸಚಿವ ಸುಖ್ ರಾಮ್ ಅವರಿಗೆ ಮೊದಲ ಕರೆ ಮಾಡಿದರು.
ಚಂದ್ರಯಾನ -1ಕ್ಕೆ ಚಾಲನೆ
ಇಸ್ರೋ ಚಂದ್ರನಂಗಳಕ್ಕೆ ತಲುಪುವ ಪ್ರಯತ್ನ ಮಾಡಿದ ದಿನ. 2008 ರಲ್ಲಿ ಚಂದ್ರಯಾನ -1ಕ್ಕೆ ಚಾಲನೆ ನೀಡಲಾಯಿತು.
ಮಂಗಳಯಾನಕ್ಕೆ ಚಾಲನೆ
2013 ರಲ್ಲಿ ಮಾರ್ಸ್ ಆರ್ಬಿಟರ್ ಮಿಷನ್ (ಮಂಗಳಯಾನ)ಕ್ಕೆ ಚಾಲನೆ ನೀಡಲಾಯಿತು. ಇದು ಭೂಮಿ-ಚಂದ್ರ ಬಿಟ್ಟು ಇನ್ನೂ ಸ್ವಲ್ಪ ದೂರಕ್ಕೆ ಸಾಗುವ ಸಾಹಸ ಆಗಿದೆ.
ಮಾಹಿತಿ ತಂತ್ರಜ್ಞಾನ ಇಲಾಖೆ ಪ್ರಾರಂಭ
ಭಾರತದಲ್ಲಿ 2016 ರಿಂದ ಪ್ರತ್ಯೇಕ ಮಾಹಿತಿ ತಂತ್ರಜ್ಞಾನ ಇಲಾಖೆ ಆರಂಭಿಸಲಾಯಿತು.


Click it and Unblock the Notifications








