ಶಾಕಿಂಗ್ ನ್ಯೂಸ್!..ಭಾರತದಲ್ಲಿ ಶೀಘ್ರವೇ 'ವಾಟ್ಸ್ಆಪ್' ಬ್ಯಾನ್?!
ವಾಟ್ಸ್ಆಪ್ ಸಂದೇಶಗಳ ಮೇಲೆ ನಿಗಾ ಇಡಲು ಭಾರತ ಸರ್ಕಾರ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದು, ವಾಟ್ಸ್ಆಪ್ ಮೂಲಕ ಸುಳ್ಳು ಸುದ್ದಿ, ವದಂತಿ, ದ್ವೇಷಮಯ ಹೇಳಿಕೆಗಳನ್ನು ರವಾನಿಸುವವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ, ಎಲ್ಲ ಮೆಸೇಜ್‌ಗಳ ಡಿಜಿಟಲ್ ಫಿಂಗರ್‌ಪ್ರಿಂಟ್‌ಗಳನ್ನು ತೆಗೆದಿಡುವಂತೆ ಸರ್ಕಾರ ಕಂಪನಿಗೆ ಸೂಚಿಸಿದೆ. ಈ ಮೂಲಕ ಸರ್ಕಾರ ಮತ್ತು ವಾಟ್ಸ್‌ಆಪ್ ನಡುವಿನ ಜಟಾಪಟಿ ಮತ್ತೆ ಮುಂದುವರೆದಿದ್ದು, ಈ ಮೂಲಕ ಭಾರತದಲ್ಲಿ ವಾಟ್ಸ್ಆಪ್ ಬ್ಯಾನ್ ಆಗಬಹುದಾದ ಎಲ್ಲಾ ಲಕ್ಷಣಗಳು ಮತ್ತೊಮ್ಮೆ ಕಂಡುಬಂದಿವೆ.
ಹೌದು, ವಾಟ್ಸ್ಆಪ್ ತನ್ನ ಮೂಲಕ ರವಾನೆಯಾಗುವ ಎಲ್ಲಾ ಸಂದೇಶ, ಫೋಟೊ, ವಿಡಿಯೊ ಹಾಗೂ ವಾಯ್ಸ್ ಮೆಸೇಜ್ ಇತ್ಯಾದಿಗಳನ್ನು 'ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್' ತಂತ್ರಜ್ಞಾನದ ಅಡಿಯಲ್ಲಿ ಸುರಕ್ಷಿತವಾಗಿಡುತ್ತಿದೆ. ಇದನ್ನು ಬೇರೆಯವರು ದುರ್ಬಳಕೆ ಮಾಡದಂತೆ ತಡೆಯುತ್ತಿರುವುದಾಗಿ ಬಳಕೆದಾರರಿಗೆ ಭರವಸೆ ನೀಡುತ್ತದೆ. ಆದರೆ, ದೇಶದಲ್ಲಿ ವಾಟ್ಸ್ಆಪ್‌ನಿಂದಾಗಿ ಇತ್ತೀಚಿಗೆ ನಡೆದಿರುವ ಹಲವು ದುರ್ಘಟನೆಗಳಿಂದಾಗಿ ವಾಟ್ಸ್ಆಪ್ ಸಂದೇಶಗಳ ಮೂಲವನ್ನು ಪತ್ತೆ ಹಚ್ಚಲು ಸಹಕರಿಸಬೇಕು ಎಂದು ಸರ್ಕಾರ ವಾಟ್ಸ್ಆಪ್ ಸಂಸ್ಥೆಗೆ ಸೂಚಿಸಿದೆ.

ಆದರೆ, ಸರಕಾರದ ಮನವಿಯನ್ನು ವಾಟ್ಸ್ಆಪ್ ನಿರಾಕರಿಸಿದ್ದು, ಈ ವಿಚಾರದಲ್ಲಿ ಹೇಳಲು ಮತ್ತೇನೂ ಹೊಸದಿಲ್ಲ. ಹೇಳಬೇಕಾದ್ದನ್ನು ಸರಕಾರಕ್ಕೆ ಈಗಾಗಲೇ ಹೇಳಿದ್ದೇವೆ ಎಂದಿದ್ದು, ಬಳಕೆದಾರರ ಸಂದೇಶವನ್ನು ಕಂಪನಿ ನೋಡುವುದಿಲ್ಲ, ಅವರ ವೈಯಕ್ತಿಕ ಮಾಹಿತಿ ಮತ್ತು ಹಿತಾಸಕ್ತಿ ರಕ್ಷಿಸುವುದು ಕಂಪನಿಯ ನಿಯಮವಾಗಿದ್ದು ಅದನ್ನು ಯಾವುದೇ ಕಾರಣಕ್ಕೂ ಸಹ ಮೀರಲಾಗದು ಎಂದಿದೆ. ಹಾಗಾದರೆ, ಏನಿದು ವಾಟ್ಸ್ಆಪ್ ಮತ್ತು ಕೇಂದ್ರ ಸರ್ಕಾರದ ಜಟಾಪಟಿ? ದೇಶದಲ್ಲಿ ವಾಟ್ಸ್ಆಪ್ ಬ್ಯಾನ್ ಆಗಲಿದೆಯಾ? ಎಂಬುದನ್ನು ಮುಂದೆ ಓದಿ ತಿಳಿಯಿರಿ.

ವಾಟ್ಸ್‌ಆಪ್‌ಗೆ ಸರ್ಕಾರ ಹೇಳಿದ್ದೇನು?
ದೇಶದಲ್ಲಿ ವಾಟ್ಸ್‌ಆಪ್ ಮೂಲಕ ಸುಳ್ಳು ಸುದ್ದಿ ಮತ್ತು ನಕಲಿ ಸಂದೇಶ ರವಾನೆಯಾಗಿ ಅದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದನ್ನು ತಡೆಯಲು ಸರ್ಕಾಈ ಮೊದಲೇ ಮುಂದಾಗಿತ್ತು. ಅಂತಹ ಸುದ್ದಿಗಳ ಮೂಲ ಪತ್ತೆಹಚ್ಚಲು ಕ್ರಮ ಕೈಗೊಳ್ಳುವಂತೆ ವಾಟ್ಸಪ್‌ಗೆ ಸೂಚನೆ ನೀಡಿ ಅದಕ್ಕಾಗಿ ಅಗತ್ಯ ತಾಂತ್ರಿಕ ಬದಲಾವಣೆ ಮಾಡಬೇಕು ಎಂದು ತಿಳಿಸಿತ್ತು.

ಏನೆಲ್ಲಾ ಮಾಹಿತಿ ಪತ್ತೆಗೆ ಕ್ರಮ?
ಸರ್ಕಾರವು ವಾಟ್ಸ್‌ಆಪ್ ಮೆಸೇಜ್‌ಗಳನ್ನು ಓದಲು ಬಯಸುವುದಿಲ್ಲ. ಆದರೆ ಸಮಸ್ಯೆ ಸೃಷ್ಟಿಸುವ ಸಂದೇಶಗಳನ್ನು ನಿಯಂತ್ರಿಸಲು, ಅದರ ಮೂಲವನ್ನು ಪತ್ತೆ ಹಚ್ಚಲು ವಾಟ್ಸ್‌ಆಪ್ ಸಹಕರಿಸಬೇಕು ಮತ್ತು ವಾಟ್ಸ್‌ಆಪ್ ಸಂದೇಶಗಳ ಮೂಲ ಯಾವುದು? ಎಷ್ಟು ಮಂದಿ ಓದಿದ್ದಾರೆ ಹಾಗೂ ಎಷ್ಟು ಮಂದಿ ಹಂಚಿದ್ದಾರೆ ಎಂಬಿತ್ಯಾದಿ ವಿವರಗಳನ್ನು ಕಲೆ ಹಾಕಲು ಕೇಳಿತ್ತು.

ನಿರಾಕರಿಸಿತ್ತು ವಾಟ್ಸ್ಆಪ್!
ಸರ್ಕಾರದ ಈ ಸೂಚನೆಗೆ ಪ್ರತಿಕ್ರಿಯಿಸಿದ ವಾಟ್ಸ್ಆಪ್, ಕೇಂದ್ರದ ಬೇಡಿಕೆಯನ್ನು ತಿರಸ್ಕರಿಸಿತ್ತು. ತನ್ನ ಬಳಕೆದಾರರ ಸಂದೇಶವನ್ನು ಕಂಪನಿ ನೋಡುವುದಿಲ್ಲ, ಅವರ ವೈಯಕ್ತಿಕ ಮಾಹಿತಿ ಮತ್ತು ಹಿತಾಸಕ್ತಿ ರಕ್ಷಿಸುವುದು ಕಂಪನಿಯ ನಿಯಮವಾಗಿದ್ದು, ಸಂದೇಶಗಳು ಹತ್ತಿಕ್ಕುವಂತಹ ಸೂಚನೆಯನ್ನು ಅನುಸರಿಸಲು ಸಾಧ್ಯವಿಲ್ಲ, ಅದನ್ನು ಮೀರಲಾಗದು ಎಂದು ಹೇಳಿತ್ತು.

ವಾಟ್ಸ್‌ಆಪ್ ನಿರಾಕರಿಸಿದ್ದು ಏಕೆ?
ಜನರು ತಮ್ಮ ಸೂಕ್ಮ ಸಂಭಾಷಣೆಗಳನ್ನು ನಡೆಸಲು ವಾಟ್ಸ್ಆಪ್ ಅನ್ನು ಅವಲಂಬಿಸಿದ್ದಾರೆ. ಅದಲ್ಲದೆ, ಸಂದೇಶಗಳ ಮೂಲ ಪತ್ತೆ ಹಚ್ಚುವಿಕೆ ದುರ್ಬಳಕೆ ಸಾಧ್ಯತೆಯನ್ನು ಸೃಷ್ಟಿಸುತ್ತದೆ. ವಾಟ್ಸ್‌ಆಪ್‌ನಲ್ಲಿ ಹರಿದಾಡುವ ಸಂದೇಶಗಳ ಮೂಲವನ್ನು ಪತ್ತೆಹಚ್ಚುವುದರಿಂದ ವಾಟ್ಸ್ಆಪ್ ಬಳಕೆದಾರರ ಖಾಸಾಗೀತನಕ್ಕೆ ಅಡ್ಡಿಪಡಿಸಿದಂತಾಗುತ್ತದೆ ಎಂದು ವಾಟ್ಸ್ಆಪ್ ತಿಳಿಸಿತ್ತು.

ಕೇಂದ್ರದಿಂದ ಹೊಸ ಅಸ್ತ್ರ!
ಇದಾದ ನಂತರ ಕೇಂದ್ರದ ಅಧಿಕಾರಿಗಳು ಡಿಜಿಟಲ್ ಫಿಂಗರ್‌ಪ್ರಿಂಟ್‌ನಿಂದ ಎನ್‌ಕ್ರಿಪ್ಷನ್ ಭೇದಿಸದೆಯೇ ಸಂದೇಶಗಳ ಮೂಲವನ್ನು ಪತ್ತೆ ಹಚ್ಚಬಹುದು ಎಂದು ತಿಳಿಸಿದರು. ಡಿಜಿಟಲ್ ಫಿಂಗರ್‌ಪ್ರಿಂಟ್‌ನಿಂದ, ಸಂದೇಶಗಳ ಎನ್‌ಕ್ರಿಪ್ಷನ್ ಕೋಡ್ ಅನ್ನು ಭೇದಿಸದೆಯೇ ಮೊದಲು ಯಾರು ಪ್ರಸಾರ ಮಾಡಿದರು ಎಂಬುದನ್ನು ಪತ್ತೆ ಹಚ್ಚಬಹುದು ಎಂದು ಅಧಿಕಾರಿಗಳು ಹೇಳಿದರು.

ಕೇಂದ್ರ ಅಧಿಕಾರಿಗಳು ಗರಂ!
ಡಿಜಿಟಲ್ ಫಿಂಗರ್‌ಪ್ರಿಂಟ್‌ನಿಂದ, ಸಂದೇಶಗಳ ಎನ್‌ಕ್ರಿಪ್ಷನ್ ಕೋಡ್ ಅನ್ನು ಭೇದಿಸದೆಯೇ ಮೊದಲು ಯಾರು ಪ್ರಸಾರ ಮಾಡಿದರು ಎಂಬುದನ್ನು ಪತ್ತೆ ಹಚ್ಚಬಹುದು ಎಂದು ಅಧಿಕಾರಿಗಳು ಹೇಳಿದರೂ ಸಹ ವಾಟ್ಸ್ಆಪ್ ಗಂಭೀರವಾಗಿ ತೆಗೆದುಕೊಂಡಿಲ್ಲದಿರುವುದಕ್ಕೆ ಕೇಂದ್ರ ಅಧಿಕಾರಿಗಳು ಮತ್ತೆ ಗರಂ ಆಗಿದ್ದಾರೆ. ಆದರೆ, ಸರ್ಕಾರದ ಈ ಸಲಹೆ ಕಷ್ಟಸಾಧ್ಯ ಎಂದು ಹೇಳಲಾಗಿದೆ.

ಇದು ಕಠಿಣ ಸವಾಲು
ಪ್ರಸ್ತುತ ವಾಟ್ಸ್‌ಆಪ್ ಯಾವುದೇ ಸಂದೇಶಗಳನ್ನು ಸ್ಟೋರ್ ಮಾಡುವುದಿಲ್ಲ. ಪ್ರತಿ ಸಂದೇಶದ ಡಿಜಿಟಲ್ ಫಿಂಗರ್‌ಪ್ರಿಂಟ್ ಬೇಕೆಂದರೆ, ಎಲ್ಲಾ ಸಂದೇಶಗಳನ್ನು ಡೇಟಾಬೇಸ್‌ನಲ್ಲಿ ಸಂಗ್ರಹಿಸಬೇಕು. ಒಂದೊಂದು ಸಂದೇಶಕ್ಕೂ ಒಂದು ವಿಶಿಷ್ಟ ಐಡಿ ಒದಗಿಸಬೇಕು. ಇದಕ್ಕಾಗಿ ಇಡೀ ತಂತ್ರಾಂಶವನ್ನು ಪುನರ್‌ವ್ಯವಸ್ಥೆ ಮಾಡಬೇಕು. ಹಾಗಾಗಿ, ಇದು ಕೂಡ ಸವಾಲಾಗಿದೆ.

ಭಾರತದಲ್ಲಿ ವಾಟ್ಸ್ಆಪ್ ಬ್ಯಾನ್?
ದೇಶದ ಹಿತಕ್ಕಾಗಿ ವಾಟ್ಸ್‌ಆಪ್‌ನಲ್ಲಿ ಹರಿದಾಡುವ ಸುಳ್ಳುಸುದ್ದಿ ಮತ್ತು ಪ್ರಚೋದನಕಾರಿ ಸಂದೇಶಗಳು ಹತ್ತಿಕ್ಕಲು ತಾಂತ್ರಿಕ ಬದಲಾವಣೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಕಾನೂನು ತಜ್ಞರು ಪ್ರಶ್ನಿಸಿದ್ದಾರೆ. ಆದರೆ ಸಂದೇಶಗಳು ಹತ್ತಿಕ್ಕುವಂತಹ ಸೂಚನೆಯನ್ನು ಅನುಸರಿಸಲು ಸಾಧ್ಯವಿಲ್ಲ ಎಂದು ವಾಟ್ಸ್‌ಆಪ್ ಹೇಳಿರುವುದು ಭಾರತದಲ್ಲಿ ವಾಟ್ಸ್ಆಪ್ ಬ್ಯಾನ್ ಆಗುವ ಸಾಧ್ಯತೆಯನ್ನು ಹೆಚ್ಚಿಸಿದೆ.

ಚೀನಾದಲ್ಲಿ ಸಂಪೂರ್ಣ ಬ್ಯಾನ್..!
ವಾಟ್ಸ್‌ಆಪ್‌ನ್ನು ಚೀನಾದಲ್ಲಿ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ 2017ರಿಂದ ಚೀನಾದಲ್ಲಿ ವಾಟ್ಸ್‌ಆಪ್‌ನ್ನು ಭದ್ರತಾ ಕಾರಣಗಳಿಂದ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ವಾಟ್ಸ್‌ಆಪ್‌ನ ಪೋಷಕ ಕಂಪನಿಯಾಗಿರುವ ಫೇಸ್‌ಬುಕ್‌ನ್ನು ಸಹ 2009ರಿಂದ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಚೀನಾದಲ್ಲಿ ಪ್ರಮುಖ ಇನ್‌ಸ್ಟಾಂಟ್ ಮೇಸೆಂಜರ್ ಆಗಿ ವೀಚಾಟ್ ಬಳಕೆಯಾಗುತ್ತಿದೆ.

ಇರಾನ್, ಟರ್ಕಿಯಲ್ಲೂ ಬ್ಯಾನ್ ಆಗಿತ್ತು..!
2014ರ ಮೇ 09ರಂದು ಇರಾನ್‌ನಲ್ಲೂ ವಾಟ್ಸ್‌ಆಪ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇರಾನ್ ನಾಗರಿಕರಿಗೆ ವಾಟ್ಸ್‌ಆಪ್ ಬ್ಯಾನ್ ಮಾಡಿ ಇರಾನ್ ಸರ್ಕಾರ ಆದೇಶ ಹೊರಡಿಸಿತ್ತು. ಈ ನಿಷೇಧಕ್ಕೆ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅಮೇರಿಕಾದ ಜಿಯೋನಿಸ್ಟ್ ಆಗಿರುವುದು ಕಾರಣವಾಗಿತ್ತು ಎಂದು ಇರಾನ್‌ನ ಇಂಟರ್‌ನೆಟ್ ಕ್ರೈಮ್ ಕಮಿಟಿಯ ಮುಖ್ಯಸ್ಥ ಅಬ್ಡಾಲ್ಸಮಾಡ್ ಖೋರ್‌ಮಬಡಿ ಹೇಳಿದ್ದಾರೆ. ಕಾಲ ಕ್ರಮೇಣ ಇರಾನ್ ಅಧ್ಯಕ್ಷ ಹಸನ್ ರೌಹಾನಿ ವಾಟ್ಸ್‌ಆಪ್ ಫಿಲ್ಟರ್‌ನ್ನು ನಿಲ್ಲಿಸುವಂತೆ ಐಸಿಟಿ ಸಚಿವಾಲಯಕ್ಕೆ ಆದೇಶ ಹೊರಡಿಸಲಾಯಿತು.ವಾಟ್ಸ್‌ಆಪ್‌ನ್ನು 2016ರಲ್ಲಿ ಟರ್ಕಿಯಲ್ಲಿ ತಾತ್ಕಾಲಿಕವಾಗಿ ನಿಷೇಧ ಮಾಡಲಾಯಿತು. ಈ ನಿಷೇಧಕ್ಕೆ ಟರ್ಕಿಯಲ್ಲಿ ನಡೆದ ರಷ್ಯಾದ ರಾಯಭಾರಿಯ ಹತ್ಯೆ ಕಾರಣವಾಗಿತ್ತು.

ಬ್ರೆಜಿಲ್‌ನಲ್ಲಿ 72 ಗಂಟೆ ವಾಟ್ಸ್‌ಆಪ್ ಇದ್ದಿಲ್ಲ
2016ರ ಮಾರ್ಚ್ 1ರಂದು ಫೇಸ್‌ಬುಕ್‌ನ ಲ್ಯಾಟಿನ್ ಅಮೇರಿಕಾದ ಉಪಾಧ್ಯಕ್ಷ ಡಿಯಾಗೋ ಜೋಡನ್‌ರನ್ನು ತನಿಖೆಗೆ ಸಹಕರಿಸಿಲ್ಲವೆಂದು ಬಂಧಿಸಲಾಗಿತ್ತು. ತನಿಖೆಯಲ್ಲಿ ವಾಟ್ಸ್‌ಆಪ್ ಸಂಭಾಷಣೆಯನ್ನು ಬ್ರೆಜಿಲ್ ನೀಡುವಂತೆ ಮನವಿ ಮಾಡಿತ್ತು. ಆದರೆ, ವಾಟ್ಸ್‌ಆಪ್ ಸಂಭಾಷಣೆ ನೀಡಲು ನಿರಾಕರಿಸಿತ್ತು. ನಂತರ ಮಾರ್ಚ್ 2 ರಂದು ನ್ಯಾಯಾಲಯದ ಮೊರೆ ಹೋಗಿ ಡಿಯಾಗೋ ಜೋಡನ್ ಬಿಡುಗಡೆಯಾದರು. ಈ ಕಾರಣಕ್ಕಾಗಿ ಬ್ರೆಜಿಲ್ ಮೊಬೈಲ್ ಪ್ರಾವಿಡಾರ್‌ಗಳಿಗೆ 72 ಗಂಟೆಗಳ ಕಾಲ ವಾಟ್ಸ್‌ಆಪ್ ನಿಷೇಧಿಸುವಂತೆ ಮೇ 2, 2016ರಂದು ಆದೇಶ ನೀಡಿತು. ನಂತರ ವಾಟ್ಸ್‌ಆಪ್ ನ್ಯಾಯಾಲಯದ ಮೊರೆ ಹೋಗಿ 24 ಗಂಟೆಗಳ ನಂತರ ಬ್ರೆಜಿಲ್‌ನಲ್ಲಿ ಕಾರ್ಯನಿರ್ವಹಣೆ ಪ್ರಾರಂಭಿಸಿತು.

ಸಿಂಹಳಿಯರ ನಾಡಲ್ಲೂ ಎಡವಿದ ವಾಟ್ಸ್‌ಆಪ್
ಶ್ರೀಲಂಕಾದಲ್ಲೂ ವಾಟ್ಸ್‌ಆಪ್ ಬ್ಯಾನ್ ಆಗಿತ್ತು. ವಾಟ್ಸ್‌ಆಪ್ ಜತೆಗೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿತ್ತು. ಮಾರ್ಚ್ 7 ಮತ್ತು 8, 2018ರಲ್ಲಿ ಶ್ರೀಲಂಕಾದ ಕೆಲವು ಭಾಗಗಳಲ್ಲಿ ಗಲಭೆ ಹೆಚ್ಚಾಗಿದ್ದ ಕಾರಣ ಸಾಮಾಜಿಕ ಜಾಲತಾಣಗಳನ್ನು ಬ್ಲಾಕ್ ಮಾಡಲಾಗಿತ್ತು. ನಂತರ ಮಾರ್ಚ್ 14, 2018ರಂದು ಸಾಮಾಜಿಕ ಜಾಲತಾಣಗಳ ನಿಷೇಧವನ್ನು ವಾಪಸ್ ಪಡೆಯಲಾಯಿತು.

ಉಗಾಂಡಾದಲ್ಲಿರುವ ನೀತಿಯೇ ಬೇರೆ
ಉಗಾಂಡಾ ಸರ್ಕಾರ ವಾಟ್ಸ್‌ಆಪ್ ಮತ್ತು ಫೇಸ್‌ಬುಕ್‌ನ್ನು ನಿಷೇಧ ಮಾಡಿದ್ದು, ವಾಟ್ಸ್‌ಆಪ್ ಅಥವಾ ಫೇಸ್‌ಬುಕ್ ಬಳಕೆಗೆ ಉಗಾಂಡಾ ಸರ್ಕಾರ ಹೊಸ ನೀತಿಯನ್ನು ತಂದಿದೆ. ಗಾಸಿಫ್‌ಗಳ ನಿಯಂತ್ರಣಕ್ಕೆ ದೈನಂದಿನ ಸಾಮಾಜಿಕ ಜಾಲತಾಣಗಳ ತೆರಿಗೆ ನೀತಿಯನ್ನು ಜಾರಿಗೆ ತಂದಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಬೇಕೆಂದರೆ ಅಲ್ಲಿ 200 ಶಿಲ್ಲಾಂಗ್‌ಗಳನ್ನು ಪಾವತಿಸಬೇಕಾಗಿದೆ.


Click it and Unblock the Notifications








