ರೇಷನ್ ಕಾರ್ಡ್ ಹೊಂದಿರುವ ಬಳಕೆದಾರರು ಈ ಸ್ಟೋರಿಯನ್ನೊಮ್ಮೆ ಓದಿರಿ!
ದೇಶದಲ್ಲಿ ರೇಷನ್ ಕಾರ್ಡ್ ಹೊಂದಿರುವ ಬಳಕೆದಾರರಿಗಾಗಿ ಹೊಸ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಈಗಾಗಲೇ ದೇಶದಲ್ಲಿ 'ಒನ್ ನೇಷನ್-ಒನ್ ರೇಷನ್ ಕಾರ್ಡ್' ವ್ಯವಸ್ಥೆಯನ್ನು ಉತ್ತೇಜಿಸುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದು ನಿಮಗೆಲ್ಲಾ ತಿಳಿದೆ ಇದೆ. ಇದನ್ನು ಇನ್ನಷ್ಟು ಸುಗಮಗೊಳಿಸವ ಸಲುವಾಗಿ, ಸರ್ಕಾರವು ಹತ್ತಿರದ ನ್ಯಾಯಯುತ ಬೆಲೆ ಅಂಗಡಿಯನ್ನು ಗುರುತಿಸುವಲ್ಲಿ ನಾಗರಿಕರಿಗೆ ಅನುಕೂಲವಾಗುವಂತೆ 'ಮೇರಾ ರೇಷನ್' ಮೊಬೈಲ್ ಆಪ್ ಅನ್ನು ಲಾಂಚ್ ಮಾಡಿದೆ. ಈ ಅಪ್ಲಿಕೇಶನ್ ವಿಶೇಷವಾಗಿ ಜೀವನೋಪಾಯಕ್ಕಾಗಿ ಹೊಸ ಪ್ರದೇಶಗಳಿಗೆ ತೆರಳುವ ಪಡಿತರ ಚೀಟಿ ಹೊಂದಿರುವವರಿಗೆ ಸಾಕಷ್ಟು ಉಪಯುಕ್ತವಾಗಲಿದೆ.

ಹೌದು, ಕೇಂದ್ರ ಸರ್ಕಾರ ವಲಸೆ ಹೋಗುವ ನಾಗರೀಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೇರಾ ರೇಷನ್ ಮೊಬೈಲ್ ಅಪ್ಲಿಕೇಶನ್ ಲಾಂಚ್ ಮಾಡಿದೆ. ಇದು "ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ'' ಫಲಾನುಭವಿಗಳು, ವಿಶೇಷವಾಗಿ ವಲಸೆ ಬಂದ ಫಲಾನುಭವಿಗಳು, ಎಫ್‌ಪಿಎಸ್ ವಿತರಕರು ಮತ್ತು ಇತರ ಸಂಬಂಧಿತ ಮಧ್ಯಸ್ಥಗಾರರಲ್ಲಿ ವಿವಿಧ ONRC ಸಂಬಂಧಿತ ಸೇವೆಗಳಿಗೆ ಅನುಕೂಲ ಮಾಡಿಕೊಡಲಿದೆ. ಈ ಅಪ್ಲಿಕೇಶನ್ ಅನ್ನು ಭಾರತ ಸರ್ಕಾರವು ಎನ್‌ಐಸಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಹಾಗಾದ್ರೆ ಈ ಅಪ್ಲಿಕೇಶನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪಡಿತರ ಚೀಟಿ ಹೊಂದಿರುವವರು, ವಿಶೇಷವಾಗಿ ವಲಸೆ ಬಂದ ಫಲಾನುಭವಿಗಳು, ಹತ್ತಿರದ ನ್ಯಾಯಯುತ ಬೆಲೆ ಅಂಗಡಿಯನ್ನು ಗುರುತಿಸಲು, ಈ ಅಪ್ಲಿಕೇಶನ್ ಸಹಾಯಕವಾಗಿದೆ. ಈ ಅಪ್ಲಿಕೇಶನ್ ಅಲ್ಲಿ ಪಡಿತರ ಚೀಟಿದಾರರ ಅರ್ಹತೆಯ ವಿವರಗಳನ್ನು ಮತ್ತು ಇತ್ತೀಚಿನ ವಹಿವಾಟುಗಳನ್ನು ಪರಿಶೀಲಿಸಬಹುದಾಗಿದೆ. ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (NIC) ಅಭಿವೃದ್ಧಿಪಡಿಸಿದ ಆಂಡ್ರಾಯ್ಡ್ ಆಧಾರಿತ ಮೊಬೈಲ್ ಅಪ್ಲಿಕೇಶನ್ ಪ್ರಸ್ತುತ ಹಿಂದಿ ಮತ್ತು ಇಂಗ್ಲಿಷ್ನಲ್ಲಿದೆ. ಕ್ರಮೇಣ, ಇದು ದೇಶದ ಇತರೆ 14 ಭಾಷೆಗಳಲ್ಲಿ ಲಭ್ಯವಾಗಲಿದೆ.

ಇನ್ನು ಭಾರತ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಯಡಿಯಲ್ಲಿ 81 ಕೋಟಿ ಜನರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಮೂಲಕ ಸರ್ಕಾರವು ಹೆಚ್ಚು ಸಬ್ಸಿಡಿ ಹೊಂದಿರುವ ಆಹಾರ ಧಾನ್ಯಗಳನ್ನು ಪ್ರತಿ ಕೆ.ಜಿ.ಗೆ 1-3 ರೂ. ದರದಲ್ಲಿ ನೀಡುತ್ತಿದೆ. ಅಲ್ಲದೆ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಡಿತರ ಕಾರ್ಡ್ ಪೋರ್ಟಬಿಲಿಟಿ ಸೇವೆಯನ್ನು ಒನ್ ನೇಷನ್-ಒನ್ ರೇಷನ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೊಳಿಸುವುದರಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಪಡಿತರ ಲಭ್ಯತೆಯನ್ನು ಖಾತ್ರಿಪಡಿಸುತ್ತದೆ.

ಆಹಾರ ಮತ್ತು ಸಾರ್ವಜನಿಕ ವಿತರಣಾ ವಿಭಾಗದ ಕಾರ್ಯದರ್ಶಿ ಸುಧಾಂಶು ಪಾಂಡೆ, ಆಗಸ್ಟ್ 2019 ರಲ್ಲಿ 4 ರಾಜ್ಯಗಳಲ್ಲಿ ಆರಂಭದಲ್ಲಿ ಪ್ರಾರಂಭವಾದ ಒನ್‌ರೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆಯನ್ನು ಬಹಳ ಕಡಿಮೆ ಅವಧಿಯಲ್ಲಿ ಶೀಘ್ರವಾಗಿ ರೂಪಿಸಲಾಗಿದೆ ಎಂದು ಹೇಳಿದ್ದಾರೆ. 2020 ರ ಡಿಸೆಂಬರ್ ವೇಳೆಗೆ 32 ರಾಜ್ಯಗಳು / ಯುಟಿಗಳಲ್ಲಿ ಮತ್ತು ಉಳಿದ 4 ರಾಜ್ಯಗಳಲ್ಲಿಯೂ ಈ ವ್ಯವಸ್ಥೆ ಮುಂದಿನ ಕೆಲವು ತಿಂಗಳುಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದಿದ್ದಾರೆ. ಪ್ರಸ್ತುತ, ಈ ವ್ಯವಸ್ಥೆಯು ದೇಶದಲ್ಲಿ ಸುಮಾರು 69 ಕೋಟಿ ಎನ್‌ಎಫ್‌ಎಸ್‌ಎ ಫಲಾನುಭವಿಗಳನ್ನು ಒಳಗೊಳ್ಳುತ್ತದೆ ಮತ್ತು ಒನ್ ನೇಷನ್-ಒನ್ ರೇಷನ್ ಕಾರ್ಡ್ ಅಡಿಯಲ್ಲಿ ಮಾಸಿಕ ಸರಾಸರಿ 1.5 ~ 1.6 ಕೋಟಿ ಪೋರ್ಟಬಿಲಿಟಿ ವಹಿವಾಟುಗಳನ್ನು ದಾಖಲಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಸದ್ಯ ಮೇರಾ ರೇಷನ್ ಮೊಬೈಲ್ ಅಪ್ಲಿಕೇಶನ್ ಮೂಲಕ ಪಡಿತರವನ್ನು ಪಡೆದಿರುವ ಮಾಹಿತಿ, ಪಡಿತರ ನಿಡುವ ನ್ಯಾಯಬೆಲೆ ಅಂಗಡಿ ಮಾಹಿತಿಯನ್ನು ನೀಡಲಿದೆ. ಈ ಅಪ್ಲಿಕೇಶನ್ ನಲ್ಲಿ ವಲಸೆ ಫಲಾನುಭವಿಗಳು ತಮ್ಮ ವಲಸೆ ವಿವರಗಳನ್ನು ನೋಂದಾಯಿಸಿಕೊಳ್ಳಬಹುದು. ಅಲ್ಲದೆ ವಲಸೆ ಫಲಾನುಭವಿಗಳು ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ತಮ್ಮನ್ನು ನೋಂದಾಯಿಸಿಕೊಳ್ಳಬಹುದು ಮತ್ತು ವ್ಯವಸ್ಥೆಯು ಸ್ವಯಂಚಾಲಿತವಾಗಿ ಅರ್ಹವಾದ ಆಹಾರ ಧಾನ್ಯಗಳನ್ನು ಹಂಚುತ್ತದೆ. ಇದಲ್ಲದೆ, ಎನ್‌ಎಫ್‌ಎಸ್‌ಎ ಫಲಾನುಭವಿಗಳು ಹತ್ತಿರದ ಎಫ್‌ಪಿಎಸ್ ಅನ್ನು ಗುರುತಿಸಬಹುದು, ಅವರ ಆಹಾರ ಧಾನ್ಯಗಳ ಅರ್ಹತೆ, ಹಿಂದಿನ ಆರು ತಿಂಗಳ ವಹಿವಾಟು ಮತ್ತು ಆಧಾರ್ ಕಾರ್ಡ್ ಮಾಹಿತಿ ಆಧಾರದ ಮೇಲೆ ಇತರೆ ವಿವರಗಳನ್ನು ಸುಲಭವಾಗಿ ಪರಿಶೀಲಿಸಬಹುದಾಗಿದೆ.


Click it and Unblock the Notifications