ಮ್ಯಾಟ್ರಿ ಮೋನಿಯಲ್ ವೆಬ್‌ಸೈಟ್ ಬಳಕೆದಾರರಿಗೆ ಖಡಕ್ ಸೂಚನೆ ನೀಡಿದ ಕೇಂದ್ರ ಸರ್ಕಾರ
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಸ್ಕ್ಯಾಮ್‌ಗಳ ಸಂಖ್ಯೆ ಸಾಕಷ್ಟು ಹೆಚ್ಚಳವಾಗ್ತಿದೆ. ಜನಸಾಮಾನ್ಯರನ್ನು ವಂಚನೆ ಮಾಡಲು ವಂಚಕರು ಪ್ರತಿನಿತ್ಯವೂ ಹೊಸ ಹೊಸ ಮಾರ್ಗಗಳನ್ನು ಹುಡಕುತ್ತಿದ್ದಾರೆ. ಅದರಂತೆ ಇದೀಗ ಡೇಟಿಂಗ್ ಮತ್ತು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ ಮೇಲೆ ವಂಚಕರು ಕಣ್ಣುಹಾಕಿದ್ದಾರೆ. ಅಷ್ಟೇ ಅಲ್ಲ ಡೇಟಿಂಗ್ ಹೆಸರಿನಲ್ಲಿ ಚೀಟಿಂಗ್ ಮಾಡುತ್ತಿದ್ದಾರೆ.
ಹೌದು, ಡೇಟಿಂಗ್ ಮತ್ತು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ ಮೂಲಕ ವಂಚಕರು ಯುವಜನತೆಯನ್ನು ವಂಚಿಸುತ್ತಿರುವ ಪ್ರಕರಣಗಳು ವರದಿಯಾಗಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಡೇಟಿಂಗ್ ಮತ್ತು ಮ್ಯಾಟ್ರಿಮೋನಿಯಲ್ ಆ್ಯಪ್ ಬಳಸುವವರಿಗೆ ಖಡಕ್ ವಾರ್ನಿಂಗ್ ನೀಡಿದೆ. ಅಷ್ಟಕ್ಕೂ ಕೇಂದ್ರ ಸರ್ಕಾರ ಡೇಟಿಂಗ್ ಆ್ಯಪ್ ಬಳಸುವವರಿಗೆ ಹೇಳಿದ್ದೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಆನ್‌ಲೈನ್ ವಂಚನೆಗಳ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸಾರ್ವಜನಿಕರಿಗೆ ಎಷ್ಟೇ ಎಚ್ಚರಿಕೆಗಳನ್ನು ನೀಡಿದರೂ ಕೂಡ ಸ್ಕ್ಯಾಮರ್‌ಗಳ ದಾಳಕ್ಕೆ ಸುಲಭವಾಗಿ ಬಲಿಯಾಗುತ್ತಿದ್ದಾರೆ. ಇದೀಗ ಸ್ಕ್ಯಾಮರ್‌ಗಳು ಡೇಟಿಂಗ್ ಆ್ಯಪ್‌ಗಳ ಕಡೆಗೆ ಕಣ್ಣುಹಾಯಿಸಿದ್ದು, ಯುವಜನರನ್ನು ಸುಲಭವಾಗಿ ಯಾಮಾರಿಸಿ ವಂಚನೆ ಮಾಡುತ್ತಿದ್ದಾರೆ. ಇದಕ್ಕೆ ಮ್ಯಾಟ್ರಿ ಮೋನಿಯಲ್ ವೆಬ್‌ಸೈಟ್‌ಗಳು ಕೂಡ ಹೊರತಾಗಿಲ್ಲ ಎಂದು ವರದಿಯಾಗಿದೆ.
ಸ್ಕ್ಯಾಮರ್‌ಗಳು ಡೇಟಿಂಗ್ ಮತ್ತು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ಯುವಕರನ್ನು ಸುಲಭವಾಗಿ ಯಾಮಾರಿಸುತ್ತಿದ್ದಾರೆ. ಯುವತಿಯರ ಸೋಗಿನಲ್ಲಿ ಪ್ರೊಫೈಲ್ ಕ್ರಿಯೆಟ್ ಮಾಡಿ ಪ್ರೀತಿಸುವ ನಾಟಕವಾಡುತ್ತಿದ್ದಾರೆ. ಅಷ್ಟೇ ಅಲ್ಲ ನಿಮಗೆ ಪ್ರೀತಿಯ ಉಡುಗೊರೆ ಕಳುಹಿಸಿರುವೇ ಎಂದು ಹೇಳಿ ಆಸೆ ಹುಟ್ಟಿಸುತ್ತಾರೆ. ನಂತರ ನಿಮಗೆ ಉಡುಗೊರೆ ಬಂದಿದೆ, ಇಂತಿಷ್ಟು ಕಸ್ಟಮ್ಸ್ ಸುಂಕ ಪಾವತಿಸಿ ಪಡೆಯಿರಿ ಎಂದು ಬೇರೆ ನಂಬರ್‌ನಿಂದ ಕರೆ ಮಾಡಿ ಹಣ ಹಾಕಿಸಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಳವಾಗಿವೆ.
ವರದಿಯ ಪ್ರಕಾರ, ಸುಮಾರು ಮೂರನೇ ಎರಡರಷ್ಟು ಭಾರತೀಯ ವಯಸ್ಕರು (66%) ಆನ್‌ಲೈನ್ ಡೇಟಿಂಗ್/ರೊಮ್ಯಾನ್ಸ್ ಸ್ಕ್ಯಾಮ್‌ಗೆ ಬಲಿಯಾಗಿದ್ದಾರೆ. ಅಂದರೆ ಸರಾಸರಿ ಪ್ರತಿಯೊಬ್ಬರೂ ಕೂಡ 7,966ರೂ.ಗಳಷ್ಟು ಕಳೆದುಕೊಂಡಿದ್ದಾರೆ. ಈ ರೀತಿಯ ಪ್ರಕರಣಗಳು ಹೆಚ್ಚಳವಾಗುತ್ತಿದ್ದ ಹಾಗೇ ಕೇಂದ್ರ ಹಣಕಾಸು ಸಚಿವಾಲಯವು ಮ್ಯಾಟ್ರಿಮೋನಿಯಲ್ ಡೇಟಿಂಗ್ ಹಗರಣಗಳಿಗೆ ಸಂಬಂಧಿಸಿದಂತೆ ಸಲಹೆಯನ್ನು ನೀಡಿದೆ. ಅದರಂತೆ ಭಾರತೀಯ ಕಸ್ಟಮ್ಸ್ ಇಲಾಖೆಯ ಯಾವುದೇ ಅಧಿಕಾರಿಯು ವೈಯಕ್ತಿಕ ಖಾತೆಗಳಲ್ಲಿ ಕಸ್ಟಮ್ಸ್ ಸುಂಕವನ್ನು ಪಾವತಿಸುವಂತೆ ಕೇಳುವ ಎಸ್‌ಎಂಎಸ್‌ಗಳನ್ನು ಹಾಗೂ ಕರೆ ಮಾಡುವುದಿಲ್ಲ ಎಂದು ಹೇಳಿದೆ.
ಭಾರತೀಯ ಕಸ್ಟಮ್ಸ್ ಹೆಸರಿನಲ್ಲಿ ಹಣವನ್ನು ಸುಲಿಗೆ ಮಾಡುವ ವಂಚಕರ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಸೂಚನೆ ನೀಡಿದೆ. ಭಾರತೀಯ ಕಸ್ಟಮ್ಸ್‌ನ ಎಲ್ಲಾ ಸಂವಹನಗಳು CBIC ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದಾದ DIN ಅನ್ನು ಒಳಗೊಂಡಿರುತ್ತವೆ ಎಂದು ಸಲಹೆ ನೀಡಿದೆ. ಆದರಿಂದ ನೀವು ಆನ್‌ಲೈನ್ ಡೇಟಿಂಗ್‌ನಲ್ಲಿ ತೊಡಗಿದ್ದರೆ ಎಚ್ಚರಿಕೆಯಿಂದಿರಬೇಕಾದ ಅನಿವಾರ್ಯತೆ ಎದುರಾಗಿದೆ. ಅಷ್ಟೇ ಅಲ್ಲ ಇಂತಹ ಮೋಸದ ಚಟುವಟಿಕೆಗಳಿಗೆ ಬಲಿಯಾಗದೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಿದೆ.
ಹೇಗೆ ನಡೆಯುತ್ತೆ ಗೊತ್ತಾ ಮ್ಯಾಟ್ರಿಮೋನಿಯಲ್ ಅಥವಾ ಡೇಟಿಂಗ್ ಸ್ಕ್ಯಾಮ್?
ಮ್ಯಾಟ್ರಿ ಮೋನಿಯಲ್ ಅಥವಾ ಡೇಟಿಂಗ್ ಸ್ಕ್ಯಾಮ್‌ನಲ್ಲಿ ಸಾಮಾನ್ಯವಾಗಿ ಹಣ ಕಳೆದುಕೊಳ್ಳುವವರು ಯುವಕರೇ ಆಗಿರುತ್ತಾರೆ. ಇಲ್ಲಿ ಯುವಜನರನ್ನೇ ಟಾರ್ಗೆಟ್ ಮಾಡುವ ವಂಚಕರು ಯುವತಿಯರ ಸೋಗಿನಲ್ಲಿ ಬಲೆ ಬೀಸುತ್ತಾರೆ. ಸುಂದರವಾದ ಹುಡುಗಿಯ ಫೋಟೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ಯುವಕರನ್ನು ಸೆಳೆಯುತ್ತಾರೆ. ಅಲ್ಲದೆ ಅವರೊಂದಿಗೆ ಚಾಟಿಂಗ್ ಮಾಡುವ ಮೂಲಕ ಇನ್ನಷ್ಟು ಆಸೆ ಹುಟ್ಟಿಸುತ್ತಾರೆ. ಅಲ್ಲದೆ ನಾನಾ ಆಮಿಷಗಳನ್ನು ನೀಡುವ ಮೂಲಕ ಅವರಿಂದ ಹಣ ವರ್ಗಾಯಿಸಿಕೊಂಡು ಮೋಸ ಮಾಡುತ್ತಾರೆ.
ಅದರಲ್ಲೂ ಮ್ಯಾಟ್ರಿ ಮೋನಿಯಲ್ ವೆಬ್‌ಸೈಟ್‌ಗಳಲ್ಲಿ ತಮಗೆ ಮದುವೆ ಆಗಿಲ್ಲವೆಂದು ಹುಡುಗಿ ಹುಡುಕುವ ಯುವಕರಿಗೆ ಸರಿಯಾಗಿಯೇ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮ್ಯಾಟ್ರಿ ಮೋನಿಯಲ್‌ನಲ್ಲಿ ಹುಡುಗಿ ಹುಡುಕುವವರಿಗೆ ತಾವು ಮದುವೆ ಆಗುವುದಾಗಿ ಹೇಳುತ್ತಾರೆ. ಅಲ್ಲದೆ ಅವರ ಜೊತೆ ಸಲುಗೆಯಿಂದ ಮಾತನಾಡುತ್ತಾರೆ. ನಂತರದ ದಿನಗಳಲ್ಲಿ ತಮಗೆ ತುರ್ತಾಗೆ ಹಣ ಬೇಕಾಗಿದೆ, ಮನೆಯಲ್ಲಿ ಅಮ್ಮನಿಗೆ ತೊಂದರೆಯಾಗಿದೆ ಹಾಗೇ ಹೀಗೆ ಎಂಬೆಲ್ಲಾ ಸುಳ್ಳುಗಳನ್ನು ಹೇಳುವ ಮೂಲಕ ವಂಚಿಸುತ್ತಾರೆ. ಆದರಿಂದ ಇದರ ಬಗ್ಗೆ ಯುವಜನರು ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆಯಿದೆ.


Click it and Unblock the Notifications








