ಯಾಕೆ ಹೀಗಾಯ್ತು! ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಭಾರಿ ಕುಸಿತ!
ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಿಗೆ ಪ್ರಮುಖ ಮಾರುಕಟ್ಟೆಯಾಗಿರುವ ಭಾರತದಲ್ಲಿ ಇದೇ ಮೊದಲ ಭಾರಿಗೆ ಸ್ಮಾರ್ಟ್‌ಫೋನ್ ವಲಯ ಭಾರಿ ಹಿನ್ನಡೆಯನ್ನು ಅನುಭವಿಸಿದೆ. ಅದರಲ್ಲೂ 2023ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಐತಿಹಾಸಿಕ ಕುಸಿತವನ್ನು ಕಂಡಿದೆ ಎಂದು ವರದಿಯಾಗಿದೆ.
ಹೌದು, 60 ಕೋಟಿಗೂ ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಹೊಂದಿರುವ ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆ ಹಿನ್ನಡೆ ಅನುಭವಿಸಿರೋದು ವರಿದಯಾಗಿದೆ. ಪ್ರಮುಖ ಸಂಶೋಧನಾ ಸಂಸ್ಥೆ ಕ್ಯಾನಲಿಸ್ ನೀಡುರವ ವರದಿಯ ಪ್ರಕಾರ, ಭಾರತದಲ್ಲಿ ಸ್ಮಾರ್ಟ್‌ಫೋನ್ ಸಾಗಣೆ ವರ್ಷದಿಂದ ವರ್ಷಕ್ಕೆ 20% ರಷ್ಟು ಕಡಿಮೆಯಾಗಿದೆ. ಹಾಗಾದ್ರೆ ಭಾರತದಲ್ಲಿ ಈ ಪರಿಯ ಕುಸಿತಕ್ಕೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಸಾಕಷ್ಟು ವಿಶಾಲವಾಗಿದೆ. ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಭಾರತದಲ್ಲಿ ತಮ್ಮ ಡಿವೈಸ್‌ಗಳನ್ನು ಪರಿಚಯಿಸಲು ಹಾತೊರೆಯುತ್ತಿವೆ. ಇದರಲ್ಲಿ ಶಿಯೋಮಿ, ಸ್ಯಾಮ್‌ಸಂಗ್, ರಿಯಲ್‌ಮಿ, ಪೊಕೊ, ವಿವೋ, ಒಪ್ಪೋ ಕಂಪೆನಿಯ ಫೋನ್‌ಗಳು ಭಾರಿ ಬೇಡಿಕೆಯನ್ನು ಸೃಷ್ಟಿಸಿವೆ. ಆದರೆ ಇದೇ ಮೊದಲ ಭಾರಿಗೆ ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತಗೊಂಡಿರುವುದು ವರದಿಯಾಗಿದೆ. ಈ ಕುಸಿತ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ ಅನ್ನೊದು ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳ ಚಿಂತೆಗೆ ಕಾರಣವಾಗಿದೆ.
ಭಾರತದಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರ ಬೇಡಿಕೆ ಕಡಿಮೆಯಾಗಿದೆ. ಅಲ್ಲದೆ ಹೆಚ್ಚಿನ ಹಣದುಬ್ಬರ, ದಾಸ್ತಾನು ತಿದ್ದುಪಡಿ ಮತ್ತು ಘಟಕಗಳ ಕೊರತೆಯ ಕಾರಣದಿಂದಾಗಿ ಬೇಡಿಕೆ ಕುಸಿತವಾಗಿದೆ ಎನ್ನಲಾಗಿದೆ. ಪ್ರಸ್ತುತ ಲಭ್ಯವಿರುವ ವರದಿಯ ಪ್ರಕಾರ 2022ರ 4ನೇ ತ್ರೈಮಾಸಿಕದಲ್ಲಿ ಸ್ಯಾಮ್‌ಸಂಗ್ ಕಂಪೆನಿ ಶಿಯೋಮಿಯನ್ನು ಹಿಂದಿಕಿತ್ತು. ಅದು ಈ ವರ್ಷವೂ ಮುಂದುವರೆದಿದ್ದು 2023ರ 1ನೇ ತ್ರೈಮಾಸಿಕದಲ್ಲಿ 21% ಮಾರುಕಟ್ಟೆ ಪಾಲು ಮತ್ತು 6.3 ಮಿಲಿಯನ್ ಯುನಿಟ್ ಸಾಗಣೆಯ ಮೂಲಕ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ.

ಇದೇ ಅವಧಿಯಲ್ಲಿ ಶಿಯೋಮಿ ಕಂಪೆನಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಭಾರಿ ಕುಸಿತವನ್ನು ಕಂಡಿದೆ. ವರದಿಯ ಪ್ರಕಾರ ಶಿಯೋಮಿ 5 ಮಿಲಿಯನ್ ಸಾಗಣೆಗಳನ್ನು ಮಾತ್ರ ಹೊಂದಿದ್ದು, ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಆದರೆ ಶಿಯೋಮಿಯನ್ನು ಹಿಂದಿಕ್ಕಿರುವ ಒಪ್ಪೋ ಕಂಪೆನಿ 5.5 ಮಿಲಿಯನ್ ಶಿಪ್ಪಿಂಗ್ ಮೂಲಕ ಎರಡನೇ ಸ್ಥಾನದಲ್ಲಿದೆ. ಇನ್ನು ವಿವೋ ಕಂಪೆನಿ ತನ್ನ 5.4 ಮಿಲಿಯನ್ ಶಿಪ್‌ಮೆಂಟ್ಸ್ ಮೂಲಕ ಮೂರನೇ ಸ್ಥಾನಕ್ಕೇರಿದೆ.
ಕ್ಯಾನಲಿಸ್ ವರದಿಯ ಪ್ರಕಾರ ಸ್ಯಾಮ್‌ಸಂಗ್ ತನ್ನ ಹೊಸ 5G ಚಾಲಿತ ಎ ಸರಣಿ ಸ್ಮಾರ್ಟ್‌ಫೋನ್ ಮೂಲಕ ಸಿಕ್ಕಾಪಟ್ಟೆ ಟ್ರೆಂಡ್ ಸೃಷ್ಟಿಸಿದೆ. ಇದರಿಂದ ಆಫ್‌ಲೈನ್ ಮಾರುಕಟ್ಟೆಯಲ್ಲಿಯೂ ಡೆಂಟ್ ಮಾಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಆಪಲ್ ಕಂಪೆನಿ ಕೂಡ ತನ್ನ ಹೊಸ ಆಫ್‌ಲೈನ್ ಸ್ಟೋರ್‌ಗಳೊಂದಿಗೆ ಇನ್ನಷ್ಟು ಬೇಡಿಕೆಯನ್ನು ಸೃಷ್ಟಿಸುವ ಪ್ರಯತ್ನ ನಡೆಸುತ್ತಿದೆ. ಈ ಎರಡು ಕಂಪನಿಗಳು ಭಾರತದ ಸ್ಮಾರ್ಟ್‌ಫೋನ್ ರಫ್ತು ಬೆಳವಣಿಗೆಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಇದರಿಂದ 2023 ರ ಮೊದಲ ತ್ರೈಮಾಸಿಕದಲ್ಲಿ ಸುಮಾರು $4 ಶತಕೋಟಿಯಷ್ಟು ದಾಖಲೆಯ ರಫ್ತು ಮೌಲ್ಯವನ್ನು ಸಾಧಿಸಲು ಸಾಧ್ಯವಾಗಿದೆ ಎನ್ನಲಾಗಿದೆ.

ಭಾರತದಲ್ಲಿ ಮೊಬೈಲ್ ಮಾರುಕಟ್ಟೆ ಕುಸಿತ ಅನುಭವಿಸಲು ಜಾಗತಿಕ ಮಾರುಕಟ್ಟೆಯ ಹಿನ್ನಡೆ ಕೂಡ ಕಾರಣವಾಗಿದೆ. ಗ್ಲೋಬಲ್ ಮಾರುಕಟ್ಟೆ 2023 ರ ಮೊದಲ ತ್ರೈಮಾಸಿಕದಲ್ಲಿ ಕಳೆದ ವರ್ಷಕ್ಕಿಂತ 12% ರಷ್ಟು ಕುಸಿತವನ್ನು ಅನುಭವಿಸಿದೆ. ಗ್ರಾಹಕರ ವಿಶ್ವಾಸ, ಏರುತ್ತಿರುವ ಬೆಲೆಗಳು, ಹೆಚ್ಚುವರಿ ದಾಸ್ತಾನು ಇದಕ್ಕೆಲ್ಲಾ ಕಾರಣ ಎಂದು ವರದಿಯಾಗಿದೆ. ಇದೆಲ್ಲದರ ನಡುವೆ ಹೊಸ ಮಾದರಿಯ ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡುವ ಪ್ರಮಾಣ ಹೆಚ್ಚುತ್ತಲೇ ಇದೆ. ಆದರೆ ಭಾರತದಲ್ಲಿ ಮೊಬೈಲ್ ಮಾರುಕಟ್ಟೆಯ ಕುಸಿತ ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಿಗೆ ಚಿಂತೆಯನ್ನುಂಟು ಮಾಡಿದೆ.


Click it and Unblock the Notifications








