ಭಾರತೀಯರಿಂದ ಚೀನಾ ಮೊಬೈಲ್ ಕಂಪೆನಿಗಳು ದೋಚಿದ ಹಣವೆಷ್ಟು ಗೊತ್ತಾ?..ಶಾಕ್ ಆಗ್ತೀರಾ!!
ಚೀನಾ ಕಂಪೆನಿಗಳ ಮೊಬೈಲ್‌ಗಳನ್ನು ಯಾವುದೇ ಕಾರಣಕ್ಕೂ ಖರೀದಿಸುವುದಿಲ್ಲ ಎನ್ನುವವರ ಸಂಖ್ಯೆ ಕಡಿಮೆಯಿಲ್ಲ. ಆದರೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿರುವ ಚೀನಾ ಮೊಬೈಲ್ ಕಂಪೆನಿಗಳಿಗೆ ಮನಸೋತ ಭಾರತೀಯರು, ಒಂದೇ ವರ್ಷದಲ್ಲಿ ಸಾವಿರಾರು ಕೋಟಿ ಹಣವನ್ನು ಅವುಗಳ ಬಾಯಿಗೆ ಸುರಿದಿದ್ದಾರೆ.
ಹೌದು, ವಿಶ್ವದ ಮೊಬೈಲ್ ಮಾರುಕಟ್ಟೆಯ ಬಗ್ಗೆ ಅಧ್ಯಯನ ನಡೆಸುವ ಕೌಂಟರ್ ಪಾಯಿಂಟ್ ಬಿಡುಗಡೆ ಮಾಡಿರುವ ವರದಿಯೊಂದರ ಪ್ರಕಾರ ಇಂತಹ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. 2017-18ನೇ ಸಾಲಿನ ಆರ್ಥಿಕ ವರ್ಷದಲ್ಲಿ ಭಾರತೀಯರು ಚೀನಾದ ಕಂಪನಿಗಳ ಮೊಬೈಲ್‌ಗಳಿಗೆ ಬರೋಬ್ಬರಿ 51 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾರೆ ಎಂದು ಅಂದಾಜಿಸಿದೆ.

ದೇಶದ ನಂ.1 ಮೊಬೈಲ್ ಕಂಪೆನಿ ಶಿಯೋಮಿ ಸೇರಿದಂತೆ ಒನ್ಪ್ಲಸ್, ಹುವಾವೆ, ಹಾನರ್, ವಿವೋ, ಒಪ್ಪೋ, ಲೆನೊವೊ, ಮತ್ತು ಮೊಟೊ ಕಂಪನಿಯ ಸ್ಮಾರ್ಟ್‌ಫೋನ್‌ಗಳು ಭಾರತದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿವೆ ಎಂದು ತಿಳಿದುಬಂದಿದೆ. ಹಾಗಾದರೆ, ಭಾರತೀಯರು ಯಾವ ಯಾವ ಚೀನಾ ಕಂಪೆನಿಗಳಿಗೆ ಎಷ್ಟು ಹಣ ಸುರಿದಿದ್ದಾರೆ ಎಂಬುದನ್ನು ಮುಂದೆ ಓದಿರಿ.

ಚೀನೀ ಕಂಪೆನಿಗಳ ಪ್ರಾಬಲ್ಯ!
ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ಮೊಬೈಲ್ ಮಾರುಕಟ್ಟೆಯನ್ನು ಹೊಂದಿರುವ ಭಾರತದಲ್ಲಿ ಚೀನಾ ಮೊಬೈಲ್ ಕಂಪೆನಿಗಳು ಪ್ರಾಬಲ್ಯ ಮೆರೆದಿವೆ. ಅಂದಾಜು 1 ಲಕ್ಷ ಕೋಟಿ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾ ಮೊಬೈಲ್ ಕಂಪೆನಿಗಳು ಬಹುಪಾಲು ಮಾರುಕಟ್ಟೆಯನ್ನು ವಶಪಡಿಸಿಕೊಂಡಿದ್ದು, ವರ್ಷದಿಂದ ವರ್ಷಕ್ಕೆ ಅವುಗಳ ಪ್ರಾಬಲ್ಯ 10 ರಿಂದ 11 ಪರ್ಸೆಂಟ್ ಏರಿಕೆಯಾಗುತ್ತಿದೆ.

ಮಾರುಕಟ್ಟೆಯಲ್ಲಿ 50% ಕ್ಕಿಂತ ಹೆಚ್ಚು!
ಚೀನಾದ ನಾಲ್ಕು ಪ್ರಮುಖ ಕಂಪೆನಿಗಳಾದ ಶಿಯೋಮಿ, ಒಪ್ಪೊ, ವಿವೊ ಮತ್ತು ಹಾನರ್ ಕಂಪೆನಿಗಳು ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ 50,000 ಕೋಟಿ ವ್ಯವಹಾರ ನಡೆಸಿವೆ. ಇನ್ನು ಒನ್‌ಪ್ಲಸ್, ಮೊಟೊನಂತಹ ಚೀನಾ ಮೊಬೈಲ್ ಕಂಪೆನಿಗಳು ಸಹ ಸೇರಿದರೆ ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಶೇ.50% ಪರ್ಸೆಂಟ್ ಪಾಲನ್ನು ಚೀನಾ ಕಂಪೆನಿಗಳೇ ಹೊಂದಿವೆ.

ವರ್ಷದಲ್ಲೇ 2 ಪಟ್ಟು ಹೆಚ್ಚಾಯ್ತು!
2016-17ರ ಆರ್ಥಿಕ ವರ್ಷದಲ್ಲಿ ಚೀನಾ ಸ್ಮಾರ್ಟ್‌ಫೋನ್‌ಗಳಿಗೆ ಭಾರತೀಯರು 26,262.4 ಕೋಟಿ ರೂಪಾಯಿ ವ್ಯಯಿಸಿದ್ದಾರೆ. ಆದರೆ, ಈ2017-18ರ ಅವಧಿಯಲ್ಲಿ ಒಟ್ಟು 51,722.1 ಕೋಟಿ ರೂಪಾಯಿ ವಹಿವಾಟು ನಡೆಸುವ ಮೂಲಕ, ಚೀನಾ ಮೊಬೈಲ್ ಕಂಪೆನಿಗಳು ಒಂದೇ ವರ್ಷದಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟವನ್ನು ದ್ವಿಗುಣಮಾಡಿಕೊಂಡಿವೆ ಎಂದು ವರದಿ ತಿಳಿಸಿದೆ.

ಯಾವ ಕಂಪೆನಿ ಎಷ್ಟು ಆದಾಯ ಗಳಿಸಿದೆ?
ಭಾರತದ ನಂ.1 ಮೊಬೈಲ್ ಕಂಪೆನಿ ಶಿಯೋಮಿ ದೇಶದಲ್ಲಿ 22,947.3 ಕೋಟಿ ರೂ. ವಹಿವಾಟು ನಡೆಸುವ ಮೂಲಕ ಪ್ರಥಮ ಸ್ಥಾನಗಳಿಸಿದೆ. ಎರಡನೇ ಸ್ಥಾನದಲ್ಲಿ ಒಪ್ಪೋ ಕಂಪನಿಯು 11,994.3 ಕೋಟಿ ರೂ. ವಹಿವಾಟು ನಡೆಸಿದೆ. ವಿವೋ 11,179.3 ಕೋಟಿ ರೂ. ವ್ಯಾಪಾರ ನಡೆಸಿದ್ದರೆ, ಪ್ರಖ್ಯಾತ ಬ್ರ್ಯಾಂಡ್ ಹುವಾವೆ ಕಂಪೆನಿ 5,601.3 ಕೋಟಿ ರೂ. ವಹಿವಾಟು ನಡೆಸಿದೆ.

ಬಜೆಟ್ ಫೋನ್‌ಗಳ ಮೇಲೆ ಹಿಡಿತ!
ಶಿಯೋಮಿ ಕಂಪೆನಿ .6,000-13,000 ಬೆಲೆಯ ಮೊಬೈಲ್‌ಗಳ ಮೇಲೆ ಹಿಡಿತ ಸಾಧಿಸಿದರೆ, ಒಪ್ಪೊ ಮತ್ತು ವಿವೊ ಕ್ರಮವಾಗಿ 10,000-22,000 ರೂ. ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಮಾರಾಟ ಮಾಡಿವೆ. ಹಾನರ್ ಕಂಪೆನಿ ಕೂಡ 8,000-12,000 ವಿಭಾಗದಲ್ಲಿ ಹೆಚ್ಚು ಪಾಲನ್ನು ಪಡೆದಿದೆ. ಇವುಗಳ ಮಧ್ಯೆ ಕೊರಿಯಾದ ಸ್ಯಾಮ್‌ಸಂಗ್ ಮಾತ್ರ ಹೆಚ್ಚು ಹೋರಾಟ ಮಾಡಿದೆ.

ಪ್ರೀಮಿಯಮ್‌ನಲ್ಲಿ ಒನ್‌ಪ್ಲಸ್!
ಮಧ್ಯಮ ಬಜೆಟ್ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಇವುಗಳ ಪಾಲು ಹೆಚ್ಚಿದ್ದರೆ, ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಒನ್‌ಪ್ಲಸ್ ಕಂಪೆನಿ ಮಿಂಚುತ್ತಿದೆ. ಈ ವರ್ಷ ಸತತ ಎರಡು ತ್ರೈಮಾಸಿಕಗಳಿದಲೂ ರೂ 30,000-ಪ್ಲಸ್ ವಿಭಾಗದಲ್ಲಿ ನಾಯಕತ್ವವನ್ನು ಉಳಿಸಿಕೊಳ್ಳುವಲ್ಲಿ ಒನ್‌ಪ್ಲಸ್ ಯಶಸ್ವಿಯಾಗಿದೆ. ಭಾರತ ಈ ಬ್ರಾಂಡ್‌ಗೆ ಅತಿ ದೊಡ್ಡ ಮಾರುಕಟ್ಟೆಯಾಗಿದೆ

ಸ್ಯಾಮ್‌ಸಂಗ್ ಕಥೆ ಗೊತ್ತಿಲ್ಲ!
ಕೊರಿಯಾದ ಸ್ಯಾಮ್‌ಸಂಗ್ 2016-17ರ ಸಾಲಿನಲ್ಲಿ 34,261 ಕೋಟಿ ರೂ.ವ್ಯವಹಾರ ನಡೆಸಿದೆ. ಆದರೆ, 2018ರ ಆರ್ಥಿಕ ಸಾಲಿನ ಸ್ಯಾಮ್‍ಸಂಗ್ ಹಾಗೂ ಲೆನೆವೊ ಕಂಪನಿಗಳ ಮಾಹಿತಿಗಳು ಲಭ್ಯವಾಗಿಲ್ಲ. ಇನ್ನು 2018ನೇ ಆರ್ಥಿಕ ಸಾಲಿನಲ್ಲಿ ಆಪಲ್ 13,097 ಕೋಟಿ ರೂ. ವಹಿವಾಟನ್ನು ಭಾರತದ ಮಾರುಕಟ್ಟೆಯಲ್ಲಿ ನಡೆಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.


Click it and Unblock the Notifications








