ಸ್ವಾತಂತ್ರ್ಯ ನಂತರ ದೇಶದ ಟೆಕ್ ಮತ್ತು ತಂತ್ರಜ್ಞಾನ ವಲಯದಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಗೊತ್ತಾ?
ಭಾರತಕ್ಕೆ ಸ್ವಾತಂತ್ರ್ಯ ಬಂದು ಇದೇ ಆಗಸ್ಟ್ 15ಕ್ಕೆ 76 ವರ್ಷಗಳು ತುಂಬಲಿದೆ. ಸ್ವಾತಂತ್ರ್ಯ ದಿನಾಚರಣೆಗೆ ಒಂದು ದಿನವಷ್ಟೇ ಬಾಕಿಯಿದ್ದು, ಇಂದಿನಿಂದಲೇ ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಶುರುವಾಗಿದೆ. ಸ್ವಾತಂತ್ರ್ಯ ದೊರೆತ ಆಗಸ್ಟ್ 15, 1947ರಿಂದ ಇಂದಿನ ಡಿಜಿಟಲ್ ಭಾರತದ ತನಕ ನಡೆದು ಬಂದ ಹಾದಿಯಂತೂ ರೋಚಕವಾಗಿದೆ.
ಹೌದು, ಭಾರತ ಇಂದು ವಿಶ್ವದ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆಯಲ್ಲಿ ಸದೃಡವಾಗುವತ್ತ ಹೆಜ್ಜೆ ಹಾಕಿದೆ. ಆದರೆ ಈ ಎಲ್ಲಾ ಬೆಳವಣಿಗೆಗಳಿ ಏಕಾಏಕಿ ನಡೆದುದ್ದಲ್ಲ, ಸ್ವಾತಂತ್ರ್ಯ ಬಂದ ನಂತರ ಭಾರತ ಸವೆಸಿದ ಹಾದಿ ಸಾಕಷ್ಟು ರೋಚಕವಾಗಿದೆ. ಹಾಗಾದ್ರೆ ಸ್ವಾತಂತ್ರ್ಯ ನಂತರ ದೇಶದ ತಂತ್ರಜ್ಞಾನ ವಲಯದಲ್ಲಿ ಏನೆಲ್ಲಾ ಬದಲಾವಣೆಗಳು ನಡೆದಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತ ದೇಶ ಇಂದು ಚಂದ್ರನ ಅಂಗಳಕ್ಕೆ ಹೋಗಿ ಬರುವ ಸಾಹಸ ಮಾಡಿದೆ. ಚಂದ್ರಯಾನ 3 ಅನ್ನು ಯಶಸ್ವಿಯಾಗಿ ಉಡವಾಣೆ ಮಾಡಿ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಬರೆಯುವತ್ತ ನಡೆದಿದೆ. ಈ ಎಲ್ಲಾ ಸಾಧನೆಯ ಹಿಂದೆ ದಶಕಗಳ ಪರಿಶ್ರಮವಿದೆ. ಭಾರತ ಇಂದು ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ದೈತ್ಯ ಹೆಜ್ಜೆಗಳನ್ನು ಇಡುತ್ತಿರುವುದು ದೇಶವಾಸಿಗಳಾದ ನಮಗೆ ಹೆಮ್ಮೆ ಎನಿಸಲಿದೆ. 1974 ರಲ್ಲಿ ಮೊದಲ ಪರಮಾಣು ಬಾಂಬ್‌ನ ಯಶಸ್ವಿ ಪರೀಕ್ಷೆ ಇರಬಹುದು, ಇಲ್ಲವೇ ವಿಶ್ವದ ಅತಿದೊಡ್ಡ ಓಪನ್ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API) ಅಭಿವೃದ್ಧಿಯಾಗಿರಬಹುದು ಇದೆಲ್ಲವೂ ದೇಶದ ಹಿರಿಮೆಗೆ ಹೊಸ ಗರಿಯನ್ನು ಸೇರಿಸಿದಂತಾಗಿದೆ.
ಸ್ವಾತಂತ್ರ್ಯ ನಂತರದ ಭಾರತದ ಮೊದಲ ಹೆಜ್ಜೆ
ಭಾರತ ದೇಶ ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ನಂತರ ದೇಶದಲ್ಲಿ 1950 ರಲ್ಲಿ ಯೋಜನಾ ಆಯೋಗವನ್ನು ಸ್ಥಾಪಿಸಲಾಯಿತು. ಇದು ದೇಶದಲ್ಲಿ ವಿಜ್ಞಾನ, ಕೃಷಿ, ಮೂಲಸೌಕರ್ಯ ಮತ್ತು ಶಿಕ್ಷಣದಂತಹ ಪ್ರಮುಖ ಕ್ಷೇತ್ರಗಳನ್ನು ಅಭಿವೃದ್ದಿಪಡಿಸುವ ಸಂಕಲ್ಪ ಹೊಂದಿತ್ತು. ಅಲ್ಲದೆ 1951 ರಲ್ಲಿ ಅನಾವರಣಗೊಂಡ ಚೊಚ್ಚಲ ಪಂಚವಾರ್ಷಿಕ ಯೋಜನೆಯು ವೈಜ್ಞಾನಿಕ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿತು. ಇದರ ಪರಿಣಾಮ ದೇಶದಲ್ಲಿ ರೇಡಿಯೋ ಮತ್ತು ಎಲೆಕ್ಟ್ರಾನಿಕ್ಸ್ ಸಂಶೋಧನಾ ಸಂಸ್ಥೆ, ಮೆಕ್ಯಾನಿಕಲ್ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ, ಮತ್ತು ಸೆಂಟ್ರಲ್ ಸಾಲ್ಟ್ ರಿಸರ್ಚ್ ಸ್ಟೇಷನ್ ನಂತಹ ತಾಂತ್ರಿಕ ಮತ್ತು ವೈಜ್ಞಾನಿಕ ಉತ್ಕೃಷ್ಟತೆಯತ್ತ ಮೊದಲ ಹೆಜ್ಜೆ ಇಡಲು ಸಾಧ್ಯವಾಯಿತು.
ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮೊದಲ ಹೆಜ್ಜೆ
ಬಾಹ್ಯಾಕಾಶದಲ್ಲಿ ಭಾರತ ಇಂದು ಸಾಕಷ್ಟು ಪ್ರಗತಿ ಸಾಧಿಸಿರಬಹುದು. ಆದರೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಭಾರತ ಬಾಹ್ಯಕಾಶ ಕ್ಷೇತ್ರದಲ್ಲಿ ಬಹಳ ಹಿಂದೆಯಿತ್ತು. ಆದರೆ 1969ರಲ್ಲಿ ಇಸ್ರೋ ಸಂಸ್ಥೆ ಪ್ರಾರಂಭಿಸುವುದರೊಂದಿಗೆ ಭಾರತ ಬಾಹ್ಯಕಾಶ ಕ್ಷೇತ್ರಕ್ಕೆ ಎಂಟ್ರಿ ನೀಡಿತು. ಅಷ್ಟೇ ಅಲ್ಲ ಏಪ್ರಿಲ್ 19, 1975 ರಂದು, ದೇಶದ ಮೊದಲ ಉಪಗ್ರಹವಾದ ಆರ್ಯಭಟವನ್ನು ಉಡಾವಣೆ ಮಾಡುವ ಮೂಲಕ ಬಾಹ್ಯಕಾಶ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಿತು.
ಇದಲ್ಲದೆ ಅಕ್ಟೋಬರ್ 22, 2008 ರಂದು ಭಾರತ ಚಂದ್ರಯಾನ-1 ಅನ್ನು ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸಹ ಸಾಧಿಸಿದೆ. ಈ ಐತಿಹಾಸಿಕ ಉಡಾವಣೆ ಚಂದ್ರನ ಅನ್ವೇಷಣೆಯಲ್ಲಿ ಭಾರತದ ಹೊಸ ಹೆಜ್ಜೆಗೆ ಮುನ್ನುಡಿ ಬರೆದಿದೆ. ಇದೆಲ್ಲದರ ಪರಿಣಾಮ ಭಾರತ ಇಂದು ಚಂದ್ರಯಾನ-3 ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದೆ. ಇದು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಅನ್ನು ಕಾರ್ಯಗತಗೊಳಿಸುವ ಗುರಿಗೆ ಇನ್ನೇನು ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ.
ಡಿಎನ್‌ಎ ಫಿಂಗರ್‌ಪ್ರಿಂಟಿಂಗ್ ಪ್ರೋಬ್ ಅಭಿವೃದ್ಧಿ ಬಗ್ಗೆ ನಿಮಗೆ ಗೊತ್ತಾ?
ಭಾರತದ ವೈಜ್ಞಾನಿಕ ಪ್ರಗತಿಗೆ ಮತ್ತೊಂದು ಕನ್ನಡಿಯೆಂದರೆ ಭಾರತದಲ್ಲಿ DNA ಫಿಂಗರ್‌ಪ್ರಿಂಟಿಂಗ್ ಪ್ರೋಬ್ ಅಭಿವೃದ್ಧಿಪಡಿಸಿರುವುದು. 1988 ಇದು ಕಾರ್ಯಸಾದ್ಯವಾಗಿದ್ದು, ಇದರ ಮೂಲಕ ವಿಶ್ವದಲ್ಲಿಯೇ ಡಿಎನ್‌ಎ ಫಿಂಗರ್‌ಪ್ರಿಂಟಿಂಗ್ ಪ್ರೋಬ್ ಅಭಿವೃದ್ಧಿ ಪಡಿಸಿದ ಮೂರನೇ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ.
ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ
ಭಾರತ 1974 ರಲ್ಲಿ ತನ್ನ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆಯನ್ನು ರಾಜಸ್ಥಾನದ ಪೋಖ್ರಾನ್‌ನಲ್ಲಿ ನಡೆಸಿತ್ತು. ಇದರ ನೇತೃತ್ವವನ್ನು ಪ್ರಖ್ಯಾತ ಪರಮಾಣು ಭೌತಶಾಸ್ತ್ರಜ್ಞ ರಾಜಾ ರಾಮಣ್ಣ ನೇತೃತ್ವ ವಹಿಸಿದ್ದರು. ಆದರೆ ಮೇ 11, 1998ರಂದು ಫಾಸ್ಟ್-ಫಾರ್ವರ್ಡ್ ಎಂಬ ಹೆಸರಿನಲ್ಲಿ ಐದು ಪರಮಾಣು ಬಾಂಬ್‌ಗಳನ್ನು ಯಶಸ್ವಿಯಾಗಿ ಸ್ಫೋಟಿಸಿ ಪರಮಾಣು ಬಾಂಬ್ ಹೊಂದಿರುವ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತು.
ಪೋಲಿಯೊ ವಿರುದ್ಧ ಗೆದ್ದ ಭಾರತ
ಭಾರತ ಸ್ವಾತಂತ್ರ್ಯಗೊಂಡ ನಂತರ ಭಾದಿಸುತ್ತಿದ್ದ ಕಾಯಿಲೆಗಳಲ್ಲಿ ಹೆಚ್ಚಿನವು ಪೋಲಿಯೊ ಪ್ರಕರಣಗಳಾಗಿದ್ದುವು. ಇದರ ವಿರುದ್ದ ನಿರಂತರ ಅಭಿಯಾನ ನಡೆಸಿದ ಭಾರತ ಇಂದು ಪೋಲಿಯೊ ಮುಕ್ತ ಭಾರತವಾಗಿ ವಿಜಯ ಸಾಧಿಸಿದೆ. 1994 ರಲ್ಲಿ 60% ಪೋಲಿಯೊ ಪ್ರಕರಣಗಳನ್ನು ಹೊಂದಿದ್ದ ಭಾರತ ಮಾರ್ಚ್ 27, 2014 ರಂದು ಪೊಲಿಯೋ ಮುಕ್ತ ದೇಶವಾಗಿ ಹೊರಹೊಮ್ಮಿದೆ. ಆ ದಿನ ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತಕ್ಕೆ ಪ್ರತಿಷ್ಠಿತ 'ಪೋಲಿಯೊ ಮುಕ್ತ' ಪ್ರಮಾಣ ಪತ್ರವನ್ನು ನೀಡಿದೆ.

ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿ ಭಾರಿ ಬೆಳವಣಿಗೆ
ಜನವರಿ 16, 2016 ರಂದು ಪ್ರಾರಂಭವಾದ 'ಸ್ಟಾರ್ಟಪ್ ಇಂಡಿಯಾ' ಅಭಿಯಾನ ದೇಶದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಜುಲೈ 2021 ರ ಹೊತ್ತಿಗೆ 52,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳ ಮೂಲಕ ವಿಶ್ವದ ಅತಿದೊಡ್ಡ ಸ್ಟಾರ್ಟಪ್ ಎಕೋ ಸಿಸ್ಟಂಗಳಲ್ಲಿ ಭಾರತವೂ ಕೂಡ ಸ್ಥಾನ ಪಡೆದುಕೊಂಡಿದೆ. ಇದರಿಂದ ಐಟಿ ವಲಯದಲ್ಲಿ ಮಹತ್ತರವಾದ ಬದಲಾವಣೆಗಳು ನಡೆದಿವೆ, ಅಷ್ಟೇ ಅಲ್ಲ ಭಾರತದ ಐಟಿ ಹಬ್ ಅಂತಾನೇ ಕರೆಸಿಕೊಳ್ಳುವ ಬೆಂಗಳೂರು ವಿಶ್ವದ ಪ್ರಮುಖ ಐಟಿ ವಲಯಗಳಲ್ಲಿ ಒಂದಾಗಿದೆ.
ಸ್ಟಾಕ್ ವಲಯದಲ್ಲಿ ಭಾರತದ ಸಾಧನೆ
ಇನ್ನು ಸ್ಟಾಕ್ ವಲಯದಲ್ಲಿಯೂ ಕೂಡ ಭಾರತ ಪ್ರಗತಿಯನ್ನು ಸಾಧಿಸುತ್ತಾ ಬಂದಿದೆ. ಇಂಡಿಯಾ ಸ್ಟಾಕ್, ತೆರೆದ API ಗಳು ಮತ್ತು ಡಿಜಿಟಲ್ ಸಾರ್ವಜನಿಕ ಸಂಪನ್ಮೂಲಗಳನ್ನು ಒಳಗೊಳ್ಳುವ ದೂರದೃಷ್ಟಿಯ ಪರಿಕಲ್ಪನೆಯಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯನ್ನು ಹೆಚ್ಚಿಸುವ ದೃಷ್ಟಿಯಲ್ಲಿ ಇದರ ಪಾತ್ರ ಮಹತ್ವವಾಗಿದೆ.
ಇನ್ನು ಭಾರತವು ಯೂನಿಕ್ ಐಡಿ ಅಥಾರಿಟಿ ಆಫ್ ಇಂಡಿಯಾ ಅಂದರೆ ಆಧಾರ್ ಕಾರ್ಡ್ ಮೂಲಕ ದೇಶ ವಾಸಿಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ತರುವ ಪ್ರಯತ್ನ ಮಾಡುತ್ತಿದೆ. ಎಲ್ಲಾದಕ್ಕೂ ಆಧಾರ್ ಅನ್ನು ಲಿಂಕ್ ಮಾಡಿಸುವ ಮೂಲಕ ಒಂದೇ ವೇದಿಕೆಯಲ್ಲಿ ಸರ್ಕಾರಿ ಸೌಲಭ್ಯಗಳನ್ನು ನೀಡುವ ಪ್ರಯತ್ನ ಮಾಡುತ್ತಿದೆ. ಇದಲ್ಲದೆ ದೇಶದಲ್ಲಿ 2021 ರ ಹೊತ್ತಿಗೆ, UPI ವಹಿವಾಟುಗಳು ಮಾಸಿಕ 4 ಶತಕೋಟಿ ಮೀರಿವೆ.
ಕ್ವಾಂಟಮ್ ರೆವಲ್ಯೂಶನ್‌ನಲ್ಲಿ ಮುಂದಡಿ ಇಡ್ತಿದೆ ಭಾರತ
ದೇಶದಲ್ಲಿ ಕ್ವಾಂಟಮ್ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಕ್ವಾಂಟಮ್ ತರಂಗಗಳ ರೆವಲ್ಯೂಶನ್ ಕೈಗಾರಿಕೆಗಳಲ್ಲಿ ರಕ್ಷಣೆ, ಬ್ಯಾಂಕಿಂಗ್, ಹೈಟೆಕ್ ಮತ್ತು ಉತ್ಪಾದನೆಗೆ ಸಹಾಯ ಮಾಡಲಿದೆ. ಅಲ್ಲದೆ ನಿರ್ಣಾಯಕ ಅಪ್ಲಿಕೇಶನ್‌ಗಳು ಮತ್ತು ದೊಡ್ಡ-ಪ್ರಮಾಣದ ಬಳಕೆಯಲ್ಲಿ ಇದರ ಪರಿಣಾಮವಿರಲಿದೆ. ಅದರಂತೆ ಭಾರತ 2026-2027 ರ ಹೊತ್ತಿಗೆ ಕ್ವಾಂಟಮ್ ತರಂಗಗಳ ತಂತ್ರಜ್ಞಾನದ ಪರಿಪಕ್ವತೆಯಲ್ಲಿ ಸಾಕಷ್ಟು ಬೆಳವಣಿಗೆ ಸಾಧಿಸುವ ಗುರಿಯನ್ನು ಹೊಂದಲಾಗಿದೆ.


Click it and Unblock the Notifications








