ಇನ್ಫಿನಿಕ್ಸ್ ಸಂಸ್ಥೆಯಿಂದ ಕೈಗೆಟಕುವ ಬೆಲೆಯಲ್ಲಿ ಎರಡು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ!
ಟೆಕ್ ವಲಯದಲ್ಲಿ ಇನ್ಫಿನಿಕ್ಸ್ ಕಂಪೆನಿ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಅಗ್ಗದ ಬೆಲೆಯಲ್ಲಿ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಇನ್ಫಿನಿಕ್ಸ್ ಹಾಟ್ 11 ಮತ್ತು ಇನ್ಫಿನಿಕ್ಸ್ ಹಾಟ್ 11s ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಎರಡೂ ಸ್ಮಾರ್ಟ್‌ಫೋನ್‌ಗಳು 4GB RAM + 64GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಾಗಲಿವೆ.

ಹೌದು, ಇನ್ಫಿನಿಕ್ಸ್ ಕಂಪೆನಿ ಹೊಸ ಇನ್ಫಿನಿಕ್ಸ್ ಹಾಟ್ 11 ಮತ್ತು ಇನ್ಫಿನಿಕ್ಸ್ ಹಾಟ್ 11s ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಇದರಲ್ಲಿ ಇನ್ಫಿನಿಕ್ಸ್ ಹಾಟ್ 11 ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಆದರೆ ಇನ್ಫಿನಿಕ್ಸ್ ಹಾಟ್ 11 ಎಸ್ 6.78 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಇನ್ನು ಜೊತೆಗೆ ಇನ್ಫಿನಿಕ್ಸ್ ಹಾಟ್ 11 ಎಸ್ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಇನ್ನುಳಿದಂತೆ ಈ ಎರಡು ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್ಫಿನಿಕ್ಸ್ ಹಾಟ್ 11 ಸ್ಮಾರ್ಟ್‌ಫೋನ್
ಇನ್ಫಿನಿಕ್ಸ್ ಹಾಟ್ 11 ಸ್ಮಾರ್ಟ್‌ಫೋನ್ 1,080x2,408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6-ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತ ಮತ್ತು 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದು ಮೀಡಿಯಾಟೆಕ್ ಹಿಲಿಯೋ G70 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 11 ಅನ್ನು ಎಕ್ಸ್‌ಒಎಸ್ 7.6 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಬಳಸಿ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಹಾಗೂ ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಕ್ವಾಡ್-ಎಲ್ಇಡಿ ಫ್ಲ್ಯಾಷ್ ಹೊಂದಿವೆ. ಅಲ್ಲದೆ 8 ಮೆಗಾಪಿಕ್ಸೆಲ್ AI ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ 5,200mAh ಬ್ಯಾಟರಿ ಹೊಂದಿದ್ದು, 10W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ಇನ್ಫಿನಿಕ್ಸ್ ಹಾಟ್ 11S ಸ್ಮಾರ್ಟ್‌ಫೋನ್
ಇನ್ಫಿನಿಕ್ಸ್ ಹಾಟ್ 11 ಎಸ್ ಸ್ಮಾರ್ಟ್‌ಫೋನ್ 6.78-ಇಂಚಿನ ಫುಲ್-ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಹೊಂದಿದ್ದು, 20.5:9 ರಚನೆಯ ಅನುಪಾತ ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ NEG ಡೈನೋರೆಕ್ಸ್ T2X-1 ಗ್ಲಾಸ್ ಪ್ರೊಟೆಕ್ಷನ್ ಅನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೋ G88 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ XOS 7.6 ಸ್ಕಿನ್ ಮೂಲಕ ಕಾರ್ಯನಿರ್ವಹಿಸಲಿದೆ. ಇದು 4GB RAM ಮತ್ತು 64GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬಹುದಾಗಿದೆ. ಇನ್ನು ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2-ಮೆಗಾಪಿಕ್ಸೆಲ್ ಸೆನ್ಸರ್ ಮತ್ತು AI ಕ್ಯಾಮೆರಾ ಹೊಂದಿದೆ. ಇದು 8 ಮೆಗಾಪಿಕ್ಸೆಲ್ ಎಐ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ಇನ್ಫಿನಿಕ್ಸ್ ಹಾಟ್ 11 ಸ್ಮಾರ್ಟ್‌ಫೋನ್ ಭಾರತದಲ್ಲಿ 8,999ರೂ ಮತ್ತು ಇನ್ಫಿನಿಕ್ಸ್ ಹಾಟ್ 11S 10,999ರೂ, ಬೆಲೆಯನ್ನು ಹೊಂದಿದೆ. ಇನ್ನು ಈ ಎರಡೂ ಸ್ಮಾರ್ಟ್ ಫೋನ್ ಗಳು ಫ್ಲಿಪ್ ಕಾರ್ಟ್ ಮೂಲಕ ಖರೀದಿಗೆ ಲಭ್ಯವಾಗಲಿದೆ. ಇನ್ಫಿನಿಕ್ಸ್ ಹಾಟ್ 11 ಇನ್ 7 ಡಿಗ್ರಿ ಪರ್ಪಲ್, ಪಚ್ಚೆ ಹಸಿರು, ಪೋಲಾರ್ ಬ್ಲಾಕ್ ಮತ್ತು ಸಿಲ್ವರ್ ವೇವ್ ಕಲರ್ ಆಯ್ಕೆಗಳಲ್ಲಿ ಲಭ್ಯವಿದೆ. ಹಾಗೆಯೇ ಇನ್ಫಿನಿಕ್ಸ್ ಹಾಟ್ 11S ಸ್ಮಾರ್ಟ್‌ಫೋನ್ 7 ಡಿಗ್ರಿ ಪರ್ಪಲ್, ಗ್ರೀನ್ ವೇವ್ ಮತ್ತು ಪೋಲಾರ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರಲ್ಲಿ ಇನ್ಫಿನಿಕ್ಸ್ ಹಾಟ್ 11 ಎಸ್ ಸೆಪ್ಟೆಂಬರ್ 21 ರಂದು ಫಸ್ಟ್ ಸೇಲ್ ಆರಂಭಿಸಲಿದೆ. ಆದರೆ ಇನ್ಫಿನಿಕ್ಸ್ ಹಾಟ್ 11 ರ ಮಾರಾಟ ದಿನಾಂಕ ಇನ್ನು ನಿಗದಿಯಾಗಿಲ್ಲ.


Click it and Unblock the Notifications








