ಭಾರತದಲ್ಲಿ ಇನ್ಫಿನಿಕ್ಸ್ ಜಿರೋ 5G ಸ್ಮಾರ್ಟ್‌ಫೋನ್ ಲಾಂಚ್ ಡೇಟ್ ಬಹಿರಂಗ!
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇನ್ಫಿನಿಕ್ಸ್ ಕಂಪೆನಿ ತನ್ನ ಅಗ್ಗದ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಬಜೆಟ್ ಬೆಲೆಯಲ್ಲಿ ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಸದ್ಯ ಇದೀಗ ತನ್ನ ಹೊಸ ಇನ್ಫಿನಿಕ್ಸ್ ಜಿರೋ 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಇದೇ ಫೆಬ್ರವರಿ 14ಕ್ಕೆ ನಿಗದಿಪಡಿಸಲಾಗಿದೆ ಎಂದು ಫ್ಲಿಪ್‌ಕಾರ್ಟ್ ಬಹಿರಂಗಪಡಿಸಿದೆ. ಇದು ಇನ್ಫಿನಿಕ್ಸ್ ಕಂಪೆನಿಯ ಮೊದಲ 5G ಸ್ಮಾರ್ಟ್‌ಫೋನ್ ಆಗಿದೆ.

ಹೌದು, ಇನ್ಫಿನಿಕ್ಸ್ ಕಂಪೆನಿ ಭಾರತದಲ್ಲಿ ತನ್ನ ಹೊಸ ಇನ್ಫಿನಿಕ್ಸ್ ಜಿರೋ 5G ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಫ್ಲಿಪ್‌ಕಾರ್ಟ್ ಸೈಟ್ ಇನ್ಫಿನಿಕ್ಸ್ ಜಿರೋ 5G ಸ್ಮಾರ್ಟ್‌ಫೋನ್ ವಿಶೇಷತೆಗಳ ಬಗ್ಗೆ ವಿವರಣೆಯನ್ನು ನೀಡಿದೆ. ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ ಎನ್ನಲಾಗಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಇನ್ಫಿನಿಕ್ಸ್ ಜಿರೋ 5G ಸ್ಮಾರ್ಟ್‌ಫೋನ್ 1080 x 2460 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 401 ಪಿಪಿಐ ಸಾಂದ್ರತೆಯನ್ನು ಹೊಂದಿದೆ. ಸ್ಕ್ರೀನ್ ಟು ಬಾಡಿ ಅನುಪಾತ 86.5 % ಹೊಂದಿದೆ.

ಪ್ರೊಸೆಸರ್ ಯಾವುದು?
ಇನ್ಫಿನಿಕ್ಸ್ ಜಿರೋ 5G ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11ನ ಮೇಲೆ XOS 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿನ್ಯಾಸ
ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್, ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ
ಇನ್ಫಿನಿಕ್ಸ್ ಜಿರೋ 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ಹಾಟ್‌ಸ್ಪಾಟ್, ವೈಫೈ, 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿರಲಿದೆ ಎನ್ನಲಾಗಿದೆ.

ಬೆಲೆ ಮತ್ತು ಲಭ್ಯತೆ
ಇನ್ನು ಈ ಸ್ಮಾರ್ಟ್‌ಫೋನ್ 20,000ರೂ ಸಮೀಪದ ಬೆಲೆಯನ್ನು ಹೊಂದಿರುವ ಸಾಧ್ಯತೆ. ಇದಲ್ಲದೆ ಈ ಫೋನ್ ಕನಿಷ್ಠ ಎರಡು ವಿಭಿನ್ನ ಬಣ್ಣದ ಆಯ್ಕೆಗಳನ್ನು ಹೊಂದಿರಲಿದೆ ಎಂದು ವರದಿಯಾಗಿದೆ. ಇನ್ನು ಈ ಫೋನ್ ಇದೇ ಫೆಬ್ರವರಿ 14 ರಂದು ಮಧ್ಯಾಹ್ನ 12 ಗಂಟೆಗೆ ಫೋನ್ ಲಾಂಚ್ ಆಗಲಿದೆ ಎಂದು ವೆಬ್‌ಪೇಜ್‌ನಲ್ಲಿ ತಿಳಿಸಲಾಗಿದೆ.


Click it and Unblock the Notifications








