ಅಂತರರಾಷ್ಟ್ರೀಯ ಗಣಿತ ಒಲಿಂಪಿಯಾಡ್: Gemini ಮತ್ತು ChatGPTಯ ಐತಿಹಾಸಿಕ ಸಾಧನೆ!
ಈ ವರ್ಷದ ಅಂತರರಾಷ್ಟ್ರೀಯ ಗಣಿತ ಒಲಿಂಪಿಯಾಡ್ (IMO) ನಲ್ಲಿ ಗೂಗಲ್‌ನ ಜೆಮಿನಿ ಮತ್ತು ಓಪನ್‌ಎಐನ ಚಾಟ್‌ಜಿಪಿಟಿ ಎರಡೂ ಜನಪ್ರಿಯ ಕೃತಕ ಬುದ್ಧಿಮತ್ತೆ ಮಾದರಿಗಳು ಗಮನಾರ್ಹ ಮೈಲಿಗಲ್ಲು ಸ್ಥಾಪಿಸಿವೆ. ಮಾನವ ಹಸ್ತಕ್ಷೇಪವಿಲ್ಲದೆ ಚಿನ್ನದ ಪದಕ ಮಟ್ಟದ ಅಂಕಗಳನ್ನು ಗಳಿಸುವ ಮೂಲಕ ಈ ಕೃತಕ ಬುದ್ಧಿಮತ್ತೆ (AI) ಮಾದರಿಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದು, ಈ ಎರಡೂ ಮಾರಿಗಳು ಚಿನ್ನದ ಪದಕ ಗೆಲ್ಲಲು ಸಾಕಾಗುವಷ್ಟು ಅಂಕಗಳನ್ನು ಗಳಿಸಿಕೊಂಡಿವೆ. ಈ ಕುರಿತಂತೆ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
ಅಂತರರಾಷ್ಟ್ರೀಯ ಗಣಿತ ಒಲಿಂಪಿಯಾಡ್ನಲ್ಲಿ ಜೆಮಿನಿ ಮತ್ತು ಚಾಟ್‌ಜಿಪಿಟಿ ಎರಡೂ 42 ಅಂಕಗಳಿಗೆ 35 ಅಂಕಗಳನ್ನು ಗಳಿಸಿವೆ. ಆರು ಪ್ರಶ್ನೆಗಳಲ್ಲಿ ಐದು ಪ್ರಶ್ನೆಗಳನ್ನು ಪರಿಹರಿಸಿದ್ದು, ಇದು ಚಿನ್ನದ ಪದಕ ಗೆಲ್ಲಲು ಸಾಕಾಗುತ್ತದೆ. ಗೂಗಲ್ ಡೀಪ್‌ಮೈಂಡ್ ತನ್ನ ಜೆಮಿನಿ ಡೀಪ್ ಥಿಂಕ್ ಮೂಲಕ ಅಧಿಕೃತವಾಗಿ ಸ್ಪರ್ಧೆಗೆ ಪ್ರವೇಶಿಸಿತು. ಇದು ಪರೀಕ್ಷಾ ನಿಯಮಗಳನ್ನು ಅನುಸರಿಸಿ, ಯಾವುದೇ ಮಾನವ ಸಂವಹನವಿಲ್ಲದೆ ಪರೀಕ್ಷೆಗಳನ್ನು ಪೂರ್ಣಗೊಳಿಸಿತು. ಮತ್ತೊಂದೆಡೆ, ಓಪನ್‌ಎಐ ತನ್ನ ಪ್ರಾಯೋಗಿಕ ಸಂಶೋಧನಾ ಮಾದರಿಯನ್ನು ಅನಧಿಕೃತವಾಗಿ ಬಳಸಿದೆ ಎಂದು ಹೇಳಲಾಗಿದೆ.
ಒಲಿಂಪಿಯಾಡ್ ನಲ್ಲಿ AI ಮಾದರಿಗಳ ಕಾರ್ಯಕ್ಷಮತೆ
ಗೂಗಲ್ ಡೀಪ್‌ಮೈಂಡ್‌ನ CEO ಡೆಮಿಸ್ ಹಸ್ಸಾಬಿಸ್ ಪ್ರಕಾರ, ಜೆಮಿನಿ ಡೀಪ್ ಥಿಂಕ್ ಮಾದರಿಯು 4.5 ಗಂಟೆಗಳ ಸಮಯದ ಮಿತಿಯೊಳಗೆ ಸಮಸ್ಯೆಗಳ ವಿವರಣೆಗಳಿಂದ ನೇರವಾಗಿ ಗಣಿತದ ಪುರಾವೆಗಳನ್ನು ನೈಸರ್ಗಿಕ ಭಾಷೆಯಲ್ಲಿ ಉತ್ಪಾದಿಸಲು ಸಾಧ್ಯವಾಯಿತು ಎಂದಿದ್ದಾರೆ. ಇತ್ತ ಟೆಕ್ ಕ್ರಂಚ್ ವರದಿಯ ಪ್ರಕಾರ, ಓಪನ್‌ಎಐ ತನ್ನ ಪ್ರಾಯೋಗಿಕ ಮಾದರಿಯೊಂದಿಗೆ ಅನಧಿಕೃತವಾಗಿ ಭಾಗವಹಿಸಿತು. ಕಂಪನಿಯು ತನ್ನ AI ಮಾದರಿ ಗಳಿಸಿದ ಅಂಕಗಳೊಂದಿಗೆ IMO ಅನ್ನು ಸಂಪರ್ಕಿಸಿದೆ ಎಂದು ವರದಿಯಾಗಿದೆ.

IMO: ಗಣಿತದಲ್ಲಿ ಪ್ರೂಫ್ ಆಧಾರಿತ ಸ್ಪರ್ಧೆಅಂತರರಾಷ್ಟ್ರೀಯ ಗಣಿತ ಒಲಿಂಪಿಯಾಡ್ ಶಾಲಾ ವಿದ್ಯಾರ್ಥಿಗಳಿಗೆ ವಿಶ್ವದ ಅತ್ಯಂತ ಹಳೆಯ ವಾರ್ಷಿಕ ಗಣಿತ ಸ್ಪರ್ಧೆಗಳಲ್ಲಿ ಒಂದಾಗಿದೆ. 1959 ರಲ್ಲಿ ಪ್ರಾರಂಭವಾದ ಈ ಸ್ಪರ್ಧೆಯಲ್ಲಿ 100 ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಇದು ಗಣಿತದ ಸಮಸ್ಯೆಗಳಿಗೆ ಕೇವಲ ಉತ್ತರಗಳನ್ನು ನೀಡುವ ಬದಲು, ಗಣಿತದ ಪುರಾವೆಗಳನ್ನು ಸೃಷ್ಟಿಸುವುದರ ಮೇಲೆ ಗಮನ ಹರಿಸುತ್ತದೆ. ಸ್ಪರ್ಧಿಗಳು ತಮ್ಮ ತರ್ಕ, ಗಣಿತ ಪ್ರಮೇಯಗಳು ಮತ್ತು ಅನ್ವಯಿಕ ಗಣಿತದ ಜ್ಞಾನವನ್ನು ಬಳಸಿಕೊಂಡು ಪುರಾವೆಗಳನ್ನು ಒದಗಿಸಬೇಕಾಗುತ್ತದೆ. ನಂತರ ಈ ಪುರಾವೆಗಳ ಗುಣಮಟ್ಟವನ್ನು ಮೌಲ್ಯಮಾಪಕರು ನಿರ್ಣಯಿಸುತ್ತಾರೆ.
ಮಾನವರ ಮೇಲುಗೈ, ಆದರೆ AI ಗೂ ಮೊದಲ ಹೆಜ್ಜೆ
ಈ AI ಮಾದರಿಗಳು ಚಿನ್ನದ ಪದಕ ಮಟ್ಟದ ಅಂಕಗಳನ್ನು ತಲುಪಿದರೂ, ಮಾನವ ಸ್ಪರ್ಧಿಗಳು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಸುಮಾರು 10 ಪ್ರತಿಶತ ಮಾನವ ಸ್ಪರ್ಧಿಗಳು ಚಿನ್ನದ ಪದಕಗಳನ್ನು ಗೆದ್ದರು ಮತ್ತು ಐದು ಮಂದಿ 42 ರಲ್ಲಿ 42 ಅಂಕಗಳನ್ನು ಗಳಿಸಿ ಪರಿಪೂರ್ಣ ಸಾಧನೆ ಮಾಡಿದರು. ಇದು AI ಸಾಮರ್ಥ್ಯಗಳಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದ್ದರೂ, ಮಾನವನ ಗಣಿತೀಯ ಪ್ರತಿಭೆ ಇನ್ನೂ ಅಜೇಯವಾಗಿ ಉಳಿದಿದೆ ಎಂಬುದನ್ನು ತೋರಿಸುತ್ತದೆ.
ಈ ಸಾಧನೆಗಳು AI ತಂತ್ರಜ್ಞಾನವು ಗಣಿತದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎಷ್ಟು ದೂರ ಸಾಗಿದೆ ಎಂಬುದನ್ನು ಎತ್ತಿ ತೋರಿಸುತ್ತವೆ. ಭವಿಷ್ಯದಲ್ಲಿ AI ಗಣಿತ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಇನ್ನಷ್ಟು ಹೊಸ ಆವಿಷ್ಕಾರಗಳಿಗೆ ಕಾರಣವಾಗಬಹುದು ಎಂದು ಇದು ಸೂಚಿಸುತ್ತದೆ. AI ಸಾಮರ್ಥ್ಯಗಳ ಬಗ್ಗೆ ನಿಮ್ಮ ಅನಿಸಿಕೆಗಳೇನು? ಮುಂದೆ ಒಂದು ದಿನ AI ತಂತ್ರಜ್ಞಾನವು ಮಾನವರಿಗಿಂತಲೂ ಹೆಚ್ಚು ದೂರ ಸಾಗುವ ಸಾಧ್ಯತೆ ಇದೆಯಾ ಎಂಬ ಬಗ್ಗೆ ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








